ಆರೋಗ್ಯಕರವಾದ ಒಂದಿಷ್ಟು ವಿದೇಶೀ ವ್ಯಂಜನಗಳನ್ನು ತಯಾರಿಸುವ ಬಗ್ಗೆ ವಿವರವಾಗಿ ತಿಳಿಯೋಣವೇ……?
ಕೊರಿಯಾಂಡರ್ ಚಿಲೀ ಸ್ಪಿನಾಚ್ ಫ್ರೀಟರ್ಸ್
ಸಾಮಗ್ರಿ : 2 ಕಂತೆ ಶುಚಿಗೊಳಿಸಿ ಹೆಚ್ಚಿಟ್ಟ ಪಾಲಕ್ ಸೊಪ್ಪು, 1 ಕಪ್ ಕಡಲೆಹಿಟ್ಟು, ಅರ್ಧರ್ಧ ಕಪ್ ಅಕ್ಕಿಹಿಟ್ಟು ಹುಳಿಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಕೊ.ಸೊಪ್ಪು/ಪುದೀನಾ ಪೇಸ್ಟ್, ಅರಿಶಿನ, ಓಮ, ಕರಿಯಲು ಎಣ್ಣೆ.
ವಿಧಾನ : ಮೊದಲು ಬಾಣಲೆಯಲ್ಲಿ (ಮಂದ ಉರಿಯಲ್ಲಿ) ಎಣ್ಣೆ ಕಾಯಲು ಬಿಡಿ. ಒಂದು ಬೇಸನ್ ಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿಕೊಳ್ಳಿ. ಇದಕ್ಕೆ ತುಸು ನೀರು ಬೆರೆಸಿಕೊಂಡು, ಪಕೋಡ ಮಿಶ್ರಣದ ಹದಕ್ಕೆ ಕಲಸಿಕೊಳ್ಳಿ. ಎಣ್ಣೆ ಬಿಸಿಯಾದಾಗ, ಅದರಿಂದ 2 ಚಮಚ ತೆಗೆದು ಮಿಶ್ರಣಕ್ಕೆ ಬೆರೆಸಿ, ಗೊಟಾಯಿಸಿ. ನಂತರ ಈ ಮಿಶ್ರಣದಿಂದ ಪ್ರತಿ ಸಲ ತುಸುವೇ ಹಿಟ್ಟು ತೆಗೆದುಕೊಳ್ಳುತ್ತಾ ಎಂದಿನಂತೆ ಪಕೋಡ ತಯಾರಿಸಿ. ಹೊಂಬಣ್ಣ ಬಂದ ಇವನ್ನು ಟಿಶ್ಯು ಪೇಪರ್ ಮೇಲೆ ಹರಡಿರಿ. ನಂತರ ಚಿತ್ರದಲ್ಲಿರುವಂತೆ ಬಗೆಬಗೆ ಚಟ್ನಿಗಳೊಂದಿಗೆ ಸವಿಯಲು ಕೊಡಿ.
ಈವ್ನಿಂಗ್ ಪಾರ್ಟಿಗಳಿಗೆ ಹೊಸ ಬಗೆಯ ಸ್ಟಾರ್ಟರ್ಸ್ ಬೇಕೆನಿಸಿದರೆ ಇದನ್ನೇಕೆ ನೀವು ಟ್ರೈ ಮಾಡಿ ನೋಡಬಾರದು….?

ಪೊಟೇಟೋ ಸಾಲ್ಸಾ
ಸಾಮಗ್ರಿ : 4-5 ಆಲೂಗಡ್ಡೆ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ ಇಂಗು, ಓರಿಗ್ಯಾನೋ, ಕಸೂರಿಮೇಥಿ, ನೈಲಾನ್ ಎಳ್ಳು, ಮೆಯೋನೀಸ್.
ವಿಧಾನ : ಸಿಪ್ಪೆ ಹೆರೆದ ಆಲೂಗಳನ್ನು ಉದ್ದುದ್ದಕ್ಕೆ ಹೆಚ್ಚಿಕೊಂಡು, ಲಘುವಾಗಿ ಬೇಯಿಸಿಕೊಳ್ಳಿ. ನಂತರ ಅದರ ನೀರು ಬಸಿದು ಗಾಳಿಗೆ ಆರಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಎಲ್.ಜಿ ಇಂಗು, ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದೊಂದಾಗಿ ಹಾಕಿ ಬಾಡಿಸಿ. ಇದಕ್ಕೆ ಬೆಂದ ಆಲೂ ಸೇರಿಸಿ 2 ನಿಮಿಷ ಬಾಡಿಸಿ ಕೆಳಗಿಳಿಸಿ. ನಂತರ ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ ಇದನ್ನಿರಿಸಿ, 180 ಡಿಗ್ರಿ ಶಾಖದಲ್ಲಿ ಹದನಾಗಿ ಬೇಕ್ ಮಾಡಿ. ನಂತರ ಇವನ್ನು ಹೊರತೆಗೆದು, ಇದರ ಮೇಲೆ ಮೆಯೋನೀಸ್ ಸಿಂಪಡಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ. ಟೊಮೇಟೊ ಸಾಸ್ ಜೊತೆ ಸ್ಟಾರ್ಟರ್ ಆಗಿ ಊಟಕ್ಕೆ ಮೊದಲು ಸವಿಯಲು ಕೊಡಿ.
ಸಂಜೆ ವೇಳೆ ಮಳೆ ಬರುತ್ತಿರುವಾಗ ಇಂಥ ಸೊಗಸಾದ ಗ್ರಿಲ್ಡ್ ರೆಸಿಪಿಗಳಿದ್ದರೆ, ಎಂಥ ಬೊಂಬಾಟ್ ಅಲ್ಲವೇ…..?

ಗರಿಗರಿ ಮಶ್ರೂಮ್
ಸಾಮಗ್ರಿ : 10-12 ಅಣಬೆ, ಒಂದಿಷ್ಟು ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್ ಮೈದಾ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ವೈಟ್ ಪೆಪ್ಪರ್, ಎಲ್.ಜಿ ಇಂಗು, ತುರಿದ ಚೀಸ್, ಬ್ರೆಡ್ ಕ್ರಂಬ್ಸ್, ಆರಾರೂಟ್, ಅಲಂಕರಿಸಲು ನಿಮ್ಮ ಅಚ್ಚುಮೆಚ್ಚಿನ ಸಲಾಡ್.
ವಿಧಾನ : ಮೊದಲು ಅಣಬೆ ಹಾಗೂ ಕ್ಯಾಪ್ಸಿಕಂ ಸಣ್ಣದಾಗಿ ಹೆಚ್ಚಿಡಿ. ಇದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಪಕೋಡ ಹದಕ್ಕೆ ಮಿಶ್ರಣ ಕಲಸಿಡಿ. ಮೈದಾಗೆ ಆರಾರೂಟ್, ತುಸು ಉಪ್ಪು, ಮೆಣಸು, ಎಲ್.ಜಿ ಇಂಗು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಡಿ. ಮಿಶ್ರಣದಿಂದ ಸಣ್ಣದಾಗಿ ಉಂಡೆ ತೆಗೆದುಕೊಂಡು, ಸುರುಳಿ ಮಾಡಿ, ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಚಿತ್ರದಲ್ಲಿರುವಂತೆ ಸಲಾಡ್ ಜೊತೆ ಗಾರ್ನಿಶ್ ಮಾಡಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಸಂಜೆಯ ಕಾಫಿ/ಟೀ ಜೊತೆ ಬಾಯಾಡಿಸಲು ಏನಾದರೂ ರುಚಿಕರ ಸ್ನಾಕ್ಸ್ ಬೇಕೆನಿಸಿದರೆ ಇವನ್ನು ಧಾರಾಳ ಟ್ರೈ ಮಾಡಬಹುದು…..!

ಮೋಜರೇಲಾ ಚೀಸ್ ಸ್ಟಿಕ್
ಸಾಮಗ್ರಿ : 300 ಗ್ರಾಂ ಮೋಜರೇಲಾ ಚೀಸ್, ಅರ್ಧರ್ಧ ಕಪ್ ಮೈದಾ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೆಣಸು, ಎಲ್.ಜಿ ಇಂಗು, ಓಮ, ಚಾಟ್ ಮಸಾಲ, ಬ್ರೆಡ್ ಕ್ರಂಬ್ಸ್, ಕರಿಯಲು ಎಣ್ಣೆ.
ವಿಧಾನ : ಚೀಸ್ ನ್ನು 1 ಇಂಚು ತುಂಡುಗಳಾಗಿ ಕತ್ತರಿಸಿ. ಮೈದಾಗೆ ಕಡಲೆಹಿಟ್ಟು ಮತ್ತೆಲ್ಲ ಸಾಮಗ್ರಿ, ಎಲ್.ಜಿ ಇಂಗು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಅದರಲ್ಲಿ ಚೀಸ್ ತುಂಡುಗಳನ್ನು ಅದ್ದಿಕೊಂಡು, ಗಟ್ಟಿ ಕೋಟಿಂಗ್ ಬರುವಂತೆ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಒಂದು ಟ್ರೇನಲ್ಲಿ ಜೋಡಿಸಿಕೊಳ್ಳಿ. ಇದನ್ನು 2-3 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ ಸೆಟ್ ಆಗಲು ಬಿಡಿ. ನಂತರ 1 ಗಂಟೆ ಕಾಲ ಹೊರಗಿರಿಸಿ, ಆಮೇಲೆ ಕಾದ ಎಣ್ಣೆಯಲ್ಲಿ ಕರಿದು, ಚಿತ್ರದಲ್ಲಿರುವಂತೆ ಜೋಡಿಸಿ, ಮೇಲೆ ಚಾಟ್ ಮಸಾಲ ಉದುರಿಸಿ, ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.

ಸ್ಟಫ್ ಮಿನಿ ಬೆಲ್ ಪೆಪ್ಪರ್
ಸಾಮಗ್ರಿ : ಅರ್ಧರ್ಧ ಕಪ್ ಪನೀರ್ ಚೀಸ್, 1 ಕಪ್ ಬೇಯಿಸಿದ ಮಿಶ್ರ ತರಕಾರಿ ಹೋಳು, 1-2 ಈರುಳ್ಳಿ, 4 ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ ಇಂಗು, ಓಮ, ಚಿಲೀ ಸಾಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಸೌಟು ಎಣ್ಣೆ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಎಲ್.ಜಿ ಇಂಗು, ಇತರ ಮಸಾಲೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಬೆಂದ ತರಕಾರಿ, ತುರಿದ ಪನೀರ್ ಹಾಕಿ ಹದನಾಗಿ ಬಾಡಿಸಿ, ಕೆಳಗಿಳಿಸಿ. ನಂತರ ಚಿತ್ರದಲ್ಲಿರುವಂತೆ ಕ್ಯಾಪ್ಸಿಕಂನ್ನು ಬಟ್ಟಲಿನಂತೆ ಕತ್ತರಿಸಿ, (ಇದರ ತಿರುಳನ್ನೂ ತರಕಾರಿ ಜೊತೆ ಬಾಡಿಸಿಕೊಳ್ಳಿ) ಅದಕ್ಕೆ ತರಕಾರಿ ಮಿಶ್ರಣ ಸಮನಾಗಿ ತುಂಬಿಸಿ. ಇದರ ಮೇಲೆ ತುರಿದ ಚೀಸ್ ಉದುರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಈ ಕ್ಯಾಪ್ಸಿಕಂಗಳನ್ನು ಹದನಾಗಿ ಶ್ಯಾಲೋ ಫ್ರೈ ಮಾಡಿ. ಬಿಸಿಯಾದ ಇವನ್ನು ಟೊಮೇಟೊ ಸಾಸ್ ಜೊತೆ, ಕಾಫಿ/ಟೀ ಸಮೇತ ಎಂಜಾಯ್ ಮಾಡಿ!

ಆನಿಯನ್ ರಿಂಗ್ಸ್
ಸಾಮಗ್ರಿ : 1 ಕಪ್ ಮೈದಾ, 2 ಚಿಟಕಿ ಬೇಕಿಂಗ್ ಪೌಡರ್, 300 ಗ್ರಾಂ ಈರುಳ್ಳಿ (ಬಿಲ್ಲೆಗಳಾಗಿಸಿ, ದಪ್ಪ ರಿಂಗ್ಸ್ ಮಾಡಿಕೊಳ್ಳಿ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೀರ್, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಹಸಿಮೆಣಸು, ಕರಿಯಲು ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಜರಡಿಯಾಡಿದ ಮೈದಾ ಹಾಕಿಕೊಂಡು ಅದಕ್ಕೆ ಬೇಕಿಂಗ್ ಪೌಡರ್, ಕೊ.ಸೊಪ್ಪು, ಪುದೀನಾ, ಹಸಿಮೆಣಸು, ಉಪ್ಪು, ಮೆಣಸು, ಉಪ್ಪು ಎಲ್ಲಾ ಸೇರಿಸಿ. ನಂತರ ಇದಕ್ಕೆ ಬೀರ್ ಬೆರೆಸುತ್ತಾ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಲ್ಲಿ ಈರುಳ್ಳಿ ರಿಂಗ್ಸ್ ನ್ನು ಒಂದೊಂದಾಗಿ ಅದ್ದಿ ತೆಗೆದು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಅವನ್ನು ಟಿಶ್ಯು ಪೇಪರ್ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಅಂಶ ಹೋಗಲಾಡಿಸಿ. ನಂತರ ಇವನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಮಳೆಗಾಲದ ಈ ದಿನಗಳಲ್ಲಿ ಏನಾದರೂ ಹೊಸ ರೆಸಿಪಿ ಮಾಡಬೇಕೆನಿಸಿದರೆ, ಇವನ್ನು ನೀವೇಕೆ ಟ್ರೈ ಮಾಡಿ ನೋಡಬಾರದು….?

ಗ್ರೀನ್ ಬನಾನಾ ಚಿಪ್ಸ್ ವಿತ್ ಗ್ರೀನ್ ಮಸಾಲಾ
ಸಾಮಗ್ರಿ : 6 ಬಾಳೆಕಾಯಿ (ಸಿಪ್ಪೆ ಹೆರೆದು ತೆಳು ಬಿಲ್ಲೆಗಳಾಗಿಸಿ ನೀರು ಮಜ್ಜಿಗೆಗೆ ಹಾಕಿಡಿ), ಅರ್ಧರ್ಧ ಕಪ್ ಅಕ್ಕಿಹಿಟ್ಟು, ರವೆ, ರುಚಿಗೆ ತಕ್ಕಷ್ಟು ಉಪ್ಪು, ವೈಟ್ ಪೆಪ್ಪರ್, ಪುದೀನಾ ಚಟ್ನಿ, ಚಾಟ್ ಮಸಾಲ, ಅರ್ಧ ಸೌಟು ಎಣ್ಣೆ.
ವಿಧಾನ : ಒಂದು ಅಗಲವಾದ ಬಟ್ಟಲಿಗೆ ಮೊದಲು ಪುದೀನಾ ಚಟ್ನಿ, ಉಪ್ಪು, ವೈಟ್ ಪೆಪ್ಪರ್ ಸೇರಿಸಿ. ಇದಕ್ಕೆ ಬಾಳೆ ಬಿಲ್ಲೆ ಸೇರಿಸಿ ಎಲ್ಲದರ ಮೇಲೂ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ. ನಂತರ ಒಂದು ಟ್ರೇನಲ್ಲಿ ಹುರಿದ ರವೆಗೆ, ಅಕ್ಕಿ ಹಿಟ್ಟು, ತುಸು ಉಪ್ಪು, ಪೆಪ್ಪರ್ ಸೇರಿಸಿ ಹರಡಿರಿ. ನಂತರ ಒಂದು ಅಳ್ಳಕವಾದ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡುತ್ತಾ, 2-3 ಬಿಲ್ಲೆಗಳನ್ನು (ಅಥವಾ ಒಂದೊಂದಾಗಿ) ಹಿಟ್ಟಿನ ಮಿಶ್ರಣದಲ್ಲಿ ಎರಡೂ ಬದಿ ಹೊರಳಿಸಿ ಶ್ಯಾಲೋ ಫ್ರೈ ಮಾಡಿ. ಈ ರೀತಿ ಚಿಪ್ಸ್ ರೆಡಿ ಮಾಡಿ, ನಂತರ ಇನ್ನು ಒಂದು ಪ್ಲೇಟ್ ನಲ್ಲಿ ಹರಡಿ ಚಾಟ್ ಮಸಾಲ ಉದುರಿಸಿ, ಟೊಮೇಟೊ ಸೂಪ್ ಜೊತೆ ಬಿಸಿಯಾಗಿ ಸವಿಯಿರಿ.

ಪ್ರೋ ಬಯೋಟಿಕ್ ಯೋಗರ್ಟ್
ಸಾಮಗ್ರಿ : ಗಟ್ಟಿಯಾದ ಕೆನೆಭರಿತ ಮೊಸರು (ಹಂಗ್ ಕರ್ಡ್), ಫ್ರೆಶ್ ಕ್ರೀಂ, ಕಂಡೆನ್ಸ್ಡ್ ಮಿಲ್ಕ್, ಪ್ರೊಬಯೋಟಿಕ್ ಮಿಲ್ಕ್, ಮಾಗಿದ ಮಾವಿನ ತಿರುಳಿನ ಪೇಸ್ಟ್ (ತಲಾ 250 ಮಿ.ಲೀ.).
ವಿಧಾನ : ಒಂದು ಬಟ್ಟಲಿಗೆ ಮಾವು ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಚೆನ್ನಾಗಿ ಕದಡಿಕೊಳ್ಳಿ. ನಂತರ ಇದಕ್ಕೆ ಫ್ಲೇವರ್ ಗಾಗಿ ಮ್ಯಾಂಗೋ ಪ್ಯೂರಿ ಬೆರೆಸಿ ಕದಡಬೇಕು. ನಂತರ ಇವನ್ನು ರಮೇಕಿನ್ ಬೌಲುಗಳಿಗೆ ಹಾಕಿ, ಮೊದಲೇ ಪ್ರೀಹೀಟ್ ಮಾಡಿದ ಓವನ್ ನಲ್ಲಿ ವಾಟರ್ ಬಾಥ್ ಅಂದ್ರೆ ವಾಟರ್ ಪ್ಯಾನಿನಲ್ಲಿರಿಸಿ, 160 ಡಿಗ್ರಿ ಸೆ. ನಲ್ಲಿ 15 ನಿಮಿಷ ಬೇಕ್ ಮಾಡಿ. ನಂತರ ಚಿತ್ರದಲ್ಲಿರುವಂತೆ ಮ್ಯಾಂಗೋ ಪೀಸ್ ಇರಿಸಿ, 1 ತಾಸು ಫ್ರಿಜ್ ನಲ್ಲಿರಿಸಿ ನಂತರ ಕೂಲ್ ಕೂಲ್ ಆಗಿ ಸರ್ವ್ ಮಾಡಿ.
ಭಾನುವಾರದ ಸ್ಪೆಷಲ್ ಗಾಗಿ ಏನಾದರೂ ಹೊಸತು ಟ್ರೈ ಮಾಡೋಣ ಎನಿಸಿದರೆ, ಇಲ್ಲಿದೆ ಒಂದು ವಿದೇಶೀ ಸ್ವೀಟ್ಖಾರಾ ಟೇಸ್ಟ್….

ಕಾಸ್ ಕಾಸ್ ವಿತ್ ರೆಟಾಟಾಯಿಲ್ ರೈಸ್
ಕಾಸ್ ಕಾಸ್ ಗಾಗಿ ಸಾಮಗ್ರಿ : 200 ಗ್ರಾಂ ಇನ್ ಸ್ಟೆಂಟ್ ಕಾಸ್ ಕಾಸ್ ರೈಸ್ (ರೆಡಿಮೇಡ್ ಲಭ್ಯ), 100 ಗ್ರಾಂ ಬೆಣ್ಣೆ, 2 ಚಮಚ ಎಕ್ಸ್ ಟ್ರಾರ್ಜಿನ್ ಆಲಿವ್ ಆಯಿಲ್, ರುಚಿಗೆ ತಕ್ಕಷ್ಟು ಉಪ್ಪು ವೈಟ್ ಪೆಪ್ಪರ್.
ವಿಧಾನ : ಒಂದು ಪ್ಯಾನಿನಲ್ಲಿ ನೀರು ಕಾಯಿಸಿ. ಅದಕ್ಕೆ ಉಪ್ಪು, ಬೆಣ್ಣೆ ಸೇರಿಸಿ ಕುದಿಸಿರಿ. ನೀರು ಕುದ್ದಾಗ ಅದಕ್ಕೆ ಕಾಸ್ ಕಾಸ್ ಹಾಕಿ, ಚೆನ್ನಾಗಿ ಕದಡಿಕೊಳ್ಳಿ. ಅದನ್ನು ಒಲೆಯಿಂದ ಕೆಳಗಿಳಿಸಿ. ಮುಚ್ಚಳ ಮುಚ್ಚಿರಿಸಿ 5 ನಿಮಿಷ ಹಾಗೇ ಬಿಡಿ. ಸರ್ವ್ ಮಾಡುವ ಮೊದಲು ಇದರ ಮೇಲೆ ಲೈಟ್ ಆಗಿ ಪೆಪ್ಪರ್ ಉದುರಿಸಿ, ಮಂದ ಉರಿಯಲ್ಲಿ ತುಸುವೇ ಕಾಯಿಸಿದ ಆಲಿವ್ ಆಯಿಲ್ ಸಿಂಪಡಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ.
ರೆಟಾಟಾಯಿಲ್ ರೈಸ್ : 250 ಗ್ರಾಂ ಮಾಗಿದ ಹುಳಿ ಟೊಮೇಟೊ, ಸಣ್ಣಗೆ ಹೆಚ್ಚಿದ 150 ಗ್ರಾಂ ಈರುಳ್ಳಿ, 50 ಗ್ರಾಂ ಬೆಳ್ಳುಳ್ಳಿ, 3 ಬಗೆಯ ಕ್ಯಾಪ್ಸಿಕಂ (ಒಟ್ಟಾರೆ 150 ಗ್ರಾಂ), 100 ಗ್ರಾಂ ಝುಕೀನಿ, 120 ಗ್ರಾಂ ಬದನೆಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಥೈಂ, ಟೊಮೇಟೊ ಪೇಸ್ಟ್, ಹೆಚ್ಚಿದ ತುಳಸಿ ಎಲೆ, ಅರ್ಧ ಸೌಟು ಆಲಿವ್ ಆಯಿಲ್.
ವಿಧಾನ : ಒಂದು ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ. ನಂತರ ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಇದನ್ನು ಒಂದು ಬಟ್ಟಲಿಗೆ ಹಾಕಿ ಒಂದು ಬದಿಗಿಡಿ. ನಂತರ ಅದೇ ಪ್ಯಾನಿನಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ ಮೊದಲು ಹೆಚ್ಚಿದ ಬದನೆ, ನಂತರ 3 ಬಗೆಯ ಕ್ಯಾಪ್ಸಿಕಂ, ಝುಕೀನಿ, ಟೋಮೇಟೊ ಪೇಸ್ಟ್, ಆಮೇಲೆ ಥೈಂ ಹಾಕಿ ಕೆದಕಬೇಕು. ನಂತರ 10 ನಿಮಿಷ ಆಗಾಗ ಕೈಯಾಡಿಸುತ್ತಾ ಎಲ್ಲಾ ಬೆಂದಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಕೆಳಗಿಳಿಸಿದ ನಂತರ ತುಳಸಿ ಎಲೆ ಉದುರಿಸಿ. ಇದಕ್ಕೆ ಕಾಸ್ ಕಾಸ್ ರೈಸ್ ಬೆರೆಸಿ, ನಮ್ಮಲ್ಲಿನ ಫ್ರೈಡ್ ರೈಸ್ ತರಹ ಕೆದಕಿ, ತಕ್ಷಣ ಸರ್ವ್ ಮಾಡಿ.





