ವಿಂಟರ್ ಸೀಸನ್ ನಲ್ಲಿ ಸನ್ ಸ್ಕ್ರೀನಿನ ಬಳಕೆ ಏಕೆ ಅನಿವಾರ್ಯ ಎಂದು ತಜ್ಞರಿಂದ ತಿಳಿಯೋಣವೇ…..?
ಸಾಮಾನ್ಯವಾಗಿ ಹೆಂಗಸರು ಚಳಿಗಾಲದಲ್ಲಿ ಸನ್ ಸ್ಕ್ರೀನ್ ಬಳಸುವುದೇ ಇಲ್ಲ. ಎಲ್ಲೆಡೆ ತಂಪು ತಂಪಾಗಿರುವಾಗ, ಚುಮು ಚುಮು ಬಿಸಿಲು ಹಿತಕರವಾಗಿದ್ದು, ಅದು ಪ್ರಖರವಾಗಿ ನಮ್ಮ ಚರ್ಮ ಸುಡುವುದಿಲ್ಲ ಎಂದು ಭಾವಿಸುತ್ತಾರೆ. ಹೀಗಿರುವಾಗ ಇಂಥ ಬಿಸಿಲಿಗೆ ಸನ್ ಸ್ಕ್ರೀನ್ ವೇಸ್ಟ್ ಎಂದು ಭಾವಿಸುತ್ತಾರೆ, ಆದರೆ ಅಸಲಿಗೆ ಇದು ಸರಿಯಲ್ಲ.
ಚಳಿಗಾಲದಲ್ಲೂ ಸಹ ಸೂರ್ಯನ ತೀಕ್ಷ್ಣ UV ಕಿರಣಗಳು ಹೆಂಗಸರ ಕೋಮಲ ಚರ್ಮದ ಮೇಲೆ ಖಂಡಿತಾ ದುಷ್ಪರಿಣಾಮ ಬೀರುತ್ತದೆ. ಇದರಿಂದ ಅವರಿಗೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆ ಕಾಡುತ್ತವೆ. ಬೇಸಿಗೆಯಲ್ಲಿ ಸನ್ ಸ್ಕ್ರೀನ್ ಬಳಕೆ ಎಷ್ಟು ಅನಿವಾರ್ಯವೋ, ಚಳಿಗಾಲದಲ್ಲೂ ಅದು ಅಷ್ಟೇ ಮುಖ್ಯ ಎಂಬುದನ್ನು ನಾವು ನಿರ್ಲಕ್ಷಿಸಬಾರದು.
ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಬೇಸಿಗೆಯಲ್ಲಿರುವಷ್ಟು ತೀಕ್ಷ್ಣವಲ್ಲ ಎಂದಿದ್ದರೂ, UVA UVB ಕಿರಣಗಳು ಸತತ ನಮ್ಮ ಸಂಪರ್ಕದಲ್ಲಿರುತ್ತವೆ. UVA ಕಿರಣ ನಮ್ಮ ಚರ್ಮದಲ್ಲಿ ಆಳವಾಗಿ ಇಳಿದು, ಅದಕ್ಕೆ ಹಾನಿ ಉಂಟು ಮಾಡುತ್ತದೆ. ಅದರಿಂದಾಗಿ ಚರ್ಮಕ್ಕೆ ಸುಕ್ಕು, ಕಲೆ, ಗುರುತು, ಉಂಗುರಗಳು, ಏಜಿಂಗ್ ನ ಲಕ್ಷಣಗಳು ಅಕಾಲದಲ್ಲೇ ಕಾಡಬಹುದು. UVB ಕಿರಣಗಳು ಮುಖ್ಯವಾಗಿ ಬೇಸಿಗೆಯಲ್ಲಿ ಅತಿ ತೀಕ್ಷ್ಣವಾಗಿರುತ್ತದೆ, ಆದರೆ ಚಳಿಗಾಲದಲ್ಲೂ ಇದರಿಂದ ಇಡಿಯಾಗಿ ಬಚಾವಾಗಲು ಸಾಧ್ಯವಿಲ್ಲ.
ಇದರ ಬಳಕೆ ಯಾವಾಗ?
ಇದರ ಜೊತೆಜೊತೆಯಲ್ಲೇ ಚಳಿಗಾಲದಲ್ಲಿ ಚರ್ಮದಲ್ಲಿನ ಆರ್ದ್ರತೆ ತಗ್ಗುತ್ತದೆ, ಡ್ರೈನೆಸ್ ಹೆಚ್ಚುತ್ತದೆ. ಇದರಿಂದ ಚರ್ಮ ಹೆಚ್ಚು ಸೆನ್ಸಿಟಿವ್ ಆಗುತ್ತದೆ. ಹೀಗಾದಾಗ UV ಕಿರಣಗಳ ಪ್ರಭಾವದಿಂದ ಚರ್ಮದ ಆರ್ದ್ರತೆ ಇನ್ನಷ್ಟು ಮತ್ತಷ್ಟು ತಗ್ಗುತ್ತದೆ. ಇದರಿಂದಾಗಿ ನಮ್ಮ ಚರ್ಮ ಹೆಚ್ಚಿನ ಉರಿ, ನವೆ, ತುರಿಕೆ, ಕಡಿತ ಇತ್ಯಾದಿ ಸಮಸ್ಯೆಗಳಿಗೆ ತುತ್ತಾಗುತ್ತದೆ. ಸನ್ ಸ್ಕ್ರೀನ್ ಇಡೀ ಚರ್ಮದ ಮೇಲೆ ಒಂದು ಸುರಕ್ಷತಾ ಕವಚವಾಗಿ ಕವರ್ ಆಗುತ್ತದೆ. ಅದರಿಂದಾಗಿ ಚರ್ಮದ ಆರ್ದ್ರತೆ ಉಳಿದುಕೊಳ್ಳುತ್ತದೆ, ಅಂದ್ರೆ ಚರ್ಮ ಸೇಫ್! ಕೆಲವು ಸಂಶೋಧನೆಗಳ ಪ್ರಕಾರ, UV ಕಿರಣಗಳ ಅತ್ಯಧಿಕ ಸಂಪರ್ಕದಿಂದಾಗಿ ಸ್ಕಿನ್ ಕ್ಯಾನ್ಸರ್ ನ ಭೀತಿ ತಪ್ಪಿದ್ದಲ್ಲ. ಚಳಿಗಾಲದಲ್ಲಿ ಸೂರ್ಯನ ತೀಕ್ಷ್ಣ ಕಿರಣಗಳು ಕಡಿಮೆ ಎನಿಸಿದರೂ, UVB ಕಿರಣಗಳು ಈಗಲೂ ಸಹ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಸನ್ ಸ್ಕ್ರೀನಿನ ನಿಯಮಿತ ಬಳಕೆಯಿಂದ, ಸ್ಕಿನ್ ಕ್ಯಾನ್ಸರ್ ನಂಥ ಗಂಭೀರ ಕಾಯಿಲೆಯಿಂದ ಪಾರಾಗಬಹುದು.
ಅಕಸ್ಮಾತ್ ನೀವು ಈ ಸೀಸನ್ ನಲ್ಲಿ, ಉ.ಭಾರತದ ಐಸ್ ಉದುರುವ ಕಾಶ್ಮೀರದಂಥ ಸ್ಥಳಕ್ಕೆ ಪ್ರವಾಸ ಹೊರಟ್ಟಿದ್ದರೆ, ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ UVB ಕಿರಣಗಳು ಈ ಐಸ್ ನ್ನು ರಿಫ್ಲೆಕ್ಟ್ ಮಾಡುತ್ತವೆ. ಆಗ ಅದರ ಪರಿಣಾಮ ಇನ್ನಷ್ಟು ತೀವ್ರವಾಗುತ್ತದೆ. ಇದು ನಿಮ್ಮ ಚರ್ಮದ ಮೇಲೆ ಮತ್ತೆ ಮತ್ತೆ ಪ್ರಹಾರ ಮಾಡಬಹುದು, ಇದರಿಂದ ಸನ್ ಬರ್ನ್ ಯಾ ಅನ್ಯ ಚರ್ಮ ತೊಂದರೆಗಳು ಹೆಚ್ಚಾಗಬಹುದು. ಹೀಗಾಗಿ ಇಂಥ ಪ್ರದೇಶದಲ್ಲಿದ್ದಾಗ, ಧಾರಾಳ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಜನ, ನಾವು ಮನೆಯಲ್ಲಿ ತಾನೇ ಇದ್ದೇವೆ, ನಮಗೇಕೆ ಸನ್ ಸ್ಕ್ರೀನ್ ಗೊಡವೆ ಎಂದುಕೊಳ್ಳುತ್ತಾರೆ. ಆನ್ ಲೈನ್, WFH ಕೆಲಸ ಮಾಡುವ ಜನ, ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಹಾಗಲ್ಲ, ವಾಸ್ತವ ಬೇರೆಯೇ ಇದೆ. ಕಿಟಕಿಯಿಂದ ತೂರಿ ಬರುವ ಸೂರ್ಯನ ಬೆಳಕು, ಕಂಪ್ಯೂಟರ್/ಟಿವಿಯ ಬೆಳಕು ಸಹ UVA ಕಿರಣಗಳಷ್ಟೇ ಹಾನಿ ಮಾಡುತ್ತವೆ. ಹೀಗಾಗಿ ಮನೆಯೊಳಗಿದ್ದರೂ ಸನ್ ಸ್ಕ್ರೀನ್ ಬಳಕೆ ತಪ್ಪಿಸಬೇಡಿ.
ಇದನ್ನು ಆರಿಸುವುದು ಹೇಗೆ?
ಚಳಿಗಾಲದಲ್ಲಿ ಇದನ್ನು ಆರಿಸುವಾಗ, ಅದು ಮಾಯಿಶ್ಚರೈಸಿಂಗ್ ಬೇಸ್ಡ್ ಆಗಿರಬೇಕು ಎಂಬುದನ್ನು ಗಮನಿಸಿ. ಚಳಿಗಾಲದಲ್ಲಿ ಮೊದಲೇ ಚರ್ಮ ಶುಷ್ಕತೆಗೆ ತಿರುಗಿರುತ್ತದೆ. ಹೀಗಾಗಿ ನಿಮಗೆ ಸುರಕ್ಷತೆಯೊಂದಿಗೆ ಆರ್ದ್ರತೆ ಸಹ ಒದಗಿಸುವಂಥ ಸನ್ ಸ್ಕ್ರೀನ್ ನ್ನೇ ಆರಿಸಿ. ಇದರ ಜೊತೆಗೆ ಅದು 30+SPF ಸಹ ಆಗಿರಬೇಕು. ನೀವು ಹೊರಗೆ ಹೋಗುವ 15-20 ನಿಮಿಷಗಳಿಗೆ ಮೊದಲು ಇದನ್ನು ಹಚ್ಚಿಕೊಳ್ಳಿ. ಪ್ರತಿ 2 ತಾಸು ಕಳೆದ ನಂತರ, ಮರೆಯದೆ ಇದನ್ನು ಮತ್ತೆ ಮತ್ತೆ ಹಚ್ಚಿಕೊಳ್ಳುತ್ತಿರಬೇಕು.
ನೀವು ಮೇಕಪ್ ಮಾಡಿಕೊಳ್ಳುವ ಮುನ್ನ ಅಗತ್ಯವಾಗಿ ಇದನ್ನು ಹಚ್ಚಲು ಮರೆಯದಿರಿ. ಇತ್ತೀಚೆಗೆ ಲಭ್ಯವಿರುವ ಕಾಸ್ಮೆಟಿಕ್ಸ್ ನಲ್ಲಿ SPF ಬೆರೆತುಕೊಂಡಿರುತ್ತದೆ. ಆದರೂ ಫೌಂಡೇಶನ್ ಗೆ ಮುಂಚೆ ಇದರ ಒಂದು ಪದರ ಹಚ್ಚಿಕೊಳ್ಳುವುದೇ ಲೇಸು. ಇದರಿಂದ ನಿಮ್ಮ ಚರ್ಮಕ್ಕೆ UV ಕಿರಣಗಳಿಂದ ಹೆಚ್ಚಿನ ಸುರಕ್ಷತೆ ಸಿಗುತ್ತದೆ, ಮೇಕಪ್ ಸಹ ಫರ್ಮ್ ಆಗುತ್ತದೆ.
ಇಷ್ಟು ಮಾತ್ರವಲ್ಲದೆ, ಸನ್ ಸ್ಕ್ರೀನ್ ಲೋಶನ್ನಿನ ನಿಯಮಿತ ಬಳಕೆಯಿಂದ ನಿಮ್ಮ ಚರ್ಮ ಸದಾ ಸ್ವಸ್ಥ, ಸುಂದರ, ಯಂಗ್ ಆಗಿ ನಳನಳಿಸುತ್ತಿರುತ್ತದೆ. ಹೀಗಾಗಿ ಚಳಿಗಾಲದಲ್ಲೂ ನಿಮ್ಮ ಚರ್ಮ ಸುರಕ್ಷಿತ ಹಾಗೂ ಸುಂದರ ಆಗಿರಬೇಕಾದರೆ, ನಿಮ್ಮ ಡೇಲಿ ರೊಟೀನ್ ನಲ್ಲಿ ಸನ್ ಸ್ಕ್ರೀನ್ ಬಳಕೆ ಅನಿವಾರ್ಯ.
– ಪ್ರತಿನಿಧಿ





