ಭಿಕಾರಿ : ನೋಡಿ ತಾಯಿ, ನಿಮ್ಮ ಅಕ್ಕಪಕ್ಕದ ಮನೆಯವರು ಏನೇನೋ ತಿಂಡಿ ತಿನಿಸು ಕೊಟ್ಟಿದ್ದಾರೆ. ನೀವೇನು ಕೊಡ್ತೀರೋ ನೋಡಿ…..

ಗೃಹಿಣಿ : ಇರಲಿ, ಈ ಹಾಜ್ಮೋಲಾ ಮಾತ್ರೆ ತಗೋ ಅವರೆಲ್ಲ ಕೊಟ್ಟಿದ್ದು ಜೀರ್ಣವಾಗಲು ಇದು ತುಂಬಾ ಸಹಾಯ ಮಾಡುತ್ತದೆ.

ಒಂದು ಗುಡಿ ಮುಂದೆ ಒಂದು ಹಸು, ಆಗ ತಾನೇ ಮದುವೆಯಾಗಿದ್ದ ಕತ್ತೆಗಳ ಜೋಡಿಯೊಂದು ನಿಂತಿದ್ದವು. ಗುಡಿಯಿಂದ ಆಚೆ ಬರುತ್ತಿದ್ದ ಜನರೆಲ್ಲ ಹಸುವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಮುಂದೆ ಸಾಗುತ್ತಿದ್ದರು. ಆದರೆ ಯಾರೂ ಈ ಕತ್ತೆಗಳನ್ನು ಕ್ಯಾರೇ ಅನ್ನುತ್ತಿರಲಿಲ್ಲ.

ಹುಲ್ಲು ಮೇಯುತ್ತಿದ್ದ ಗಂಡನನ್ನು ನವವಧು ಕತ್ತೆ ಕೇಳಿತು, “ಯಾಕ್ರಿ, ಎಲ್ಲರೂ ಆ ಹಸುವನ್ನು ಮಾತ್ರ ಮುಟ್ಟಿ ಮುಟ್ಟಿ ಕಣ್ಣಿಗೊತ್ತಿಕೊಳ್ಳುತ್ತಾರೆ. ನನ್ನನ್ನು ಮಾತ್ರ ಯಾರೂ ಮುಟ್ಟೋದೇ ಇಲ್ಲ…. ಯಾಕೆ?”

ಆಗ ನವವಿವಾಹಿತ ಪತಿ ಕತ್ತೆ ಸ್ಟೈಲಾಗಿ ಹೇಳಿತು, “ಗಂಡ ಅನ್ನಿಸಿಕೊಂಡ ನಾನು ನಿನ್ನ ಪಕ್ಕಾನೇ ನಿಂತಿರೋವಾಗ, ಯಾವ ನನ್ನ ಮಗನಿಗೆ ನಿನ್ನನ್ನು ಮುಟ್ಟುವ ಧೈರ್ಯ ಬಂದೀತು?”

ಗುಂಡ : ಈ ಗೂಗಲ್ ಮ್ಯಾಪ್‌ ಲೋಕೇಶನ್‌ ಬಗ್ಗೆ ನನಗೊಂದು ಕೆಟ್ಟ ಕೋಪವಿದೆ!

ಸೀನ : ಅದೇನಯ್ಯ ಅಂಥದ್ದು?

ಗುಂಡ : ಎಲ್ಲದಕ್ಕೂ ಲೆಫ್ಟ್ ರೈಟ್‌ ಅಂತ ತೋರಿಸುತ್ತಲ್ಲಾ…. ನಮ್ಮ ಬಳಿ ಲೈಸೆನ್ಸ್ ಇಲ್ಲದಿದ್ದಾಗ, ಮುಂದಿನ ರಸ್ತೇಲಿ ಟ್ರಾಫಿಕ್ ಮಾಮಾ ನಿಂತಿದ್ದಾನೆ, ಇಂತಿಂಥ ಗಲ್ಲಿಗಳಲ್ಲಿ ನುಗ್ಗಿ ಹೋಗಿ ಅಂತ ಯಾಕೆ ಹೇಳಬಾರದು?

ಮಿಟಕಲಾಡಿ ಮೋನಾ ಗಿಫ್ಟ್ ಕಾರ್ನರ್‌ ಗೆ ಹೋಗಿ 3 ಗಂಟೆ ಕಾಲ ತಡಕಾಡಿದರೂ ಫ್ರೆಂಡ್‌ ಮದುವೆಗಾಗಿ ಒಳ್ಳೆಯ ಗಿಫ್ಟ್ ಆರಿಸಲು ಆಗಲೇ ಇಲ್ಲ. ಅವಳಿಗೆ ಬೇರೆ ಬೇರೆ ಗಿಫ್ಟ್ ಐಟಂ ತೋರಿಸಿ ಅಲ್ಲಿದ್ದ ಸೇಲ್ಸ್ ನವರೆಲ್ಲ ರೋಸಿಹೋದರು.

ಏನೂ ಬೇಡ ಅಂತ ಮೋನಾ ಅಲ್ಲಿಂದ ಹೊರಡಲು ಸಿದ್ಧಳಾದಳು. ಇನ್ನೇನು ಹೊರ ಬರಬೇಕು ಅನ್ನುವಾಗ, ಮೂಲೆಯೊಂದರಲ್ಲಿ ನಿಂತಿದ್ದ ಜೀವಂತ ಬೊಂಬೆ ಅವಳ ಗಮನ ಸೆಳೆಯಿತು.

“ರೀ, ಸ್ಮೈಲ್ ಕೊಡ್ತಾ ಇರೋ ಈ ದೆವ್ವದ ಬೊಂಬೆಯ ರೇಟ್‌ ಎಷ್ಟು?” ಎಂದು ಆ ಬೊಂಬೆ ಕಡೆ ಕೈ ತೋರಿಸುತ್ತಾ ಕೇಳಿದಳು.

“ಸರಿಯಾಗಿ ನೋಡಿ ಮೇಡಂ, ನೀವು ಕೇಳ್ತಿರೋದು ನಿಮ್ಮ ಎದುರಿಗಿರುವ ಮೇಕಪ್‌ ಮಿರರ್‌ ನ ತಾನೇ?” ಎನ್ನುವುದೇ ಆ ಸೇಲ್ಸ್ ಮ್ಯಾನ್‌.

ಅಂದು ಬೆಳಗಿನ ಹೊತ್ತಿಗೇ ಗಡಬಡಿಸುತ್ತಾ ವಿಶಾಲು ವಿಶ್ವನ ಬಳಿ ಬಂದು ಕೇಳಿದಳು, “ಬೇಗ…. ನನಗೆ ಇವತ್ತಿನ ಪೇಪರ್ ಕೊಡಿ!”

“ಅಯ್ಯೋ….. ಇಷ್ಟೆಲ್ಲ ಕಲಿತವಳು ನೀನು, ಇನ್ನು ಹಾರ್ಡ್‌ ಕಾಪಿ ಪೇಪರ್‌ ಗೆ ಏಕೆ ಅಂಟಿಕೊಂಡಿರಬೇಕು? ನನ್ನ ಲ್ಯಾಪ್‌ ಟಾಪ್ ಅಲ್ಲೇ ಟೇಬಲ್ ಮೇಲಿದೆ ನೋಡು, ಅದನ್ನು ತಗೊಂಡು ಇ-ಪೇಪರ್‌ ನೋಡಬಾರದೇ?” ಎಂದು ವಿಶ್ವ ಬೋಧಿಸಿದ.

ಅದಾದ ಸ್ವಲ್ಪ ಹೊತ್ತಿಗೆ ಅಡುಗೆಮನೆಯಲ್ಲಿ ಧಡಾರ್‌ ಎಂದು ವಿಶಾಲು, ಅಲ್ಲಿದ್ದ ಸ್ಲಾಬ್‌ ನ್ನು ಬಾರಿಸುತ್ತಿರುವುದು ವಿಶ್ವನಿಗೆ ಇಲ್ಲಿಂದಲೇ ಗೊತ್ತಾಯಿತು ಏನಾಯಿತೋ ಏನೋ ಎಂದು ಧಡಬಡಿಸಿ ಒಳಗೆ ಓಡಿದ ವಿಶ್ವ. ನಿರ್ದಾಕ್ಷಿಣ್ಯವಾಗಿ ವಿಶಾಲು ಅವನ ಲ್ಯಾಪ್‌ ಟಾಪ್‌ ನಿಂದ ಕಿಚನ್‌ ಸ್ಲಾಬ್‌ ನ್ನು ಬಾರಿಸುತ್ತಿರಬೇಕೇ?

ವಿಶ್ವ ಕಿಟಾರನೇ ಕಿರುಚಿದ, “ಇದೇನು ಮಾಡ್ತಿದ್ದೇಯೇ? ಅದು ಆಫೀಸಿನ ಲ್ಯಾಪ್‌ ಟಾಪೂ…..”

“ಈ ಹಾಳಾದ ಜಿರಲೆ ಓಡಿಸಲು ಪೇಪರ್‌ ಕೊಡಿ ಅಂತಂದ್ರೆ ನೀವು ತಾನೇ ಇದನ್ನು ತಗೋ ಅಂದವರು…..” ವಿಶಾಲು ಮಾತು ಕೇಳಿ ವಿಶ್ವ ಅಲ್ಲೇ ಮೂರ್ಛೆ ಹೋದ!

ಗುಂಡ ತನ್ನ ಗರ್ಲ್ ಫ್ರೆಂಡ್‌ ಗುಂಡಿ ಜೊತೆ ಜಗಳವಾಡಿಕೊಂಡು ಬೇರಾಗಿದ್ದ. ಅವಳು ಹಾಯಾಗಿ ಬೇರೊಬ್ಬ ಹಣವಂತ ಕುರೂಪಿಯನ್ನು ಮದುವೆಯಾದಳು. ಆಗ ಗುಂಡನಿಗೆ ತನ್ನ ಗರ್ಲ್ ಫ್ರೆಂಡ್‌ ಳಿಂದ ಬಂದ ಕೊನೆಯ ಮೆಸೇಜ್‌: ಅಂತೂ ನನ್ನ ಮದುವೆಯ ದಿಬ್ಬಣ ಬಂದೇಬಿಟ್ಟಿತು! ಈ ವರನ ಕಡೆಯವರು ಬಹಳ ಧಾರಾಳಿಗಳು. ಪ್ರತಿಯೊಂದು ಶಾಸ್ತ್ರದಲ್ಲೂ ಸಭಿಕರಿಗೆಲ್ಲ ಧಾರಾಳವಾಗಿ 2000 ರೂ. ಹಂಚುತ್ತಿದ್ದಾರೆ. ನೀನು ಇದುವರೆಗೂ ನನಗಾಗಿ ಮಾಡಿದ್ದ ಖರ್ಚನ್ನು ಈ ಮೂಲಕ ಬಂದು ಗಿಟ್ಟಿಸಿಕೋ!

ಮದುವೆಯ ನಂತರ ಪತ್ನಿ ಮೊದಲ ಸಲ ಸೋರೆಕಾಯಿ ಪಲ್ಯ ಮಾಡಿ ಗಂಡನಿಗೆ ಬಡಿಸಿ, ರುಚಿ ಹೇಗಿದೆ ಎಂದು ಕೇಳಿದರೆ, `ಬಿಸಿ ತುಪ್ಪ ಉಗುಳಲಾರದೆ ನುಂಗಲಾರದೆ ತತ್ತರಿಸಿದಂತೆ…..’ ಎಂದು ಹಿಂದೆ ತಾನು ಎಲ್ಲೋ ಓದಿದ್ದ ಗಾದೆಯನ್ನು ಪ್ರಾಕ್ಟಿಕಲ್ ಆಗಿ ಈಗ ಅರ್ಥ ಮಾಡಿಕೊಳ್ಳುವಂಥವನಾಗಿ, ಬಡಪಾಯಿ ಗಂಡ ಬಾಯಿ ತುಂಬಾ, “ಚೆನ್ನಾಗಿದೆ…. ಚೆನ್ನಾಗಿದೆ!” ಎಂದ.

ಮದುವೆಯಾದ ಹೊಸತರಲ್ಲಿ `ಅತಿ ಮಧುರ…. ಅನುರಾಗ….’ ಹೇಗಿರುತ್ತೆ ಅಂತೀರಾ, ಇಲ್ಲಿ ನೋಡಿ : ಮಧುಚಂದ್ರಕ್ಕೆ ಹೊರಟಿದ್ದ ನವ ದಂಪತಿ ವಿಹಾರ ಮುಗಿಸಿ ರಾತ್ರಿ ಹೋಟೆಲ್ ಸೇರಿದರು. ಆಕಸ್ಮಿಕವಾಗಿ ತನ್ನ ಪತ್ನಿಯ ಕೈ ಮೇಲೆ ಆಗಿದ್ದ ರಕ್ತದ ಕಲೆ ಗುರುತಿಸಿದ ನಾಣಿ, ತಕ್ಷಣ ಓಡಿಹೋಗಿ ಅವಳ ಕೈಹಿಡಿದು, ಆ ರಕ್ತ ಹೀರಿ, ಅಲ್ಲೇ ಇದ್ದ ಹ್ಯಾಂಡಿ ಪ್ಲಾಸ್ಟ್ ಹಚ್ಚಿ ಆರೈಕೆ ಮಾಡಿದ.

ಅದಕ್ಕೆ ಅವನ ಪತ್ನಿ ಮುದ್ದಾಗಿ ಉಲಿದಳು, “ಇದೇನು ಮಾಡಿದಿರಿ ನೀವು…. ನನ್ನ ಕೈ ಮೇಲೆ ಕುಳಿತಿದ್ದ ದೊಡ್ಡ ಸೊಳ್ಳೆಯನ್ನು ಈಗ ತಾನೇ ಹೊಡೆದು ಸಾಯಿಸಿದ್ದೆ!” ಎನ್ನುವುದೇ?

ಪ್ರೇಯಸಿ : ಮದುವೆ ನಂತರದ ನಿನ್ನ ಎಲ್ಲಾ ದುಃಖವನ್ನೂ ನನ್ನದೆಂದೇ ಭಾವಿಸಿ, ಅದನ್ನು ಹಂಚಿಕೊಳ್ಳುತ್ತೇನೆ!

ಪ್ರಿಯತಮ : ಅಯ್ಯೋ… ಆದರೆ ನನಗೆ ಯಾವ ದುಃಖವೂ ಇಲ್ಲವಲ್ಲ…..?

ಪ್ರೇಯಸಿ : ಅರೇ…. ನಾನು ಹೇಳಿದ್ದು ಮದುವೆ ಆದ ನಂತರ ಶುರುವಾಗುವ ದುಃಖಗಳ ಬಗ್ಗೆ!

ಪತ್ನಿ : ಅದು ಸರಿ, ನಾನು ಹಾಡು ಹೇಳಲು ಶುರು ಮಾಡಿದಾಗೆಲ್ಲ ನೀವೇಕೆ ಹೋಗಿ ಬಾಲ್ಕನಿಯಲ್ಲಿ ನಿಂತುಬಿಡ್ತೀರಿ?

ಪತಿ : ಇದರಿಂದ ನಮ್ಮ ನೆರೆಹೊರೆಯವರಿಗೆ ನಾನು ನಿನ್ನನ್ನು ಹೊಡೆದೂ ಬಡಿದೂ ಮಾಡ್ತಿಲ್ಲ, ಒಂಟಿಯಾಗಿ ಬಾಲ್ಕನಿಯಲ್ಲೇ ನಿಂತಿದ್ದೇನೆ ಅಂತ ಸ್ಪಷ್ಟವಾಗಿ ಗೊತ್ತಾಗಲಿ ಎಂಬುದೇ ನನ್ನ ಉದ್ದೇಶ!

ಗುಂಡ ತನ್ನ ಗೆಳೆಯ ವೆಂಕಿಗೆ ಹಿಂದೆ ಹೇಳಿದ್ದ ಮಾತು ಇಂದು ಬಹಳ ದುಬಾರಿ ಆಯ್ತು, `ಮುಂದೆ ನಿನಗೆ ಯಾವುದೇ ತೊಂದರೆ ಬರಲಿ, ಮರೆಯದೆ ನನ್ನನ್ನು ನೆನೆಸಿಕೋ,’ ಎಂದಿದ್ದ.

ಅದರ ಫಲವಾಗಿ ಗುಂಡನ ಮನೆಗೆ ಅವನ ಗೆಳೆಯ ವೆಂಕಿ, ಮರು ವಾರ ತನ್ನ ಮದುವೆ ಅಂತ ಆಹ್ವಾನಪತ್ರಿಕೆ ಕಳುಹಿಸಿ ಬಿಡುವುದೇ?

ಯಾರೋ ಕರೆಗಂಟೆ ಒತ್ತಿದಾಗ ಶೈಲಜಾ ಹೋಗಿ ಬಾಗಿಲು ತೆರೆದಳು. ಎದುರಿಗೆ ಅವಳ ಮಾಜಿ ಬಾಯ್‌ ಫ್ರೆಂಡ್‌ ಶೈಲೇಂದ್ರ ನಿಂತಿದ್ದ.

ಶೈಲಜಾ : ಇದೇಕೆ ಈ ಹೊತ್ತಿನಲ್ಲಿ ನನ್ನ ಮನೆ ಮುಂದೆ ಬಂದು ಹೀಗೆ ನಿಂತಿದ್ದೀಯಾ? ನನಗೆ ಮದುವೆ ಫಿಕ್ಸ್ ಆಗಿದೆ ಅಂತ ನಿನಗೆ ಮೆಸೇಜ್‌ ಕಳುಹಿಸಿದ್ದೆನಲ್ಲ….?

ಶೈಲೇಂದ್ರ : ಬಡ್ಕೊಂಡ್ರು…  ಸದಾ ನಿನ್ನನ್ನು ಫಾಲೋ ಮಾಡೋದೊಂದೇ ನನ್ನ ಕೆಲಸ ಅಂದುಕೊಂಡೆಯಾ? ಮನೆ ಮುಂದೆ ಚಪ್ಪರ, ಶಾಮಿಯಾನಾ ಹಾಕಿಸುವ ಹುಡುಗರ ತಂಡಕ್ಕೆ ನಾನೇ ಲೀಡರ್‌! ಕರಿ ನಿಮ್ಮಪ್ಪನ್ನ…. ಮೊದಲು 25 ಸಾವಿರ ಅಡ್ವಾನ್ಸ್ ಕೊಡಲಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ