ಪ್ರಚಲಿತ ಸಮಯದಲ್ಲಿ ಕೃತಕಬುದ್ಧಿ ಮತ್ತೆ ಎಲ್ಲ ಕ್ಷೇತ್ರಗಳಲ್ಲಿಯೂ ಲಗ್ಗೆ ಇಟ್ಟ ಮೇಲೆ ಸಂತಾನೋತ್ಪತ್ತಿ ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಇದನ್ನು ಹೊರತುಪಡಿಸಲಾದೀತೇ?
ವೈದ್ಯಕೀಯದ ಅನೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಅದಾಗಲೇ ಬಳಕೆಯಾಗುತ್ತಿದೆ. ಹೊರರೋಗಿ ಅಥವಾ ಒಳರೋಗಿಗಳ ದತ್ತಾಂಶ ಸಂಕಲನ, ಹಣ ಪಾವತಿ, ಪರೀಕ್ಷೆಗಳ ವರದಿ, ಹೀಗೆ ಇವೆಲ್ಲವನ್ನೂ ಕೃತಕ ಬುದ್ಧಿಮತ್ತೆಗಳು ಮಾಡುತ್ತಲೇ ಇವೆ. ಆಸ್ಪತ್ರೆಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ತಂತ್ರಾಂಶಗಳನ್ನು ಅಳಡಿಸಿರುತ್ತಾರೆ.
ಆದರೆ ಸಂತಾನೋತ್ಪತ್ತಿ ಚಿಕಿತ್ಸೆ ಅತೀ ಕ್ಲಿಷ್ಟಕರವಾಗಿರುತ್ತದೆ. ಅಲ್ಲದೆ ಪ್ರತಿ ಮಹಿಳೆ ಅಥವಾ ದಂಪತಿಗಳನ್ನು ಪ್ರತ್ಯೇಕವಾಗಿ ಮಾಪಿಸಿ ಅವರಿಗೆ ಹೊಂದುವಂತಹ ವೈಯಕ್ತಿಕ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಇದೆಲ್ಲವನ್ನೂ ಕೂಲಂಕಷವಾಗಿ ಮಾಪಿಸುವ ವೈದ್ಯರ ಸಹಾಯಕ್ಕೆ ಕೃತಕ ಬುದ್ಧಿಮತ್ತೆ ಸಹಾಯ ಮಾಡಲಾದೀತೇ?
ಕೃತಕ ಬುದ್ಧಿಮತ್ತೆ ಎಂದರೆ ಏನು?
ಅನುಭವಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಕಲಿಯಲು, ಯೋಚಿಸಲು ಮತ್ತು ಸೃಷ್ಟಿಸಲು, ಮಾತನಾಡಲು, ನಿರ್ಣಯಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾನವರು ಯಂತ್ರಗಳಿಗೆ ನೀಡಿರುವ ಸಾಮರ್ಥ್ಯದಿಂದಾಗಿ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿ ಮಾಡಲು ಸಾಧ್ಯವಾಗಿದೆ.
ಹೀಗಾಗಿ, ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲಿಯೂ ವಿಷಯಗಳನ್ನು ಕೃತಕ ಬುದ್ಧಿಮತ್ತೆಗೆ `ಕಲಿಸಿದರೆ,’ ಅದು ಮಾಹಿತಿಯನ್ನು ಸಂಸ್ಕರಿಸಿ. ನೆನಪಿನಲ್ಲಿ ಇರಿಸಿಕೊಂಡು, ಮುಂದೆ ಸೂಕ್ತವಾಗಿ ಕೆಲಸ ನಿರ್ವಹಿಸುತ್ತದೆ. ಅಂದರೆ ಅದು ಬಳಕೆಯಾಗುತ್ತಾ, ಮತ್ತಷ್ಟು ಚುರುಕಾಗುತ್ತದೆ!

ಸಂತಾನೋತ್ಪತ್ತಿ ಚಿಕಿತ್ಸಾ ಕ್ರಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಿಕೊಳ್ಳಬಹುದು?
- ದಂಪತಿಗಳ ಮಾಪನದ ಪ್ರಕ್ರಿಯೆಯಲ್ಲಿ ವಯಸ್ಸು, ತೂಕ, ಹಿಂದಿನ ಚಿಕಿತ್ಸೆ ಮತ್ತದರ ಫಲಿತಾಂಶ, ಪ್ರಸ್ತುತ ದೇಹ ಸ್ವಾಸ್ಥ್ಯ, ಮತ್ತಿತರ ಎಲ್ಲ ಚಿಕಿತ್ಸೆ ಮಾಡುವ ಮುನ್ನ ಬೇಕಾದ ಮುಖ್ಯ ಮಾಹಿತಿಗಳು. ಕೃತಕ ಬುದ್ಧಿಮತ್ತೆ ಇಂತಹ ಮಾಹಿತಿಗಳನ್ನು ಸಮಗ್ರವಾಗಿಸಿ, ಚಿಕಿತ್ಸಾ ವಿಧಾನ, ಪಥ ಹಾಗೂ ನಿರೀಕ್ಷಿಸಬಹುದಾದ ಫಲಿತಾಂಶದ ಮುನ್ಸೂಚನೆ ಕೊಡಬಹುದು.
- ಪ್ರಯೋಗಾಲಯದ ಪರೀಕ್ಷೆಗಳು ಹಾರ್ಮೋನುಗಳ ಮೇಲ್ವಿಚಾರಣೆ ಅದಾಗಲೇ ಪ್ರಯೋಗಾಲಯದಲ್ಲಿ ಉತ್ತಮ ಯಂತ್ರಗಳ ಬಳಕೆಯಾಗಿದ್ದು, ಫಲಿತಾಂಶಗಳನ್ನು ಮತ್ತಷ್ಟು ಸಮಂಜಸವಾಗಿ ವ್ಯಾಖ್ಯಾನ ಮಾಡಲು ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ.
- ಅಲ್ಟ್ರಾಸೌಂಡ್ ಅಥವಾ ಸ್ಕ್ಯಾನಿಂಗ್ಗರ್ಭಕೋಶ ಹಾಗೂ ಅಂಡಕೋಶಗಳನ್ನು ಮಾಪಿಸಲು ಹಾಗೂ ಅಂಡೋತ್ಪತ್ತಿಗೆ ಕೊಡುತ್ತಿರುವ ಔಷಧಿಗಳು ಸಮಂಜಸವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಕಂಡುಕೊಳ್ಳಲು ಮಹಿಳೆಯರಿಗೆ ನಿಯತಕಾಲಕ್ಕೆ ಅಲ್ಟ್ರಾಸೌಂಡ್ ಅಥವಾ ಸ್ಕ್ಯಾನಿಂಗ್ ಮಾಡಬೇಕಾಗುತ್ತದೆ. ಎಷ್ಟು ಮೊಟ್ಟೆಗಳು ಉತ್ಪತ್ತಿಯಾಗುತ್ತಿವೆ, ಗರ್ಭಕೋಶದಲ್ಲಿ ತೊಂದರೆ ಇದೆಯೇ ಎಂದೆಲ್ಲಾ ಮತ್ತಷ್ಟು ಚೆನ್ನಾಗಿ ಅಧ್ಯಾಯಿಸಲು ಕೃತಕ ಬುದ್ಧಿಮತ್ತೆ ಸಹಾಯವಾಗುತ್ತದೆ. ಇದಕ್ಕೆ ಬೇಕಾಗಿರುವ ತಂತ್ರಾಂಶವನ್ನು ಅಲ್ಟ್ರಾಸೌಂಡ್ ಯಂತ್ರದಲ್ಲಿಯೇ ಅಳವಡಿಸಲಾಗಿರುತ್ತದೆ.
- ಚಿಕಿತ್ಸೆ ಉತ್ತಮೀಕರಣ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ, ಅಂಡಕೋಶದಿಂದ ಮೊಟ್ಟೆ ಉತ್ಪತ್ತಿಯಾಗಲು ಮುಖ್ಯವಾದ ಚುಚ್ಚುಮದ್ದುಗಳನ್ನು ಕೊಡಬೇಕಾಗುತ್ತದೆ. ಇವುಗಳ ಪರಿಮಾಣ ಮಹಿಳೆಯ ಅಂಡೋತ್ಪತ್ತಿ ಸಾಮರ್ಥ್ಯ, ವಯಸ್ಸು, ರಕ್ತಪರೀಕ್ಷೆಗಳು ಹಾಗೂ ದೇಹ ಸ್ವಾಸ್ಥ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಚರಾಂಶಗಳನ್ನೆಲ್ಲಾ ಕ್ರೋಢೀಕರಿಸಿ, ಸಮಗ್ರವಾದ ಚುಚ್ಚುಮದ್ದಿನ ಪ್ರಮಾಣವನ್ನು ಕೃತಕ ಬುದ್ಧಿಮತ್ತೆಯ ಹಮ್ಮುಗೆ ಸೂಚಿಸಬಹುದು.
- ವೀರ್ಯಾಣು ಹಾಗೂ ಅಂಡಾಣುಗಳ ಆಯ್ಕೆ ಬೆಂಬಲಿತ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಮಹಿಳೆಯಲ್ಲಿ ಅಂಡೋತ್ಪತ್ತಿ ಆಗುವ ಸಮಯಕ್ಕೆ ಸಂಸ್ಕರಿಸಿದ ವೀರ್ಯಾಣುವನ್ನು ಆಕೆಯ ಗರ್ಭದಲ್ಲಿ ಇರಿಸುವುದು ಹಾಗೂ ಪ್ರಣಾಳ ಶಿಶು ಮುಖ್ಯವಾದ ಚಿಕಿತ್ಸೆಗಳಾಗಿರುತ್ತದೆ. ಇವುಗಳ ಯಶಸ್ಸು ಸಹಜವಾಗಿಯೇ ವೀರ್ಯಾಣು ಹಾಗೂ ಅಂಡಾಣುಗಳ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಉತ್ತಮ ಅಂಡಾಣು ಹಾಗೂ ವೀರ್ಯಾಣುಗಳನ್ನು ಆಯ್ದು, ಉಪಯೋಗಿಸಲು ಕೃತಕ ಬುದ್ಧಿಮತ್ತೆಯು ಭ್ರೂಣಶಾಸ್ತ್ರ ತಜ್ಞರಿಗೆ ನೆರವಾಗಬಹುದು.
- ಉತ್ತಮ ಭ್ರೂಣದ ಆಯ್ಕೆ ಮಹಿಳೆಯ ಶರೀರದಿಂದ ಅಂಡಾಣುಗಳನ್ನು ಹೊರತೆಗೆದು, ಅವುಗಳನ್ನು ವೀರ್ಯಾಣುಗಳೊಂದಿಗೆ ಪ್ರಯೋಗಾಲಯದಲ್ಲಿ, ಅನುಕೂಲವಾದ ವಾತಾವರಣದಲ್ಲಿ ಕೃತಕವಾಗಿ ಬೆಸೆಯಲಾಗುತ್ತದೆ. ನಂತರ ಭ್ರೂಣ ಉತ್ಪತ್ತಿಯಾದ ಮೇಲೆ ಅದನ್ನು ತಾಯಿಯ ಗರ್ಭದಲ್ಲಿ ಇರಿಸಲಾಗುವುದು. ಇದೇ ಪ್ರಣಾಳ ಶಿಶುವಿನಲ್ಲಿ ನಡೆಯುವ ಪ್ರಕ್ರಿಯೆ. ಉತ್ಪತ್ತಿಯಾದ ಭ್ರೂಣಗಳಲ್ಲಿ ಉತ್ತಮವಾದುದನ್ನು ಆಯ್ದುಕೊಳ್ಳಲು ಭ್ರೂಣಶಾಸ್ತ್ರ ತಜ್ಞರಿಗೆ ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ.
- ಮುನ್ಸೂಚಕ ಮಾದರಿಗಳು ಪ್ರತಿ ಹಂತದಲ್ಲೂ ಯಶಸ್ಸಿನ ಅಂದಾಜು ಹಾಗೂ ಉತ್ತಮವಾಗಿಸಬಲ್ಲ ಪಥಗಳನ್ನು ಸೂಚಿಸುವ ತಂತ್ರಾಂಶಗಳು ಇದಾಗಿದ್ದು, ಚಿಕಿತ್ಸೆಯಲ್ಲಿ ನೆರವಾಗುತ್ತವೆ.
- ವಂಶವಾಹಿಗಳ ತಪಾಸಣೆ ಕೆಲವೊಮ್ಮೆ ವಂಶವಾಹಿಯ ತೊಂದರೆಗಳಿದ್ದರೆ ಸತತವಾಗಿ ಗರ್ಭಪಾತ, ಮಕ್ಕಳಾಗುವುದರಲ್ಲಿ ತೊಂದರೆಯಾಗಬಹುದು. ತಳಿ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮುನ್ನಡೆದಿರುವುದರಿಂದ, ಇಲ್ಲಿ ನೆರವಾಗುತ್ತದೆ.
ಈ ಮೇಲ್ಕಂಡ ಕಾರಣಗಳಿಂದ ನಮಗೆ ಸ್ಪಷ್ಟವಾಗುವುದೇನೆಂದರೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಅನೇಕ ವಿಧದಲ್ಲಿ, ಹಂತಗಳಲ್ಲಿ ವೈದ್ಯರಿಗೆ ನೆರವಾಗಬಲ್ಲವು.

ಲಭ್ಯವಿರುವ ಕೃತಕ ಬುದ್ಧಿಮತ್ತೆಯ ಸಾಧನಗಳು
- ಮಹಿಳೆಯ ವಯಸ್ಸು, ರಕ್ತ ಪರೀಕ್ಷೆ, ಸ್ಕ್ಯಾನ್ ಹಾಗೂ ದಂಪತಿಗಳ ಸಮಸ್ಯೆಗನುಸಾರ ಚಿಕಿತ್ಸೆ ಮತ್ತು ಚುಚ್ಚುಮದ್ದುಗಳನ್ನು ಕೊಡಲು ಕ್ರಮಾವಳಿಗಳನ್ನು ಒದಗಿಸುವ ಹಮ್ಮುಗೆ ಲಭ್ಯವಿದೆ. ಇದರಿಂದ ಪ್ರತಿಯೊಬ್ಬರಿಗೂ ನಿರ್ದಿಷ್ಟ ಹಾಗೂ ಬೇಕಾದಷ್ಟು ಮಾತ್ರ ಔಷಧಿಗಳನ್ನು ಒದಗಿಸಲು ಸಾಧ್ಯವಾಗುತ್ತದೆ.
- ಕಂಪ್ಯೂಟರ್ ಸಹಾಯದಿಂದ ವೀರ್ಯ ವಿಶ್ಲೇಷಣೆ. ಈ ಮುಂದುವರಿದ ಯಂತ್ರದಲ್ಲಿ ವೀರ್ಯ ಮಾದರಿಗಳನ್ನು ವಿಶ್ಲೇಷಿಸಲು ಅತ್ಯಾಧುನಿಕ ಇಮೇಜಿಂಗ್ ವ್ಯವಸ್ಥೆಗಳು ಮತ್ತು ವಿಶೇಷ ಸಾಫ್ಟ್ ವೇರ್ ನ್ನು ಬಳಸಿರುವ ತಂತ್ರಜ್ಞಾನವಿದೆ. ನಿರ್ದಿಷ್ಟವಾಗಿ ವೀರ್ಯ ಚಲನಶೀಲತೆ ಮತ್ತು ಇತರ ನಿಯತಾಂಕಗಳನ್ನು ಮಾಪಿಸುತ್ತದೆ. ಸಾಂಪ್ರದಾಯಿಕವಾಗಿ ಮಾಡುವ ವೀರ್ಯ ವಿಶ್ಲೇಷಣೆಗೆ ಹೋಲಿಸಿದರೆ, ಹೆಚ್ಚು ವಸ್ತುನಿಷ್ಠೆ ಒಳಗೊಂಡು, ವಿವರವಾದ ಮೌಲ್ಯಮಾಪನನನ್ನು ಒದಗಿಸಬಲ್ಲದು. ನಿಖರತೆ ಸುಧಾರಿಸುತ್ತದೆ ಮತ್ತು ಮಾನವರಿಂದ ಆಗುಬಹುದಾದ ತಪ್ಪನ್ನು ಕಡಿಮೆ ಮಾಡುತ್ತದೆ.
- ಅಂಡಾಣು ಹಾಗೂ ಫಲಿತ ಭ್ರೂಣದ ಮೌಲ್ಯಮಾಪನ ಅಂಡಾಣುವಿನ ಫಲೀಕರಣ ಸಾಮರ್ಥ್ಯ ಮತ್ತು ಭ್ರೂಣದ ಗುಣಮಟ್ಟನನ್ನು ಮಾಪಿಸಲು ಯಂತ್ರ ಕಲಿಕೆಯ ತಂತ್ರಾಂಶ ಹಾಗೂ ಕ್ರಮಾನಳಿಗಳು ಉಪಯುಕ್ತವಾಗುತ್ತವೆ. ಹಲವು ಕೃತಕ ಬುದ್ಧಿಮತ್ತೆ ಚಾಲಿತ ಯಂತ್ರ ವ್ಯವಸ್ಥೆಗಳು 86.3% ನಿಖರತೆಯೊಂದಿಗೆ ಕಾರ್ಯಸಾಧಿಸುತ್ತವೆ. ಆಳವಾದ ಕಲಿಕೆಯ ಕ್ರಮಾವಳಿ ಬಳಸಿಕೊಂಡು ಭ್ರೂಣ ರೂಪ ವಿಜ್ಞಾನವನ್ನು ವಿಶ್ಲೇಷಿಸುತ್ತವೆ. ಇದರಿಂದ ಮನುಷ್ಯರಲ್ಲಿ ಕಂಡುಬರುವ ಅಂತರ್ ವೀಕ್ಷಕ ವ್ಯತ್ಯಾಸಗಳು ಕಡಿಮೆಯಾಗುತ್ತವೆ. ಇದರಿಂದ ಸೂಕ್ತ ಅಂಡಾಣು ಹಾಗೂ ಭ್ರೂಣದ ಆಯ್ಕೆ ಸ್ಥಿರವಾಗಿ ನಡೆಯುತ್ತದೆ. ಭ್ರೂಣ ಶ್ರೇಣೀಕರ ಕರಾರುವಾಕ್ಕಾಗಿರುತ್ತದೆ.
- ಭ್ರೂಣಗಳ ವಂಶವಾಹಿ ಪರೀಕ್ಷೆ ಭ್ರೂಣಗಳಲ್ಲಿ ವಂಶವಾಹಿಗಳನ್ನು ಮಾಪಿಸಿ ಆರೋಗ್ಯಕರವಾದ ಭ್ರೂಣವನ್ನು ಆಯ್ಕೆ ಮಾಡಲು ಸಹಕಾರಿಯಾಗುವ ಅನೇಕ ತಂತ್ರಾಂಶಗಳು ಉಂಟು.
- ಮುನ್ಸೂಚಕ ಮಾದರಿ ಇಂತಹ ತಂತ್ರಾಂಶಗಳಿಂದ ಚಿಕಿತ್ಸೆಗಳ ಕ್ರಮಗತಿ, ಮುನ್ನಡೆ ಅನುಸರಿಸಬಹುದು. ಚಿಕಿತ್ಸೆಯ ವೈಫಲ್ಯ ಅಥವಾ ಸಫಲತೆಯನ್ನು ಇವುಗಳು ಮುನ್ಸೂಚಿಸುತ್ತವೆ.
- ಭ್ರೂಣಗಳ ರೂಪ ವಿಜ್ಞಾನ ಮೌಲ್ಯಮಾಪನ ಫಲಿತ ಭ್ರೂಣಗಳ ಬೆಳವಣಿಗೆಯನ್ನು ಮಾಪಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಕ್ಯಾಮೆರಾಗಳನ್ನು ಅಳಡಿಸಿರುವ ಈ ಯಂತ್ರದ ಸಹಾಯದಿಂದ ಭ್ರೂಣಗಳನ್ನು ಪ್ರತಿ ಬಾರಿ ಹೊರತೆಗೆಯದೆಯೇ ಅವು ಹೇಗೆ ಬೆಳೆಯುತ್ತಿವೆ ಎಂದು ನೋಡಲು ಸಾಧ್ಯವಾಗುತ್ತದೆ.
ಈ ರೀತಿಯಾಗಿ ಕೃತಕ ಬುದ್ಧಿಮತ್ತೆ ಸಂತಾನೋತ್ಪತ್ತಿ ಚಿಕಿತ್ಸೆಗಳಲ್ಲಿ ನೆರವಾಗುತ್ತಿದೆ. ಅಲ್ಲದೆ ತಂತ್ರಜ್ಞಾನ ದಾಪುಗಾಲಿನಲ್ಲಿ ಮುನ್ನಡೆಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಗಳಾಗುವ ಸಾಧ್ಯತೆ ಇದೆ.
ಭವಿಷ್ಯತ್ತಿನಲ್ಲಿ ಏನಿದೆ?
- ಕೃತಕ ಬುದ್ಧಿಮತ್ತೆ ಹಾಗೂ ತಳಿ ತಂತ್ರಜ್ಞಾನಗಳನ್ನು ಒಟ್ಟುಗೂಡಿಸಿದರೆ ಉತ್ತಮವಾದ, ವೈಯಕ್ತೀಕರಿಸಿದ ಚಿಕಿತ್ಸೆ ಸಾಧ್ಯವಾಗುತ್ತದೆ.
- ನೈಜ ಸಮಯದಲ್ಲಿ ಫಲತ್ತತೆಯನ್ನು ಅನುಸರಿಸಲು ಧರಿಸಬಹುದಾದ ವಸ್ತುಗಳ ಬಳಕೆ (ಕೈಗಡಿಯಾರ, ಸೆಲ್ ಫೋನ್ ಇತ್ಯಾದಿ)
- ಜಾಗತಿಕ ದತ್ತಾಂಶ ಸಂಯೋಜನೆ ಮತ್ತು ಮಾದರಿ ಸುಧಾರಣೆ.
- ಡಿಜಿಟಲ್ ಆರೋಗ್ಯ ವೇದಿಕೆಗಳ ಮೂಲಕ ಹೆಚ್ಚಿನ ಸಾಧನೆ ಸಾಧ್ಯ
ಕೃತಕ ಬುದ್ಧಿಮತ್ತೆಯನ್ನು ಬಳಸುವುದರಿಂದಾಗುವ ಅನುಕೂಲಗಳು.
- ಸ್ವಯಂಚಾಲಿತ ಮತ್ತು ನಿಖರವಾದ ಮೌಲ್ಯಮಾಪನವನ್ನು ಸಾಧಿಸುವ ವ್ಯವಂಸ್ಥೆ.
- ವರ್ಧಿತ ನಿಖರತೆ ಮತ್ತು ಸ್ಥಿರತೆ.
- ಸುವ್ಯವಸ್ಥಿತ ಕೆಲಸದ ಹರಿವು ಮತ್ತು ವೇಗವಾದ ಫಲಿತಾಂಶಗಳು.
- ಸುಧಾರಿತ ಮೌಲ್ಯಮಾಪನ ಹಾಗೂ ಚಿಕಿತ್ಸಾ ಹರಿವು.
- ವೈಯಕ್ತಿಕಗೊಳಿಸಿದ ಚಿಕಿತ್ಸಾ ತಂತ್ರಗಳು
ಕೃತಕ ಬುದ್ಧಿಮತ್ತೆಯ ಮಿತಿಗಳು ಹಾಗೂ ಸವಾಲುಗಳು
- ಮಾಹಿತಿ ಗೌಪ್ಯತೆ ಮತ್ತು ನೈತಿಕ ಕಾಳಜಿಗಳು
- ಸೀಮಿತ ತರಬೇತಿ ದತ್ತಾಂಶಗಳಿಂದ ಪೂರ್ವಾಗ್ರಹಿಕೆ ಅಥವಾ ಪಕ್ಷಪಾತ
- ವೆಚ್ಚ ಮತ್ತು ತರಬೇತಿ
- ವಾಸ್ತವಕ್ಕೆ ಹೊಂದಿಕೆ ಮಾಡಿ, ದೃಢೀಕರಿಸಬೇಕಾದ ಅವಶ್ಯಕತೆ
- ಪ್ರಸ್ತುತ ವ್ಯವಸ್ಥೆಗಳೊಂದಿಗೆ ಏಕೀಕರಣ
- ಅನಿಶ್ಚಿತತೆ
ಮುಂದೆ ಮಾನವರ ಮೇಲೆ ಕೃತಕ ಬುದ್ಧಿಮತ್ತೆಯೇ ಮೇಲುಗೈ ಸಾಧಿಸೀತೆ?
ತಂತ್ರಗಳ ಮೇಲಿನ ಅವಲಂಬನೆ ಹೆಚ್ಚುತ್ತಿರುವುದರಿಂದ ಪ್ರಸ್ತುತ ಯಾವುದೇ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೊರತುಪಡಿಸಲಾಗುವುದಿಲ್ಲ. ಇದನ್ನು ಮಾನವರ ಕಾರ್ಯಕಾರ್ಯಕ್ರಮಗಳಲ್ಲಿಯೇ ಸಮಂಜಸವಾಗಿ ಸಂಘಟಿಸಿಕೊಂಡು ಹೋಗಬೇಕಿದೆ.
ಸಂತಾನೋತ್ಪತ್ತಿಯ ಚಿಕಿತ್ಸಾ ವಿಧಾನಗಳಲ್ಲಿ ಕೃತಕ ಬುದ್ಧಿಮತ್ತೆಯ ಏಕೀಕರಣ ರೋಗಿಯ ಸುರಕ್ಷತೆ, ಡೇಟಾ ಗೌಪ್ಯತೆ ಮತ್ತು ವೈದ್ಯಕೀಯ ಮುನ್ನಡೆ ಹಾಗೂ ತಾಂತ್ರಿಕ ಪ್ರಗತಿಯನ್ನು ಸಮತೋಲನಗೊಳಿಸಬೇಕು. ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪಾರದರ್ಶಕ ಕ್ರಮಾವಳಿ, ದೃಢವಾದ ಮೌಲ್ಯೀಕರಣ, ಸಮಗ್ರ ತರಬೇತಿ ಮತ್ತು ಚಿಕಿತ್ಸಾ ನಿರ್ಧಾರಗಳನ್ನು ಒಳಗೊಂಡಿರಬೇಕು. ವೈದ್ಯರ ಮೇಲ್ವಿಚಾರಣೆ ಅತ್ಯಗತ್ಯವಾಗಿರುತ್ತದೆ.
– ಡಾ. ಕಾಮಿನಿ ರಾವ್





