ವೆಜ್ಪೋಹಾ ಬಾಲ್ಸ್

ಸಾಮಗ್ರಿ : 1 ಕಪ್‌ ಪೋಹಾ (ಅವಲಕ್ಕಿ), ಅರ್ಧರ್ಧ ಕಪ್‌ ಹೆಚ್ಚಿದ ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ, ಬೇಯಿಸಿ ಮಸೆದ ಆಲೂ, ತುಸು ಸಣ್ಣಗೆ ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಈರುಳ್ಳಿ, ಬೆಳ್ಳುಳ್ಳಿ, ತುರಿದ ಕ್ಯಾರೆಟ್‌, ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಅರಿಶಿನ, ಮೊಸರು, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು, ಅಲಂಕರಿಸಲು ಉದ್ದಕ್ಕೆ ಹೆಚ್ಚಿದ ಹಸಿಮೆಣಸು.

ವಿಧಾನ : ಅವಲಕ್ಕಿಯನ್ನು ಅರ್ಧ ಗಂಟೆ ನೆನೆಹಾಕಿ, ಸ್ಟೀಲ್ ಜರಡಿಗೆ ಹಾಕಿ, ಸೋಸಿಕೊಳ್ಳಿ. ಒಂದು ಬೇಸನ್ನಿಗೆ ಮಸೆದ ಆಲೂ ಜೊತೆ ಮೇಲೆ ಹೇಳಲಾದ ಎಲ್ಲಾ ಸಾಮಗ್ರಿ, ಎಲ್.ಜಿ. ಇಂಗು ಬೆರೆಸಿಕೊಳ್ಳಿ. ಇದಕ್ಕೆ ಅವಲಕ್ಕಿ ಸೇರಿಸಿ ಮಿಶ್ರಣ ಕಲಸಿಕೊಳ್ಳಿ. ನಂತರ ಇದರಿಂದ ಸಣ್ಣ ಸಣ್ಣ ಉಂಡೆ ಕಟ್ಟಿಡಿ. ಇದನ್ನು ಎಣ್ಣೆ ಸವರಿದ ಇಡ್ಲಿ ಸ್ಟಾಂಡಿನಲ್ಲಿಟ್ಟು, ಹಬೆಯಲ್ಲಿ ಹದನಾಗಿ ಬೇಯಿಸಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಉದ್ದಕ್ಕೆ ಹೆಚ್ಚಿದ ಹಸಿ ಮೆಣಸು ಹಾಕಿ ಬಾಡಿಸಿ. ಅದಕ್ಕೆ ಈ ಬಾಲ್ಸ್ ಸೇರಿಸಿ ಕೆದಕಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸಾಸ್‌ ಜೊತೆ ಸವಿಯಲು ಕೊಡಿ.

AA-sarson-palak-cutlet-(5)

ಪೌಷ್ಟಿಕ ಸೊಪ್ಪಿನ ಕಟ್ಲೆಟ್

ಸಾಮಗ್ರಿ : ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು, ಮೆಂತ್ಯ ಸೊಪ್ಪು (ತಲಾ 2 ಕಪ್‌), 1 ತುಂಡು ಹಸಿ ಶುಂಠಿ, ಹಸಿ ಮೆಣಸು, ಅರ್ಧ ಕಪ್ ತುರಿದ ಪನೀರ್‌, 2-3 ಸ್ಲೈಸ್‌ ಬ್ರೆಡ್‌, ಅರ್ಧ ಸೌಟು ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ವೈಟ್‌ ಪೆಪ್ಪರ್‌, ಎಲ್.ಜಿ. ಇಂಗು, ಉದ್ದಕ್ಕೆ ಹೆಚ್ಚಿದ ತೆಂಗಿನ ಚೂರು, ಹಸಿ ಮೆಣಸು.

ವಿಧಾನ : ಮೊದಲು ಹೆಚ್ಚಿದ ಸೊಪ್ಪನ್ನು ಶುಂಠಿ, ಹಸಿ ಮೆಣಸಿನೊಂದಿಗೆ ಲಘುವಾಗಿ ಬಾಡಿಸಿ. ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಬ್ರೆಡ್‌ ಸ್ಲೈಸ್‌ ನ್ನು ಡ್ರೈ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿ. ನಂತರ ಈ ಪುಡಿಗೆ ಎಲ್.ಜಿ. ಇಂಗು ಹಾಗೂ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು, ಮಿಶ್ರಣ ಕಲಸಿಡಿ. ಸಣ್ಣ ಉಂಡೆ ಮಾಡಿ, ಅದನ್ನು ಚಪ್ಪಟೆಯಾಗಿಸಿ. ಇದನ್ನು ಅಳ್ಳಕ ತವಾದಲ್ಲಿ ಬೆಣ್ಣೆ ಹಾಕುತ್ತಾ ಎರಡೂ ಬದಿ ಬೇಯಿಸಿ, ಗರಿಗರಿ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

AA-cauliflower-patti

ಹೂಕೋಸಿನ ಕಟ್ಲೆಟ್

ಸಾಮಗ್ರಿ : 1 ಕಪ್‌ ಬಿಸಿ ಅನ್ನ, 1 ಕಪ್‌ಶುಚಿಗೊಳಿಸಿ ತುರಿದ ಹೂಕೋಸು, ಹೆಚ್ಚಿದ 1-2 ಈರುಳ್ಳಿ, ತುಸು ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಬಾದಾಮಿ ಪೇಸ್ಟ್, ಅರ್ಧ ಸೌಟ್‌ ಎಣ್ಣೆ.

ವಿಧಾನ : ಅನ್ನವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಇದಕ್ಕೆ ಹೆಚ್ಚಿದ ಎಲ್ಲಾ ಪದಾರ್ಥ, ಉಪ್ಪು, ಖಾರ, ಎಲ್.ಜಿ. ಇಂಗು, ಉಳಿದವನ್ನೂ ಸೇರಿಸಿ. ಇದಕ್ಕೆ ತುಸು ತುಪ್ಪ ಹಾಕಿ ಮಿಶ್ರಣ ಕಲಸಿಡಿ. ಸಣ್ಣ ಉಂಡೆ ಆಗಿಸಿ, ಕಟ್‌ ಲೆಟ್‌ ತಟ್ಟಿಕೊಂಡು, ಎಣ್ಣೆ ಬಿಡುತ್ತಾ ಶ್ಯಾಲೋ ಫ್ರೈ ಮಾಡಿ. ಬಿಸಿ ಬಿಸಿಯಾಗಿ, ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

AA-Bajra-methi-masala-paranta-(1)

ಮಲ್ಟಿಗ್ರೇನ್ಮೆಂತ್ಯ ಪರೋಟ

ಸಾಮಗ್ರಿ : ಗೋಧಿಹಿಟ್ಟು, ಅಕ್ಕಿಹಿಟ್ಟು, ಕಡಲೆಹಿಟ್ಟು, ರಾಗಿಹಿಟ್ಟು, ಮೈದಾ, ಜೋಳದ ಹಿಟ್ಟು, ರವೆ (ತವಾ ಅರ್ಧರ್ಧ ಕಪ್‌), 1 ಕಂತೆ ಸಣ್ಣಗೆ ಹೆಚ್ಚಿದ ಮೆಂತ್ಯಸೊಪ್ಪು, ತುಸು ಈರುಳ್ಳಿ, ಬೆಳ್ಳುಳ್ಳಿ, ಹಸಿಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸು, ಮೊಸರು, ಎಲ್.ಜಿ. ಇಂಗು, ಕರಿಬೇವು, ಕೊ.ಸೊಪ್ಪು, ತುಪ್ಪ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದು ಬೇಸನ್ನಿಗೆ ಹಾಕಿಕೊಂಡು, ಎಲ್.ಜಿ. ಇಂಗು ಸೇರಿಸಿ ನೀಟಾಗಿ ಚಪಾತಿ ಹಿಟ್ಟಿನಂತೆ ಕಲಸಿಡಿ. 1 ಗಂಟೆ ಕಾಲ ನೆನೆಯಲು ಬಿಟ್ಟು ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಇದರಿಂದ ಸಣ್ಣ ಉಂಡೆ ಮಾಡಿಕೊಂಡು, ತುಪ್ಪ ಸವರುತ್ತಾ ಲಟ್ಟಿಸಿ, ಹೆಂಚಿಗೆ ಹಾಕಿ ತುಪ್ಪ ಬಿಡುತ್ತಾ, ಎರಡೂ ಬದಿ ಹದನಾಗಿ ಬೇಯಿಸಿ. ಇದನ್ನು ಬಿಸಿ ಇರುವಾಗಲೇ ಟೊಮೇಟೊ ಚಟ್ನಿ, ಆಲೂ ಪಲ್ಯದ ಜೊತೆ ತುಪ್ಪ ಹಾಕಿ ಸವಿಯಲು ಕೊಡಿ.

AA-chawal-ki-badi-(8)

ಸ್ಪೆಷಲ್ ಕೋಫ್ತಾ ಕರೀ

ಸಾಮಗ್ರಿ : 1-1 ಕಪ್‌ ಅಕ್ಕಿ, ಕಡಲೆಹಿಟ್ಟು, ಹೆಚ್ಚಿದ 1 ಸಣ್ಣ ಹೂಕೋಸು, 2-3 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, 5-6 ಹಸಿ ಮೆಣಸು, ರುಚಿಗೆ ತಕ್ಕಷ್ಟು ಟೊಮೇಟೋ ಪೇಸ್ಟ್, ಉಪ್ಪು, ಖಾರ, ಅರಿಶಿನ, ಗರಂಮಸಾಲ, ಧನಿಯಾಪುಡಿ, ಎಲ್.ಜಿ. ಇಂಗು, ಅರ್ಧ ಸೌಟು ತುಪ್ಪ, ಒಂದಿಷ್ಟು ಕೊ.ಸೊಪ್ಪು, ಪುದೀನಾ, ಕರಿಬೇವು, ಕರಿಯಲು ಎಣ್ಣೆ.

ವಿಧಾನ : ಅಕ್ಕಿಯನ್ನು 1-2 ಗಂಟೆ ಕಾಲ ನೆನೆಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಕಡಲೆಹಿಟ್ಟಿನ ಜೊತೆ ಮೇಲೆ ಹೇಳಲಾದ ಎಲ್ಲಾ ಸಾಮಗ್ರಿ, ಬೆರೆಸಿಕೊಂಡು ಇಡ್ಲಿ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಿಲ್ಲ ಎಣ್ಣೆ ಬಿಸಿ ಮಾಡಿ ಇದರಿಂದ ತುಸು ತುಸು ಮಿಶ್ರಣ ಹಾಕುತ್ತಾ ಹೊಂಬಣ್ಣ ಬರುವಂತೆ ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಎಲ್.ಜಿ. ಇಂಗು ಹಾಕಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು ಹಾಕಿ ಬಾಡಿಸಿ. ನಂತರ ಟೊಮೇಟೊ ಪೇಸ್ಟ್ ಸೇರಿಸಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಎಲ್ಲಾ ಸೇರಿಸಿ ಅರ್ಧ ಲೋಟ ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕೈಯಾಡಿಸಿ ಬಾಡಿಸಿ. ಇದಕ್ಕೆ ಕರಿದ ಕೋಫ್ತಾ ಬೆರೆಸಿ (ಒಡೆಯದಂತೆ) ಎಲ್ಲವನ್ನೂ ಹದನಾಗಿ ಕೆದಕುತ್ತಾ ಕುದಿಸಬೇಕು. ಇದನ್ನು ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.

AA-makke-ki-batti-(1)

ಬೇಸನ್ಬಾಟಿ

ಸಾಮಗ್ರಿ : 2 ಕಪ್‌ ಬೇಸನ್‌ (ಕಡಲೆಹಿಟ್ಟು), ಅರ್ಧ ಕಪ್‌ ಜೋಳದ ಹಿಟ್ಟು, ಅರ್ಧರ್ಧ ಸೌಟು ತುಪ್ಪ, ತುರಿದ ಪನೀರ್‌, ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು, ಉಪ್ಪು, ಖಾರ, ಎಲ್.ಜಿ. ಇಂಗು, ಕರಿಯಲು ಎಣ್ಣೆ.

ವಿಧಾನ : ಬೇಸನ್‌ ಗೆ ಜೋಳದ ಹಿಟ್ಟು, ಉಪ್ಪು, ಖಾರ ಸೇರಿಸಿ ನೀರು ಬೆರೆಸಿ ಚಪಾತಿ ಹಿಟ್ಟಿನಂತೆ ಕಲಸಿಡಿ. ಇದನ್ನು ನಾದಿ ಉದ್ದಕ್ಕೆ ಮಾಡಿ, 2 ಭಾಗ ಕತ್ತರಿಸಿ, ಕುದಿ ನೀರಲ್ಲಿ ಬೇಯಿಸಿ ತೆಗೆಯಿರಿ. ಹೊರಗೆ ತೆಗೆದು ಆರಿದ ನಂತರ, ತುಪ್ಪ ಬೆರೆಸಿ ಮತ್ತೆ ನಾದಿಕೊಳ್ಳಿ. ಒಂದು ಬಟ್ಟಲಿಗೆ ಉಳಿದೆಲ್ಲ ಹೆಚ್ಚಿದ ಸಾಮಗ್ರಿ, ಉಪ್ಪು, ಖಾರ, ಎಲ್.ಜಿ. ಇಂಗು ಸೇರಿಸಿ ಮಿಶ್ರಣ ಕಲಸಿಡಿ. ಇದುವೇ ಹೂರಣ. ಈಗ ಮಿಶ್ರಣದಿಂದ ಸಣ್ಣ ಉಂಡೆ ಕಲಸಿ ಲಟ್ಟಿಸಿ, ಮಧ್ಯೆ 2-2 ಚಮಚ ಹೂರಣ ತಂಬಿಸಿ, ಚಿತ್ರದಲ್ಲಿರುವಂತೆ ಕವರ್‌ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಪುದೀನಾ ಚಟ್ನಿ ಜೊತೆ ಸವಿಯಿರಿ.

AA-sweetpotato-pepper-soup-(2)

ಸ್ವೀಟ್ಪೊಟೇಟೊ ಸೂಪ್

ಸಾಮಗ್ರಿ : 2-3 ಸಿಹಿಗೆಣಸು, ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಬೆಣ್ಣೆ, ಟೊಮೇಟೊ ಪೇಸ್ಟ್, ಸಕ್ಕರೆ, ಸಣ್ಣ ಪನೀರ್‌ ಕ್ಯೂಬ್ಸ್, ಚಕ್ಕೆ ಪುಡಿ, ಎಲ್.ಜಿ. ಇಂಗು, ಅರಿಶಿನ.

ವಿಧಾನ : ಮೊದಲು ಸಿಹಿಗೆಣಸು ಶುಚಿಗೊಳಿಸಿ, ಬೇಯಿಸಿ ಆರಿದ ನಂತರ ಮಸೆದಿಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ 3 ಬಗೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಉಳಿದೆಲ್ಲ ಸಾಮಗ್ರಿ, ಎಲ್.ಜಿ. ಇಂಗು ಹಾಕಿ ಬಾಡಿಸಿ. ಕೊನೆಯಲ್ಲಿ ಮಸೆದ ಗೆಣಸು, ಅಗತ್ಯವಿದ್ದಷ್ಟು ನೀರು ಬೆರೆಸಿ, ಕುದಿಸಿ ಕೆಳಗಿಳಿಸಬೇಕು. ಸೂಪ್‌ ಗೆ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಊಟಕ್ಕೆ ಮುನ್ನ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ