ಪ್ರೇಯಸಿ : ಮದುವೆ ನಂತರದ ನಿನ್ನ ಎಲ್ಲಾ ದುಃಖವನ್ನೂ ನನ್ನದೆಂದೇ ಭಾವಿಸಿ, ಅದನ್ನು ಹಂಚಿಕೊಳ್ಳುತ್ತೇನೆ!
ಪ್ರಿಯತಮ : ಅಯ್ಯೋ… ಆದರೆ ನನಗೆ ಯಾವ ದುಃಖ ಇಲ್ಲವಲ್ಲ…..?
ಪ್ರೇಯಸಿ : ಅರೇ…. ನಾನು ಹೇಳಿದ್ದು ಮದುವೆ ಆದ ನಂತರ ಶುರುವಾಗುವ ದುಃಖಗಳ ಬಗ್ಗೆ!
ಪತ್ನಿ : ಅದು ಸರಿ, ನಾನು ಹಾಡು ಹೇಳಲು ಶುರು ಮಾಡಿದಾಗೆಲ್ಲ ನೀವೇಕೆ ಹೋಗಿ ಬಾಲ್ಕನಿಯಲ್ಲಿ ನಿಂತುಬಿಡ್ತೀರಿ?
ಪತಿ : ಇದರಿಂದ ನಮ್ಮ ನೆರೆಹೊರೆಯವರಿಗೆ ನಾನು ನಿನ್ನನ್ನು ಹೊಡೆದೂ ಬಡಿದೂ ಮಾಡ್ತಿಲ್ಲ, ಒಂಟಿಯಾಗಿ ಬಾಲ್ಕನಿಯಲ್ಲೇ ನಿಂತಿದ್ದೇನೆ ಅಂತ ಸ್ಪಷ್ಟವಾಗಿ ಗೊತ್ತಾಗಲಿ ಎಂಬುದೇ ನನ್ನ ಉದ್ದೇಶ!
ಕನ್ಯಾಪಿತೃ : ಎಲ್ಲಾ ಸರಿ ಕಣಪ್ಪ, ನೀನು ಯಾವ ಕೆಲಸ ಮಾಡಿಕೊಂಡಿದ್ದೀಯಾ?
ಸೀನ : ನಾನಾ? ಐ ಆ್ಯಮ್ ಏರ್ ಡಿಫ್ಯೂಷನ್‌ಮಾನಿಟರಿಂಗ್ ಟೆಕ್ನಿಶಿಯನ್!
ಕನ್ಯಾಪಿತೃ : ಆಹಾ…. ಇಂಥ ಅಳಿಯನನ್ನು ಪಡೆಯಲು ನಾ ಪುಣ್ಯ ಮಾಡಿದ್ದೆ.
ಮದುವೆ ಆಗಿ 1 ವಾರ ಕಳೆಯುವಷ್ಟರಲ್ಲಿ ಮಗಳು ಮುನಿಸಿಕೊಂಡು ತನ್ನ ಪೆಟ್ಟಿಗೆ ಸಮೇತ ತವರಿಗೆ ಬಂದು ಇಳಿದಳು. ಆಗ ಇದೇಕೆ ಎಡವಟ್ಟಾಯಿತು ಎಂದು ಅಳಿಯನ ಕುರಿತು ಮಾವ ಹೋಗಿ ವಿಚಾರಿಸಿದಾಗ, ಅವನು ಕಲಾಸಿಪಾಳ್ಯದ ಮೂಲೆ ಮರದ ಕೆಳಗೆ ಗಾಡಿಗಳಿಗೆ ಟ್ಯೂಬ್ ಸರಿಪಡಿಸುವ ಪಂಕ್ಚರ್ ಕೆಲಸ ಮಾಡುತ್ತಾನೆ ಎಂದು ಖಾತ್ರಿಯಾಯಿತು. ಅದನ್ನು ಸ್ಟೈಲಾಗಿ ಇಂಗ್ಲಿಷ್ ನಲ್ಲಿ ಅಳೀಮಯ್ಯ ಪ್ರಾಮಾಣಿಕವಾಗಿ ಹೇಳಿದವನೇ… ಎಂದು ಕಣ್ಣಾರೆ ಕಂಡಿದ್ದನ್ನು ಮತ್ತೆ ಮತ್ತೆ ವಿಶ್ಲೇಷಿಸಿದ ಮಾವ, 2-3 ಸಲ ಆತ್ಮಹತ್ಯೆಗೆ ಪ್ರಯತ್ನಿಸಿದಂತೆ!
ಮದುವೆಯ ಮೊದಲ ರಾತ್ರಿಯಂದು ಪತ್ನಿ ತಲೆಯ ಮೇಲೆ ಸೆರಗು ಹೊದ್ದು, ಹಾಲು ಹಿಡಿದು ಬಂದಳು. ವರ ಮಹಾಶಯ ಅವಳ ಸೆರಗು ಸರಿಪಡಿಸಿ…. ಒಂದು ಕ್ಷಣ ಮಾರ್ಮಿಕವಾಗಿ…. ಅಂತೂ ಸುಧಾರಿಸಿಕೊಂಡು ಎದ್ದು ಕುಳಿತ.
ಪತ್ನಿ : ಏನೂಂದ್ರೆ…. ಯಾವುದಾದರೂ ಸಿನಿಮಾ ನೋಡಿ ಹೆದರಿದ್ರಾ ಏನು?
ಪತಿ : ಬೇಡ ಬೇಡ ಅಂದ್ರೂ ನನ್ನ ಫ್ರೆಂಡ್ಸ್ ದೆವ್ವದ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದರು. ಅದೀಗ ಎಷ್ಟು ಸಹಾಯಕರ ಅಂತ ಗೊತ್ತಾಯ್ತು!
ಕಿಟ್ಟಿಯ ಮದುವೆಯಾಗಿ 1 ತಿಂಗಳು ಕಳೆದಿತ್ತು. ಅವನ ಪತ್ನಿ ಒಮ್ಮೆ ಗೊಣಗಿದಳು, “ಇತ್ತೀಚೆಗೆ ನೀವು ನನ್ನ ಸೌಂದರ್ಯದ ಬಗ್ಗೆ ಹೊಗಳುವುದೇ ಇಲ್ಲ. ಮದುವೆಯಾದ ಹೊಸತರಲ್ಲಿ ಎಷ್ಟೊಂದು ವರ್ಣಿಸುತ್ತಿದ್ದಿರಿ….”
ಕಿಟ್ಟಿ ಹೇಳಿದ, “ಡಾರ್ಲಿಂಗ್, ಯಾವುದು ಹೇಗಾದರೂ ಇರಲಿ, ನಿನ್ನ ಕೇಶ ಸೌಂದರ್ಯ ಮಾತ್ರ ಹೊಗಳದೇ ಇರಲಾಗದು. ಹಾಗಾಗಿಯೇ ನಿನ್ನ ದಟ್ಟ, ಮೇಘರಾಶಿಯಂಥ ಮುಂಗುರುಳು ಒಮ್ಮೆ ಪಲ್ಯ, ಒಮ್ಮೆ ರೊಟ್ಟಿ, ಒಮ್ಮೊಮ್ಮೆ ಅನ್ನದಲ್ಲೂ ಮಿಂಚುತ್ತಿರುತ್ತದೆ…..” ಎನ್ನುವುದೇ?
ಈ ಸಲದ ಚಳಿಗಾಲದಲ್ಲಿ ಉ.ಭಾರತವಿಡೀ ಅತಿಯಾದ ಶೀತ, ಥಂಡಿಯಿಂದಾಗಿ ಎಲ್ಲರನ್ನೂ ನಡುಗಿಸಿಬಿಟ್ಟಿತ್ತು. ಆಗ ಸರಕಾರದ ಕಡೆಯಿಂದ ಒಂದು ವಿಶೇಷ ಸೂಚನೆ ಪ್ರಕಟವಾಯಿತು :
ನೀರಿನ ಕೊರತೆ ಇರುವುದರಿಂದ, ಈ ಸೀಸನ್ನಿನಲ್ಲಿ ಥಂಡಿ ಅತಿ ಹೆಚ್ಚಾಗಿರುವುದರಿಂದ, ಯಾರಿಗೆ ಸಾಧ್ಯವೋ ಅವರು ಮಾತ್ರ ಸ್ನಾನ ಮಾಡಿ. ಅಂಥ ವ್ಯಕ್ತಿಯನ್ನು ಮುಟ್ಟಿಕೊಂಡ ಇತರರನ್ನೂ ಸ್ನಾನ ಮಾಡಿದವರೆಂದೇ ಪರಿಗಣಿಸಲಾಗುತ್ತದೆ!
ಇಂಥ ಥಂಡಿಯಲ್ಲಿ ನೀವು ಆಫೀಸಿನಿಂದ ಮನೆಗೆ ಬಂದು, ಹಾಲ್ ನಲ್ಲಿ ಲೈಟ್ ಆನ್ ಆಗಿಲ್ಲವೆಂದು, ಅದರ ಸ್ವಿಚ್ ಒತ್ತುವ ಬದಲು ಅಕಸ್ಮಾತ್ ಫ್ಯಾನಿನ ಸ್ವಿಚ್ ಒತ್ತಿಬಿಟ್ಟರೆ….? ಮನೆಯವರು ನಿಮ್ಮನ್ನು ಇರಿಯುವ ನೋಟ, ಚೂಪಾದ ಐಸ್ ಕೋನ್ಸ್ ಬಂದು ಚುಚ್ಚುವುದಕ್ಕೆ ಸಮವಾಗಿರುತ್ತದೆ!
ಈ ಸಲದ ಥಂಡಿ ತೀರಾ ಅತಿಯಾಗಿರುವುದರಿಂದ, ಎಲ್ಲರೂ ನಿಮ್ಮ ಆರೋಗ್ಯದ ಕಡೆ ಗಮನ ಕೊಡಲೇಬೇಕು. ಶೀತ ಆಗಿ ನೆಗಡಿ ಹೆಚ್ಚಿದರೆ ಕಷ್ಟ, ನಿಮ್ಮ ಕರುಣಾಜನಕ ಸ್ಥಿತಿ ಕಂಡು ಯಾರಾದರೂ ನಿಮ್ಮ ಕಣ್ಣೀರು ಒರೆಸಲು ಮುಂದೆ ಬರಬಹುದೇ ಹೊರತು, ಸತತ ಸುರಿಯುವ ನಿಮ್ಮ ಸಿಂಬಳವನ್ನಲ್ಲ!
ಮಹೇಶ : ಎಲ್ಲರೊಂದಿಗೆ ಸದಾ ನಸುನಗುತ್ತಾ ಮಾತನಾಡುತ್ತಿರಬೇಕು, ಅದುವೇ ಶಿಷ್ಟಾಚಾರ ಅನ್ನುತ್ತದೆ ಈ ಲೋಕಾರೂಢಿಯ ಪ್ರಪಂಚ.
ಸತೀಶ : ಹೌದು, ಇದರಲ್ಲಿ ತಪ್ಪೇನು ಬಂತು?
ಮಹೇಶ : ಆದರೆ ಅಪ್ಪಿತಪ್ಪಿಯೂ ಹೆಂಡತಿ ಮುಂದೆ, ಪಕ್ಕದ ಮನೆಯವಳನ್ನು ಕಂಡು ಮಂದಹಾಸ ಬೀರಬಾರದು, ಇಲ್ಲದಿದ್ದರೆ ಆ ವಾರ ಪೂರ್ತಿ ಹಳಸಿದ ಕ್ಯಾಂಟೀನ್ ಊಟವೇ ಗಟ್ಟಿ!
ಕಾರ್ಖಾನೆ ಒಂದರ ವಾಚ್ ಮೆನ್ ಕೆಲಸಕ್ಕಾಗಿ ಸಂದರ್ಶನ ನಡೆಯುತ್ತಿತ್ತು.
ಸಂದರ್ಶಕ : ಈ ವಿಶ್ವದ 2 ಅತಿ ಅಪಾಯಕಾರಿ ಅಸ್ತ್ರಗಳು ಯಾವುವು?
ಗುಂಡ : ಹೆಂಡತಿಯ ಕಣ್ಣೀರು, ಗರ್ಲ್ ಫ್ರೆಂಡ್ ಳ ಮಂದಹಾಸ. ಕೆಲವೇ ವರ್ಷಗಳಲ್ಲಿ ಗುಂಡ ಆ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಗಳಿಗೆ ಚೀಫ್ ಆಗಿಹೋದ!
ಪತ್ನಿ : ಇಂದಿನ ಸಂಜೆ ಎಂಥ ರೊಮ್ಯಾಂಟಿಕ್ ಆಗಿದೆ. ಒಂದು ಒಳ್ಳೆ ಹಾಡು ಹೇಳಬಾರದೇ?
ಪತಿ : ನೀಲ ಮೇಘ ಗಾಳಿ ಬೀಸಿ ತೂರಾಡೋ ಹಾಗೆ….
ಪತ್ನಿ : ಆಹಾ…. ಹಾಗೇ ಮುಂದುವರಿಸಿ…..
ಪತಿ : ತೂರಾಡೋ ಹಾಗೇ….. ತೂರಾಡೋ ಹಾಗೆ….
ಪತ್ನಿ : ಏನು ಕರ್ಮ ಇದು? ತೂರಾಡೋದೇ ಆಗೋಯ್ತು. ಮುಂದೆ ಏನಾಯ್ತು ಅಂತ ಹೇಳಬಾರದೇ?
ಪತಿ : ತೂರಾಡಿ ತೂರಾಡಿ ರಸ್ತೆ ಬದಿ, ಚರಂಡಿಯಲ್ಲಿ ಬಿದ್ದ ಅಂತ!
ಒಮ್ಮೆ ಬ್ಯಾಚುಲರ್ ಗುಂಡನಿಗೆ ರಾತ್ರಿ 10 ಗಂಟೆಯಲ್ಲಿ ಬಹಳ ಹಸಿವಾಯಿತೆಂದು ಬೆಂಗಳೂರಿನ ಎಲ್ಲಾ ಹೋಟೆಲ್ ಗಳಲ್ಲೂ ತಡಕಾಡಿದ. ಯಾವುದು ನೋಡಿದರೂ ವೆಯ್ಟಿಂಗೇ! ಹೀಗೆ ಹತ್ತಾರು ಹೋಟೆಲ್ ಹತ್ತಿಳಿಯುವುದರಲ್ಲಿ 10.45 ಆಗಿಹೋಯಿತು.
ಹೀಗಾದರೆ ಲಾಭವಿಲ್ಲ ಅಂತ ಗುಂಡ ಐಡಿಯಾ ಹೂಡಿದ. ಅವನು ಯಾವ ಹೋಟೆಲ್ ಗೆ ಹೋಗಿ ನೋಡಿದರೂ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಗಳೇ ತುಂಬಿಕೊಂಡಿದ್ದರು. ಆ ಮೂತಿಗಳನ್ನು ನೋಡಿದ ಕೂಡಲೇ ಇವರು ದಂಪತಿಗಳಲ್ಲ ಎಂದು ಗುಂಡನಿಗೆ ಅರಿವಾಯಿತು. ಮಾಡ್ತೀನಿ ತಾಳು ಎಂದು ಮನದಲ್ಲೇ ನಿರ್ಧರಿಸಿದ.
ತಕ್ಷಣ ತನ್ನ ಮೊಬೈಲ್ ತೆಗೆದವನೇ 4-6 ಫ್ರೆಂಡ್ಸ್ ಗೆ ಫೋನ್ ಮಾಡುತ್ತಾ ಅಲ್ಲಿದ್ದವರಿಗೆಲ್ಲ ಕೇಳಿಸುವಂತೆ ಹೇಳಿದ, “ಹಲೋ… ಗುರು, ಕಿರಣ್, ಶಶಿ, ರವಿ, ಸೋಮು…. ಇದೇನೋ ನಿನ್ನ ಗರ್ಲ್ ಫ್ರೆಂಡ್ ಇಲ್ಲಿ ಯಾವನ ಜೊತೆಯಲ್ಲೇ ಕುಳಿತು ಡಿನ್ನರ್ ಹೊಡೀತಾಳೆ….?” ಅವನ ಮಾತು ಮುಗಿದ 5 ನಿಮಿಷಗಳಲ್ಲೇ ಅಲ್ಲಿದ್ದ ಬಹುತೇಕ ಟೇಬಲ್ ನ ಮಾಡರ್ನ್‌ಮಾಲತಿಯರು ಎದ್ದು ಕಣ್ಮರೆ ಆಗಿದ್ದರು!
ಗುರೂಜಿ : ಬಹು ದಿನಗಳಿಂದ ನಾವು ಮಾತನಾಡದೇ ಇದ್ದರೆ ಅದಕ್ಕೆ `ಮೌನವ್ರತ’ ಎಂದು ಅರ್ಥ.
ಭಕ್ತಗಣ : ಹೌದೇ? ನಮ್ಮಲ್ಲಿ ಅದಕ್ಕೆ `ವಿವಾಹಿತ’ ಅಂತ ಅರ್ಥ!





