ಮಿನಿ ಕಥೆ – ಶೈಲಾ ಎಸ್. ವಾಲಿ
ಕೇವಲ ಶೇ.95 ಅಂಕಗಳನ್ನು ಪಡೆದವರಿಗೆ ಮಾತ್ರ ಶಾಲಾಕಾಲೇಜುಗಳಲ್ಲಿ ಪ್ರವೇಶ ಎನ್ನುವ ಇಂದಿನ ಆಧುನಿಕ ಮನೋಭಾವದ ಶಿಕ್ಷಣ ಸಂಸ್ಥೆಯವರಿಗೆ, ಅನಕ್ಷರಸ್ಥರ ಮಕ್ಕಳು ಏಳಿಗೆ ಹೊಂದುವುದು ಬೇಕಾಗಿಲ್ಲವೇ…..? ಇಂಥವರಿಗೆ ಸುಮನಾ ಪಾಠ ಕಲಿಸಿದ್ದು ಹೇಗೆ…..?
“ಪಾರ್ವತಿ…. ಏನ್ ಮಾಡ್ತಾ ಇದ್ದೀಯಾ? ಬೇಗ ಬಾ….. ಬೇಗ ಟಿಫಿನ್ ಮುಗಿಸಿ, ಅಲ್ಲಿ ನಿನ್ ಮಗನ ಕಾರ್ಯಕ್ರಮಕ್ಕೆ ಹೋಗ್ಬೇಕು…. ನೀನು ಮನೆಗೆ ಹೋಗಿ ಬೇಗ ರೆಡಿ ಆಗಿ ಬಾ…. ಮೊನ್ನೆ ದೀಪಾವಳಿ ಹಬ್ಬಕ್ಕೆ ಕೊಟ್ಟ ಸೀರೆ ಉಟ್ಕೊಂಡು ಬಾ…. ನಿನ್ನ ಮಗನ ಸಾಧನೆಯನ್ನು ನೀನು ಕಣ್ತುಂಬ ನೋಡಬೇಕು, ಸಂಭ್ರಮ ಪಡಬೇಕು…. ಕಾರ್ತಿಕ್ ಗೆ ಸಮಾರಂಭಕ್ಕೆ ಬೇಗ ಹೋಗು ಅಂದಿದ್ದೆ, ಹೋಗಿದ್ದಾನೆ ಅಲ್ವಾ…..?” ಎಂದು ಒಂದೇ ಉಸಿರಿಗೆ ಹೇಳುತ್ತಿದ್ದ ಸುಮನಾ ಪಾರ್ವತಿ ಕಣ್ಣಿಗೆ ದೇವತೆಯಂತೆಯೇ ಕಂಡಳು.
ಏಕೆಂದರೆ ಅದಕ್ಕೂ ಕಾರಣ…. ಪಾರ್ವತಿ ಮಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೇ ಮೊದಲ ರಾಂಕ್ ಬಂದಿದ್ದು, ಇಂದು ಮುಖ್ಯಮಂತ್ರಿ ಕಡೆಯಿಂದ ಪಾರಿತೋಷಕ ಹಾಗೂ ಪ್ರಮಾಣಪತ್ರ ಪಡೆಯುವ ಸಡಗರ ಹಾಗೂ ಸಂಭ್ರಮದ ದಿನವಾಗಿತ್ತು.
ಈಗ್ಗೆ 12 ವರ್ಷಗಳ ಹಿಂದೆ ಸುಮನಾ ತನ್ನ ಮಗಳು ಸಾನ್ವಿಗೆ ಆಆಇಈ ಕಲಿಸುತ್ತಿದ್ದಾಗ, ಮನೆಗೆಲಸಕ್ಕೆ ಬರುತ್ತಿದ್ದ ಪಾರ್ವತಿ ಮಗ ಕಾರ್ತಿಕ್ ಕೇವಲ 3 ವರ್ಷದ ಹುಡುಗ, ಸಾನ್ವಿಗಿಂತ ಮೊದಲು ಅವನೇ ಅಕ್ಷರಗಳನ್ನು ಉಚ್ಚರಿಸುತ್ತಿದ್ದ. ಅದನ್ನು ಗಮನಿಸಿದ ಸುಮನಾ ತನ್ನ ಮಗಳ ಜೊತೆಗೆ ಆ ಹುಡುಗನನ್ನೂ ಕೂರಿಸಿಕೊಂಡು ಕಲಿಸಲು ಶುರು ಮಾಡಿದಳು. ಅವನ ಗ್ರಹಣಶಕ್ತಿ, ಕಲಿಯಲು ಅವನಿಗಿದ್ದ ಆಸಕ್ತಿ ಗುರುತಿಸಿದ ಸುಮನಾ, ತನ್ನ ಮಗಳು ಕಲಿಯುತ್ತಿದ್ದ ಪ್ರತಿಷ್ಠಿತ ಶಾಲೆಯ ಅಪ್ಲಿಕೇಶನ್ ಫಾರ್ಮ್ ತಂದು ಅದನ್ನು ತಾನೇ ತುಂಬಿ, ಪಾರ್ವತಿ ಗಂಡನನ್ನು ಕರೆಸಿ ಇಬ್ಬರಿಗೂ ಆ ಶಾಲೆಗೆ ಹೋಗಿ ಮಗುವನ್ನು ದಾಖಲು ಮಾಡಿ ಬನ್ನಿ, ಅದರ ಸಂಪೂರ್ಣ ಖರ್ಚು ತಾನೇ ವಹಿಸಿಕೊಳ್ಳುವುದಾಗಿ ಹೇಳಿ ಕಳಿಸಿಕೊಟ್ಟಿದ್ದಳು, ಆದರೆ ಕಾರ್ತಿಕ್ ನ ಪೋಷಕರು ಅಕ್ಷರಸ್ಥರಲ್ಲದ ಕಾರಣ ಶಾಲೆಯ ಆಡಳಿತ ಮಂಡಳಿ ಮಗುವನ್ನು ದಾಖಲಾತಿ ಮಾಡಿಕೊಳ್ಳಲಿಲ್ಲ.
ಸಪ್ಪೆ ಮುಖ ಮಾಡಿಕೊಂಡು ಹಿಂದುರುಗಿದ ಪಾರ್ವತಿ ದಂಪತಿಗಳನ್ನು ನೋಡಿ, ತಾನೇ ಖುದ್ದಾಗಿ ಅವರನ್ನು ಪುನಃ ಶಾಲೆಗೆ ಕರೆದುಕೊಂಡು ಹೋದಳು. ಆದರೆ ಶಾಲೆಯ ಪ್ರಾಂಶುಪಾಲರು ತಾವು ಅನಕ್ಷರಸ್ಥ ಪೋಷಕರ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುವುದಿಲ್ಲ. ಇಬ್ಬರಲ್ಲಿ ಒಬ್ಬರಾದರೂ ಕಡ್ಡಾಯವಾಗಿ ಗ್ರಾಜುಯೇಶನ್ ಆಗಿರಲೇಬೇಕೆಂದು ಖಡಾಖಂಡಿತವಾಗಿ ಆಗ್ರಹಿಸಿದರು.
ಸುಮನಾ ಅವರನ್ನು ಪರಿಪರಿಯಾಗಿ ಬೇಡಿಕೊಂಡಳು. ತಾನೇ ಆ ಹುಡುಗನಿಗೂ ಕಲಿಸುವುದಾಗಿ ಹಾಗೂ ಅವನ ಸಂಪೂರ್ಣ ಜವಾಬ್ದಾರಿ ತಾನು ವಹಿಸಿಕೊಳ್ಳುವುದಾಗಿ ಹೇಳಿದರೂ ಶಾಲೆಯ ಆಡಳಿತ ವರ್ಗ ಒಪ್ಪಲೇ ಇಲ್ಲ. ಬೇಸರಗೊಂಡ ಸುಮನಾ ಅದೇ ಶಾಲೆಯಲ್ಲಿ ಒಂದನೇ ತರಗತಿ ಕಲಿಯುತ್ತಿದ್ದ ತನ್ನ ಮಗಳ ಟಿ.ಸಿ ವಾಪಸ್ ತೆಗೆದುಕೊಂಡು ಬಂದಳು.
ನಂತರ ತನ್ನ ಮಗಳೊಂದಿಗೆ ಪಾರ್ವತಿಯ ಮಗನನ್ನೂ ಬೇರೆ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ದಾಖಲು ಮಾಡಿ, ಎರಡೂ ಮಕ್ಕಳಿಗೆ ಪ್ರತಿದಿನ ತಾನೇ ಖುದ್ದು ಟ್ಯೂಷನ್ ಹೇಳಿಕೊಟ್ಟು ಇಬ್ಬರನ್ನೂ ಕ್ಲಾಸ್ ನಲ್ಲಿ ಉತ್ತಮ ಅಂಕ ಪಡೆಯುವ ಮಕ್ಕಳನ್ನಾಗಿ ಮಾಡಿದ್ದಳು. ಹೀಗೆಯೇ ಪ್ರತಿ ತರಗತಿಯಲ್ಲೂ ಪ್ರಥಮ ರಾಂಕ್ ಪಡೆಯುತ್ತಿದ್ದ ಕಾರ್ತಿಕ್ ಈಗ ಹತ್ತನೇ ತರಗತಿಯಲ್ಲಿ ರಾಜ್ಯಕ್ಕೇ ಪ್ರಥಮ ರಾಂಕ್ ಪಡೆಯುವ ಮೂಲಕ ಸುಮನಾಳ ಪರಿಶ್ರಮಕ್ಕೆ ಫಲ ಕೊಟ್ಟಿದ್ದ.
ಇಂದು ರಾಜ್ಯದ ಮುಖ್ಯಮಂತ್ರಿಗಳ ಕೈಯಿಂದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮಕ್ಕೆ ಸುಮನಾ ತಯರಾಗಿದ್ದಳು. ಪಾರ್ವತಿಗೆ ಆಕಾಶದಲ್ಲಿ ಹಾರಾಡುತ್ತಿರುವ ಸಂಭ್ರಮ. ಅದಕ್ಕೆ ಪೂರಕ ಎನ್ನುವಂತೆ ಯಾವ ಶಾಲೆ ಹುಡುಗನಿಗೆ ಪ್ರವೇಶ ನಿರಾಕರಿಸಿತ್ತೋ ಅದೇ ಶಾಲೆಯ ಅದೇ ಪ್ರಾಂಶುಪಾಲರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಕೈಯಿಂದ ಪಾರಿತೋಷಕ ಸ್ವೀಕರಿಸುವ ಹಾಗೆ ಆಗಿತ್ತು. ಈ ಸಂಗತಿ ಸುಮನಾಳಿಗೆ ಮತ್ತಷ್ಟು ಖುಷಿ ಕೊಟ್ಟಿತ್ತು!
ತನ್ನ ಹೆಸರು ಕರೆದೊಡನೆ ಸ್ಟೇಜ್ ಏರಿದ ಕಾರ್ತಿಕ್ ನನ್ನು ಗೌರವಾನ್ವಿತ ಕುರ್ಚಿಯ ಮೇಲೆ ಕುಳ್ಳರಿಸಿ, ತಲೆಗೆ ಮೈಸೂರು ಪೇಟ ತೊಡಿಸಿದ ಪ್ರಾಂಶುಪಾಲರಿಗೆ ಈ ಹುಡುಗನ ಗುರುತು ಸಿಗಲಿಲ್ಲ. ನಂತರ ಕಾರ್ತಿಕ್ ನಾಲ್ಕು ಮಾತಾಡುವಾಗ ತನ್ನೆಲ್ಲಾ ಸಾಧನೆಗೆ ಹಾಗೂ ಇಂದಿನ ಏಳಿಗೆಗೆ ಕಾರಣರಾದ ಸುಮನಾಳನ್ನು ಸ್ಟೇಜ್ ಮೇಲೆ ಕರೆದು, ಆಕೆಯ ಪರಿಶ್ರಮ ನಿಸ್ವಾರ್ಥ ಸೇವೆಯನ್ನು ಹಾಡಿ ಹೊಗಳಿದ ಕಾರ್ತಿಕ್. ಆಕೆಗೂ ಒಂದೆರಡು ಮಾತನಾಡಲು ಅವಕಾಶ ಮಾಡಿಕೊಟ್ಟಾಗ, ಸುಮನಾ ಹೇಳಿದ ಕಥೆ ಕೇಳಿದ ಆ ಪ್ರಾಂಶುಪಾಲರು ನಾಚಿ ತಲೆ ತಗ್ಗಿಸುಂತಾಯಿತು.
ಅಷ್ಟಕ್ಕೇ ಸುಮ್ಮನಾಗದ ಸುಮನಾ ಆ ಪ್ರಾಂಶುಪಾಲರಿಗೆ, “ನಿಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯ ಗರಿಷ್ಠ ಶೇಕಡ ಎಷ್ಟು ಹಾಗೂ ಸಾಧಾರಣ ಶಾಲೆಯಲ್ಲಿ ಕಲಿತ ಕಾರ್ತಿಕ್ ಪಡೆದ ಶೇಕಡ ಎಷ್ಟು ನೀವೇ ಲೆಕ್ಕಾ ಹಾಕಿ ಸರ್…. ಕೇವಲ ಅಕ್ಷರಸ್ಥರ ಮಕ್ಕಳಿಗೆ ಮಾತ್ರ ಶಿಕ್ಷಣ ಕೊಟ್ಟರೆ ಅನಕ್ಷರಸ್ಥ ತಾಯಿ ತಂದೆಯರ ಮಕ್ಕಳು ತಮ್ಮ ಹೆತ್ತವರ ಹಾದಿಯಲ್ಲಿಯೇ ಹೋಗಬೇಕಾ…? ಆ ಮಕ್ಕಳಿಗೆ ಒಳ್ಳೆ ಶಿಕ್ಷಣದ ಹಸಿವು ಇರುವುದಿಲ್ಲವೇ….?
“ಸಮರ್ಥರನ್ನು ಇನ್ನಷ್ಟು ಸಮರ್ಥರನ್ನಾಗಿಸುವುದರಲ್ಲಿ ನಿಮ್ಮ ಸಾಧನೆ ಏನಿದೆ….? ಅಸಮರ್ಥರನ್ನು ಸಮರ್ಥರನ್ನಾಗಿ ಮಾಡಿತೋರಿಸಿ, ಆಗ ನಿಜವಾದ ನಿಮ್ಮ ಸಾಧನೆ ಕಾಣುತ್ತದೆ,” ಎಂದು ಹೇಳಿದಳು.
ಅದನ್ನು ಕೇಳಿದ ಪ್ರಾಂಶುಪಾಲರಿಗೆ ತಮ್ಮ ತಪ್ಪಿನ ಅರಿವಾಯಿತು. ತಮ್ಮ ಕಠಿಣ ಮನದ ನಿರ್ಧಾರ ಮಂಜಿನಂತೆ ಕರಗಿತು. ತುಂಬಿದ ಸಭೆಯಲ್ಲಿ ಎದ್ದು ನಿಂತು, “ಹೌದು ನನ್ನಿಂದ ನಿಜವಾಗಲೂ ತಪ್ಪಾಯಿತು. ಇನ್ನು ಮುಂದೆ ನಮ್ಮ ಶಾಲೆಯಲ್ಲೂ ಅನಕ್ಷರಸ್ಥ ಹೆತ್ತವರ ಮಕ್ಕಳಿಗೂ ಶಾಲೆಯಲ್ಲಿ ಸೀಟು ಕೊಟ್ಟು ಅವರ ಫೀಸ್ ಕಡಿಮೆ ಮಾಡಿ, ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತೇವೆ,” ಎಂದು ಹೇಳಿದರು.
ಸಭಿಕರ ಜೋರಾದ ಚಪ್ಪಾಳೆಗೆ ಸುಮನಾ ಸಾಕ್ಷಿಯಾದಳು.





