ನೀಳ್ಗಥೆ ಪ್ರಕಾಶ ಕಕ್ಕನವರ

ಮಾತೃ ಹೃದಯಕ್ಕೆ ಹೊಸಬರು ಖಂಡಿತಾ ಅಪರಿಚಿತರಲ್ಲ. ಸ್ವಂತ ಮಗ ವಿದೇಶ ಸೇರಿ ದೂರವಾದ ಕೊರಗಿನಲ್ಲಿದ್ದ ಲಲಿತಮ್ಮನಿಗೆ ಆಕಸ್ಮಿಕವಾಗಿ ಶರವಣನ ಪರಿಚಯವಾಯಿತು. ಅದು ಮುಂದಕ್ಕೆ ಯಾವ ಘಟ್ಟ ತಲುಪಿತು…….?

ಲಲಿತಮ್ಮ ಮುಂಜಾವಿನ ವಿಹಾರಕ್ಕೆಂದು ಉದ್ಯಾನವನಕ್ಕೆ ಬಂದಾಗ ದಿನಕ್ಕಿಂತ ಅರ್ಧ ಗಂಟೆ ಲೇಟ್‌ ಆಗಿತ್ತು. ಉದ್ಯಾನವನದ ಗೇಟ್‌ ದಾಟಿ ಒಳ ಪ್ರವೇಶಿಸುತ್ತಿದ್ದಂತೆ ಬಿರುಸಾಗಿ ಓಡಿ ಬರುತ್ತಿದ್ದ ಒಬ್ಬ ದಡೂತಿ ವ್ಯಕ್ತಿ ಲಲಿತಮ್ಮನವರಿಗೆ ಬಲವಾಗಿ ಗುದ್ದಿದ. ಆ ರಭಸಕ್ಕೆ ಲಲಿತಮ್ಮ ಆಯತಪ್ಪಿ ಮುಗ್ಗರಿಸಿ ಬೀಳುವವರಿದ್ದರು ಆಗ ಎದುರಾಗಿ ಬರುತ್ತಿದ್ದ ಒಬ್ಬ ಯುವಕ ಓಡಿ ಬಂದು ಅವರನ್ನು ಹಿಡಿದು ನಿಲ್ಲಿಸಿ ಹತ್ತಿರದ ಕಲ್ಲು ಬಾಕಿಗೆ ಕುಳ್ಳಿರಿಸಿದ.

“ಅಮ್ಮಾ ಪೆಟ್ಟಾಯ್ತಾ…..?!!” ಆ ಯುವಕ ಮುಗುಳ್ನಗುತ್ತ ಕೇಳಿದ.

ನೋವಿನಿಂದ ನರಳುತ್ತಿದ್ದ ಲಲಿತಮ್ಮ, “ಅಯ್ಯೋ ಅಂತಹದೇನೂ ಆಗಿಲ್ಲಪ್ಪಾ….. ನೀನು ಯಾಕೆ ಇಷ್ಟೊಂದು ಗಾಬರಿ ಆಗಿದ್ದೀಯಾ?!” ಎಂದು ಕೇಳಿದರು.

ಆ ಹುಡುಗ ಹೆಚ್ಚು ಹೊತ್ತು ನಿಲ್ಲದೇ ಮತ್ತೆ ತನ್ನ ರನ್ನಿಂಗ್‌ ರೌಂಡ್ಸ್ ಹಾಕುತ್ತಾ ಮುಂದೆ ಸಾಗಿದ.

ಲಲಿತಮ್ಮ ಓಡುತ್ತಿರುವ ಆ ಯುವಕನನ್ನೇ ನೋಡುತ್ತಾ ಕುಳಿತರು. ಲಲಿತಮ್ಮ ಆಯತಪ್ಪಿ ಬೀಳುತ್ತಿದ್ದಾಗ ಅಮೆರಿಕಾದಲ್ಲಿರುವ ತಮ್ಮ ಮಗ ಸುಮಿತನೇ ಬಂದು ಹಿಡಿದಂತೆ ಭಾಸವಾಯಿತು….!!

`ಹ್ಞೂಂ…. ನನ್ನ ಮಗ ನನ್ನ ಜೊತೆ ಇರಲು ನಾನು ಪುಣ್ಯ ಮಾಡಿರಬೇಕಲ್ಲ….?’ ಎಂದುಕೊಂಡರು.

ಲಲಿತಮ್ಮ ಎಪ್ಪತ್ತು ವರ್ಷದ ಮಹಿಳೆ. ವಿಶಾಲವಾದ ಮನೆ, ಕಾರು, ಸಾಕಷ್ಟು ದುಡ್ಡು, ಸಂಪತ್ತು ಎಲ್ಲವೂ ಇದೆ. ಒಬ್ಬನೇ ಮಗ ಸುಮಿತ್‌ ಅಮೆರಿಕಾದಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌. ಅವನಿಗೆ ಮದುವೆ ಆಗಿ ಒಬ್ಬ ಮಗ ಇದ್ದಾನೆ. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಆದರೆ ಯಜಮಾನರ ಅಕಾಲಿಕ ಸಾವು ಲಲಿತಮ್ಮನವರ ಎದೆ ನಡುಗಿಸಿತ್ತು. ಯಜಮಾನರು ಸರ್ಕಾರಿ ಕಛೇರಿಯಲ್ಲಿ ದೊಡ್ಡ ಅಧಿಕಾರಿಗಳಾಗಿದ್ದರು. ಮನೆ ಪ್ರತಿನಿತ್ಯ ಜನರಿಂದ, ಆಳುಕಾಳುಗಳಿಂದ ತುಂಬಿರುತ್ತಿತ್ತು. ಯಜಮಾನರ ಕಾರು ಮನೆ ಹತ್ತಿರ ಬರುತ್ತಿದ್ದಂತೆ ಜನಸಮೂಹ ಮನೆಯತ್ತ ಕಿಕ್ಕಿರಿಯುತ್ತಿತ್ತು. ಈಗ ಅದು ಏನೂ ಇಲ್ಲ. ಅವರು ಗತ್ತಿನಿಂದ ಓಡಾಡುತ್ತಿದ್ದ ಕಾರು ಈಗ ಧೂಳು ತಿಂದು ಶೆಡ್‌ ಸೇರಿಕೊಂಡಿದೆ. ಮನೆ ಮುಂದೆ ಇದ್ದ ವಿಶಾಲವಾದ ಈಜುಕೊಳ ಹಾಳಾಗಿಹೋಗಿದೆ. ಈಗ ಈ ವಿಶಾಲವಾದ ಮನೆಯಲ್ಲಿ ಒಂಟಿತನ ಅವರನ್ನು ಕಾಡುತ್ತಿತ್ತು. ಜೊತೆಗೆ ಅಧಿಕ ರಕ್ತದೊತ್ತಡ, ಮಧುಮೇಹ ಬಲವಂತದಿಂದ ಅವರ ದೇಹ ಹೊಕ್ಕು ಮನೆ ಮಾಡಿಕೊಂಡಿದ್ದ.

ಮಧುಮೇಹ ರೋಗ ಹಿಡಿತದಲ್ಲಿ ಇರಬೇಕಾದರೆ ವೈದ್ಯರ ಸಲಹೆಯಂತೆ ಪ್ರತಿನಿತ್ಯ ವಾಕಿಂಗ್‌ ಅಂತ ಹೋಗಬೇಕು. ಲಲಿತಮ್ಮ ಹತ್ತಿರದಲ್ಲಿದ್ದ ಉದ್ಯಾನವನಕ್ಕೆ ಮುಂಜಾವಿನ ವಿಹಾರಕ್ಕೆಂದು ಪ್ರತಿನಿತ್ಯ ಹೋಗುತ್ತಿದ್ದರು.

ಲಲಿತಮ್ಮನವರನ್ನು ಆಗಾಧ ಒಂಟಿತನ ಕಾಡುತ್ತಿತ್ತು. ಮಗ ಸುಮಿತ್‌ ಒಬ್ಬನೇ ಅವರ ಬದುಕಿನ ಆಧಾರ. ಅವನಿಗೆ ಫೋನ್‌ ಮಾಡಿದರೆ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಅಕಸ್ಮಾತ್‌ ಉತ್ತರಿಸಿದರೆ, ಚೆನ್ನಾಗಿ ಮಾತಾಡುತ್ತಿರಲಿಲ್ಲ.

ದಿನ ನಿತ್ಯದಂತೆ ಲಲಿತಮ್ಮ ಸಿದ್ಧರಾಗಿ ವಾಯು ವಿಹಾರಕ್ಕೆಂದು ಹೊರಟರು. ಒಂದು ಸುತ್ತು ಸುತ್ತಿ ಅರ್ಧ ಗಂಟೆ ಕೂತು ಬರುವುದು ಅವರ ನಿತ್ಯದ ರೂಢಿ. ಒಂದನೇ ಸುತ್ತು ಆರಂಭವಾಗುತ್ತಿದ್ದಂತೆ, “ನಮಸ್ಕಾರ್ರೀ ಆಂಟಿ… ಹ್ಯಾಂಗ ಇದ್ದೀರಿ….?!” ನಿನ್ನೆ ಸಹಾಯ ಮಾಡಿದ ಯುವಕ ಎದುರು ಬಂದು ನಸುನಗುತ್ತಾ ನಿಂತಿದ್ದ. ಲಲಿತಮ್ಮನವರಿಗೆ ಮೊದಲು ಆತ ಯಾರು ಎಂದು ಗುರುತು ಸಿಗಲಿಲ್ಲ.

“ಆಂಟಿ ನಾನು…. ನಿನ್ನೆ ನೀವು ಆಯತಪ್ಪಿ ಬೀಳುತ್ತಿದ್ದಾಗ ಎತ್ತಿ ಹಿಡಿದೆನಲ್ಲಾ…..!” ಎಂದು ನೆನಪಿಸಿದ ಆ ಯುವಕ, ಲಲಿತಮ್ಮನವರ ಕಾಲಿಗೆ ಎರಗಿದ.

“ಓ ಆಪತ್ಬಾಂಧವ…..!!” ಲಲಿತಮ್ಮನರಿಗೆ ಅವನ ಗುರುತು ಸಿಗುತ್ತಿದ್ದಂತೆ, ಬಾಗಿದ ಅವನ ತಲೆ ಮೇಸೆ ಪ್ರೀತಿಯಿಂದ ಕೈ ಆಡಿಸಿದರು.

“ಎಷ್ಟೊಂದು ಬೆವರಿದ್ದೀಯೋ ಮಾರಾಯ…..” ಎಂದು ಕಕ್ಕುಲತೆಯಿಂದ ಕೇಳಿದರು.

“ಆಂಟಿ ನಿತ್ಯ ಹತ್ತು ರೌಂಡ್ಸ್ ಓಡಬೇಕು. ಇದು ನನ್ನ ಆರನೇ ಸುತ್ತು. ಅದಕ್ಕೆ ಈ ಬೆವರು. ಇನ್ನೂ ನಾಲ್ಕು ರೌಂಡ್ಸ್ ಓಡಬೇಕಿದೆ……!” ಎನ್ನುತ್ತ ಅಲ್ಲಿಂದ ಓಡಿದ.

ಇತ್ತ ಲಲಿತಮ್ಮ ಸಹ ತಮ್ಮ ಎರಡನೇ ಸುತ್ತಿನ ವಾಕ್‌ ಮುಗಿಸಿ ಮತ್ತೆ ಕಲ್ಲು ಬೆಂಚಿನ ಮೇಲೆ ಕುಳಿತರು.

ಲಲಿತಮ್ಮನವರಿಗೆ ಅಮೆರಿಕಾದಲ್ಲಿರುವ ತಮ್ಮ ಮಗ ಸುಮಿತ್‌ ನದೇ ಚಿಂತೆ. ಹತ್ತು ಬಾರಿ ಫೋನ್‌ ಮಾಡಿದಾಗ ಒಂದು ಬಾರಿ ಫೋನ್‌ ಎತ್ತುತ್ತಿದ್ದ. ಎತ್ತಿದರೂ, “ಅಮ್ಮಾ ಸ್ವಲ್ಪ ಬಿಜಿಯಾಗಿದ್ದೇನೆ. ಸಂಜೆ ಫ್ರೀ ಆಗಿ ಫೋನ್‌ ಮಾಡ್ತೀನಿ. ಆಯ್ತಾ…..” ಎಂದು ಫೋನ್‌ ಕಟ್‌ ಮಾಡುತ್ತಿದ್ದ.

ಹಾಗೆ ಎಷ್ಟು ಸಂಜೆಗಳು ಕಳೆದರೂ, ಅವನ ಫೋನ್‌ ಬರುತ್ತಿರಲಿಲ್ಲ. `ಮಗ ಅಮ್ಮನ ಜೊತೆ ಒಂದು ಕ್ಷಣ ಮಾತನಾಡದಷ್ಟು ಬಿಜಿ ಆಗಿರುತ್ತಾನೆಯಾ…..? ನನ್ನ ಬಗ್ಗೆ ಯಾಕಿಷ್ಟು ಉದಾಸೀನ….?’ ಒಂದೊಂದು ಬಾರಿ ಲಲಿತಮ್ಮನವರು ಕಳವಳಗೊಳ್ಳುತ್ತಿದ್ದರು. ಲಲಿತಮ್ಮ ಅಲ್ಲಿಂದ ಹೊರಡಲು ಅನುವಾಗುತ್ತಿದ್ದಂತೆ ಆ ಯುವಕ ಲಲಿತಮ್ಮನವರ ಬಳಿ ಬರುತ್ತಾ, “ಆಂಟಿ ಇವತ್ತು ಯಾಕೋ ಭಾಳ ಸುಸ್ತಾತು… ಉಸ್‌ ಉಸ್‌….” ಎಂದು ಜೋರಾಗಿ ಉಸಿರು ಬಿಡುತ್ತಾ ಅವನು ಲಲಿತಮ್ಮನವರ ಪಕ್ಕದಲ್ಲಿ ಬಂದು ಕುಳಿತ.

ಲಲಿತಮ್ಮನವರ ಮುಖದಲ್ಲಿ ಅದೇ ಮಾತೃ ಹೃದಯವನ್ನು ಉಚ್ಚಟಿಸುವ ಮತ್ತದೇ ಮುಗುಳ್ನಗು.

“ಆಂಟಿ…. ನಿಮ್ಮನ್ನು ಅಮ್ಮಾ ಎಂದು ಕರೆಯಲಾ….?” ಎಂದು ಕೇಳಿದ.

“ಅಯ್ಯೋ ಧಾರಾಳವಾಗಿ….. ನನ್ನನ್ನು ಅಮ್ಮಾ ಎಂದೇ ಕರೆ…. ನನಗೂ ನಿನ್ನ ವಯಸ್ಸಿನ ಒಬ್ಬ ಮಗನಿದ್ದಾನೆ ಕಣಯ್ಯಾ….!!” ಎಂದರು ಲಲಿತಮ್ಮ.

“ಅಮ್ಮಾ…. ನೀರು….” ಎಂದು ಕೇಳಿದ ಆ ಯುವಕ.

“ಅಯ್ಯೋ ನೀರು ತಂದಿದ್ದೆ. ಆದರೆ…. ಅರ್ಧ ಕುಡಿದು ಬಿಟ್ಟೆ…..”

“ನನಗೆ ಅಷ್ಟೇ ಕೊಡಿ ಸಾಕು….” ಎಂದು ಲಲಿತಮ್ಮನವರ ಕೈಯಲ್ಲಿದ್ದ ನೀರಿನ ಬಾಟಲ್ ಕಸಿದು ಗಟಗಟನೆ ಕುಡಿದು ಬಿಟ್ಟ.

“ಹೌದು ನಿನ್ನ ಹೆಸರೇನು….? ಮಗನೇ, ಏನು ಮಾಡ್ತೀಯಾ…?”

ಆ ಯುವಕ ತನ್ನ ಜೇಬಿನಲ್ಲಿ ಇಟ್ಟಿದ್ದ ಒಂದು ಹರಕಲು ಬಟ್ಟೆ ತೆಗೆದು ಮುಖದ ಬೆವರನ್ನು ಚೆನ್ನಾಗಿ ಒರೆಸಿಕೊಳ್ಳುತ್ತಾ, “ಅಮ್ಮಾ, ನನ್ನ ಹೆಸರು ಶರಣ್‌. ಇಲ್ಲೇ ಒಂದು ಖಾಸಗಿ ಶಾಲೆಯಲ್ಲಿ ಪಾರ್ಟ್‌ ಟೈಮ್ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಸಂಜೆ ಹೊತ್ತು ಮಕ್ಕಳಿಗೆ ಮನೆ ಪಾಠ ಹೇಳಿ ಕೊಡ್ತೀನಿ. ನನ್ನ ಊರು ಹುಬ್ಬಳ್ಳಿ,” ಎಂದು ಹೇಳಿದ.

ಅವನ ಹರಿದ ಬೂಟ್ಸ್, ಮಾಸಿದ ಶರ್ಟ್‌ ಆತನ ಬಡತನವನ್ನು ಎತ್ತಿ ತೋರಿಸುತ್ತಿದ್ದವು. ಮುಖದ ಬೆವರು ಒರೆಸಿಕೊಳ್ಳಲು ಒಂದು ಸರಿಯಾದ ಟವೆಲ್ ‌ಕೂಡ ಇಲ್ಲ. ಆದರೂ ಅವನ ಮುಖದಲ್ಲಿ ಸದಾ ಆಡುತ್ತಿರುವ ಆತ್ಮೀಯತೆಯ ಮುಗುಳ್ನಗು. ಅವನು ತೋರುವ ಆಪ್ತಭಾವ ಲಲಿತಮ್ಮನವರನ್ನು ಅವನತ್ತ ಆಕರ್ಷಿಸುತ್ತಿದ್ದವು.

“ಅಲ್ಲಯ್ಯಾ… ಮುಖ ಒರೆಸಲು ಒಂದು ನ್ಯಾಪ್ಕಿನ್‌ ಇಲ್ಲ. ಒಂದು ಟವೆಲ್ ‌ತೆಗೆದುಕೊಂಡು ಬರಬಾರದಾ… ಯಾಕೆ ಈ ಹರಕು ಬಟ್ಟೆ….?” ಎಂದು ಕೇಳಿದರು.

ಶರಣ್‌, ಲಲಿತಮ್ಮನವರ ಪಾದದ ಬಳಿ ಕುಳಿತುಕೊಂಡು, “ಅಮ್ಮಾ….. ಒಂದು ಟವೆಲ್ ‌ಗೆ ನೂರೈವತ್ತು ರೂಪಾಯಿ….. ಅದರಲ್ಲಿ ಒಂದು ಜೋಡಿ ಚಪ್ಪಲಿ ಬರುತ್ತೆ…..” ಶರಣ್‌ ಕಣ್ಣರಳಿಸಿ ನುಡಿದ.

“ಹಾಗಂತ ಚಪ್ಪಲಿಯಿಂದ ಮುಖ ಒರೆಸೋಕೆ ಆಗುತ್ತೇನೋ…..?” ಲಲಿತಮ್ಮ ನಗುತ್ತಾ ನುಡಿದರು.

ಹೀಗೆ ಸಣ್ಣಪುಟ್ಟ ಹಾಸ್ಯಕ್ಕೆ ಇಬ್ಬರೂ ಮನಸಾರೆ ನಕ್ಕರು.

ಹೀಗೆ ಶರಣನ ಜೊತೆ ಹರಟುತ್ತಾ, ದಾವರಿಸುತ್ತಾ ಹಾಸ್ಯ ಚಟಾಕಿ ಹಾರಿಸುತ್ತಾ ಕಳೆಯುವ ಕ್ಷಣಗಳು ಲಲಿತಮ್ಮನವರ ಹೃದಯದಲ್ಲಿ ಒಂದು ನೆಮ್ಮದಿಯನ್ನು ಹುಟ್ಟುಹಾಕಿದ್ದವು.

“ಅಮ್ಮಾ…. ಈ ತಿಂಗಳ ಸಂಬಳಕ್ಕೆ ಟವೆಲ್‌, ಒಂದು ಜೊತೆ ಜಾಗಿಂಗ್‌ ಬೂಟಚ್ಸ್ ತಗೋಬೇಕೆಂದಿದ್ದೆ. ಆದರೆ…. ಊರಲ್ಲಿ ನನ್ನ ತಂಗಿಯ ಸ್ಕೂಲ್ ‌ಫೀಸ್‌ ಕಟ್ಟಬೇಕಿತ್ತು…..ಮುಂದಿನ ತಿಂಗಳ ಸಂಬಳಕ್ಕೆ ಖಂಡಿತ ತಗೋತೀನಿ…..” ಎನ್ನುತ್ತಾ ಅಲ್ಲಿಂದ ಓಡಿಹೋದ ಯುವಕ.

YavaJanma 2

ಮರುದಿನ ಮತ್ತೆ ಲಲಿತಮ್ಮ ಉದ್ಯಾನವನಕ್ಕೆ ಬಂದರು. ಶರಣ್‌ ಕೂಡ ಓಡುತ್ತಾ ಬಂದು ಅವರ ಪಕ್ಕ ಕುಳಿತ.

“ಹಲೋ ಅಮ್ಮಾ…. ನಾನು ಈಗಾಗಲೇ ಆರು ರೌಂಡ್ಸ್ ಕಂಪ್ಲೀಟ್‌ ಮಾಡಿದೆ. ಇನ್ನೂ ನಾಲ್ಕು ರೌಂಡ್‌ ಹೊಡೆಯಬೇಕು  ಅಷ್ಟೆ…..” ಎನ್ನುತ್ತಾ ಮೇಲಕ್ಕೇಳುವವನಿದ್ದ. ಲಲಿತಮ್ಮ ಮನೆಯಿಂದ ತಂದ ನೀರಿನ ಬಾಟಲ್ ನ್ನು ಅವನ ಮುಂದೆ ಹಿಡಿದರು.

“ಥ್ಯಾಂಕ್ಸ್ ಮಾ…. ಅಮ್ಮಾ ಎಂದರೆ ಹೀಗಿರಬೇಕು,” ಎನ್ನುತ್ತಾ ಬಾಟಲ್ ತೆರೆದ.

“ಲೋ ಮಗನೇ, ಅದು ನೀರು ಅಲ್ಲ ಕಣೋ ನಿಂಬೆ ಪಾನಕ,….”

“ನಿಂಬೂ ಜೂಸ್‌….” ಶರಣ್‌ ಹಿಂಜರಿದ.

“ಅಮ್ಮಾ ಬೇಡ…. ನೀವು ಕುಡೀರಿ ಪ್ಲೀಸ್‌…..”

“ಬೇಡ ಅನ್ನಬೇಡ ಶರಣ್‌…. ನಿನಗಾಗಿ ಬೆಳಗ್ಗೆ ಬೇಗ ಎದ್ದು ರೆಡಿ ಮಾಡಿದ್ದೀನಿ ಕಣಯ್ಯಾ…..” ಎಂದು ಗದರುವ ಧ್ವನಿಯಲ್ಲಿ ಹೇಳಿದರು ಲಲಿತಮ್ಮ.

ಶರಣ್‌ ಮರುಮಾತನಾಡದೇ ಜೂಸ್‌ ಕುಡಿದು, “ಅಮ್ಮಾ….. ಇನ್ನೂ ನಾಲ್ಕು ರೌಂಡ್ಸ್ ಹೊಡೆಯಬೇಕು. ನಾನು ರೌಂಡ್ಸ್ ಹಾಕ್ತೀನಿ. ನೀವು ಕೌಂಟ್‌ ಮಾಡಿ,” ಎಂದು ಅಲ್ಲಿಂದ ಓಡಿದ.

ಹೀಗೆ ಅವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆಯುತ್ತಾ ಹೋಯಿತು. ಪ್ರತಿನಿತ್ಯ ಲಲಿತಮ್ಮ ಶರಣನಿಗಾಗಿಯೇ ಮುಂಜಾವೆಯೇ ವಿಹಾರಕ್ಕಾಗಿ ಹೋಗುವಂತಾಯಿತು. ಶರಣ್‌ ಕೂಡ ಲಲಿತಮ್ಮನಿಗಾಗಿ ಕಾಯುತ್ತಿದ್ದ. ಮೊದಲು ಇಬ್ಬರೂ ಕುಳಿತು ಮಾತನಾಡುತ್ತಿದ್ದರು. ಶರಣ್‌ ರೌಂಡ್ಸ್ ಹೊಡೆಯುತ್ತಿದ್ದರೆ, ಲಲಿತಮ್ಮ ಕೌಂಟ್‌ ಮಾಡುತ್ತಿದ್ದರು. ಹೀಗೆ ದಿನ ಸಾಗುತ್ತಿತ್ತು.

ಅಂದು ಸಮಯ ಮೀರಿ ಹೋದರೂ ಶರಣ್‌ ನ ಸುಳಿವಿರಲಿಲ್ಲ.

`ಯಾಕೆ ಈ ಹುಡುಗ ಬರಲಿಲ್ಲ……?’ ಎನ್ನುತ್ತಾ ಲಲಿತಮ್ಮ ಅವನಿಗಾಗಿ ಕಾದು ಕುಳಿತರು. ಬಿಸಿಲು ಏರಲಾರಂಭಿಸಿದ್ದರಿಂದ ವಿಧಿಯಿಲ್ಲದೆ ಮನೆಯತ್ತ ಹೆಜ್ಜೆ ಹಾಕಿದರು.

ಮರುದಿನ ಬೇಗ ಎದ್ದು ಒಂದು ಬಾಟಲ್ ಜೂಸ್‌ ಮಾಡಿಕೊಂಡು ಮತ್ತೆ ಉದ್ಯಾನವನಕ್ಕೆ ಹೊರಟರು. ಇವತ್ತಾದರೂ ಶರಣ್ ಬಂದಿದ್ದಾನಾ ಎಂದು ಉದ್ಯಾನವನದ ತುದಿಯವರೆಗೂ ಸೂಕ್ಷ್ಮ ನೋಟ ಹರಿಸಿದರು. `ಉಹ್ಞೂಂ… ಇವತ್ತೂ ಅವನ ಸುಳಿವಿಲ್ಲ,’ ಎಂದು ಹತಾಶರಾದ ಲಲಿತಮ್ಮ ಬಾಟಲ್ ತುಂಬ ತಂದಿದ್ದ ಜೂಸ್‌ ನ್ನು ತಾವೇ ಕುಡಿಯಲೂ ಮನಸ್ಸಾಗಲಿಲ್ಲ.

`ಯಾಕೆ ಅವನ ಮೇಲೆ ನನಗೆ ಇಷ್ಟೊಂದು ಸೆಳೆತ….. ಅವನು ಯಾರೋ ಯಕಶ್ಚಿತ್‌ ಬಡ ಹುಡುಗ. ಅವನ ಮೇಲೆ ನನಗೆ ಯಾಕಿಷ್ಟು ಮಮತೆ? ನನ್ನ ಮಗ ಸುಮಿತ್‌ ಹೇಳುವುದು ನಿಜ… ಅಮ್ಮಾ ನೀನು ಬೇಗನೆ ಮರುಳಾಗಿಬಿಡ್ತೀ. ನಿನ್ನನ್ನು ಮೋಸ ಮಾಡುವುದು ತುಂಬಾ ಸುಲಭ. ಯಾರಾದರೂ ನಾಲ್ಕು ಒಳ್ಳೆ ಮಾತು ಆಡಿದರೆ ಸಾಕು ಕರಗಿ ಹೋಗಿ ಬಿಡ್ತೀಯಾ…`ಹೌದು ಅವನು ಹೇಳುವುದೂ ನಿಜ…. ಹೌದು ನಾನು ಹಾಗೇ ಇದ್ದೇನೆ. ಆದರೆ ಶರಣ್‌ ನನ್ನು ಕಂಡರೆ ನನ್ನ ಮಾತೃ ಹೃದಯ ತುಡಿಯುತ್ತದೆ ಯಾಕೆ….? ಅಂದರೆ ನನ್ನಲ್ಲಿ ಸುಪ್ತವಾಗಿ ಅಡಗಿ ಕುಳಿತ ಮಾತೃ ಮಮತೆ ಅವನನ್ನು ಕಂಡರೆ ಉತ್ತೇಜನಗೊಳ್ಳುತ್ತದೆ. ಬೇಡ….. ಇನ್ನು ಏನೇ ಆಗಲಿ ಅವನನ್ನು ನೆನಪಿಸಿಕೊಳ್ಳುವುದು ಬೇಡ,’ ಎಂದು ನಿರ್ಧರಿಸಿ, ಮುದುಡಿದ ಮನಸ್ಸಿನಿಂದ ಮನೆಯತ್ತ ಹೆಜ್ಜೆ ಹಾಕಿದರು.

ಆದರೆ ಅವನಿಗಾಗಿಯೇ ಖರೀದಿಸಿದ್ದ ಹೊಸ ಟವೆಲ್‌, ಆತ ಕುಡಿಯುತ್ತಿದ್ದ ಜೂಸ್‌ ಬಾಟಲ್ ನ್ನು ನೋಡಿದಾಗೆಲ್ಲ ಅವನ ನೆನಪಾಗುತ್ತಿತ್ತು.

ಹೀಗೆ ಹದಿನೈದು ದಿನಗಳು ಕಳೆದವು. ಪ್ರತಿನಿತ್ಯ ಮುಂಜಾನೆ ಅವನು ಇಂದು ಬಂದೇ ಬರುತ್ತಾನೆ ಎಂಬ ಆಸೆಯಿಂದ ಲಲಿತಮ್ಮ ಉದ್ಯಾನವನಕ್ಕೆ ಹೋಗುತ್ತಿದ್ದರು. ಆದರೆ ಅವನನ್ನು ಕಾಣದೆ ನಿರಾಸೆಯಿಂದ ಮನೆಗೆ ಹಿಂದಿರುಗುತ್ತಿದ್ದರು.

ಪಾರ್ಕ್‌ ನಲ್ಲಿ ಯಾವುದೋ ಮಗು ಯಾರನ್ನೋ `ಅಮ್ಮಾ….’ ಎಂದು ಕೂಗಿದರೂ ಸಾಕು ಲಲಿತಮ್ಮ ಸೆಟೆದು ಸುತ್ತ ಕತ್ತು ತಿರುಗಿಸಿ ನೋಡುತ್ತಿದ್ದರು. ದಿನಗಳು ಹೀಗೆ ಉರುಳಿದವು. ಲಲಿತಮ್ಮ ಅವನನ್ನು ಹುಡುಕುವುದನ್ನೇ ಬಿಟ್ಟರು. ಆದರೂ ಅವರ ಕಣ್ಣುಗಳು ಮಾತ್ರ ಅವನನ್ನೇ ಅರಸುತ್ತಿದ್ದ.

ಅಂದು ಉದ್ಯಾನವನದ ಮೂಲೆಯ ಕಲ್ಲು ಬೆಂಚಿನ ಮೇಲೆ ಶರಣ್‌ ತಲೆ ತಗ್ಗಿಸಿ ಕುಳಿತಿದ್ದ. ಲಲಿತಮ್ಮನಿಗೆ ಆಶ್ಚರ್ಯವಾಯಿತು. `ಅವನು ಶರಣ್‌ ಅಲ್ಲವೇ….?’ ಎಂದುಕೊಳ್ಳುತ್ತಾ ಅವನತ್ತ ಹೆಜ್ಜೆ ಹಾಕಿದರು. `ಹೌದು…. ಅವನು ಶರಣನೇ….’

“ಯಾಕೋ ಶರಣ್‌ ಇಷ್ಟು ದಿನ ಎಲ್ಲಿಗೆ ಹೋಗಿದ್ದೆ….?!” ಲಲಿತಮ್ಮನ ಮುಖ ಪ್ರಫುಲ್ಲವಾಯಿತು.

ಶರಣ್‌ ಕತ್ತೆತ್ತಿ ಲಲಿತಮ್ಮನವರತ್ತ ನೋಡಿದ. ಮುಖ ಬಾಡಿ ಸೋತು ಹೋಗಿತ್ತು. “ಯಾಕೋ…. ಹುಷಾರಿಲ್ಲವೇನೋ….?” ಮಮತೆಯಿಂದ ಲಲಿತಮ್ಮ ಅವನ ಹಣೆಮುಟ್ಟಿ ನೋಡಿದರು.

“ಇಲ್ಲಮ್ಮಾ…. ಹಾಗೇನಿಲ್ಲ….” ಶರಣನ ಧ್ವನಿ ಕ್ಷೀಣವಾಗಿತ್ತು.

ಲಲಿತಮ್ಮ ಅವನನ್ನು ಮಾತನಾಡಿಸುವ ಪ್ರಯತ್ನಿಸುತ್ತಾ, “ಏ ಶರಣ್‌ ನೋಡಿಲ್ಲಿ….. ನಿನಗಾಗಿ ಒಂದು ಟವೆಲ್ ತಂದಿದ್ದೇನೆ. ಆ ಹಳೆಯದನ್ನು ಎಸೆದು ಬಿಡು……” ಎಂದರು.

“ಬೇಡ ಅಮ್ಮಾ…. ನಾನು ಮುಂದಿನ ತಿಂಗಳ ಸಂಬಳದಲ್ಲಿ ತೊಗೋತೀನಿ,” ಎನ್ನುತ್ತಾ ಲಲಿತಮ್ಮ ಕೊಟ್ಟ ಟವೆಲ್ ‌ನ್ನು ವಾಪಸ್ ಕೊಟ್ಟ.

“ಯಾಕೆ ಶರಣ್‌ ನಾನು ಕೊಟ್ಟರೆ ತೊಗೋಬಾರ್ದಾ…. ಅದೇ ನಿನ್ನ ಅಮ್ಮ ಕೊಟ್ಟಿದ್ದರೆ ತೊಗೋತಿದ್ದೆ ಅಲ್ವಾ…..?!” ಲಲಿತಮ್ಮ ನಿರಾಸೆಯಿಂದ ನುಡಿದಾಗ ಒಮ್ಮೆಲೆ ಶರಣ್‌ ನ ಕಣ್ಣಲ್ಲಿ ನೀರು ಜಿನುಗಿತು. ಲಲಿತಮ್ಮನವರನ್ನೇ ದಿಟ್ಟಿಸಿ ನೋಡಿದ.

“ಯಾಕಪ್ಪ ಶರಣ್‌ ಕಣ್ಣಲ್ಲಿ ನೀರು…..?!” ಎನ್ನುತ್ತಾ ಲಲಿತಮ್ಮ ತಮ್ಮ ಸೆರಗಿನಿಂದ ಅವನ ಕಣ್ಣೀರು ಒರೆಸಿದರು.

“ಅಮ್ಮಾ….. ಹೋದ ವಾರ ನನ್ನಮ್ಮ ತೀರಿಕೊಂಡರು. ಅದಕ್ಕಾಗಿ ನಮ್ಮೂರಿಗೆ ಹೋಗಿದ್ದೆ…….”

“ಏನು ಅಮ್ಮ ತೀರಿಹೋದ್ರಾ…..?! ಅಯ್ಯೋ ಸಾರಿ ಕಣಪ್ಪ. ಶರಣ್‌, ಜಗತ್ತಿನಲ್ಲಿ ಅಮ್ಮ ಒಂದು ಅಮೂಲ್ಯವಾದ ವಸ್ತು. ಕಳೆದುಕೊಂಡರೆ ತುಂಬಾ ಸಂಕಟವಾಗುತ್ತದೆ. ಹೌದು…. ಅಪ್ಪಾ ಏನು ಮಾಡ್ತಾರೆ….?” ಎಂದು ಕೇಳಿದರು ಲಲಿತಮ್ಮ.

“ಅವರು ನಮ್ಮನ್ನು ಆಗಲಿ ಎಂಟು ವರ್ಷಗಳಾದವು. ಇವರು ಒಬ್ಬ ತಂಗಿಯನ್ನು ನನ್ನ ಚಿಕ್ಕಪ್ಪನ ಮನೆಯಲ್ಲಿ ಬಿಟ್ಟುಬಂದಿದ್ದೇನೆ,” ಶರಣನ ಕಣ್ಣುಗಳು ತುಂಬಿಬಂದವು.

“ಸಮಾಧಾನ ಮಾಡ್ಕೋಪಾ ಶರಣ್‌…..”

ಅಂದು ಯಾವುದೇ ರೌಂಡ್ಸ್ ಹೊಡೆಯದೆ ಲಲಿತಮ್ಮ ಕೊಟ್ಟ ಟವೆಲ್ ನಿಂದ ತನ್ನ ಮುಖವನ್ನು ಹಿತವಾಗಿ ತೀಡುತ್ತಾ ನಿಡಿದಾಗಿ ಉಸಿರೆಳೆದುಕೊಂಡು ಮನೆ ಕಡೆಗೆ ಹೊರಟ. ಅಮ್ಮನ ಅಕಾಲಿಕ ಸಾವು ಅವನ ನಗುವನ್ನು ಕಸಿದುಕೊಂಡಿತ್ತು.

`ಒಂದು ವಸ್ತುವನ್ನು ಕಳೆದುಕೊಂಡಾಗಲೇ ಅವುಗಳ ಬೆಲೆ ನಮಗೆ ಅರಿವಾಗುತ್ತದೆ. ಸಂಬಂಧ ಹಾಗೆಯೇ…. ನನ್ನನ್ನು ಕಳೆದುಕೊಂಡಾಗಲೇ ನನ್ನ ಮಗನಿಗೆ ನನ್ನ ಬೆಲೆ ಗೊತ್ತಾಗುತ್ತದೋ ಏನೋ….’ ಎಂದುಕೊಂಡರು.

“ಅಮ್ಮಾ ಆ ಮುರುಕಲು ಮನೆಯಲ್ಲಿ ಏನಿದೆ…..?! ನೀನೂ ಅಮೆರಿಕಾಕ್ಕೆ ಬಂದು ಬಿಡು. ಇಲ್ಲಿ ನಾನಿದ್ದೇನೆ…. ನಿನ್ನ ಸೊಸೆ, ಮೊಮ್ಮಗ ಇಲ್ಲಿದ್ದಾರೆ….. ಅಲ್ಲಿ ನೀನೊಬ್ಬಳೆ ಏನು ಮಾಡ್ತೀಯಾ….?” ಎಂದು ಒಮ್ಮೆ ಮಗ ಸುಮಿತ್‌ ಅಮ್ಮನನ್ನು ಕರೆದಿದ್ದ.

“ಸುಮಿತ್‌, ಇದು ಮುರುಕಲು ಮನೆಯಲ್ಲ. ಇದು ನನ್ನ ಕನಸುಗಳ ಕುಟೀರ…..!! ಇಲ್ಲಿ ನಿನ್ನ ಅಪ್ಪನ ನಗು ಇದೆ. ಅವರ ಸಿಡುಕಿನ ಮಾತುಗಳಿವೆ, ಅವರ ಗತ್ತಿನ ಓಡಾಟವಿದೆ…… ನನ್ನ ಒಬ್ಬನೇ ಮಗನ ಮುದ್ದು ನಗುವಿದೆ, ಅಳುವಿದೆ…. ಪುಟ್ಟ ಪುಟ್ಟ ಹೆಜ್ಜೆಗಳ ಗುರುತಿವೆ. ಅವುಗಳನ್ನು ಬಿಟ್ಟು ನಾನು ಹೆಂಗ ಬರಲಿ ಹೇಳು…. ” ಎಂದು ಹೇಳಿದ್ದರು.

ಮಗನ ನೆನಪಾಗಿ ಮತ್ತೆ ಫೋನ್‌ ಮಾಡಿದರು. ಎಷ್ಟೋ ಬಾರಿ ಫೋನ್‌ ಮಾಡಿದ ನಂತರ ಸುಮಿತ್‌ ಫೋನ್‌ ಎತ್ತಿ, “ಅಮ್ಮಾ…. ನಾನು ಒಂದು ಇಂಪಾರ್ಟೆಂಟ್‌ ಮೀಟಿಂಗ್‌ ನಲ್ಲಿದ್ದೇನೆ. ಪುನಃ ಪುನಃ ಫೋನ್‌ ಮಾಡಿ ಡಿಸ್ಟರ್ಬ್‌ ಮಾಡಬೇಡ. ಏನಾದರೂ ಅರ್ಜೆಂಟ್‌ ಇತ್ತೇನಮ್ಮಾ…..?”

“ಇಲ್ಲ ಕಣೋ…. ಹಾಗೇನಿಲ್ಲ….! ಸುಮ್ಮನೆ ಮಾಡಿದೆ.”

“ಅಮ್ಮಾ…. ನನ್ನ ಪರಿಸ್ಥಿತಿ ಸ್ವಲ್ಪ ಅರ್ಥ ಮಾಡಿಕೋ…. ನಾನು ನಿನ್ನ ಹಾಗೆ ಫ್ರೀ ಇಲ್ಲ ಪ್ಲೀಸ್‌…..” ಎಂದು ಕಟ್‌ ಮಾಡಿದ.

`ನನ್ನ ಮಗ ನನ್ನಿಂದ ದೂರವಾಗುತ್ತಿದ್ದಾನೆ,’ ಎನ್ನುವ ಕಳವಳ ಲಲಿತಮ್ಮನವರ ಎದೆಯನ್ನು ತುಂಬಿಕೊಂಡಿತು. ಮೊಬೈಲ್

‌ಟೇಬಲ್ ಮೇಲಿಟ್ಟು ಅಡುಗೆ ಮನೆಯತ್ತ ಹೊರಟರು. ಯಾಕೋ ಏನೋ ಬಲಗಾಲಿನಲ್ಲಿ ಉಳುಕು ಮೂಡಿದಂತಾಗಿ ನೋವಿನಿಂದ, “ಅಯ್ಯೋ ಅಮ್ಮಾ….” ಎಂದು ನರಳುತ್ತಾ ನೆಲಕ್ಕೆ ಕುಸಿದರು.

ಸಹಿಸಲಾರದಷ್ಟು ನೋವು ಲಲಿತಮ್ಮನವರಿಗೆ ಈಗ ಏನು ಮಾಡಬೇಕೆಂದು ತಿಳಿಯಲಿಲ್ಲ. ಹಾಗೆ ತೆವಳುತ್ತಾ ಬಂದು ಕೈ ಮುಂದೆ ಮಾಡಿ ಮೊಬೈಲ್ ‌ಎತ್ತಿ ಮಗನಿಗೆ ಫೋನ್‌ ಮಾಡಿದರು. ಮಗ ಉತ್ತರಿಸಲಿಲ್ಲ. ಲಲಿತಮ್ಮ ಹೌಹಾರಿದರು. ಯಾರಿಗೆ ಹೇಳಬೇಕು, ಸಹಾಯಕ್ಕೆ ಯಾರನ್ನು ಕೂಗಬೇಕು ಎಂದು ತಿಳಿಯಲಿಲ್ಲ.

ಆಗ ಒಮ್ಮೆಲೆ ನೆನಪಾಗಿದ್ದು ಉದ್ಯಾನವನದ ಹುಡುಗ ಶರಣ್‌. ಹೇಗೋ ಅವನ ಫೋನ್‌ ನಂಬರ್‌ ಹುಡುಕಿ, ಅವನಿಗೆ ಕಾಲ್ ಮಾಡಿದರು. ಲಲಿತಮ್ಮನವರ ಸಂಕಟದ ಧ್ವನಿ ಕೇಳುತ್ತಿದ್ದಂತೆ ಶರಣ್‌ ಇದ್ದಬದ್ದ ಕೆಲಸವನ್ನು ಬದಿಗೊತ್ತಿ ಅವರ ಮನೆಯತ್ತ ಧಾವಿಸಿ ಓಡಿಬಂದ. ಲಲಿತಮ್ಮ ಕಣ್ಣಲ್ಲಿ ನೀರು ತುಂಬಿಕೊಂಡು ಹಲ್ಲು ಕಚ್ಚಿ ಹಿಡಿದು ನರಳುತ್ತಾ ಕೂತಿದ್ದರು.

“ಅಮ್ಮಾ ಹೆದರಬೇಡಿ…..” ಎನ್ನುತ್ತಾ ಶರಣ್‌ ಸಮೀಪದ ಆಸ್ಪತ್ರೆಗೆ ಫೋನ್‌ ಮಾಡಿ, ಆ್ಯಂಬುಲೆನ್ಸ್ ಬರಲು ಹೇಳಿದ. ಅದು ಬರಲು ತಡವಾಗಲಿಲ್ಲ.

ಶರಣ್‌ ಲಲಿತಮ್ಮನವರನ್ನು ತಾನೇ ಎತ್ತಿ  ಆ್ಯಂಬುಲೆನ್ಸ್ ನಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡ ಹೋದ. ಲಲಿತಮ್ಮನವರನ್ನು ತುರ್ತು ವಿಭಾಗದಲ್ಲಿ ಅಡ್ಮಿಟ್‌ ಮಾಡಿದರು.

ಕೂಡಲೇ ಆಪರೇಶನ್‌ ಮಾಡಬೇಕೆಂದು ವೈದ್ಯರು ಸಲಹೆ ಕೊಟ್ಟರು. ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಆಪರೇಷನ್ ಥಿಯೇಟರ್‌ ನಿಂದ ಹೊರಕ್ಕೆ ಕರೆತಂದು ವಾರ್ಡ್‌ ಗೆ ಹಾಕಿದಾಗ ಅವರಿಗೆ ಇನ್ನೂ ಎಚ್ಚರವಾಗಿರಲಿಲ್ಲ.

ಸ್ವಲ್ಪ ಸಮಯದ ನಂತರ ಲಲಿತಮ್ಮನವರಿಗೆ ಎಚ್ಚರಗೊಂಡಾಗ, ಚಿಕಿತ್ಸೆ ನೀಡುತ್ತಿದ್ದ ಸಿಸ್ಟರ್‌ ಓಡಿಬಂದು, “ಅಮ್ಮಾ ಈಗ ಹೇಗಿದ್ದೀರಾ….?!” ಎಂದು ಅವರ ಕೈಯನ್ನು ಹಿತವಾಗಿ ಹಿಡಿದು ಕೇಳಿದಳು.

ಲಲಿತಮ್ಮ ತಮ್ಮ ಸೋತಗಣ್ಣುಗಳನ್ನು ತೆರೆಯುತ್ತಾ ಚೆನ್ನಾಗಿದ್ದೇನೆ ಎಂದು ಕುತ್ತಿಗೆ ಅಲ್ಲಾಡಿಸಿದರು.

“ಅಮ್ಮಾ….. ನಿಮ್ಮ ಮಗ ಸರಿಯಾದ ಸಮಯಕ್ಕೆ ನಿಮ್ಮನ್ನು ಆಸ್ಪತ್ರೆಗೆ ಕರೆತರದಿದ್ದರೆ ನಿಮಗೆ ತುಂಬಾ ಅಪಾಯವಾಗುತ್ತಿತ್ತು. ನಿನ್ನೆಯಿಂದ ಮನೆಗೂ ಹೋಗದೇ ಇಲ್ಲೇ ತೂಕಡಿಸ್ತಾ ಕುಳಿತಿದ್ದಾನೆ. ಅಂಥ ಮಗನನ್ನು ಪಡೆದ ನೀವೇ ಪುಣ್ಯವಂತರು,” ಎಂದು ಒಂದೇ ಉಸಿರಿಗೆ ಹೇಳಿದಳು.

ಲಲಿತಮ್ಮ ಸಿಸ್ಟರ್‌ ಮಾತು ಕೇಳಿ ಅವರ ಸೋತ ಮುಖದಲ್ಲಿ ಕಣ್ಣರಳಿಸಿ ನಕ್ಕರು.

“ಅವರು ಹೊರಗಡೆ ಕುಳಿತಿದ್ದಾರೆ, ಬರಲು ಹೇಳಿದ್ದೇನೆ,” ಎಂದು ಸಿಸ್ಟರ್‌ ಹೇಳಿದಾಗ, ಲಲಿತಮ್ಮನವರ ಬಾಡಿದ ಕಂಗಳು ಬಾಗಿಲಿನತ್ತ ನೆಟ್ಟ.

ಶರಣ್‌ ಬಂದು ಅಮ್ಮನ ಎದುರು ನಿಂತ. ಅವನನ್ನು ಕಾಣುತ್ತಿದ್ದಂತೆ ಲಲಿತಮ್ಮನವರ ಕಣ್ಣುಗಳು ತುಂಬಿಕೊಂಡವು. ಶರಣ್‌ ಅವರ ಪಕ್ಕ ಬಂದು ಕುಳಿತು, ಸ್ವಲ್ಪ ಹೊತ್ತು ಇಬ್ಬರೂ ಮಾತಿಲ್ಲದೇ ಕೂತರು.

“ಶರಣ್‌ ನೀನು ಯಾವ ಜನ್ಮದಲ್ಲಿ ನನ್ನ ಮಗನಾಗಿದ್ದೀಯೋ ಕಂದಾ….?!! ಎಂದು ಅವನ ತಲೆ ಮೇಲೆ ತಮ್ಮ ನಡುಗುವ ಕೈ ಆಡಿಸಿ ಕ್ಷೀಣಧ್ವನಿಯಿಂದ ನುಡಿದರು.

“ಅಮ್ಮಾ ಈಗ ಹೇಗಿದ್ದೀರಾ….?” ಎಂದು ಕಕ್ಕುಲತೆಯಿಂದ ಕೇಳಿದ ಶರಣ್‌.

“ಅಮ್ಮಾ, ಈತ ಶರಣ್‌ ಕುಮಾರ್‌ ಅಲ್ಲ…. ಅಮ್ಮನನ್ನು ಹೊತ್ತು ತಂದು ಆಸ್ಪತ್ರೆಗೆ ದಾಖಲು ಮಾಡಿದ ಕಲಿಯುಗದ ಶ್ರವಣಕುಮಾರ…..! ರಾತ್ರಿ ಎಲ್ಲಾ ನಮ್ಮ ಜೊತೆ ಎಚ್ಚರವಾಗಿದ್ದ, ಮನೆಗೂ ಹೋಗಲಿಲ್ಲ. ರಾತ್ರಿಯೆಲ್ಲಾ ನಮಗೆ ಜೋಕ್ಸ್ ಹೇಳಿ ಹೇಳಿ ಮರೆತುಹೋಗಿದ್ದ ನಮ್ಮ ನಗುವನ್ನು ಮತ್ತೆ ನೆನಪಿಸಿದ ನಿಮ್ಮ ಮಗ, ನಮಗೆ ರಾತ್ರಿ ಕಳೆದಿದ್ದೇ ಗೊತ್ತಾಗದಂತೆ ಮಾಡಿದರು…” ಎಂದು ಸಿಸ್ಟರ್‌ ಹೇಳಿದಳು.

ದಿನಗಳ ಕಳೆದಂತೆ ಲಲಿತಮ್ಮ ಹುಷಾರಾಗುತ್ತಾ ಬಂದರು. ಆದರೆ ಒಂದು ತಿಂಗಳು ಎದ್ದು ಓಡಾಡುವ ಹಾಗಿಲ್ಲ. ಕಾಲಿನ ಪ್ಲಾಸ್ಟರ್ ತೆಗೆದ ಡಾಕ್ಟರ್‌ ಲಲಿತಮ್ಮನಿಗೆ ನಿತ್ಯ ಹತ್ತು ಹೆಜ್ಜೆ ಓಡಾಡಲು ಹೇಳಿದರು. ಶರಣ್‌ ಪ್ರತಿನಿತ್ಯ ಲಲಿತಮ್ಮನವರನ್ನು  ಕೈಹಿಡಿದು ನಡೆಸುತ್ತಿದ್ದ. ಅವರು ಡಿಸ್ಚಾರ್ಜ್‌ ಆಗಿ ಮನೆಗೆ ಬಂದರು. ಶರಣ್‌ ಒಂದು ತಿಂಗಳು ಲಲಿತಮ್ಮನವರ ಜೊತೆ ಅವರ ಮನೆಯಲ್ಲಿಯೇ ಇರಲು ನಿರ್ಧರಿಸಿದ.

“ಶರಣ್‌, ಆಸ್ಪತ್ರೆಯ ಖರ್ಚಿಗಾಗಿ ನೀನು ನಿನ್ನ ಅಮ್ಮ ಸಾಯುವ ಮುನ್ನ ನಿನಗೆ ಕೊಟ್ಟ ಚಿನ್ನದ ಸರವನ್ನು ಅಡವಿಟ್ಟೆಯಂತೆ, ಯಾಕಪ್ಪಾ….?” ಎಂದು ಲಲಿತಮ್ಮ ಕೇಳಿದರು.

“ಈಗಾಗಲೇ ನಾನು ಒಬ್ಬ ಅಮ್ಮನನ್ನು ಕಳೆದುಕೊಂಡಿದ್ದೇನೆ,” ಮುಂದೆ ಮಾತನಾಡದೆ ಮೌನವಾದ.

ಲಲಿತಮ್ಮ ಅಲ್ಮೇರಾದಲ್ಲಿದ್ದ ನೋಟಿನ ಕಟ್ಟು ಹೊರಗೆ ತೆಗೆದು, “ಮೊದಲು ಆ ಚಿನ್ನದ ಸರ ಬಿಡಿಸಿಕೊಂಡು ಬಂದು ನನಗೆ ತಂದು ತೋರಿಸಬೇಕು,” ಎಂದರು.

“ಬೇಡ ಅಮ್ಮಾ…. ಅದಕ್ಯಾಕೆ ಈಗ ಅವಸರ…..?!!”

“ಶರಣ್‌, ನನ್ನ ಬಳಿ ಸಾಕಷ್ಟು ಆಸ್ತಿ, ಅಂತಸ್ತು, ದುಡ್ಡು ಎಲ್ಲವೂ ಇದೆ. ಆದರೆ ನನ್ನವರು ಎನ್ನಲೂ ಯಾರೂ ಇಲ್ಲದೆ ಕಡುಬಡವಿಯಂತೆ ಬದುಕುತ್ತಿದ್ದೇನೆ…..” ಎಂದರು.

ಲಲಿತಮ್ಮನವರ ಮಗ ಸುಮಿತ್‌ ಹೇಗೋ ಸಮಯ ಮಾಡಿಕೊಂಡು ಅಮ್ಮನನ್ನು ನೋಡಲು ಬಂದಿದ್ದ.

YavaJanma 3

“ಅಮ್ಮಾ…. ನಿನಗೆ ವಯಸ್ಸಾಗಿದೆ ಹುಷಾರಾಗಿರಬೇಕು ಅಂತ ನಿನಗೆ ಎಷ್ಟು ಬಾರಿ ಹೇಳಿದ್ದೇನೆ. ನನಗೆ ಎಷ್ಟು ಟೆನ್ಶನ್‌ ಇರುತ್ತೇ ಅಂತ ನಿನಗೇನು ಗೊತ್ತು, ಒಂದು ನಿಮಿಷ ಕೂಡ ನಾನು ಫ್ರೀ ಇರಲ್ಲ….” ಎಂದು ರೇಗಾಡಿದ.

“ಸುಮಿತ್‌ ಬೇಕು ಅಂತ ಯಾರೂ ಬೀಳುವುದಿಲ್ಲ….. ಏನೋ ಕಾಲು ಜಾರಿ ಬಿದ್ದೆ ಕಣೋ….” ಎಂದರು ನೋವಿನಿಂದ.

“ಅದಕ್ಕೆ ಅಮ್ಮಾ…. ನೀನು ಅಮೆರಿಕಾಕ್ಕೆ ಬಂದು ಬಿಡು ಅಂತ ಹೇಳೋದು, ಆಗ ಯಾವುದೇ ಟೆನ್ಶನ್‌ ಇರುವುದಿಲ್ಲ. ಈ ಹಾಳು ಮನೆಯನ್ನು ಮಾರಿ ಅಮೆರಿಕಾದಲ್ಲಿ ಒಂದು ಮನೆ ಖರೀದಿಸಲು ನಿರ್ಧರಿಸಿದ್ದೇನೆ,” ಎಂದು ಸುಮಿತ್‌ ತನ್ನ ನಿರ್ಧಾರವನ್ನು ತಿಳಿಸಿದ.

“ಲೋ…. ಇದು ನೀನು ಹುಟ್ಟಿ ಬೆಳೆದ ಮನೆ ಕಣೋ…..!!”

“ಅಮ್ಮಾ…. ಮೊದಲು ಈ ಎಲ್ಲ ಆಸ್ತಿಯನ್ನು ನನ್ನ ಹೆಸರಿಗೆ ವರ್ಗಾಯಿಸು,” ಎಂದು ವರಾತ ಮಾಡಿದ.

“ಸುಮಿತ್‌, ನಾನು ಸಾಯುವವರೆಗೂ ಈ ಮನೆಯನ್ನು ಮಾರಲು ಬಿಡುವುದಿಲ್ಲ,” ಲಲಿತಮ್ಮ ಕೂಡ ಹಠ ಹಿಡಿದರು.

“ಅಮ್ಮಾ…. ಈ ಮನೆಯ ಮೇಲೆ ನನಗೂ ಸಮಾನವಾದ ಹಕ್ಕಿದೆ….” ಎಂದ.

“ಹೌದು….. ಸುಮಿತ್‌ ನೀನು ಅಮೆರಿಕಾಕ್ಕೆ ಯಾವಾಗ ಹೋಗ್ತೀಯಾ….?”

“ನಾನು ನಾಳೇನೇ ಹೋಗಬೇಕು……”

“ಇವತ್ತೇ ಹೋಗುವುದಾದರೆ ಹೊರಟುಬಿಡು,” ಎಂದು ನಿಷ್ಠೂರವಾಗಿ ಹೇಳಿದರು ಲಲಿತಮ್ಮ.

ಅಷ್ಟರಲ್ಲಿ ಶರಣ್‌ ಅಲ್ಲಿಗೆ ಬಂದು ಬ್ಯಾಂಕ್‌ ಕಾರ್ಡ್‌ ಮತ್ತು ದುಡ್ಡನ್ನು ಅಮ್ಮನ ಕೈಗೆ ಕೊಟ್ಟು ವಿಧೇಯತೆಯಿಂದ ಲಲಿತಮ್ಮನ ಪಕ್ಕ ಕುಳಿತುಕೊಂಡ.

“ಸುಮಿತ್‌, ಇವನೇ ಶರಣ್‌. ನನ್ನನ್ನು ಅಪಾಯದಿಂದ ಪಾರು ಮಾಡಿದನು,” ಎಂದು ಶರಣ್‌ ನನ್ನು ಪರಿಚಯಿಸಿದರು.

ಸುಮಿತ್‌ ಅವನನ್ನು ತುಚ್ಛವಾಗಿ ನೋಡುತ್ತಾ, “ಶರಣ್‌ ನೀನು ಒಬ್ಬ ಬಡ ಹುಡುಗ. ಸ್ಕೂಲ್ ‌ಮೇಷ್ಟ್ರು. ನೀನು ನಿನ್ನ ಅಂತಸ್ತು ಅರಿತುಕೊಂಡು ಕುಳಿತುಕೊಳ್ಳಬೇಕು. ನನ್ನ ಅಮ್ಮ ಒಬ್ಬ ನಿವೃತ್ತ ಗೆಜೆಟೆಡ್‌ ಅಧಿಕಾರಿಯ ಮಡದಿ. ನೀನೋ ಒಬ್ಬ ಪಾರ್ಟ್‌ ಟೈಮ್ ಮಾಸ್ತರ್‌,” ಎಂದು ಕಟುವಾಗಿ ಹೇಳಿದ.

ಶರಣ್‌ ಸಿಡಿಲೆರಗಿದಂತೆ ಕುಳಿತಲ್ಲಿಂದ ಎದ್ದುಬಿಟ್ಟ. ಸುಮಿತ್‌ ನ ಒಂದೊಂದು ಮಾತೂ ಈಟಿಯಂತೆ ಅವನ ಹೃದಯಕ್ಕಿಳಿದು ನಾಟಿದವು.

“ಅಮ್ಮಾ…. ನೀನು ಬಹು ಬೇಗ ಮರುಳಾಗಿ ಬಿಡ್ತೀಯಾ…. ನಿನ್ನನ್ನು ಮರುಳು ಮಾಡುವುದು ತುಂಬಾ ಸುಲಭ. ಯಾರಾದರೂ ನಾಲ್ಕು ಒಳ್ಳೆ ಮಾತು ಆಡಿದರೆ ಸಾಕು ಕರಗಿಹೋಗಿ ಬಿಡ್ತೀಯಾ….! ಅವರಿಗೆ ಬ್ಯಾಂಕ್‌ ಎ.ಟಿ.ಎಂ ಕಾರ್ಡ್‌ ಕೂಡ ಕೊಡ್ತೀಯಾ….” ಎಂದು ಕಿಡಿಕಾರಿದ.

“ಸುಮಿತ್‌ ನನ್ನ ದುಡ್ಡು….. ನನ್ನ ಕಾಸು…. ನನಗೆ ಮನಸ್ಸು ಬಂದವರಿಗೆ ಕೊಡುತ್ತೇನೆ. ನಾನು ಕಾಲು ಮುರಿದುಕೊಂಡು ಮಲಗಿದ್ದಾಗ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದನು ಈ ಶರಣ್‌…. ನೀನಲ್ಲ. ನೀನು ಹತ್ತು ದಿನ ಆದ ಮೇಲೆ ಬಂದಿದ್ದೀಯಾ….” ಎನ್ನುವಾಗ ಲಲಿತಮ್ಮನ ಗಂಟಲುಬ್ಬಿ ಬಂದಿತ್ತು.

ಸುಮಿತ್‌ ನ ಮೊನಚು ಮಾತು ಕೇಳಿ ಶರಣನಿಗೆ ತುಂಬಾ ನೋವಾಯಿತು. ಮರುಮಾತಾಡದೇ, ಅಲ್ಲಿಂದ ಎದ್ದು ಹೊರಟು ನಿಂತ.

“ಶರಣ್‌ ಹೋಗಬೇಡ……” ಎಂದು ಲಲಿತಮ್ಮ ಜೋರಾಗಿ ಕೂಗಿದರು. ಶರಣ್‌ ಅವರ ಮಾತಿಗೆ ಕಿವಿಗೊಡದೇ ತಿರುಗಿಯೂ ನೋಡದೇ…. ಮನೆಯಿಂದ ಹೊರಟುಹೋದ.

ಸುಮಿತ್‌ ಎರಡು ದಿನ ಬಿಟ್ಟು ಅಮೆರಿಕಾಕ್ಕೆ ಹೊರಟುಹೋದ. ಶರಣ್‌ ಕೂಡ ಲಲಿತಮ್ಮನವರ ಮನೆಯತ್ತ ಬರಲಿಲ್ಲ. ಲಲಿತಮ್ಮ ತುಂಬಾ ನೋವು ಅನುಭವಿಸಿದರು.

ಅಮೆರಿಕಾಕ್ಕೆ ಹೋದ ನಾಲ್ಕು ದಿನಗಳ ನಂತರ ಸುಮಿತ್‌ ಫೋನ್‌ ಮಾಡಿದ, “ಅಮ್ಮಾ…. ನಾಳೆ ನನ್ನ ಸ್ನೇಹಿತ ಅಡ್ವೋಕೇಟ್ ಆನಂದ್‌ ಗೆ ಬರಲು ಹೇಳಿದ್ದೀನಿ. ನಮ್ಮ ಎಲ್ಲಾ ಆಸ್ತಿಯನ್ನು ನನ್ನ ಹೆಸರಿಗೆ ಬದಲಾಯಿಸಲು ಪೇಪರ್ಸ್ ರೆಡಿ ಮಾಡಿಕೊಂಡು ಬರುತ್ತಾನೆ. ಅದಕ್ಕೆ ನೀನು ಸಹಿ ಮಾಡಬೇಕು ಅಷ್ಟೇ. ಹಾಗೇ ಬಿಟ್ಟರೆ ಆಸ್ತಿ ದುಡ್ಡು ಎಲ್ಲಾ ನನಗೆ ಹೇಳದೇ ಮತ್ತೊಬ್ಬರಿಗೆ ದಾನ ಮಾಡಿ ಬಿಡ್ತೀಯಾ….?” ಎಂದ.

ಲಲಿತಮ್ಮ ಮಗನ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಫೋನ್‌ ಕಟ್‌ ಮಾಡಿದರು. ತಕ್ಷಣಗ ಶರಣ್‌ ಗೆ ಪೋನ್‌ ಮಾಡಿ, “ಮಗಾ ಶರಣ್‌….. ಯಾಕೆ ಈ ಅಮ್ಮನ ಮೇಲೆ ಬೇಜಾರಾಯ್ತಾ…..? ನೀನು ಮನೆಗೆ ಬಂದು ನಾಲ್ಕು ದಿನಗಳಾಯಿತು. ಒಂದು ಫೋನ್‌ ಕೂಡ ಮಾಡಿಲ್ಲ ನೀನು…. ಮನೆಗೆ  ಬಾ ಕಂದಾ…..!” ಎಂದು ಕರೆದ ಲಲಿತಮ್ಮನವರ ಧ್ವನಿಯಲ್ಲಿ ನೋವಿತ್ತು.

“ಅಮ್ಮಾ…. ಸ್ಕೂಲಲ್ಲಿ ಮಕ್ಕಳ ವಾರ್ಷಿಕ ಪರೀಕ್ಷೆಗಳು ನಡೆದಿವೆ. ಆದರೆ ಸಂಜೆ ಬರ್ತೀನಿ….” ಎಂದ.

“ಇಲ್ಲ ಶರಣ್‌ ಸಂಜೆ ಅಂದರೆ ತುಂಬಾ ಲೇಟಾಗುತ್ತೆ…. ಒಂದು ಹತ್ತು ನಿಮಿಷ ಬಂದು ಹೋಗುವ ಅಷ್ಟೇ. ಬರ್ತೀಯಲ್ಲಾ….?” ಎಂದು ದೀನವಾಗಿ ಕೇಳಿದರು.

ಶರಣ್‌ ಮರುಮಾತನಾಡಲಿಲ್ಲ. ಹತ್ತೇ ನಿಮಿಷದಲ್ಲಿ ಮನೆಗೆ ಬಂದು ಲಲಿತಮ್ಮನವರ ಪಾದ ಸ್ಪರ್ಶಿಸಿ ಎದುರು ಬಂದು ಕುಳಿತ. ಲಲಿತಮ್ಮ ಶರಣ್‌ ನ ಮುಖವನ್ನು ಗಮನಿಸಿದರು. ಶರಣ್‌ ಮಾತ್ರ ಮುಖ ಬಾಗಿಸಿ ಕುಳಿತಿದ್ದ.

“ಶರಣ್‌…. ನನ್ನ ಮಗನ ಮಾತುಗಳಿಂದ ನಿನಗೆ ನೋವಾಗಿದೆ ಅಂತ ಗೊತ್ತು. ಅವನಿಗೆ ದುಡ್ಡಿನ ದುರಂಹಕಾರ ಹಾಗೆ ಮಾತಾಡಿಸುತ್ತೇ,” ಎಂದು ಅವನನ್ನು ಸಮಾಧಾನಿಸಿದರು.

ಅಷ್ಟರಲ್ಲಿ ಸುಮಿತ್‌ ನ ಅಡ್ವೋಕೇಟ್‌ ಆನಂದ್‌ ಲಲಿತಮ್ಮನವರ ಮನೆಗೆ ಬಂದ.

“ಓ…. ಆನಂದ್‌ ಬಾಪ್ಪಾ….?” ಎಂದು ಅವನನ್ನು ನಗುನಗುತ್ತಾ ಬರಮಾಡಿಕೊಂಡರು.

“ಆನಂದ್‌, ನನ್ನನ್ನು ಅಪಾಯದಿಂದ ಪಾರು ಮಾಡಿದವನೇ ಈ ಶರಣ್‌. ಈತ ನನ್ನ ಹಿತೈಷಿ ಅಲ್ಲ, ನನ್ನ ಎರಡನೇ ಮಗ….” ಎಂದು ಹೇಳಿದರು.

ಆಗ ಶರಣ್‌ ಎದ್ದು ನಿಂತು ಆನಂದನಿಗೆ ಹಲೋ ಹೇಳಿ, “ಅಮ್ಮಾ…. ನನಗೆ ಸ್ಕೂಲಿಗೆ ಲೇಟಾಗುತ್ತದೆ,” ಎಂದು ಗೋಡೆಯ ಗಡಿಯಾರದತ್ತ ನೋಡುತ್ತಾ ಹೊರಡಲು ಅನುವಾದ.

“ಆಯ್ತಪ್ಪಾ ಶರಣ್‌…. ನೀನು ಹೊರಡು. ಸಂಜೆ ಬರುವುದು ಮಾತ್ರ ಮರೆಯಬೇಡ,” ಎಂದರು.

ಅಡ್ವೋಕೇಟ್‌ ಆನಂದ್‌ ಎಲ್ಲವನ್ನೂ ವಿವರಾಗಿ ಹೇಳಿದ. ಆತ ಹೇಳಿದ ಕಡೆಯೆಲ್ಲಾ ಲಲಿತಮ್ಮ ಪತ್ರಕ್ಕೆ ರುಜು ಮಾಡಿಕೊಟ್ಟರು.

ಎರಡು ದಿನಗಳು ಕಳೆದ. ಮುಂಜಾನೆಯ ಜಾಗಿಂಗ್‌ ಗೆ ಹೋಗಲು ಶರಣ್‌ ರೆಡಿ ಆಗುತ್ತಿದ್ದ. ಆಗ ಲಲಿತಮ್ಮನವರ ಫೋನ್ ಬಂದಿತು.

“ಹೇಳಿ ಅಮ್ಮಾ…… ನೀವು ಈಗ ಹುಷಾರಾಗಿದ್ದೀರಲ್ವಾ…. ಇವತ್ತು ನೀವು ವಾಕಿಂಗ್‌ ಗೆ ಬರಬೇಕು. ಆರೋಗ್ಯದ ನೆಪವೊಡ್ಡಿ ಮನೆಯಲ್ಲೇ ಮುಸುಕೆಳೆದುಕೊಂಡು ಮಲಗಬೇಡಿ. ಬೇಗ ಬನ್ನಿ ನಿಮಗಾಗಿ ಉದ್ಯಾನವನದಲ್ಲಿ ಕಾಯುತ್ತಿರುತ್ತೇನೆ. ನಿಂಬೆ ಪಾನಕ ಮರೀಬೇಡಿ ಮತ್ತೆ…..” ಎಂದು ಫೋನ್‌ ಕಟ್‌ ಮಾಡಬೇಕು ಎನ್ನುವಷ್ಟರಲ್ಲಿ, “ಶರಣ್‌ ನಾನು ಅಮ್ಮ ಅಲ್ಲಾ…. ಅಡ್ವೋಕೇಟ್‌ಆನಂದ್‌…..”

ಲಲಿತಮ್ಮನವರ ಮೊಬೈಲ್ ‌ನಲ್ಲಿ ಅಡ್ವೋಕೇಟ್‌ ಆನಂದ್‌ ರ ಧ್ವನಿ ಕೇಳಿ ಶರಣ್‌ ವಿಚಲಿತಗೊಂಡ.

“ಗುಡ್‌ ಮಾರ್ನಿಂಗ್‌ ಆನಂದ್‌ ಸರ್‌…..”

“ಶರಣ್‌, ಬೇಗ ಅಮ್ಮನ ಮನೆಗೆ ಬನ್ನಿ…..”

“ಯಾಕೆ ಸರ್‌….?!” ಶರಣ್‌ ಕಾತುರದಿಂದ ಕೇಳಿದ.

“ಅದೂ…. ಅದೂ…. ಅಮ್ಮ ಇನ್ನಿಲ್ಲ….. ರಾತ್ರಿಯೇ ಅವರ ಪ್ರಾಣ ಹೋಗಿದೆ.”

ಶರಣ್‌ ದಿಗ್ಬ್ರಾಂತನಾಗಿ ಎಲ್ಲವನ್ನೂ ಬಿಟ್ಟು ಲಲಿತಮ್ಮನವರ ಮನೆಯತ್ತ ಓಡಿದ. ಲಲಿತಮ್ಮ ಚಿರನಿದ್ರೆಯಲ್ಲಿ ಮಲಗಿದ್ದರು. ಶರಣ್ ಅಮ್ಮನ ಪಾದದ ಬಳಿ ಹೋಗಿ ಕುಳಿತು ಬಿಕ್ಕಿ ಬಿಕ್ಕಿ ಅತ್ತ…. ಅಳುವಿಗೂ ಮೀರಿದ ಶೋಕ ಅವನ ಎದೆ ಹಿಂಡುತ್ತಿತ್ತು. ಎಷ್ಟೋ ಸಮಯ ಕಳೆದ ನಂತರ ಅಡ್ವೋಕಟ್‌ ಆನಂದ್‌, ಶರಣ್‌ ನನ್ನು ಪಕ್ಕಕ್ಕೆ ಕರೆದು, ಅವನ ಕೈಗೆ ಒಂದು ಲಕೋಟೆ ಕೊಟ್ಟು, ಇದು ಅಮ್ಮ ಕೊಟ್ಟ ಪತ್ರ. ಇದನ್ನು ಓದಿ….

“ಶರಣ್‌, ಮಗನೇ, ನಿನಗೆ ಹೇಳಿಯೇ ಹೋಗಬೇಕು ಎಂಬ ಆಸೆ ನನಗಿದೆ ಕಣೋ. ಆದರೆ ಆ ವಿಧಿ ನಿನ್ನ ಕೈಯಿಂದ ನನ್ನ ಬಾಯಿಗೆ ಒಂದು ಹನಿ ನೀರು ಕುಡಿಯುವುದಕ್ಕೂ ಸಮಯಾವಕಾಶ ಕೊಡುವುದಿಲ್ಲ ಕಣಯ್ಯಾ….. ನೀನೇ ನನ್ನ ಮಗ…. ನನ್ನ ಎಲ್ಲ ಕ್ರಿಯಾಕರ್ಮಗಳನ್ನು ನೀನೇ ಮಾಡಬೇಕು. ಇದು ನನ್ನ ಅಂತಿಮ ಆಸೆ ಕಣೋ. ನಾನು ಹೆತ್ತು ಹೊತ್ತು ಲಾಲಿಸಿದ ಮಗನಲ್ಲ ನೀನು….. ನನ್ನ ಹೊಟ್ಟೆಯಿಂದ ನೀನು ಹುಟ್ಟಿಲ್ಲ ಅಷ್ಟೇ. ಹೊಟ್ಟೆಯಿಂದ ಹುಟ್ಟಿದವರು ಮಾತ್ರ ಮಕ್ಕಳಲ್ಲ…. ನೀನೂ ನನ್ನ ನಿಜವಾದ ಮಗ. ಹ್ಞಾಂ…. ನನ್ನ ಅಂತ್ಯಕ್ರಿಯೆ ವೆಚ್ಚಕ್ಕಾಗಿ ಆನಂದನ ಕೈಯಲ್ಲಿ ದುಡ್ಡು ಕೊಟ್ಟಿದ್ದೇನೆ. ಅಮ್ಮಾ….”

ಪತ್ರ ಓದಿ ಮುಗಿಸುತ್ತಿದ್ದಂತೆ ಆನಂದ ದುಡ್ಡು ತಂದು ಕೊಟ್ಟ. ಶರಣ್‌ ಲಲಿತಮ್ಮನವರ ಎಲ್ಲ ಅಂತಿಮ ಸಂಸ್ಕಾರಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಮುಗಿಸಿದ. ಕೊನೆಯ ದಿನದ ಕಾರ್ಯವನ್ನೆಲ್ಲಾ ಮುಗಿಸಿದ ಶರಣ್‌ ಗೆ ಆತ್ಮೀಯವಾಗಿ ಪ್ರೀತಿಸುತ್ತಿದ್ದ ಮತ್ತೊಂದು ಜೀವ ದೂರವಾಯಿತಲ್ಲಾ ಎಂದು ಶರಣ್‌ ಸಂಕಟದಿಂದ ಕಣ್ತುಂಬಿಕೊಂಡ.

ಶರಣ್‌ ತೀರಾ ಮೌನಿಯಾಗಿದ್ದ. ಅಮ್ಮನ ನೆನಪಾದಗೆಲ್ಲ ಅವರು ಬರುತ್ತಿದ್ದ ಉದ್ಯಾನವನಕ್ಕೆ ಹೋಗಿ ಅವರು ಕುಳಿತುಕೊಳ್ಳುತ್ತಿದ್ದ ಕಲ್ಲು ಬೆಂಚಿನ ಮೇಲೆ ಸಾಕಷ್ಟು ಸಮಯ ಕಳೆಯುತ್ತಿದ್ದ.

ಅಂದು ಯಾರೋ ಎದುರಿಗೆ ನಿಂತಂತಾಗಿ ಶರಣ್‌ ತಲೆ ಎತ್ತಿ ನೋಡಿದ. ಕರಿಕೋಟ್‌ ಧರಿಸಿ ಅಡ್ವೋಕೇಟ್‌ ಆನಂದ್‌ ನಸುನಗುತ್ತಾ ನಿಂತಿದ್ದ.

“ಅಮ್ಮ ನನಗೆ ಹೇಳಿದ್ದರು. ನೀವು ಮುಂಜಾನೆ ಇದೇ ಪಾರ್ಕ್‌ ನಲ್ಲಿ ಸಿಗುತ್ತೀರಾ ಅಂತ….”

ಆನಂದನ ಮಾತಿಗೆ ಶರಣ್‌ ಶುಷ್ಕ ನಗೆ ನಕ್ಕ. ಆನಂದ್‌ ಶರಣ್‌ ಪಕ್ಕಕ್ಕೆ ಬಂದು ಕುಳಿತು, “ಅಮ್ಮ ಸಾಯುವ ಮೊದಲು ಅವರ ಎಲ್ಲಾ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿ ಹೋಗಿದ್ದಾರೆ. ಆ ಮನೆ ಈಗ ನಿನ್ನದು…. ಅಂದು ನಿಮ್ಮನ್ನು ಪರಿಚಯಿಸಲೆಂದೇ ನಾನು ಬಂದಾಗ ನಿಮ್ಮನ್ನು ಮನೆಗೆ ಕರೆಯಿಸಿಕೊಂಡಿದ್ದು….”

ಆನಂದನ ಮಾತು ಕೇಳಿ ಶರಣ್‌ ಗಾಬರಿಯಾದ, “ಆನಂದ್‌, ಇದು ಮಾತ್ರ ಅಸಾಧ್ಯ…. ನನಗೆ ಅಮ್ಮನ ಮಮತೆಯ ಮೇಲೆ ಅವರ ಪ್ರೀತಿಯ ಮೇಲೆ ಮಾತ್ರ ನನ್ನ ಹಕ್ಕಿದೆ. ಆದರೆ ಅವರ ಆಸ್ತಿಯ ಮೇಲೆ ಅಲ್ಲ, ಅಮ್ಮನೇ ಈಗ ಇಲ್ಲ. ಅವರ ಆಸ್ತಿಯನ್ನು ತೆಗೆದುಕೊಂಡು ನಾನೇನು ಮಾಡಲಿ…. ದಯವಿಟ್ಟು ಬೇಡ ಆನಂದ್‌. ಅದು ಅಮೆರಿಕಾದಲ್ಲಿರುವ ಅವರ ಮಗನಿಗೆ ಸೇರಿದ ಆಸ್ತಿ…. ದಯವಿಟ್ಟು ನನ್ನನ್ನು ಕ್ಷಮಿಸಿ,” ಎಂದು ಅಲ್ಲಿಂದ ಮೇಲಕ್ಕೆದ್ದ ಶರಣ್‌.

“ಶರಣ್‌ ನೀವು ಹೀಗೇ ಹೇಳುತ್ತೀರಿ ಅಂತ ಅಮ್ಮನಿಗೆ ಗೊತ್ತಿತ್ತು. ಅದಕ್ಕಾಗಿ ಮತ್ತೊಂದು ಓಲೆ ಬರೆದು ಕೊಟ್ಟಿದ್ದರು,” ಎಂದು ಪತ್ರವೊಂದನ್ನು ಕೊಟ್ಟ.

“ಶರಣ್‌ ನನಗೆ ಗೊತ್ತು ಕಣೋ….. ಆಸ್ತಿಗಾಗಿ ನೀನು ನನ್ನ ಬಳಿ ಬರಲಿಲ್ಲ ಅಂತ. ಅದ್ಯಾಕೋ ಗೊತ್ತಿಲ್ಲ ನಿನ್ನನ್ನು ನೋಡಿದಾಗಿನಿಂದ ನನ್ನ ಮಾತೃ ಹೃದಯ ಸೋತುಹೋಗುತ್ತಿತ್ತು. ನಿನ್ನ ಆ ತುಂಟ ನಗು ನನ್ನ ಮಾತೃತ್ವವನ್ನು ಉಚ್ಚಟಿಸುತ್ತಿತ್ತು. ಯಾವ ಜನ್ಮದ ಮಗನೋ ನೀನು…. ನನ್ನ ಬಳಿ ಬಂದೆ. ಹಸು ತನ್ನ ಕರುವಿಗಾಗಿ ಕಾದಂತೆ, ಪ್ರತಿನಿತ್ಯ ನಿನಗಾಗಿ ಕಾತುರದಿಂದ ಕಾಯುತ್ತಿದ್ದೆ. ನಿನ್ನ ಪ್ರೀತಿ ನನ್ನನ್ನು ಬಂಧಿಸಿ ಇಟ್ಟಿತ್ತು ಕಣೋ…. ನಿನಗೆ ಹೇಳಿ ಹೋಗುವಷ್ಟು ಕಾಲಾವಕಾಶ ಆ ದೇವರು ನನಗೆ ಕೊಡುವುದಿಲ್ಲ. ಆದರೇನಂತೆ ನಾನು ನಿನ್ನ ಮನದಲ್ಲಿ ಸದಾ ಇರುತ್ತೇನೆ. ಅಮ್ಮ ಕೊಟ್ಟ ಉಡುಗೊರೆಯನ್ನು ಬೇಡ ಅನ್ನಬಾರದು ಶರಣ್‌….

“ನೀನು ಶರಣ್‌ ಕುಮಾರ್‌ ಅಲ್ಲ ಕಣೋ…. ನನ್ನ ಪಾಲಿನ ಮುದ್ದು ಶ್ರವಣಕುಮಾರ…. ನಾನಿದ್ದ ಆ ಮನೆ ನೀನು ಬಡ ವಿದ್ಯಾರ್ಥಿಗಳ ಪಾಠಕ್ಕಾಗಿ ಉಪಯೋಗಿಸಬೇಕು. ನೀನು ಸದಾ ಹೀಗೆ ನಗುನಗುತ್ತಾ ಇರು. ಈ ಅಮ್ಮನ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತದೆ. ನಾನಿನ್ನು ಬರಲೇ ಮಗನೇ….” ಶರಣನ ಸತತ ಕಂಬನಿಯಷ್ಟೇ ಅದಕ್ಕೆ ಉತ್ತರವಾಗಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ