– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಜಾಮೀನು ಸಂಬಂಧ ಸಲ್ಲಿಸಿದ್ದ ತಿದ್ದುಪಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯೇ ತಿರಸ್ಕರಿಸಿದ್ದು, ವಿಚಾರಣೆಗೆ ಪಟ್ಟಿಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ ವಿನಾಯಿತಿ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ತುರ್ತು ಸಂದರ್ಭಗಳಲ್ಲಿ ಜಾಮೀನು ಕೋರಲು ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು.
ಆದರೆ, ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ರಿಜಿಸ್ಟ್ರಿ ಅಭಿಪ್ರಾಯಪಟ್ಟಿದ್ದು, ಅರ್ಜಿಯನ್ನು ನೇರವಾಗಿ ತಿರಸ್ಕರಿಸಿದೆ. ಇದರಿಂದ ದರ್ಶನ್‌ಗೆ ತಕ್ಷಣದ ಜಾಮೀನು ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ.
ಕಳೆದ ಮೇ 15ರಂದು ನ್ಯಾಯಮೂರ್ತಿಗಳಾದ ಪರ್ದಿವಾಲಾ ಹಾಗೂ ವಿಜಯ್ ಬಿಷ್ಣೋಯಿ ಅವರ ಪೀಠದ ಮುಂದೆ ವಿಚಾರಣೆ ನಡೆದ ವೇಳೆ, ದರ್ಶನ್ ಪರ ವಕೀಲರು ಜೈಲಿನಲ್ಲಿನ ಕ್ವಾರಂಟೈನ್ ಸೆಲ್, ಕುಟುಂಬ ಸದಸ್ಯರನ್ನು ಭೇಟಿಯಾಗುವ ನಿರ್ಬಂಧ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದರು.
ಆದರೆ, ಕ್ವಾರಂಟೈನ್ ಸೆಲ್ ಕೂಡ ಜೈಲಿನ ಭಾಗವೇ ಆಗಿದ್ದು, ವಿಶೇಷ ಸೌಲಭ್ಯ ನೀಡದಿರುವ ಉದ್ದೇಶದಿಂದ ಅಲ್ಲಿ ಇರಿಸಿರಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಜೈಲು ನಿಯಮಾವಳಿಯ ಪ್ರಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಿದ್ದರೂ, ಜಾಮೀನು ನೀಡಲು ನಿರಾಕರಿಸಿತ್ತು.
ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಈಗಾಗಲೇ ಆದೇಶಿಸಿರುವ ಹಿನ್ನೆಲೆಯಲ್ಲಿ, ಮುಂದಿನ ವರ್ಷದ ಮೇ 15ರವರೆಗೆ ದರ್ಶನ್ ಜೈಲಿನಲ್ಲೇ ಉಳಿಯುವ ಸಾಧ್ಯತೆ ಮತ್ತಷ್ಟು ಬಲಗೊಂಡಿದೆ.





