ವ್ಯಂಗ್ಯ - ಕೀರ್ತಿ ಕಿರಣ್ ಕುಮಾರ್
ಏನೋ ಮಾಡಲು ಹೋಗಿ ಇನ್ನೇನೋ ಅವಾಂತರ ಮಾಡಿಕೊಳ್ಳುವುದು ಮನೀಷಾಳ ದಿನಚರಿಯಾಗಿತ್ತು. ಕೊನೆಗಾದರೂ ಅವಳ ಹವ್ಯಾಸಗಳಿಗೆ ಉತ್ತಮ ಪ್ರತಿಫಲ ಸಿಕ್ಕಿತೇ.....?
`ಮನಿ.... ಮನಿ.... ಎಲ್ಲಿದ್ದೀಯಾ....?' ಎಂದು ಕೂಗುತ್ತಲೇ ಹೊರಗಿನಿಂದ ಬರುವುದು ಸಂಪತ್ ನ ನಿತ್ಯ ದಿನಚರಿ. ಹಾಗೆ ಕೂಗುತ್ತಾ ಬಂದ.
ಆದರೆ ಟೆರೇಸ್ ಮೇಲೆ ಸಿಮೆಂಟ್ ಪಾಟ್ ಗಳನ್ನು ಇಟ್ಟುಕೊಂಡು ಪೇಂಟ್ ಮಾಡುತ್ತಿದ್ದ ಮನೀಷಾಳಿಗೆ ಅವನು ಕೂಗಿದ್ದು ಕೇಳಲೇ ಇಲ್ಲ. ಮಣ್ಣಿನ ಕುಂಡಗಳನ್ನು ತಂದು 10 ದಿನಗಳಾಗಿತ್ತು. ಬೆವರು ಸುರಿಯುತ್ತಾ ಇದ್ದರೂ ಸುಡುಬಿಸಿಲಿನಲ್ಲಿ ತಲೆಗೊಂದು ವೇಲು ಸುತ್ತಿಕೊಂಡು, ಪೇಂಟ್ ಮಾಡಿ ವಾರ್ಲಿ ಆರ್ಟ್ ಮಾಡುವುದರಲ್ಲಿ ಮಗ್ನಳಾಗಿದ್ದಳು. ಗಂಡ ಬರುವ ಹೊತ್ತಿಗೆ ಮಾಡಿಬಿಡಬೇಕು ಎಂಬ ತರಾತುರಿ ಅವಳಿಗೆ.
ಸಂಪತ್ ಗೆ ಹೆಂಡತಿ ಮನೀಷಾ ಮಾಡುವ ಪೇಂಟಿಂಗ್ ನ್ನು ಇಷ್ಟಪಡುತ್ತಿದ್ದ. ಅವಳ ಹೊಲಿಗೆ, ನಿಟ್ಟಿಂಗ್, ಕ್ರಾಫ್ಟ್ ಎಲ್ಲವೂ ಅವನಿಗೆ ಅಚ್ಚುಮೆಚ್ಚು. ಪ್ರತಿಯೊಂದಕ್ಕೂ ಪ್ರೋತ್ಸಾಹ ಕೂಡ ಕೊಡುತ್ತಿದ್ದ. ಅತಿಯಾದರೆ ಅಮೃತ ವಿಷವಾಗುವುದು ಅಲ್ಲವೇ? ಯಾವುದೇ ಹವ್ಯಾಸಗಳಾಗಲಿ... ಅವು ಬೇಸರ ಕಳೆಯಲು ಸಮಯವಿದ್ದಾಗ ಮಾಡಬಹುದು. ಅದು ಬಿಟ್ಟು ತನ್ನ ಇಡೀ ದಿನವನ್ನು ಅದಕ್ಕಾಗಿಯೇ ಮುಡುಪಾಗಿಟ್ಟರೆ ಮನೆ ಮಂದಿಗೆ ಇವಳೆಲ್ಲೋ ಕಳೆದು ಹೋಗುತ್ತಿದ್ದಾಳೇನೋ ಎನಿಸದಿರುವುದಿಲ್ಲ, ಅಲ್ಲವೇ....?
ಮನೀಷಾ ಎಲ್ಲವನ್ನೂ ಮಾಡುವಳು, ಆದರೆ ಯಾವುದರಲ್ಲೂ ಪಾರಂಗತಳಲ್ಲ. ಆರಂಭದ ವೇಗ ಕುದುರೆಯನ್ನೂ ಮೀರಿಸುತ್ತದೆ. ಸ್ವಲ್ಪ ದಿನವಾದ ಮೇಲೆ ತನ್ನ ಆಸಕ್ತಿಯ ಕ್ಷೇತ್ರವೇ ಬದಲಾಗಿರುತ್ತದೆ. ಇದು ಸಂಪತ್ ಗೆ ಸದಾ ಕಾಡುವ ಪ್ರಶ್ನೆಯಾಗಿತ್ತು.
ಹೊರಗಿನಿಂದ ಬಂದವನಿಗೆ ವಿಪರೀತ ತಲೆನೋವು, ಅವನಿಗೆ ಕಾಫಿ ಬೇಕಾಗಿತ್ತು. ಹೆಂಡತಿಯನ್ನು ಕೂಗುತ್ತಲೇ ಟೆರೇಸ್ ಗೆ ಹೋದವನು ಇವಳ ಮಡಕೆ ಕುಡಿಕೆ, ಪೇಂಟ್ ಬಾಕ್ಸ್ ಗಳ ರಾಶಿ ರಾಶಿ ಡಬ್ಬಗಳ ನೋಡಿ ಅಸಹನೆಯಿಂದ, ''ನಿನಗೆ ಯಾರು ಈ ಕೆಲಸ ಮಾಡು ಅಂತ ಹೇಳಿರುವುದು....? ನಿಂದು ಅತಿಯಾಯ್ತು. ಎಲ್ಲಾ ನಿಲ್ಲಿಸ್ತೀನಿ ಇರು,'' ಎಂದು ಗದರಿದ.
ಮನೀಷಾ ಗಂಡ ಬೈಯುತ್ತಾರೆಂದೇ ಎಲ್ಲವನ್ನೂ ಟೆರೇಸ್ ಮೇಲೆ ಮಾಡುತ್ತಿದ್ದಳು. ಆದರೂ ಇಂದು ಸಿಕ್ಕಿಹಾಕಿಕೊಂಡುಬಿಟ್ಟಿದ್ದಳು. ದಡದಡನೆ ಕೆಳಗಿಳಿದು ಬಂದು ಪೇಂಟ್ ಆಗಿದ್ದ ಕೈಯನ್ನು ತೊಳೆದುಕೊಂಡು ಕಾಫಿ ಮಾಡಿಕೊಟ್ಟಳು.
ಸಂಪತ್ ಗೆ ತಲೆ ನೋವು ಕಡಿಮೆ ಆದಮೇಲೆ ಮನೀಷಾಳನ್ನು ಬಳಿಗೆ ಕರೆದು, ``ಮನೀಷಾ, ಇದನ್ನೆಲ್ಲಾ ಮಾಡಬೇಡ ಅಂತ ನಿನಗೆ ಹೇಳಲ್ಲ. ಆದರೆ ಈ ರೀತಿ ಎಲ್ಲವನ್ನೂ ಮೈಮರೆತು ಮಾಡುತ್ತಾ ಆರೋಗ್ಯ ಹದಗೆಡಿಸಿಕೊಳ್ಳಬೇಡ,'' ಎಂದು ಪ್ರೀತಿಯಿಂದ ಕಿವಿಮಾತು ಹೇಳಿದ.
ಈ ರೀತಿಯ ಸಂಭಾಷಣೆ ಮೂರು ತಿಂಗಳಿಗೊಮ್ಮೆ ನಡೆಯುತ್ತಲೇ ಇರುತ್ತಿತ್ತು. ಆದರೂ ಮನೀಷಾಳ ಆಸಕ್ತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದವೇ ವಿನಾ ಕಡಿಮೆಯಾಗುತ್ತಿರಲಿಲ್ಲ.
ಮೊದಮೊದಲು ಪತ್ರಿಕೆಯೊಂದರಲ್ಲಿ ಲೇಖನವೊಂದು ಪ್ರಕಟವಾದಾಗ ಹಿಗ್ಗಿ ಹೀರೇಕಾಯಿಯಾಗಿ `ರೀ, ಅವರು ಫೋನ್ ಮಾಡಿ ಲೇಖನ ಚೆನ್ನಾಗಿದೆ ಅಂದ್ರು, ಇವರು ಲೇಖನ ಚೆನ್ನಾಗಿದೆ ಅಂದ್ರು,' ಎಂದು ಗಂಡನ ಕಿವಿ ತೂತುಗುಟ್ಟುವವರೆಗೂ ಹೇಳಿದ್ದೇ ಹೇಳಿ ಹೊಗಳಿಕೊಂಡಿದ್ದಳು.





