ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೊಂದು ನದಿ ಇದೆ ಎಂದು ಹೇಳಿದರೆ, ಏ! ಬೆಂಗಳೂರಿನಲ್ಲಿ ಯಾವ ನದಿ ಇದೇ? ಎಂದು ಮೂಗು ಮುರಿಯುವವರೇ ಹೆಚ್ಚುಬೆಂಗಳೂರಿನಲ್ಲಿ ವೃಷಭಾವತಿ ನದಿ ಇದ್ಯಲ್ಲಾ!! ಎಂದು ಹೇಳಿದರೆ, ಅದು ನದಿಯಲ್ಲಾ!! ಕೊಳಚಿ ಮೋರಿ ಎಂದು ಮೂಗು ಮುಚ್ಚಿಕೊಳ್ಳುವವರಿಗೂ ಅಚ್ಚರಿ ಎನಿಸುವಂತೆ ಇಂದಿಗೂ ಬಸವನಗುಡಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ ಪ್ರತಿ ದಿನವೂ ಸಾವಿರಾರು ಜನರಿಗಾಗಿ ತಯಾರಿಸುವ ಅಡುಗೆಗೆ ಇದೇ ವೃಷಭಾವತಿ ನದಿಯ ನೀರನ್ನು ಬಳಸುತ್ತಿದ್ದು, ವೃಷಭಾವತಿ ನದಿಯ ಉಗಮ ಅದಕ್ಕೆ ಆ ಹೆಸರು ಬರಲು ಕಾರಣವೇನು? ಈ ನದಿಯ ಪಾತ್ರ ಅಂದು ಹೇಗಿತ್ತು ಮತ್ತು ಇಂದು ಹೇಗಿದೆ ಅದರ ಪುನರುಜ್ಜೀವನಕ್ಕಾಗಿ ಯಾವ ರೀತಿಯ ಕೆಲಸಗಳು ನಡೆಯುತ್ತಿದೆ ಎಂಬೆಲ್ಲಾ ಅದ್ಭುತವಾದ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ


ಸಾಮಾನ್ಯವಾಗಿ ಬಹುತೇಕ ದೊಡ್ಡ ದೊಡ್ಡ ನಗರಗಳು ನದಿ ಪಾತ್ರಗಳಲ್ಲಿಯೇ ಇರುವುದನ್ನು ಕಾಣಬಹುದಾಗಿದೆ. ಉದಾ. ದೆಹಲಿಯಲ್ಲಿ ಯಮುನಾ, ವಾರಣಾಸಿಯಲ್ಲಿ ಗಂಗಾ, ಹೈದರಾಬಾದಿನಲ್ಲಿ ಮೂಸಿ ನದಿ ಇರುವ ಕಾರಣ, ಈ ನದಿಗಳು ಅಯಾಯಾ ನಗರದ ಜೀವನಾಡಿಯಾಗಿ ಕಾರ್ಯನಿರ್ವಹಿಸುವುದಲ್ಲದೇ, ಅಗತ್ಯವಾದ ಕುಡಿಯುವ ನೀರು, ನೈಸರ್ಗಿಕ ಒಳಚರಂಡಿ ಮತ್ತು ಆರ್ಥಿಕ ಜೀವನಾಡಿಗಳನ್ನು ಒದಗಿಸುತ್ತವೆ. ಇದರ ಜೊತೆಗೆ ನಗರದ ಹೊರವಲಯದ ಕೃಷಿಗೆ ಕೇವಲ ನೀರುಣಿಸುವುದಷ್ಟೇ ಅಲ್ಲದೇ ಫಲವತ್ತಾದ ಮೆಕ್ಕಲು ಮಣ್ಣನ್ನು ಸಹಾ ನೀಡುತ್ತವೆ. ಅಷ್ಟೇ ಅಲ್ಲದೇ ವ್ಯಾಪಾರ ಮತ್ತು ಸಾರಿಗೆಗೆ ಐತಿಹಾಸಿಕ ಮಾರ್ಗಗಳಾಗಿಯೂ ಸಹಾ ಕಾರ್ಯನಿರ್ವಹಿಸುತ್ತವೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿಸುವಾಗ ಬೆಂಗಳೂರಿನಲ್ಲಿ ಇಂತಹ ಜಲ ಜೀವ ನಾಡಿ ಇಲ್ಲದ್ದದ್ದನ್ನೇ ಗಮನಿಸಿ ಬಹು ದೊಡ್ಡ ಕೋಟೆಗಳು, ಮಾರುಕಟ್ಟೆಗಳು ಮತ್ತು ರಸ್ತೆಗಳಿಗಿಂತಲೂ, ಪರಸ್ಪರ ಸಂಪರ್ಕ ಹೊಂದಿದ್ದ ನೂರಾರು ಕೆರೆಕಟ್ಟೆಗಳನ್ನು ಕಟ್ಟಿಸುವ ಮೂಲಕ ಬೆಂಗಳೂರಿನ ಗಮನಾರ್ಹ ನೀರು ನಿರ್ವಹಣಾ ವ್ಯವಸ್ಥೆಗೆ ಅಡಿಪಾಯ ಹಾಕಿದರು.

ಬೆಂಗಳೂರು ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿರುವ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲ್ಪಟ್ಟಿರುವ ಕಾರಣ, ಸಾಧಾರಣವಾಗಿ ಎಲ್ಲರೂ ಬೆಂಗಳೂರಿನಲ್ಲಿ ಯಾವುದೇ ಪ್ರಮುಖ ನದಿ ಅಥವಾ ದೀರ್ಘಕಾಲಿಕವಾಗಿ ಹರಿಯುವ ಯಾವುದೇ ನದಿ ಇಲ್ಲಾ ಎಂಬುದೇ ಎಲ್ಲರ ನಂಬಿಕೆಯಾಗಿದೆ. ಆದರೆ, ಕಾವೇರಿಯ ಉಪನದಿಯಾದ ಐತಿಹಾಸಿಕ ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಉಪನದಿಯಾದ ವೃಷಭಾವತಿ ಎಂಬ ನದಿಯು ಬೆಂಗಳೂರಿನ ಹೃದಯಭಾಗ ಎನಿಸಿಕೊಂಡಿರುವ ಬಸವನಗುಡಿಯ ದೊಡ್ಡ ಬಸವಣ್ಣನ ದೇವಾಲಯದ ತಪ್ಪಲಿನಲ್ಲಿ ಹುಟ್ಟುತ್ತಿದ್ದು ವೃಷಭಾವತಿ ಎಂಬ ಹೆಸರೇ ಬಹಳ ಸುಂದರವಾಗಿದೆ. ಮೂಲತಃ ವೃಷಭಾವತಿ ಎಂಬ ಪದವು ಸಂಸ್ಕೃತ ಭಾಷೆಯ ವೃಷಭ ಮತ್ತು ವತಿ ಎಂಬ ಎರಡು ಪದಗಳಿಂದ ಉತ್ಪತ್ತಿಯಾಗಿದೆ. ವೃಷಭ ಎಂದರೆ ಶಿವನ ವಾಹನ ನಂದಿ (ಎತ್ತು) ಮತ್ತು ವತಿ ಎಂದರೆ ಹೊಳೆ ಅಥವಾ ನದಿ ಎಂಬ ಅರ್ಥ ಬರುತ್ತದೆ. ಬೆಂಗಳೂರಿನ ಹೃದಯಭಾಗವಾದ ಬಸವನಗುಡಿಯಲ್ಲಿರುವ ಏಕಶಿಲೆಯ ನಂದಿ ಪ್ರತಿಮೆಯ (ದೊಡ್ದ ಬಸವಣ್ಣ) ಪದತಲದಲ್ಲಿಯೇ ಈ ನದಿ ಹುಟ್ಟುವುದರಿಂದ ವೃಷಭಾವತಿ ಎಂಬ ಅನ್ವರ್ಥ ಹೆಸರು ಬಂದಿದೆ. 16ನೇ ಶತಮಾನದ ಕೆಲವು ಶಾಸನಗಳಲ್ಲಿಯೂ “ಬಸವೇಶ್ವರನ ಪಾದದ ಬಳಿ ನದಿ ಹುಟ್ಟುತ್ತದೆ” ಎಂಬ ಉಲ್ಲೇಖ ಕಂಡುಬರುತ್ತದೆ.

ಇನ್ನೂ ಕೆಲವರು ಹೇಳುವ ಪ್ರಕಾರ ವೃಷಭಾದ್ರಿ ನದಿಯ ಮೂಲವು ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದ ಎದುರಿಗಿರುವ ಶ್ರೀ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ದಕ್ಷಿಣಾಭಿಮುಖವಾಗಿರುವ ನಂದಿಯ ಬಾಯಿಯಿಂದ ನೇರವಾಗಿ ಶಿವಲಿಂಗದ ಮೇಲೆ ನಿರಂತರವಾಗಿ ಸುರಿಯುವ ನೀರು, ಮೆಟ್ಟಿಲುಗಳ ಮೇಲೆ ಹರಿಯುತ್ತಾ, ಅದರ ಮುಂದೆಯೇ ಇರುವ ಕಲ್ಯಾಣಿಗೆ ಸೇರುವಂತಿದ್ದು ಈ ಕಲ್ಯಾಣಿಯ ನೀರೇ ವೃಷಭಾವತಿ ಮೂಲ ಎನ್ನುವ ನಂಬಿಕೆಯಿದ್ದು, ಹೀಗೆ ನೋಡಿದರೂ ಇಲ್ಲಿಯೂ ಸಹಾ ವೃಷಭ ಅರ್ಥಾತ್ ನಂದಿಯ ಬಾಯಿಯಿಂದಲೇ ನೀರು ಹರಿಯುವ ಕಾರಣ ವೃಷಭಾವತಿ ಎಂಬ ಹೆಸರಿಗೆ ಅನ್ವರ್ಥವಾಗಿದೆ.

ಹೀಗೆ ಬಸವನಗುಡಿ ಅಥವಾ ಮಲ್ಲೇಶ್ವರದ ನಂದಿ ದೇವಾಲಯದ ಬಳಿಯಿಂದ ಉಗಮವಾಗುವ 383 ಚದರ ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿರುವ ಈ ನದಿಯು ಮುಂದೆ ಮಂತ್ರಿ ಮಾಲ್ ಮಲ್ಲೇಶ್ವರಂ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣ, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿಯಂತಹ ಪ್ರಮುಖ ಪ್ರದೇಶಗಳ ಮೂಲಕ ಹರಿದು, 80 ಕಿಲೋಮೀಟರ್ ಪ್ರಯಾಣಿಸಿ ಅಂತಿಮವಾಗಿ ಕನಕಪುರದ ಬಳಿ ಅರ್ಕಾವತಿ ನದಿಯನ್ನು ಸೇರುತ್ತದೆ. ಈ ನದಿಯು ಪ್ರಸ್ತುತ ಬೆಂಗಳೂರಿನಲ್ಲಿರುವ 198 ವಾರ್ಡ್‌ಗಳಲ್ಲಿ 96 ವಾರ್ಡುಗಳ ಮೂಲಕ ಹಾದುಹೋಗುತ್ತದೆ ಎನ್ನುವುದು ಅಚ್ಚರಿ ಮೂಡಿಸುತ್ತದೆ. ಒಂದು ಕಾಲದಲ್ಲಿ ಇದೇ ನದಿಯ ನೀರನ್ನು ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗಷ್ಟೇ ಅಲ್ಲದೇ ವಿಜಯನಗರದ ದೀಪಾಂಜಲಿ ನಗರದಲ್ಲಿರುವ ಶ್ರೀ ಗಾಳೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿನ ಸಕಲ ಕಾರ್ಯಗಳಿಗೆ ಬಳಸಲಾಗುತ್ತಿತ್ತು.

ಇದೇ ವೃಷಭಾದ್ರಿ ನದಿಯ ಪಾತ್ರದ ಉದ್ದಕ್ಕೂ ಹಲವಾರು ದೇವಾಲಯಗಳಿದ್ದು, ಅವುಗಳಲ್ಲಿ ಪ್ರಮುಖವಾಗಿ ಬಸವನಗುಡಿಯ ದೊಡ್ಡ ಗಣೇಶ, ದೊಡ್ಡ ಬಸವ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನಗಳಷ್ಟೇ ಅಲ್ಲದೇ, ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ಚನ್ನಪಟ್ಟಣದ ಶ್ರೀ ವ್ಯಾಸರಾಯರು 1425ರಲ್ಲಿ ನಿರ್ಮಿಸಿದರು ಎನ್ನಲಾದ ಸುಮಾರು 600 ವರ್ಷಗಳಷ್ಟು ಹಳೆಯದಾದ ಗಾಳೀ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಕ್ರಿ.ಶ.1050ರಲ್ಲಿ ಕಟ್ಟಿಸಿದ್ದು ಎನ್ನಲಾದ ಕೆಂಗೇರಿಯಲ್ಲಿರುವ ಈಶ್ವರ ದೇವಾಲಯವೂ ಸಹಾ ಇದೇ ವೃಷಭಾವತಿ ದಡದಲ್ಲಿದೆ.

ಈಗಾಗಲೇ ತಿಳಿಸಿದಂತೆ ಬಸವನಗುಡಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯು ಇಂದಿಗೂ ಸಹಾ ಪ್ರತೀ ದಿನವೂ ಸಾವಿರಾರು ಜನರಿಗೆ ತಯಾರಿಸುವ ಅಡುಗೆಯಾಗಿ ಇದೇ ವೃಷಭಾವತಿ ನದಿಯ ಮೂಲದಿಂದ ಪಡೆದ ನೀರನ್ನೇ ಬಳಸುತ್ತಿದೆ. ನದಿಯ ಮೂಲ ಇನ್ನೂ ಸಹಾ ಆವರ ಕಛೇರಿಯ ಸರಹದ್ದಿನಲ್ಲೇ ಸ್ಪಷ್ಟವಾಗಿ ಹರಿಯುವ ಕಾರಣ, ಇದೇ ನೀರನ್ನೇ ದೊಡ್ಡ ಪ್ರಮಾಣದ ಅಡುಗೆ ಕಾರ್ಯಾಚರಣೆಗಳಿಗೆ ಅದನ್ನು ಬಳಸಿಕೊಳ್ಳುತ್ತಿರುವುದು ಅಭಿನಂದನಾರ್ಹವಾಗಿರುವುದಲ್ಲದೇ, ಇದೇ ನದಿಯು ಗಾಳೀ ಆಂಜನೇಯ ಸ್ವಾಮೀ ದೇವಸ್ಥಾನ ತಲುಪುವವರೆಗೂ ಆ ಪ್ರದೇಶದ ಸುತ್ತಮುತ್ತಲಿನ ಅಂತರ್ಜಲ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ.

1960 ಮತ್ತು 1970ರ ದಶಕದ ವರೆವಿಗೂ ವೃಷಭಾವತಿ ನದಿಯು ತಮ್ಮ ಪಾತ್ರದ ಸುಮಾರು 70 ಕೆರೆಗಳಿಗೆ ನೀರನ್ನು ಒದಗಿಸುವ ಮೂಲಕ ಜನರಿಗೆ ಕುಡಿಯಲು ಯೋಗ್ಯವಾದ ಮತ್ತು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದಲ್ಲದೇ, ಈ ನದಿ ಪಾತ್ರವನ್ನು ನೋಡಲು ಜನರು ಬರುವಂತಹ ಪ್ರೇಕ್ಷಣೀಯ ಸ್ಥಳವಾಗಿತ್ತು. 1980ರ ಮತ್ತು 1990ರ ದಶಕದಿಂದಾಚೆ ಪೀಣ್ಯ, ಯಶವಂತಪುರ ಮತ್ತು ಕುಂಬಳಗೋಡು ಪ್ರದೇಶಗಳಲ್ಲಿ ಭಾರೀ ಕೈಗಾರಿಕಾ ಕೇಂದ್ರಗಳು ಆರಂಭವಾದ ನಂತರ ಅ ಕಾರ್ಖಾನೆಗಳಿಂದ ಸಂಸ್ಕರಿಸದ ರಾಸಾಯನಿಕ ತ್ಯಾಜ್ಯವನ್ನು ನೇರವಾಗಿ ವೃಷಭಾವರಿ ನದಿಗೆ ಸೇರಿದ್ದು ಮತ್ತು ಬೆಂಗಳೂರಿನ ಒಳಚರಂಡಿ ಮಂಡಳಿಯೂ ಸಹಾ ಎಗ್ಗಿಲ್ಲದೇ ಬೆಳೆದ ನಗರದ ಸಾವಿರಾರು ವಸತಿ ಪ್ರದೇಶಗಳ ಕೊಳಚೆಯನ್ನು ಕೆಂಗೇರಿ ಬಳಿ ಇದೇ ನದಿಗೆ ಸಂಪರ್ಕಿಸಿದ್ದೇ ವೃಷಭಾವತಿಯ ನದಿಯ ಅವನತಿಗೆ ಕಾರಣವಾಗಿ, ಲಕ್ಷಾಂತರ ಜನರಿಗೆ ನಳ ನಳಿಸುವ ನೀರನ್ನು ಉಣಿಸುತ್ತಿದ್ದ ವೃಷಭಾವತಿ ನದಿ ಇಂದು ಕೆಂಗೇರಿ ಮೋರಿ ಎಂದೇ ಕುಪ್ರಸಿದ್ದಿಯಾಗಿದ್ದು, ಈ ಮೂರಿಯ ನೀರಿನಿಂದ ಹೊರಹೊಮ್ಮುವ ನೊರೆ ಮತ್ತು ದುರ್ವಾಸನೆಯು ಬೆಂಗಳೂರಿನ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆಯಲ್ಲದೇ ಅಂತರ್ಜಲವನ್ನು ಹದಗೆಡಿಸುವ ಮೂಲಕ ಪರೋಕ್ಷವಾಗಿ ಆ ಪ್ರದೇಶದ ಜನರ ಆರೋಗ್ಯದ ಮೇಲೆ ದೃಷ್ಪರಿಣಾಮವನ್ನು ಉಂಟು ಮಾಡುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ.

ಕಲುಶಿತಗೊಂಡಿರುವ ವೃಷಭಾವತಿ ನದಿಯನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ 2005ರಲ್ಲಿ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್ ಅವರು ವೃಷಭಾವತಿ ನದಿ ಕಣಿವೆಯ ಪುನರ್ರಚನೆ ಯೋಜನೆಯನ್ನು ಪ್ರಸ್ತಾಪಿಸಿ ಅದರ ಮೂಲಕ ನದಿಯ ಅಗಲೀಕರಣ ಮತ್ತು ಪ್ರವಾಹವನ್ನು ನಿವಾರಿಸಲು ಆಡ್ಡಗೋಡೆಗಳನ್ನು ಕಟ್ಟಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

2019 ರಲ್ಲಿ, ಬೆಂಗಳೂರಿನ ನಾಗರಿಕರು ನದಿಯ ದುಃಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ #SaveVrushabhavathi ಎಂಬ ಅಭಿಯಾನವನ್ನು ಪ್ರಾರಂಭಿಸಿ, ಸ್ವಯಂ ಪ್ರೇರಿತರಾಗಿ ಕೆಂಗೇರಿ ಉಪನಗರದಿಂದ ಬೆಂಗಳೂರು ವಿಶ್ವವಿದ್ಯಾಲಯ ಆವರಣದವರೆಗೆ ಸುಮಾರು 6 ಕಿ.ಮೀ ದೂರದ ಓಟವನ್ನು ಏರ್ಪಡಿಸಿ ಆ ಓಟದಲ್ಲಿ ಸುಮಾರು 12,000 ಸ್ವಯಂಸೇವಕರು ಭಾಗವಹಿಸುವ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಲ್ಲದೇ, ನದಿಯ ಪುನರುಜ್ಜೀನವನದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸದ ಸರ್ಕಾರ ಮತ್ತು ಸರ್ಕಾರೀ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವುದರಲ್ಲಿ ಸಫಲರಾದರು.

ಬಹು ಜನರ ಬಹುದಿನಗಳ ಹೋರಾಟದ ನಂತರ ಸರ್ಕಾರ ಮತ್ತು ರಾಷ್ಟ್ರೀಯ ಮಟ್ಟದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ವೃಷಭಾವರಿ ನದಿ ನೀರು ಸಂಸ್ಕರಣೆಗೆ ಸುಮಾರು. 1500 ಕೋಟಿಗಳ ಯೋಜನೆಯನ್ನು ರೂಪಿಸಿದರು. ಈ ಯೋಜನೆಯ ಭಾಗವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸರೋವರಗಳನ್ನು ತುಂಬಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ವೃಷಭಾವತಿ ಕಣಿವೆಯ ಒಳಚರಂಡಿ ಸಂಸ್ಕರಣಾ ಘಟಕಗಳಿಂದ (STP) ದ್ವಿತೀಯ-ಸಂಸ್ಕರಿಸಿದ ನೀರನ್ನು ಪಂಪ್ ಮಾಡಲು ₹2,240 ಕೋಟಿ ವೆಚ್ಚದ ಬೃಹತ್ ಲಿಫ್ಟ್ ನೀರಾವರಿ ಯೋಜನೆಯನ್ನು ಸಹಾ ಕೈಗೆತ್ತಿಕೊಳ್ಳುವ ಮೂಲಕ ವೃಷಭಾವತಿಯನ್ನು ಗತವೈಭವದ ಸ್ಥಿತಿಗೆ ಕೊಂಡೊಯ್ಯಲು ಸರ್ವ ಪ್ರಯತ್ನ ನಡೆದಿದೆ.

ವೃಷಭಾವತಿ ಆಗಲೀ ಅಥವಾ ಯಾವುದೇ ನದಿಯ ನೀರನ್ನು ಪುನರುಜ್ಜೀವನಗೊಳಿಸಬೇಕಾದರೆ, ಅದು ಕೇವಲ ಸರ್ಕಾರೀ ಯೋಜನೆಯಾಗದೇ ಅದರಲ್ಲಿ ಸಾರ್ವಜನಿಕರ ಪಾತ್ರವೂ ಅತ್ಯಗತ್ಯವಾಗಿದ್ದು, ಅದು ಕೇವಲ ಕೆಲವು ದಿನ, ವಾರ ಅಥವಾ ವರ್ಷಗಳ ಯೋಜನೆಯಾಗದೇ, ಅದೊಂದು ದೀರ್ಘಕಾಲೀನ ಅಗತ್ಯವಿರುವ ನಿರಂತರ ವ್ಯವಸ್ಥಿತ ಯೋಜನೆಯಾಗಬೇಕು, ವೃಷಭಾವತಿ ನದಿಯ ದಡದಲ್ಲಿ ನೆಲೆಸಿರುವ ಪ್ರಮುಖ ಸಂಸ್ಥೆಗಳು ಮತ್ತು ಕಂಪನಿಗಳು ತಮ್ಮ ತ್ರಾಜ್ಯವನ್ನು ನೇರವಾಗಿ ನದಿಗೆ ಹಾಯಿಸದೇ, ತಮ್ಮ ತಮ್ಮಲೇ ಸಣ್ಣ ಪ್ರಮಾಣದ ತ್ಯಾಜ್ಯನೀರಿನ ಸಂಸ್ಕರಣೆಯನ್ನು ಅಳವಡಿಸಿಕೊಂಡು ಅಲ್ಲಿಂದ ಸಂಸ್ಕರಿಸಿದ ನೀರನ್ನು ಮಾತ್ರವೇ ನದಿಗೆ ಹರಿಸುವಂತಾಗ ಬೇಕು.

ಇದಕ್ಕೆ ಪೂರಕ ಎನ್ನುವಂತೆ ಕರೋನ ಲಾಕ್‌ಡೌನ್‌ ಸಂಧರ್ಭದಲ್ಲಿ ಬಹುತೇಕ ಕಾರ್ಖಾನೆಗಳು ಮುಚ್ಚಿದ್ದ ಪರಿಣಾಮ ಅವುಗಳ ತ್ಯಾಜ್ಯವು ವೃಷಭಾವತಿ ನದಿಗೆ ಸೇರುವುದು ಕಡಿಮೆಯಾಗಿದ್ದ ಪರಿಣಾಮ ನದಿಯಲ್ಲಿ ಕಂಡು ಬರುತ್ತಿದ್ದ ನೊರೆ ತೀವ್ರವಾಗಿ ಕದಿಮೆಯಾಗಿ ಯಾವುದೇ ವಿಷಕಾರಿ ನೊರೆ ಇಲ್ಲದ, ಸ್ವಚ್ಛವಾಗಿ ಹರಿಯುವ ವೃಷಭಾವತಿ ನದಿಯ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದನ್ನು ಗಮನಿಸಿದಾಗ, ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ, ಎಲ್ಲರೂ ಗಂಭೀರವಾಗಿ ಎಚ್ಚೆತ್ತು ಕೊಂಡಲ್ಲಿ ಮತ್ತೆ ವೃಷಭಾವತಿ ನದಿಯನ್ನು ಶುಧ್ಧೀಕರಿಸಬಹುದಾಗಿದೆ.

ಅದೇ ರೀತಿಯಾಗಿ ವೃಷಭಾವತಿ ನದಿ ಪಾತ್ರದ ಸುತ್ತಮುತ್ತಲಿನ ಬಡಾವಣೆಗಳ ಕೊಳಚೆ ನೀರನ್ನೂ ಸಹಾ ನೇರವಾಗಿ ನದಿಗೆ ಸೇರಿಸದೇ, ಮೊದಲು ಕೊಳಚೆ ನೀರು ಸಂಸ್ಕರಣಾ ಘಟಕಗಳಲ್ಲಿ ತ್ಯಾಜ್ಯ ಮತ್ತು ಕೊಳಚೆ ನೀರನ್ನು ಸಂಸ್ಕರಿಸಿ ನಂತರ ನದಿಗೆ ಸೇರಿಸಿದಲ್ಲಿ ನದಿಯ ನೀರೂ ಸಹಾ ಕೃಷಿ ಚಟುವಟಿಕೆಗಳಿಗೆ ಬಳಸಲು ಯೋಗ್ಯವಾಗುತ್ತದೆ ಮತ್ತು ತನ್ಮೂಲಕ ಅಂತರ್ಜಲ ಹೆಚ್ಚಾಗುವ ಪರಿಣಾಮ ಕುಡಿಯಲು ಯೋಗ್ಯವಾದ ನೀರೂ ಸಹಾ ಲಭಿಸುವಂತಾಗುತ್ತದೆ.

ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿ ಇಟ್ಟು ಕೊಂಡೇ ಸರ್ಕಾರವು ವೃಷಭಾವತಿ ನದಿ ಪಾತ್ರದಲ್ಲಿಯೇ ಇರುವ ಬಿಡದಿ ಮತ್ತು ಬೈರಮಂಗಲದ ಕೆರೆಗಳಿಗೆ ವೃಷಭಾವತಿ ನದಿಯಿಂದ ಶುಧ್ಧೀಕರಿಸಿದ ನೀರನ್ನು ಹರಿಸುವ ಯೋಜನೆಯನ್ನು ರೂಪಿಸಿದ್ದು, ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ಕುಂದುಬಾರದಂತೆ ಉತ್ತಮವಾದ ನೀರನ್ನು ಆ ಕೆರೆಗಳಿಗೆ ತುಂಬಿಸುವ ಮೂಲಕ ವೃಷಭಾವತಿ ನದಿ ಮತ್ತು ಬೈರಮಂಗಲ ಸರೋವರವನ್ನು ಸ್ವಚ್ಛಗೊಳಿಸಿ ಉತ್ತಮವದ ಪರಿಸರವನ್ನು ರೂಪಿಸಲು ಹರ ಸಾಹಸ ಪಡುತ್ತಿದೆ.

ಬೆಂಗಳೂರು ತನ್ನ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕಾದರೆ, ತನ್ನ ಕೆರೆಗಳು ಮತ್ತು ವೃಷಭಾವತಿಯಂತಹ ಐತಿಹಾಸಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವುದು ಅನಿವಾರ್ಯವಾಗಿದೆ. ಒಮ್ಮೆ ನಗರದ ಜೀವನಾಡಿಯಾಗಿದ್ದ ವೃಷಭಾವತಿ ನದಿ ಇಂದು ಮಾಲಿನ್ಯದ ಹೊರೆ ಹೊತ್ತಿದ್ದರೂ, ಸರಿಯಾದ ಸಂರಕ್ಷಣೆ ಮತ್ತು ಪುನಶ್ಚೇತನ ಯೋಜನೆಗಳ ಮೂಲಕ ಮತ್ತೆ ಜೀವಂತಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು ಅದಕ್ಕೆ ಕೇವಲ ಸರ್ಕಾರವನ್ನು ಮಾತ್ರಾ ಹೊಣೆಗಾರರನ್ನಾಗಿ ಮಾಡದೇ, ನಾವೂ ನೀವು ಕೈಜೋಡಸಲೇ ಬೇಕಾದ ಅನಿವಾರ್ಯ ಸಂಧರ್ಭ ಬಂದಿದೆ ಎಂದರೂ ತಪ್ಪಾಗದು. ಸರ್ಕಾರೀ ಯೋಜನೆಗಳು ಒಂದೆಡೆಯಾದರೆ, ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಮೂಲಕ ಅನಗತ್ಯವಾಗಿ ತ್ರಾಜ್ಯಗಳನ್ನು ನದಿಗೆ ಸೇರುವುದನ್ನು ತಡೆಗಟ್ಟುವಂತೆ ಮಾಡಿದರೆ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಕೆಂಗೇರಿ ಮೋರಿ ಎಂದು ಕುಖ್ಯಾತಿ ಪಡೆದಿರುವ ವೃಷಭಾವತಿಯನ್ನು ಮತ್ತೆ ನಳ ನಳಿಸುವಂತೆ ಕಾಣಹುದು ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ