ಕೃತಕ ಬುದ್ಧಿಮತ್ತೆ ಅಥವಾ ಎ.ಐನ ಅಂಗವಾದ ಚ್ಯಾಟ್ ಜಿಟಿಪಿ ಯ ಟೂಲ್ಸ್ ಕುರಿತು ವಿವರವಾಗಿ ತಿಳಿಯೋಣವೇ…..?
ಇಂದು ನಾವು ಎಲ್ಲರೂ ನಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇವೆ. ಒಬ್ಬರ ಸಮಯ ಮತ್ತೊಬ್ಬರ ವೇಳೆಗೆ ಹೊಂದಿಸಿಕೊಳ್ಳುವುದೇ ಕಷ್ಟ. ಕೆಲವೊಮ್ಮೆ ಮಾತು, ಪ್ರಶ್ನೆ, ಆಲೋಚನೆಗಳು ನಮ್ಮೊಳಗೆ ಹುಟ್ಟಿ ಅಲ್ಲೇ ಮರೆತಂತೆ ನಮಗೆ ಆ ಚಿಂತನೆ ಬಂದಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಸತ್ತಿರುತ್ತದೆ.
ಆದರೆ ಈ ಎ.ಐ (ಆರ್ಟಿಫಿಶಿಯ್ ಇಂಟೆಲಿಜೆನ್ಸ್) ಎಂಬ ಅತ್ಯಾಪ್ತ ಸ್ನೇಹಿತ ಎಲ್ಲರ ಕೈಯಲ್ಲೂ ಇದೆ. ನಾನು ಏನೇ ಕೇಳಲಿ, ಏನೇ ಹೇಳಲಿ ಶಾಂತವಾಗಿ ಕೇಳಿ ಉತ್ತರಿಸುತ್ತದೆ. ಯಾವುದೇ ಕಿರಿಕಿರಿ ಇಲ್ಲದೆ, ಸ್ನೇಹಿತನೇ ಅಲ್ಲ, ಗುರು, ಮಾರ್ಗದರ್ಶಕ, ಪ್ರೋತ್ಸಾಹಕ ಇವರೆಲ್ಲರ ಪಾತ್ರ ವಹಿಸುತ್ತದೆ. ಅದರ ಪರಿಚಯ ನಿಮಗೂ ಬೇಕೇ? ಹೆಸರು ಚ್ಯಾಟ್ ಜಿಟಿಪಿ. ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ನಿರ್ಮಿತವಾಗಿರುವ ಒಬ್ಬ ಡಿಜಿಟಲ್ ಗೆಳೆಯ/ಗೆಳತಿ ಎಂದು ಹೆಸರಿಡಬಹುದು.
ಚ್ಯಾಟ್ ಜಿಟಿಪಿ ಯಾವಾಗಲೂ ನಮ್ಮ ಜೊತೆಗಿರಲು ಒಮ್ಮೆ ನಿಮ್ಮ ಸಿಸ್ಟಮ್ ನಲ್ಲಿ ಲಾಗಿನ್ ಆಗಿ ಅಷ್ಟೇ ಸಾಕು. ಮುಂದಿನದು ಇಲ್ಲಿ ನೀವು ಏನನ್ನೇ ಕೇಳಬಹುದು, ಹೇಳಬಹುದು.
ಇದರ ಬಳಿ ಯಾವಾಗಲೂ ಸಮಯ ಇದೆ. ನಾವು ಫ್ರೀ ಇದ್ದಾಗ ನಮ್ಮ ಮಾತು, ಆಲೋಚನೆ ಹಂಚಿಕೊಳ್ಳಬಹುದು. ಪ್ರಶ್ನೆಗಳಿಗೆ ಉತ್ತರ ಹುಡುಕಬಹುದು. ಇದು ಸಂಸ್ಥೆ ನಿರ್ಮಿಸಿರು ಚಾಟ್ ಬಾಟ್. ಇದಕ್ಕೆ ಮುಂಚಿತವಾಗಿಯೇ ಅಪಾರ ಮಾಹಿತಿಯ ತರಬೇತಿ ನೀಡಲಾಗಿರುತ್ತದೆ. ಹೀಗಾಗಿ ಇದು ಸಂಭಾಷಣೆಯ ಮುಖಾಂತರ ನಮಗೆ ಜ್ಞಾನವನ್ನು ಹಂಚುತ್ತದೆ.
ವೈಶಿಷ್ಟ್ಯಗಳು
ವೈಯಕ್ತಿಕ ವಿಚಾರಗಳಿಗೂ ಸಮಾಧಾನಕರ ಉತ್ತರ.
ಸಾಹಿತ್ಯ, ಕನ, ಕಥೆ, ಪಠ್ಯಗಳಲ್ಲಿ ಸಹಾಯ.
ಜೋತಿಷ್ಯ, ವಿಜ್ಞಾನ, ಟೆಕ್ನಾಲಜಿ, ಹಾಸ್ಯ, ಲೆಕ್ಕಾಚಾರ ಮಿತಿ ಇಲ್ಲದ ವಿಷಯ.
ನಾವು ತೃಪ್ತಿಯಾಗುವವರೆಗೂ ವಿವಿಧ ಆಯಾಮಗಳಲ್ಲಿ ಉತ್ತರ.
ನನ್ನ ಅನುಭವ
ನನಗೆ ನನ್ನ ಕವನಗಳನ್ನು ಹಾಡುಗಳಾಗಿ ಮಾಡಲು ಬಹಳ ಆಸೆಯಿತ್ತು. ಆದರೆ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಆದರೆ, ಚ್ಯಾಟ್ ಜಿಟಿಪಿಯಲ್ಲಿ ಕವನ ಹಾಕಿದ ಕೂಡಲೇ ನನ್ನ ಕವನಕ್ಕೆ ಒಂದೊಳ್ಳೆಯ ಫೀಡ್ ಬ್ಯಾಕ್ ನೀಡಿ ನನ್ನನ್ನು ಹುರಿದುಂಬಿಸಿತು. ನನ್ನ ಸಾಹಿತ್ಯವನ್ನು ಸುಂದರವಾಗಿ ಹಾಡಿಗೆ ಹೊಂದುವಂತೆ ರೂಪಿಸಿತು. ಸುನೋ ಎಂಬ ಮತ್ತೊಂದು ಸಾಧನವನ್ನು ಪರಿಚಯಿಸಿತು. ಅಲ್ಲಿ ಒಂದು ನಿಮಿಷದಲ್ಲಿ ರಾಗತಾಳಲಯ ಸೇರಿಸಿ ಹಾಡು ಸಿದ್ಧವಾಯಿತು. ಒಂದು ಪೈಸೆ ಖರ್ಚಿಲ್ಲದೆ ಒಬ್ಬ ಹಾಡುಗಾರನನ್ನು ಹುಡುಕದೆ ನನ್ನ ಹಾಡುಗಳು ಕ್ಷಣ ಮಾತ್ರದಲ್ಲಿ ಹಾಡು ಆದದ್ದು ಖುಷಿಯಿದೆ, ಸಾಮಾನ್ಯ ಬರಹಗಾರರಿಗೆ ತಮ್ಮ ಸಾಹಿತ್ಯವನ್ನು ಹಾಡಾಗಿಸೋದು ಎಷ್ಟು ಸವಾಲಿನ ಆಸೆ ಅಲ್ಲವೇ? ಇದನ್ನು ನಿಜ ಮಾಡಿಕೊಳ್ಳಿ.
ಇಷ್ಟೇ ಅಲ್ಲ, ಮತ್ತೊಂದು ಟೂಲ್ ಬಳಸಿ ಅದೇ ಹಾಡನ್ನು ವೀಡಿಯೋ ಮಾಡಿ ಸ್ನೇಹಿತರಿಗೆ ಹಂಚಿಕೊಂಡೆ. ನನ್ನ ಕನಸು ನನಸಾಯಿತು ಅನ್ನುವ ಖುಷಿಯಾಯ್ತು.
ಕೊನೆಯ ಮಾತು ಇಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಆತ್ಮೀಯರು ಸಾವಿರಾರು ಸಂಖ್ಯೆಯಲ್ಲಿ ನಮ್ಮ ಜೊತೆಗಿದ್ದಾರೆ. ಮುಗಿಸದೆ ಉಳಿದ ಮಾತುಗಳು, ಹಾಡುಗಳು, ವೀಡಿಯೋಗಳು ಇದ್ದರೆ, ಇವರು ನಮ್ಮ ಜೊತೆಗಿದ್ದು ಸಮಯ ಕಳೆಯಲು ಸಹಾಯ ಮಾಡುತ್ತಾರೆ.
ಉಪಯೋಗಿಸಲು ಒಳ್ಳೆಯದು, ಕಲಿಯಲು ಸಹ ಒಳ್ಳೆಯದು. ನಾವು ಕೂಡಾ ಹೊಸ ತಂತ್ರಜ್ಞಾನಕ್ಕೆ ಅಪ್ ಡೇಟ್ ಆಗೋಣ ಬನ್ನಿ. ಎಂದಿನಂತೆ ಇದು ಕೃತಕವಾಗಿದ್ದು ಕೆಲವೊಂದು ಸಂದರ್ಭಕ್ಕೆ ಹೊಂದಿಕೆ ಆಗದ ಚಿತ್ರಗಳು, ಉಚ್ಚಾರಣೆ ಕೊಡೋದು ಇರುತ್ತದೆ. ನಮಗೆ ಬದಲಾವಣೆ ಬೇಕಾದ ಕಡೆ ನಾವು ಸೂಕ್ತವಾಗಿ ಎಡಿಟ್ ಮಾಡಿ ಸೇರಿಸಿಕೊಳ್ಳಬಹುದು.
– ಅನುಪಮ ಜಿ.





