ಹಬ್ಬದ ಸಂದರ್ಭಕ್ಕೆ ಬಾಯಲ್ಲಿ ನೀರೂರಿಸುವ ಬಗೆಬಗೆಯ ರಸಗವಳ ಮಾಡಿ ಸವಿದು ನಿಮ್ಮ ದೀಪಾವಳಿ ಎಂಜಾಯ್ಮಾಡಿ!

ಸ್ಪೆಷಲ್ ಟರ್ನಿಪ್ಪಲ್ಯ

ಸಾಮಗ್ರಿ : 500 ಗ್ರಾಂ ಟರ್ನಿಪ್‌, 1 ಕಪ್‌ ಸಣ್ಣಗೆ ಹೆಚ್ಚಿದ ಹುಳಿ ಟೊಮೇಟೊ, ಒಂದಿಷ್ಟು ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಹಸಿ ಶುಂಠಿ, ಬೆಳ್ಳುಳ್ಳಿ, ಹೆಚ್ಚಿಕೊಂಡ 4-5 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಎಲ್.ಜಿ. ಇಂಗು ಒಗ್ಗರಣೆಗೆ ಎಣ್ಣೆ ಹಾಗೂ ಇತರೆ ಪದಾರ್ಥ.

ವಿಧಾನ : ಟರ್ನಿಪ್‌ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಒಂದು ದಪ್ಪ ತಳದ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಎಲ್.ಜಿ. ಇಂಗು, ಕ/ಉ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ನಂತರ ತುರಿದ ಟರ್ನಿಪ್‌ ಸೇರಿಸಿ ಬಾಡಿಸಬೇಕು. ಅಗತ್ಯವೆನಿಸಿದರೆ ತುಸು ನೀರು ಚಿಮುಕಿಸಿ, ಮುಚ್ಚಳ ಮುಚ್ಚಿರಿಸಿ ಬೇಯಲು ಬಿಡಿ. ನಂತರ ಇದಕ್ಕೆ ಉಪ್ಪು ಖಾರ ಉಳಿದ ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ. ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು, ಪುದೀನಾ ಉದುರಿಸಿ ಸವಿಯಲು ಕೊಡಿ.

vegitable-triet-2

ಪಾಲಕ್ಕೋಫ್ತಾ ಕರೀ

ಕೋಫ್ತಾಗಾಗಿ ಮೂಲ ಸಾಮಗ್ರಿ : 2 ಕಂತೆ ಹೆಚ್ಚಿದ ಪಾಲಕ್‌ ಸೊಪ್ಪು, 5-6 ಹೆಚ್ಚಿದ ಈರುಳ್ಳಿ, ತುಸು ಹೆಚ್ಚಿದ ಹಸಿ ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, 4 ಕಪ್‌ ಕಡಲೆಹಿಟ್ಟು, ಕರಿಯಲು ಎಣ್ಣೆ.

ಕರೀಗಾಗಿ ಸಾಮಗ್ರಿ : 2 ಹೆಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪುಖಾರ, ಎಲ್.ಜಿ. ಇಂಗು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಧನಿಯಾಪುಡಿ, ಅರಿಶಿನ, ಗರಂಮಸಾಲ, ಟೊಮೇಟೊ ಪೇಸ್ಟ್, ಗೋಡಂಬಿ ಪೇಸ್ಟ್, 4 ಚಮಚ ತುಪ್ಪ, ಅಲಂಕರಿಸಲು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಪಾಲಕ್‌ ಸೊಪ್ಪು ಶುಚಿಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ಇದಕ್ಕೆ ಎಲ್.ಜಿ. ಇಂಗು ಹಾಗೂ ಉಳಿದೆಲ್ಲ ಕೋಫ್ತಾ ಸಾಮಗ್ರಿ ಬೆರೆಸಿ, ಕನಿಷ್ಠ ನೀರು ಬಳಸಿ ಪಕೋಡಾ ಮಿಶ್ರಣದಂತೆ ಕಲಸಿಡಿ. ನಂತರ ಇದರಿಂದ ಸಣ್ಣ ಗಾತ್ರದ ಪಕೋಡಾ ತರಹ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ನಂತರ ಗ್ರೇವಿಗಾಗಿ, ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ. ನಂತರ ಎಲ್.ಜಿ. ಇಂಗು ಹಾಗೂ ಒಂದೊಂದಾಗಿ ಎಲ್ಲಾ ಕರೀ ಸಾಮಗ್ರಿ ಹಾಕಿ ಕೆದಕಬೇಕು. ಅರ್ಧ ಕಪ್‌ ನೀರು ಬೆರೆಸಿ ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕುದಿಸಿರಿ. ನಂತರ ಇದಕ್ಕೆ ಕರಿದ ಕೋಫ್ತಾ ಬೆರೆಸಿ ಮತ್ತಷ್ಟು ಕುದಿಸಿ ಕೆಳಗಿಳಿಸಿ, ಕೊ.ಸೊಪ್ಪು ಹಾಕಿ ಅಲಂಕರಿಸಿ, ಚಪಾತಿ/ಪೂರಿ ಜೊತೆ ಸವಿಯಿರಿ.

vegitable-triet-3

ಸ್ಪೆಷಲ್ ಮೂಲಂಗಿ ಪಲ್ಯ

ಸಾಮಗ್ರಿ : ತಾಜಾ ಸೊಪ್ಪಿನ ಸಹಿತ 500 ಗ್ರಾಂ ಮೂಲಂಗಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಓಮ, ತೆಂಗಿನ ತುರಿ, ಹೆಚ್ಚಿದ ಹಸಿ ಮೆಣಸು, ನಿಂಬೆರಸ, ಒಗ್ಗರಣೆಗೆ ಎಣ್ಣೆ ಮತ್ತಿತರ ಸಾಮಗ್ರಿ.

ವಿಧಾನ : ಸೊಪ್ಪು, ಮೂಲಂಗಿ ನೀಟಾಗಿ ಶುಚಿಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕ/ಉ ಬೇಳೆ, ಕರಿಬೇವು, ಎಲ್.ಜಿ. ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಮೊದಲು ಹಸಿಮೆಣಸು, ಮೂಲಂಗಿ, ಆಮೇಲೆ ಸೊಪ್ಪು ಹಾಕಿ ಹದನಾಗಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಓಮ, ತೆಂಗಿನತುರಿ ಸೇರಿಸಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ನಿಂಬೆಹಣ್ಣು ಹಿಂಡಿಕೊಂಡು, ರೊಟ್ಟಿ/ಚಪಾತಿ ಜೊತೆ ಸವಿಯಲು ಕೊಡಿ.

vegitable-triet-4

ವೆಜ್ಸೋಯಾ ಸ್ಪೆಷಲ್

ಸಾಮಗ್ರಿ : ಅರ್ಧರ್ಧ ಕಪ್‌ ಸೋಯಾ ಗ್ರಾನ್ಯುಯೆಲ್ಸ್, ಹಸಿ ಬಟಾಣಿಕಾಳು, 3-4 ಚಮಚ ಟೊಮೇಟೊ ಪೇಸ್ಟ್, 1-2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಈರುಳ್ಳಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್. ನಿಂಬೆರಸ, ಧನಿಯಾಪುಡಿ, ಅರಿಶಿನ, ಮ್ಯಾಗಿ ಮಸಾಲ, ಒಗ್ಗರಣೆಗೆ ಎಣ್ಣೆ ಹಾಗೂ ಇತರೆ ಪದಾರ್ಥ, ಹೆಚ್ಚಿದ ಕೊ.ಸೊಪ್ಪು.

ವಿಧಾನ : 3 ಕಪ್‌ ನೀರಿಗೆ ತುಸು ನಿಂಬೆಹಣ್ಣು ಹಿಂಡಿಕೊಂಡು, ಉಪ್ಪು, ಸೋಯಾ ಗ್ರಾನ್ಯುಯೆಲ್ಸ್ ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಹೆಚ್ಚುವರಿ ನೀರನ್ನು ಸೋಸಿ ತೆಗೆದುಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕರಿಬೇವಿನ ಸಹಿತ ಎಲ್.ಜಿ. ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಉಳಿದ ಸಾಮಗ್ರಿ ಒಂದೊಂದೇ ಸೇರಿಸುತ್ತಾ ಎಲ್ಲವನ್ನೂ ಹದನಾಗಿ ಬಾಡಿಸಿ. ನಂತರ ಉಪ್ಪು, ಖಾರ, ಇತರೆ ಮಸಾಲೆ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಸೋಯಾ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಬೇಕು. ಅಗತ್ಯವೆನಿಸಿದರೆ ನೀರು ಚಿಮುಕಿಸಿ, ಮುಚ್ಚಳ ಮುಚ್ಚಿರಿಸಿ ಬೇಯಿಸಿ. ಕೊನೆಯಲ್ಲಿ ಕೊ.ಸೊಪ್ಪು ಉದುರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

vegitable-triet-5

ಬಟಾಣಿ ಹೂಕೋಸಿನ ಕೋಫ್ತಾ

ಮೂಲ ಸಾಮಗ್ರಿ : ಶುಚಿಗೊಳಿಸಿ ನೀಟಾಗಿ ತುರಿದುಕೊಂಡ 1 ದೊಡ್ಡ ಹೂಕೋಸು, 1 ಕಪ್‌ ಹಸಿ ಬಟಾಣಿಕಾಳು, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಶುಂಠಿ, ಕೊ.ಸೊಪ್ಪು, ಕರಿಬೇವು, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಅರಿಶಿನ, ಗರಂಮಸಾಲ, ಧನಿಯಾಪುಡಿ, 1 ಕಪ್‌ ಕಡಲೆಹಿಟ್ಟು, ತುಸು ಅಕ್ಕಿಹಿಟ್ಟು ಕರಿಯಲು ಎಣ್ಣೆ.

ಗ್ರೇವಿಗಾಗಿ ಸಾಮಗ್ರಿ : 1 ಕಪ್‌ ಈರುಳ್ಳಿ ಪೇಸ್ಟ್, ಹೆಚ್ಚಿದ 1-2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಅರಿಶಿನ, ಧನಿಯಾಪುಡಿ, ಗರಂಮಸಾಲ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೋ ಪೇಸ್ಟ್, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು.

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಶುಂಠಿ-ಹಸಿಮೆಣಸಿನ ಚೂರು ಹಾಕಿ ಬಾಡಿಸಿ. ನಂತರ ಹೂಕೋಸು, ಅರಿಶಿನ ಹಾಕಿ ಚೆನ್ನಾಗಿ ಬಾಡಿಸಿ. ಜೊತೆಗೆ ಬಟಾಣಿ ಸೇರಿಸಿ, ನೀರು ಚಿಮುಕಿಸಿ ಬೇಯಲು ಬಿಡಿ. ಇದಕ್ಕೆ ಉಪ್ಪು, ಖಾರ, ಎಲ್.ಜಿ. ಇಂಗು, ಉಳಿದ ಮಸಾಲೆ ಹಾಕಿ ಕೆದಕಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಎರಡೂ ಬಗೆ ಹಿಟ್ಟು ಬೆರೆಸಿ, ಪಕೋಡ ಮಿಶ್ರಣದ ಹದಕ್ಕೆ ಕಲಸಿಟ್ಟು, ಸಣ್ಣ ಸಣ್ಣ ಉಂಡೆಗಳಾಗಿಸಿ. ಇವನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಗ್ರೇವಿಗಾಗಿ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಉಪ್ಪು, ಖಾರ, ಎಲ್.ಜಿ. ಇಂಗು, ಉಳಿದೆಲ್ಲ ಮಸಾಲೆ, ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಕೊನೆಯಲ್ಲಿ ಕೊ.ಸೊಪ್ಪು, ಕರಿಬೇವು, ಪುದೀನಾ ಸೇರಿಸಿ, ಅರ್ಧ ಲೋಟ ನೀರು ಬೆರೆಸಿ ಗ್ರೇವಿ ಗಟ್ಟಿಯಾಗಿ ಕುದಿಯಲು ಬಿಡಿ. ಅದರಲ್ಲಿ ಈ ಕರಿದ ಕೋಫ್ತಾ ಬೆರೆಸಿ, 2 ನಿಮಿಷ ಕುದಿಸಿ ಕೆಳಗಿಳಿಸಿ. ಚಪಾತಿ, ಪೂರಿ ಜೊತೆ ಸವಿಯಲು ಕೊಡಿ.

AA-makka-papdi-chaat

ಸ್ಪೆಷಲ್ ಟೇಸ್ಟಿ ಚಾಟ್

ಸಾಮಗ್ರಿ : 1 ಕಪ್‌ ಗೋಧಿಹಿಟ್ಟು, ಅರ್ಧರ್ಧ ಕಪ್‌ ಮೈದಾ, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಪುದೀನಾ ಚಟ್ನಿ, ಶುಂಠಿ ಪುಡಿ, ಸ್ವೀಟ್‌ ಕಾರ್ನ್‌, 1-2 ಬೆಂದ ಆಲೂ (ಸಿಪ್ಪೆ ಸುಲಿದ), 1-2 ಈರುಳ್ಳಿ, 1-2 ಟೊಮೇಟೊ, 2-3 ಹಸಿಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ, ತುಸು ತುಪ್ಪ.

ವಿಧಾನ : ಗೋಧಿಹಿಟ್ಟು, ಮೈದಾ, ಚಿಟಕಿ ಉಪ್ಪು ಸೇರಿಸಿ, ನೀರು ಬೆರೆಸಿ, ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ಇದನ್ನು ಚಪಾತಿಗಳಾಗಿ ಲಟ್ಟಿಸಿ, ಸಣ್ಣ ವಜ್ರಾಕೃತಿಯಲ್ಲಿ ಬರುವಂತೆ ಕತ್ತರಿಸಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಇವನ್ನು ದೊಡ್ಡ  ಪ್ಲೇಟುಗಳಲ್ಲಿ ಜೋಡಿಸಿ, ಇದರ ಮೇಲೆ ಮಸೆದ ಆಲೂ, ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಕೊ.ಸೊಪ್ಪು ಉದುರಿಸಿ, ಎಲ್.ಜಿ. ಇಂಗು ಹಾಕಿ ಉಳಿದೆಲ್ಲ ಸಾಮಗ್ರಿ ನೀಟಾಗಿ ಹರಡಿಕೊಳ್ಳಿ. ಊಟದ ಜೊತೆ ಸವಿಯಲು ಕೊಡಿ.

Cookry-Oct-diwali-6

ಕಲಾಕಂದ್

ಸಾಮಗ್ರಿ : 8 ಕಪ್‌ ಹಾಲು, 1 ಕಪ್‌ ನೀಟಾಗಿ ತುರಿದ ಪನೀರ್‌, 4-5 ಕಪ್‌ ಸಕ್ಕರೆ, ಅರ್ಧ ಕಪ್‌ ಫ್ರೆಶ್‌ ಕ್ರೀಂ, ಮೇಲೆ ಉದುರಿಸಲು ತುಪ್ಪದಲ್ಲಿ ಹುರಿದ ಒಂದಿಷ್ಟು ಡ್ರೈ ಫ್ರೂಟ್ಸ್.

ವಿಧಾನ : ಹಾಲು ಕಾಯಲು ಇರಿಸಿ. ನಂತರ ಮಂದ ಉರಿಯಲ್ಲಿ ಇದನ್ನು ಕುದಿಸುತ್ತಾ ಅರ್ಧದಷ್ಟು ಹಿಂಗಿಸಿ. ನಂತರ ಕೆಳಗಿಳಿಸಿ ಆರಲು ಬಿಡಿ. ನಂತರ ಇದಕ್ಕೆ ತುರಿದ ಪನೀರ್‌ ಸೇರಿಸಿ, ಸೌಟಿನಿಂದ ಚೆನ್ನಾಗಿ ಮಸೆಯಿರಿ. ನಂತರ ಇದನ್ನು ಮತ್ತೆ ಒಲೆ ಮೇಲಿರಿಸಿ, ಫ್ರೆಶ್‌ ಕ್ರೀಂ ಬೆರೆಸಿ, ಮತ್ತೆ ಮಂದ ಉರಿಯಲ್ಲಿ ಕುದಿಸಿರಿ. ಇದು ಖೋವಾ ತರಹ ಗಟ್ಟಿಯಾದಾಗ, ಇದಕ್ಕೆ ಸಕ್ಕರೆ ಸೇರಿಸಿ ಗೊಟಾಯಿಸಿ. ಇದನ್ನು ಮಂದ ಉರಿಯಲ್ಲಿ ಕೈಯಾಡಿಸುತ್ತಾ, ಬರ್ಫಿ ತರಹ ಗಟ್ಟಿ ಆಗಿಸಿ. ನಂತರ ಕೆಳಗಿಳಿಸಿ. ಒಂದು ಪ್ಲೇಟ್‌ ನಲ್ಲಿ ತುಪ್ಪ ಸವರಿ ಇದನ್ನು ಅದರ ಮೇಲೆ ಹರಡಿರಿ. ಇದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ. ಬರ್ಫಿ ಗಟ್ಟಿಯಾದಾಗ ನಿಧಾನವಾಗಿ ಚೌಕಾಕಾರದಲ್ಲಿ ಕತ್ತರಿಸಿ, ಗಾಳಿಯಾಡದ ಡಬ್ಬಕ್ಕೆ ತುಂಬಿಸಿಟ್ಟು, ಹಬ್ಬದ ದಿನ ಅತಿಥಿಗಳೊಂದಿಗೆ ಸವಿಯಿರಿ.

Cookry-Oct-diwali-7

ಸ್ಪೆಷಲ್ ಬ್ರೆಡ್ಪೇಡಾ

ಸಾಮಗ್ರಿ : 4-5 ಸ್ಲೈಸ್‌ ಬ್ರೆಡ್‌, ಅರ್ಧ ಕಪ್‌ ಕಂಡೆನ್ಸ್ಡ್ ಮಿಲ್ಕ್, ಅದರಲ್ಲಿ ಅರ್ಧದಷ್ಟು ಕರಗಿದ ಚಾಕಲೇಟ್‌, 1 ಗಿಟುಕು ಕೊಬ್ಬರಿ ತುರಿ.

ವಿಧಾನ : ಬ್ರೆಡ್‌ ಪೀಸ್‌ ಮಿಕ್ಸಿಗೆ ಹಾಕಿ ತರಿತರಿ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಇದನ್ನು ಅದಕ್ಕೆ ಹಾಕಿ ಹುರಿಯಿರಿ. ನಂತರ ಇದಕ್ಕೆ ಮಂದ ಉರಿಯಲ್ಲಿ ಕಂಡೆನ್ಸ್ಡ್ ಮಿಲ್ಕ್, ಕರಗಿದ ಚಾಕಲೇಟ್‌ ಹಾಕಿ ಚೆನ್ನಾಗಿ ಕೈಯಾಡಿಸಿ. ಕೆಳಗಿಳಿಸಿ ಆರಿದ ನಂತರ, ಕೊಬ್ಬರಿ ತುರಿಯಲ್ಲಿ ಹೊರಳಿಸಿ, ಚಿತ್ರದಲ್ಲಿರುವಂತೆ ಜೋಡಿಸಿ (ಬೇಕೆನಿಸಿದರೆ ಮೇಲೆ 1-1 ಡ್ರೈ ಫ್ರೂಟ್ ಸಿಗಿಸಿಡಿ).

Cookry-Oct-diwali-8

ಮಿಲ್ಕ್ ಕೇಕ್

ಸಾಮಗ್ರಿ : 1 ಲೀ. ಕ್ರೀಂಯುಕ್ತ ಗಟ್ಟಿ ಹಾಲು, 1 ಕಪ್‌ ಸಕ್ಕರೆ, 1 ದೊಡ್ಡ ಚಮಚ ನಿಂಬೆರಸ, ತುಸು ಏಲಕ್ಕಿ ಪುಡಿ.

ವಿಧಾನ : ಭಾರಿ ತಳದ ಬಾಣಲೆಯಲ್ಲಿ ಮೊದಲು ಹಾಲು ಕಾಯಿಸಿ. ಕಾದ ನಂತರ ಮಂದ ಉರಿ ಮಾಡಿ, ಅದನ್ನು ಅರ್ಧ ಭಾಗ ಹಿಂಗಿಸಿ. ನಂತರ ಇದಕ್ಕೆ ತುಸು ನೀರು ಬೆರೆಸಿದ ನಿಂಬೆರಸ ಸೇರಿಸಿ. ಮತ್ತೆ 5 ನಿಮಿಷ ಹಾಗೇ ಮಂದ ಉರಿ ಇರಲಿ. ನಂತರ ಹಾಲಲ್ಲಿ ಮತ್ತಷ್ಟು ಕೈಯಾಡಿಸಿ. ಸಾಕಷ್ಟು ಗಟ್ಟಿಯಾದಾಗ, ಇದಕ್ಕೆ ಸಕ್ಕರೆ ಸೇರಿಸಿ, ಮತ್ತೆ ಕೈ ಚಲಾಯಿಸಿ. ನಂತರ ಏಲಕ್ಕಿ ಪುಡಿ ಸೇರಿಸಿ. ಮಿಶ್ರಣ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆ ಮೇಲೆ ಹರಡಿಕೊಳ್ಳಿ. ನಂತರ ಚಿತ್ರದಲ್ಲಿರುವಂತೆ ಚೌಕಾಕಾರದಲ್ಲಿ ಕತ್ತರಿಸಿ, ಅತಿಥಿಗಳಿಗೆ ಸವಿಯಲು ಕೊಡಿ.

Cookry-Oct-diwali-9

ಮೈದಾ ಬರ್ಫಿ

ಸಾಮಗ್ರಿ : ಅರ್ಧ ಲೀ. ಗಟ್ಟಿ ಕೆನೆಹಾಲು, ಮುಕ್ಕಾಲು ಕಪ್‌ ಸಕ್ಕರೆ, ಅರ್ಧ ಕಪ್‌ ಮೈದಾ, 2-3 ಚಮಚ ತುಪ್ಪ, ತುಪ್ಪದಲ್ಲಿ ಹುರಿದ ಒಂದಿಷ್ಟು ಡ್ರೈ ಫ್ರೂಟ್ಸ್.

ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಮೈದಾ ಸೇರಿಸಿ, ಮಂದ ಉರಿಯಲ್ಲಿ ಹುರಿಯಬೇಕು. ನಂತರ ಪಕ್ಕದಲ್ಲಿ ಹಾಲು ಕಾಯಿಸಿ, ಅರ್ಧದಷ್ಟು ಹಿಂಗಿಸಿಕೊಳ್ಳಿ. ನಂತರ ಅದನ್ನು ಮೃದುವಾಗಿ ಬೆರೆಸಿ, ಗಂಟಾಗದಂತೆ ಕೈಯಾಡಿಸಿ. ಆಮೇಲೆ ಸಕ್ಕರೆ ಸೇರಿಸಿ ಕೆದಕಬೇಕು. ಮಿಶ್ರಣ ಮೈಸೂರುಪಾಕಿನಂತಾದಾಗ, ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ, ಆರಿದ ನಂತರ ಚಿತ್ರದಲ್ಲಿರುವಂತೆ ಕತ್ತರಿಸಿ, ಡ್ರೈಫ್ರೂಟ್ಸ್ ನಿಂದ ಅಲಂಕರಿಸಿ, ಸವಿಯಲು ಕೊಡಿ.

Cookry-Oct-diwali-10

ಬೇಸನ್ಬಾದಾಮಿ ಬರ್ಫಿ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು (ಬೇಸನ್‌), ಅರ್ಧ ಕಪ್‌ ಬಾದಾಮಿಯ ಪುಡಿ, 1 ಕಪ್‌ ಸಕ್ಕರೆ, ಅರ್ಧ ಸೌಟು ತುಪ್ಪ, ಅಲಂಕರಿಸಲು ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿಕೊಂಡು, ಬೇಸನ್‌ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಇದಕ್ಕೆ ಬಾದಾಮಿ ಪುಡಿ ಸೇರಿಸಿ ಹುರಿಯಬೇಕು. 2-3 ನಿಮಿಷ ಬಿಟ್ಟು ಕೆಳಗಿಳಿಸಿ. ಪಕ್ಕದ ಒಲೆಯಲ್ಲಿ ಸಕ್ಕರೆಗೆ ನೀರು ಬೆರೆಸಿ, ಒಂದೆಳೆಯ ಪಾಕ ತಯಾರಿಸಿ. ನಂತರ ಈ ಪಾಕಕ್ಕೆ ಬಾದಾಮಿ ಮಿಶ್ರಣ ಬೆರೆಸಿರಿ. ನಡುನಡುವೆ ತುಪ್ಪ ಬೆರೆಸುತ್ತಾ, ಮೈಸೂರುಪಾಕ್‌ ನಂತೆ ಮಾಡಿರಿ. ನಂತರ ಕೆಳಗಿಳಿಸಿಕೊಂಡು, ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ ಆರಲು ಬಿಡಿ. ನಂತರ ಚಿತ್ರದಲ್ಲಿರುವಂತೆ ವಜ್ರಾಕೃತಿಯಲ್ಲಿ ಕತ್ತರಿಸಿ, ಫ್ರಿಜ್‌ ನಲ್ಲಿರಿಸಿ ಹೊರ ತೆಗೆದು, ಸವಿಯಲು ಕೊಡಿ.

Cookry-Oct-diwali-11

ರವಾ ರೋಲ್

ಸಾಮಗ್ರಿ : ಅರ್ಧರ್ಧ ಕಪ್‌ ರವೆ, ಹಾಲು, ಅರ್ಧ ಕಪ್‌ ಸಕ್ಕರೆ, ಅರ್ಧ ಕಪ್‌ ಖೋವಾ, ತುಸು ಕಂಡೆನ್ಸ್ಡ್ ಮಿಲ್ಕ್.

ವಿಧಾನ : ಬಾಣಲೆಯಲ್ಲಿ ಹಾಲು ಕಾಯಿಸಿ. ನಂತರ ಮಂದ ಉರಿಯಲ್ಲಿ ಅರ್ಧವನ್ನು ಅರ್ಧದಷ್ಟು ಹಿಂಗಿಸಿ. ಇದಕ್ಕೆ ಹುರಿದ ರವೆ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ಕೆಳಗಿಳಿಸಿ ಇದರಿಂದ ಉಂಡೆ ಮಾಡಿ. ಒಂದು ಪ್ಲಾಸ್ಟಿಕ್‌ ಶೀಟ್‌ ಮೇಲೆ ಇದನ್ನು ಇರಿಸಿ, ಅದರ ಮೇಲೆ ಇನ್ನೊಂದು ಶೀಟ್‌ ಇರಿಸಿ, ತೆಳುವಾಗಿ ಬರುವಂತೆ ಲಟ್ಟಿಸಿ. ಇದರಿಂದ ಒಂದೂವರೆ ಇಂಚಿನಷ್ಟು ಪಟ್ಟಿ ಕತ್ತರಿಸಿ. ಕಂಡೆನ್ಸ್ಡ್ ಮಿಲ್ಕ್ ಗೆ ಸಕ್ಕರೆ, ಖೋವಾ ಬೆರೆಸಿ ಕದಡಿಕೊಳ್ಳಿ. ರವೆ ಪಟ್ಟಿಗಳ ಮೇಲೆ ಇದನ್ನು ಸವರಬೇಕು. ಇದರಿಂದ ಚಿತ್ರದಲ್ಲಿರುವಂತೆ ಸುರುಳಿ ಸುತ್ತಿ, 1 ಗಂಟೆ ಕಾಲ ಫ್ರಿಜ್‌ ನಲ್ಲಿರಿಸಿ ನಂತರ ಸವಿಯಲು ಕೊಡಿ.

Cookry-Oct-diwali-12

ಪ್ಲೇನ್ಕೇಕ್

ಸಾಮಗ್ರಿ : 2 ಕಪ್‌ ರೀಫೈಂಡ್‌ ಎಣ್ಣೆ, 3 ಕಪ್‌ ಸಕ್ಕರೆ, 4 ಕಪ್‌ ಮೈದಾ, 6 ಮೊಟ್ಟೆ, ತುಸು ಬೇಕಿಂಗ್‌ ಪೌಡರ್‌, 5 ಚಮಚ ವೆನಿಲಾ ಎಸೆನ್ಸ್.

ವಿಧಾನ : ಒಂದು ದೊಡ್ಡ ಬೇಸನ್ನಿಗೆ ಜರಡಿಯಾಡಿದ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ನೀಟಾಗಿ ಫೋಲ್ಡ್‌ ಮಾಡಿ. ಮೊಟ್ಟೆ ಒಡೆದು ಗೊಟಾಯಿಸಿಕೊಂಡು ಇದಕ್ಕೆ ಬೆರೆಸಿ. ಹ್ಯಾಂಡ್‌ ಬ್ಲೆಂಡರ್‌ ನಿಂದ ನೀಟಾಗಿ ಬ್ಲೆಂಡ್‌ ಮಾಡಿ. ಓವನ್‌ ನ್ನು 180 ಡಿಗ್ರಿ ಪ್ರೀಹೀಟ್‌ ಮಾಡಿ. ಕೇಕ್‌ ಟಿನ್ನಿಗೆ ಬಟರ್‌ ಪೇಪರ್‌ ಹರಡಿ, ಅದಕ್ಕೆ ಈ ಮಿಶ್ರಣವನ್ನು ಸಮನವಾಗಿ ಹರಡಿಕೊಳ್ಳಿ. ಸುಮಾರು 40 ನಿಮಿಷಗಳ ಕಾಲ, 180 ಡಿಗ್ರಿ ಶಾಖದಲ್ಲಿ ಇದನ್ನು ಬೇಕ್‌ ಮಾಡಿ, ತುಸು ದೊಡ್ಡ ಕೇಕ್‌ ಆದಕಾರಣ ಅಷ್ಟು ಹೊತ್ತು ಬೇಕು. ಸ್ಟೀಲ್ ಕಡ್ಡಿಯಿಂದ ಚುಚ್ಚಿ ನೋಡಿ, ಬೇಕ್‌ ಆಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ವೈವಿಧ್ಯತೆಗಾಗಿ ಇದಕ್ಕೆ ಚಾಕಲೇಟ್‌ ಚಿಪ್ಸ್, ಇನ್ ಸ್ಟೆಂಟ್‌ ಕಾಫಿ ಪೌಡರ್‌ ಸಹ ಬೆರೆಸಿಕೊಳ್ಳಬಹುದು.

Cookry-Oct-diwali-13

ಸ್ಪೆಷಲ್ ಮೋಮೋಸ್

ಮೂಲ ಸಾಮಗ್ರಿ : 2 ಕಪ್‌ ಗೋಧಿಹಿಟ್ಟು, 4 ಚಮಚ ಸಕ್ಕರೆ, 1 ಚಮಚ ಇನ್‌ ಸ್ಟೆಂಟ್‌ ಯೀಸ್ಟ್, ತುಸು ಬಿಸಿ ನೀರು, 2-3 ಚಮಚ ಎಣ್ಣೆ, ತುಸು ಬೇಕಿಂಗ್‌ ಪೌಡರ್‌, ರುಚಿಗೆ ತಕ್ಕಷ್ಟು ಉಪ್ಪು, ಖಾರ.

ವೆಜ್ಫಿಲಿಂಗ್ಸಾಮಗ್ರಿ : 2 ಚಮಚ ಎಣ್ಣೆ, ಅರ್ಧರ್ಧ ಕಪ್‌ ಹೆಚ್ಚಿದ ಹೂಕೋಸು, ಕ್ಯಾರೆಟ್‌, ಅಣಬೆ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಸೋಯಾಸಾಸ್‌, ಚಿಲೀ ಸಾಸ್‌, ಶೇರ್ವನ್‌ ಸಾಸ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಕೆಚಪ್‌, ವಿನಿಗರ್‌, ಮೆಣಸು.

ವಿಧಾನ : ಒಂದು ಚಿಕ್ಕ ಬಟ್ಟಲಿಗೆ ಬಿಸಿ ನೀರು, ಸಕ್ಕರೆ, ಯೀಸ್ಟ್ ಬೆರೆಸಿ, ಇದು ನೊರೆ ನೊರೆ ಆಗುವಂತೆ ಕದಡಿಕೊಳ್ಳಿ. ಇನ್ನೊಂದು ಬಟ್ಟಲಲ್ಲಿ ಗೋಧಿಹಿಟ್ಟು, ಬೇಕಿಂಗ್‌ ಪೌಡರ್‌, ಉಪ್ಪು ಬೆರೆಸಿ. ಇದಕ್ಕೆ ಯೀಸ್ಟ್ ಮಿಶ್ರಣ, ಎಣ್ಣೆ ಬೆರೆಸಿಕೊಳ್ಳಿ. ಹಿಟ್ಟನ್ನು ಕಲಸಿ, ಅಗತ್ಯವಿದ್ದಷ್ಟು ನೀರು ಬೆರೆಸಿ, ಚೆನ್ನಾಗಿ ನಾದಿ, ಮೃದುಗೊಳಿಸಿ. ಇದನ್ನು ಒಂದು ಒದ್ದೆ ಬಟ್ಟೆಯಿಂದ ಸುತ್ತಿಡಿ. 1-2 ಗಂಟೆ ಕಾಲ ಹಾಗೇ ಬಿಡಿ. ಆಗ ಇದು ಚೆನ್ನಾಗಿ ಹಿಗ್ಗುತ್ತದೆ. ಹಿಗ್ಗಿದ ನಂತರ ಇದನ್ನು ಚೆನ್ನಾಗಿ ರೋಲ್ ‌ಮಾಡಿ. ಸಣ್ಣ ಸಣ್ಣ ಉಂಡೆಗಳಾಗಿ ಕತ್ತರಿಸಿ. ಇದಕ್ಕೆ ವೆಜ್‌ ಫಿಲ್ಲಿಂಗ್‌ ತುಂಬಿಸಿ, ಮೋಮೋಸ್‌ ಎಲ್ಲವೂ ಒಂದೇ ಆಕಾರ ಬರುವಂತೆ ಗುಂಡಗೆ ಮಾಡಿ. ನಂತರ ಇದನ್ನು ಅರ್ಧ ಗಂಟೆ ಹಾಗೇ ಬಿಡಿ. ಇಡ್ಲಿ ಪಾತ್ರೆಯಲ್ಲಿ ನೀರಿಟ್ಟು, ಇದನ್ನು ಎಣ್ಣೆ ಸವರಿದ ಸ್ಟಾಂಡ್‌ ನಲ್ಲಿ ತುಂಬಿಸಿ, ಹದನಾಗಿ  ಹಬೆಯಲ್ಲಿ ಬೇಯಿಸಿ. ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

Cookry-Oct-diwali-14

ಮಿಕ್ಸ್ಡ್ ಬೆರೀ ಸ್ಮೂದಿ

ಸಾಮಗ್ರಿ : 1 ಕಪ್‌ಮಿಕ್ಸ್ಡ್ ಫ್ರೋಝನ್‌ ಬ್ಲೂಬೆರಿ, 2-3 ಕಪ್‌ ಹಾಲು, ತುಸು ವೆನಿಲಾ ಎಸೆನ್ಸ್, ರುಚಿಗೆ ತಕ್ಕಷ್ಟು ಸಕ್ಕರೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಮಿಕ್ಸಿಗೆ ಹಾಕಿ ನುಣುಪಾಗಿ ಸ್ಮೂದಿ ತಯಾರಿಸಿ. ಇದಕ್ಕೆ ಗ್ರೆನೋಲಾ ಸೇರಿಸಿ ಗಾರ್ನಿಶ್‌ ಮಾಡಿ. ಚಿತ್ರದಲ್ಲಿರುವಂತೆ ಗ್ಲಾಸುಗಳಿಗೆ ತುಂಬಿಸಿ ಸವಿಯಲು ಕೊಡಿ.

Cookry-Oct-diwali-15

ತುಳಸಿ ಟೊಮೇಟೊ ಸೂಪ್

ಸಾಮಗ್ರಿ : 4-5 ಮಧ್ಯಮ ಗಾತ್ರದ ಹುಳಿ ಟೊಮೇಟೊ ಒಂದಿಷ್ಟು ಹೆಚ್ಚಿದ ದೊಡ್ಡಪತ್ರೆ ಎಲೆ, 1 ಸಣ್ಣ ಈರುಳ್ಳಿ, ಒಂದಿಷ್ಟು ತಾಜಾ ತುಳುಸಿ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಜೀರಿಗೆ, 1-2 ಲವಂಗ, ಶುಂಠಿ-ಬೆಳ್ಳುಳ್ಳಿ ಪೇಸ್ಟ್.

ವಿಧಾನ : ಹೀಟಿಂಗ್‌ ಬ್ಲೆಂಡರ್‌ ಗೆ 1ಲೀ ನೀರು ಬೆರೆಸಿ, ತುಳಸಿ ಎಲೆ ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿ ಸಣ್ಣಗೆ ಹೆಚ್ಚಿ ಹಾಕಿ ಕುದಿಸಿರಿ. ಬ್ಲೆಂಡರ್‌ ನಲ್ಲಿ ಸೂಪ್‌ ಫಂಕ್ಷನ್‌ ಆರಿಸಿ, ಸ್ಟಾರ್ಟ್‌ ಒತ್ತಿರಿ. ಹೀಗೆ ಚೆನ್ನಾಗಿ ಬ್ಲೆಂಡ್‌ ಆದ ನಂತರ, ತುಳಸಿ ಎಲೆ ಹಾಕಿ ಮತ್ತೆ ಬ್ಲೆಂಡ್ ಮಾಡಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ