– ರಾಘವೇಂದ್ರ ಅಡಿಗ ಎಚ್ಚೆನ್.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿದಾರನಿಗೆ ಬೆದರಿಕೆ ಹಾಕಿದ ಆರೋಪದಡಿ ನಟ ದರ್ಶನ್ ಅಭಿಮಾನಿ ಬಳಗಕ್ಕೆ ಸೇರಿದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಅವರಿಗೆ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಸಾಕ್ಷಿ ಹೇಳದಂತೆ ಒತ್ತಡ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಾಕ್ಷಿದಾರ ಸಂದೀಪ್ ಅವರು ನ್ಯಾಯಾಲಯದ ಮುಂದೆ ಬೆದರಿಕೆ ಬಗ್ಗೆ ಹೇಳಿಕೆ ನೀಡುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡು ಅವರಿಗೆ ಭದ್ರತೆ ಒದಗಿಸಿದ್ದರು. ಬಳಿಕ ವಿಶೇಷ ಕಾರ್ಯಾಚರಣೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ವೇಣು, ಸುಹಾಸ್ ಹಾಗೂ ಪುನೀತ್ ಎಂಬ ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಹಿನ್ನೆಲೆಯೂ ಬೆಳಕಿಗೆ ಬಂದಿದೆ. ಆರೋಪಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಡಿ ಕಂಪನಿ ಹೆಸರಿನ ದರ್ಶನ್ ಅಭಿಮಾನಿ ಫ್ಯಾನ್ ಪೇಜ್‌ನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಇನ್ನು ವೇಣು ಮತ್ತು ಸುಹಾಸ್ ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ತನಿಖೆ ಪ್ರಕಾರ, ಸಾಕ್ಷಿದಾರ ಸಂದೀಪ್ ಅವರನ್ನು ಮಾತುಕತೆ ನಡೆಸುವ ನೆಪದಲ್ಲಿ ಕರೆಸಿಕೊಂಡ ಆರೋಪಿಗಳು, ಬಳಿಕ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿದ್ದಾರೆ. ಇದೇ ವೇಳೆ ನ್ಯಾಯಾಲಯದಲ್ಲಿ ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳಬಾರದು ಎಂದು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಸಂದೀಪ್ ಇದಕ್ಕೆ ಒಪ್ಪದಿದ್ದಾಗ, ಆರೋಪಿ ಸುಹಾಸ್ ಜೈಲಿನಲ್ಲಿರುವ ದರ್ಶನ್ ಹೆಸರನ್ನು ಪ್ರಸ್ತಾಪಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಇಡೀ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿದ್ದಾರೆ. ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಶೆಡ್‌ಗೆ ಕರೆತಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಸಾಕ್ಷಿಗಳಿಗೆ ಬೆದರಿಕೆ ಆರೋಪದ ಈ ಹೊಸ ಬೆಳವಣಿಗೆ ತನಿಖೆಗೆ ಮತ್ತೊಂದು ಮಹತ್ವದ ಆಯಾಮ ನೀಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ