–  ರಾಘವೇಂದ್ರ ಅಡಿಗ ಎಚ್ಚೆನ್.

ಕಾಂತಾರಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲಿವುಡ್ ದೈತ್ಯ ನಿರ್ಮಾಣ ಸಂಸ್ಥೆ ಸೋನಿ ಪಿಕ್ಚರ್ಸ್ ತನ್ನ ಬಹುನಿರೀಕ್ಷಿತ ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇಚಿತ್ರದ ವಿಶೇಷ ಜಾಗತಿಕ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ. ಮೂಲಕ ಇಂತಹ ಬೃಹತ್ ಹಾಲಿವುಡ್ ಫ್ರಾಂಚೈಸಿಯ ಅಧಿಕೃತ ಪ್ರಚಾರದಲ್ಲಿ ಭಾಗವಹಿಸಿದ ಭಾರತದ ಮೊದಲ ನಟ ಎಂಬ ಅಪರೂಪದ ಹೆಗ್ಗಳಿಕೆಗೆ ರಿಷಬ್ ಪಾತ್ರರಾಗಿದ್ದಾರೆ.

ಸೋನಿ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರೋಮೋ ಬಿಡುಗಡೆ ಮಾಡಿದ್ದು, “Rishab Shetty entering Peter Parker’s world was never on anyone’s bingo card…” ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಂಡಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೊ ವೈರಲ್ ಆಗಿ, ಭಾರತೀಯ ಸಿನಿಪ್ರಿಯರ ಗಮನ ಸೆಳೆದಿದೆ.

ಪ್ರೋಮೋದಲ್ಲಿ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರದ ಅಂತ್ಯದ ಬಳಿಕ ಪೀಟರ್ ಪಾರ್ಕರ್ ಎದುರಿಸುವ ಒಂಟಿತನ, ತನ್ನ ಅಸ್ತಿತ್ವವನ್ನೇ ಜಗತ್ತಿನಿಂದ ಮರೆಮಾಚಿಕೊಳ್ಳುವ ಪರಿಸ್ಥಿತಿ ಹಾಗೂ ಸೂಪರ್ ಹೀರೋ ಆಗಿರುವ ಹೊಣೆಗಾರಿಕೆಯನ್ನು ರಿಷಬ್ ಶೆಟ್ಟಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ವಿವರಿಸಿದ್ದಾರೆ. ಇದು ಜಾಗತಿಕ ಪ್ರೇಕ್ಷಕರಲ್ಲೂ ಕುತೂಹಲ ಮೂಡಿಸಿದೆ.

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವು ‘ನೋ ವೇ ಹೋಮ್’ನ ಮುಂದುವರಿದ ಕಥೆಯಾಗಿದ್ದು, ಪೀಟರ್ ಪಾರ್ಕರ್ ತನ್ನ ಸ್ನೇಹಿತ ನೆಡ್, ಪ್ರಿಯತಮೆ ಎಂಜೆ ಸೇರಿದಂತೆ ಇಡೀ ಜಗತ್ತಿನ ನೆನಪಿನಿಂದ ಅಳಿದುಹೋದ ಬಳಿಕ, ನ್ಯೂಯಾರ್ಕ್ ನಗರದಲ್ಲಿ ಸಂಪೂರ್ಣ ಒಂಟಿಯಾಗಿ ಸ್ಪೈಡರ್ ಮ್ಯಾನ್ ಆಗಿ ಅಪರಾಧಗಳ ವಿರುದ್ಧ ಹೋರಾಡುವ ಕಥಾಹಂದರವನ್ನು ಒಳಗೊಂಡಿದೆ.

ಇದೀಗ ಬಿಡುಗಡೆಗೆ ಕೇವಲ ಮೂರು ದಿನಗಳು ಬಾಕಿ ಇರುವಂತೆಯೇ ಭಾರತದಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಹೊಸ ದಾಖಲೆ ಬರೆಯುತ್ತಿದೆ. ಟಾಮ್ ಹಾಲ್ಯಾಂಡ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಜುಲೈ 30ರಂದು ಇಂಗ್ಲಿಷ್, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ