– ರಾಘವೇಂದ್ರ ಅಡಿಗ ಎಚ್ಚೆನ್.
ಮೈಸೂರು, ಜು.10: ಖ್ಯಾತ ಕತೆಗಾರ್ತಿ, ಸಾಹಿತ್ಯ ಕ್ಷೇತ್ರದ ಹಿರಿಯ ಲೇಖಕಿ ಸಿ.ಎನ್. ಮುಕ್ತಾ (ಕಳ್ಳಂಬೆಳ್ಳ ನರಸಿಂಹ ಮೂರ್ತಿ ಮುಕ್ತಾ) ಅವರು ಇಂದು ಮುಂಜಾನೆ 12.30ರ ಸುಮಾರಿಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಕಥೆಗಳ ಮೂಲಕ ಅಪಾರ ಓದುಗರನ್ನು ಸಂಪಾದಿಸಿದ್ದ ಸಿ.ಎನ್. ಮುಕ್ತಾ ಅವರ ನಿಧನಕ್ಕೆ ಸಾಹಿತ್ಯ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.
ಅವರ ಪಾರ್ಥಿವ ಶರೀರವನ್ನು ಮೈಸೂರಿನ ವಾಣಿ ವಿಲಾಸ ರಸ್ತೆಯ ಡಬ್ಬಲ್ ಟ್ಯಾಂಕ್ ಸಮೀಪದ ವಿಜಯ ಡ್ರೈವಿಂಗ್ ಸ್ಕೂಲ್ ಪಕ್ಕದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಇರಿಸಲಾಗುತ್ತದೆ.
ಕುಟುಂಬಸ್ಥರು, ಬಂಧು-ಬಳಗ ಹಾಗೂ ಸಾಹಿತ್ಯಾಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಆಗಮಿಸುತ್ತಿದ್ದಾರೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕವು ಒಬ್ಬ ಪ್ರಮುಖ ಕತೆಗಾರ್ತಿಯನ್ನು ಕಳೆದುಕೊಂಡಂತಾಗಿದೆ.
ಮುಕ್ತಾ ಅವರ ಕಾದಂಬರಿ ಪರಿಚಯ
ಅನಾವರಣ, ಅಪರಿಚಿತರು, ಅಸ್ವೀಕೃತರು, ಅನುರಾಗ ತಂದ ಅನುಬಂಧ, ಗೆಲುವಿನ ಹೆಜ್ಜೆ, ಕ್ಷಮಯಾಧರಿತ್ರಿ, ಸುಖದ ಸೋಪಾನಗಳು, ದಡ ಸೇರಿದ ನೌಕೆ, ಜೀವನ ಚಕ್ರ, ಅಮೃತಮಯಿ, ಕುಸುಮ ಕಸ್ತೂರಿ, ದಡ ಸೇರಿದ ನೌಕೆ, ದುಂಬಿ ಕೊರೆದ ಹೂವು, ಪ್ರೇಮಾಂಜಲಿ, ವಿಮುಕ್ತಿ, ಪರಿಭ್ರಮಣ, ದೋಣಿ ಸಾಗಲಿ ಇದು ಮುಕ್ತಾ ಅವರ75 ಕ್ಕೂ ಹೆಚ್ಚು ಕಾದಂಬರಿಗಳು, ಸುಖದಸೋಪಾನ, ಕ್ಷಮಯಾಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಗೆಲುವಿನ ಹೆಜ್ಜೆ, ಅಮೃತಮಯಿ, ಮೌನರಾಗ, ಮುಂತಾದ ಕಾದಂಬರಿಗಳು ದೂರದರ್ಶನದಲ್ಲಿ ಧಾರಾವಾಹಿಗಳಾಗಿ ಪ್ರಸಾರವಾಗಿದ್ದರೆ ಕಿರುಚಿತ್ರಗಳಾಗಿ ಸೆಳೆತ, ಪಾಲು, ತಾಯಿಕರುಳು ಮುಂತಾದ ಕಥೆಗಳು ಪ್ರಸಿದ್ಧಿ ಪಡೆದಿವೆ. ‘ದೋಣಿ ಸಾಗಲಿ’ (ನಿರ್ದೇಶನ: ರಾಜೇಂದ್ರಸಿಂಗ್ ಬಾಬು) ಮತ್ತು ‘ಮಿಸ್ ಕ್ಯಾಲಿಫೋರ್ನಿಯ’ (ನಿರ್ದೇಶನ: ಕೋಡ್ಲು ರಾಮಕೃಷ್ಣ) ಚಲನಚಿತ್ರಗಳಾಗಿವೆ.
ಸಿ.ಎನ್. ಮುಕ್ತಾರವರಿಗೆ ಆರ್ಯಭಟ ಪ್ರಶಸ್ತಿ, ಅತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಶಿಕ್ಷಕಿಯಾಗಿ ಸಾಹಿತ್ಯ ಕೃಷಿಮಾಡುವವರಿಗೆ ಸಲ್ಲುವ ಬನಶಂಕರಮ್ಮ ಪ್ರಶಸ್ತಿಯೂ ಸಂದಿದೆ.





