ಹೆಂಗಸರು ಎಂದರೆ ಗಂಡಸರ ಸೊತ್ತಲ್ಲ
ಹಿಂದೊಂದು ಕಾಲವಿತ್ತು, ವಿಶ್ವದ ಎಲ್ಲಾ ದೇಶಗಳಲ್ಲೂ ಕಡಿಮೆ ಮಕ್ಕಳು ಹಡೆಯಿರಿ ಎಂದು ಇನ್ಸೆಂಟಿವ್ ನೀಡಿ `ನಾವಿಬ್ಬರು ನಮಗಿಬ್ಬರು,’ ಯಾ `ನಾವಿಬ್ಬರು ನಮಗೊಬ್ಬರು’ ಎಂದೋ ಘೋಷಣೆ ಕೂಗಲಾಗುತ್ತಿತ್ತು, ಆದರೆ ಇದೀಗ ಪರಿಸ್ಥಿತಿ ಉಲ್ಟಾ ಆಗಿದೆ! ಪ್ರತಿಯೊಂದು ದೇಶ ಕುಗ್ಗಿ ಹೋಗುತ್ತಿರುವ ತನ್ನ ಪ್ರಜಾಸಂಖ್ಯೆ ಹೆಚ್ಚಿಸಿಕೊಳ್ಳಲು, ಹೆಚ್ಚುತ್ತಿರುವ ವೃದ್ಧರನ್ನು ಕಂಡು ಚಿಂತೆಗೊಳಗಾಗಿದೆ. ಮುಂದಿನ 50 ವರ್ಷಗಳಲ್ಲಿ ಈ ಸ್ಥಿತಿ ಇನ್ನಷ್ಟು ಭಯಾನಕ ಆಗಲಿದೆ.
ಭಾರತದಲ್ಲಿ 1960ರಲ್ಲಿ ಪ್ರತಿ ಹೆಣ್ಣೂ 5-6 ಮಕ್ಕಳನ್ನು ಹೆರುತ್ತಿದ್ದಳು. ಇಂದು 1-2ಕ್ಕೆ ಅದು ಸೀಮಿತಾಗಿದೆ, ಅಂದ್ರೆ ಜನಸಂಖ್ಯೆ ಬಿಲ್ ಕುಲ್ ತಗ್ಗುತ್ತಿದೆ. ಒನ್ ಚೈಲ್ಡ್ ಪಾಲಿಸಿಗೆ ಮೊದಲು ಚೀನಾದಲ್ಲಿ ಪ್ರತಿ ಹೆಣ್ಣೂ 5-6 ಮಕ್ಕಳನ್ನು ಹೆರುತ್ತಿದ್ದಳು. ಇಂದು ಇಬ್ಬರು ಹೆಂಗಸರ ಗುಂಪಲ್ಲಿ ಒಂದೇ ಮಗು ಕಾಣಿಸುತ್ತದೆ. ಚೀನಾದ ಪಾಪ್ಯುಲೇಶನ್ ಕಂಟ್ರೋಲ್ ಪಾಲಿಸಿಯ 50 ವರ್ಷಗಳ ನಂತರ ಬಲು ಭಯಾನಕ ರಿಸಲ್ಟ್ ಕಂಡುಬರುತ್ತಿದೆ.
ಇಂದು ಆಧುನಿಕ ಹೆಣ್ಣು ಹೆಚ್ಚು ಮಕ್ಕಳ ಹೆರುವ ಬದಲು ತನ್ನ ಕೆರಿಯರ್ ನಲ್ಲಿ ಆಸಕ್ತಳಾಗಿದ್ದಾಳೆ. ಇದು ನಮ್ಮಲ್ಲಿ ಮಾತ್ರವಲ್ಲದೆ ಪಾಕ್, ಬಾಂಗ್ಲಾ, ಸೋಮಾಲಿಯಾಗಳಲ್ಲೂ ಹೆಂಗಸರು ಹೆಚ್ಚು ಮಕ್ಕಳ ಬದಲು ತಮ್ಮ ಉನ್ನತ ವ್ಯಾಸಂಗ, ಉತ್ತಮ ಲೈಫ್ ಸ್ಟೈಲ್ ಕಡೆ ಗಮನ ಹರಿಸುತ್ತಿದ್ದಾರೆ. ಎಕಾನಮಿ ಎಂಥ ಟರ್ನ್ ನೀಡಿದೆ ಅಂದ್ರೆ, ಇಂದು ಸ್ವಂತ ಮನೆ ಅತ್ಯಗತ್ಯ, ಲೈಟ್ ಗೂಡ್ಸ್, ಬೇಕೇಬೇಕು, ಕಾರು, ಐಷಾರಾಮದ ಜೀವನ ಬೇಕೇ ಹೊರತು ಮಕ್ಕಳು ಅಲ್ಲ!
ಇದೀಗ ಮಕ್ಕಳ ಖರ್ಚು ಬಲು ಹೆಚ್ಚಾಗುತ್ತಿದೆ. ಅವರ ದುಬಾರಿ ಸ್ಕೂಲಿಂಗ್ ಫೀಸ್, ಬೇಬಿ ನ್ಯಾಪಿಯಿಂದ ಬೇಬಿ ಕೇರ್ ವರೆಗೂ, ಕ್ರೀಚ್ ಸರ್ವೀಸ್ ಅಂತೂ ನಂಬುವ ಹಾಗೇ ಇಲ್ಲ. ಮಗು ಆದ ನಂತರ ತಾಯಿಯ 23 ವರ್ಷದ ಕೆರಿಯರ್ ಮುಳುಗಿದಂತೆಯೇ. ಆಗ ಆಕೆ ತನ್ನ ಸಹೋದ್ಯೋಗಿಗಳಿಗಿಂತ ಹಿಂದೆ ಉಳಿಯುತ್ತಾಳೆ. ತನ್ನ ತುಂಬು ಯೌವನದ ದಿನಗಳನ್ನು ಈ ತಾಯ್ತನಕ್ಕಾಗಿ ವ್ಯಯಿಸದೆ, ತನ್ನ ಬೆಟರ್ ಕೆರಿಯರ್‌ಎಂಜಾಯ್ ಮೆಂಟ್ ಕಡೆ ಹೆಚ್ಚು ಗಮನಹರಿಸುತ್ತಾಳೆ.
ವಿಶ್ವದ ಎಲ್ಲೆಡೆ ನಾಗರಿಕತೆ ಬೆಳೆದಂತೆ, ಬೇಕೆಂದೇ ಹೆಣ್ಣನ್ನು ಮಕ್ಕಳು ಹೆರುವ ಯಂತ್ರ ಮಾಡಿಟ್ಟು, ಅವಳು ಸದಾ ಅದರಲ್ಲಿ ಚಿಂತಿಸುತ್ತಿರುವಂತೆ ಗಂಡಿನ ಜೊತೆ ಪೈಪೋಟಿಗೆ ಬಾರದಂತೆ ಮಾಡಲಾಯಿತು. ಹೆಚ್ಚು ಮಕ್ಕಳು ಹುಟ್ಟಿದಂತೆ, ಗಂಡಸರ ಲೈಂಗಿಕ ಸುಖಕ್ಕಾಗಿ ಮಾರುಕಟ್ಟೆಯಲ್ಲಿ ಹೆಣ್ಣುಗಳ ಸಂಖ್ಯೆಯೂ ಹೆಚ್ಚುತ್ತದೆ. ಧರ್ಮಗುರು, ರಾಜರಿಗಾಗಿ ಸಾವಿಗಂಜದೆ ಹೋರಾಡಲು ಗಂಡು ಮಕ್ಕಳಿದ್ದಾರೆ. ಪ್ರಾಚೀನ ಕಾಲದಿಂದಲೂ ಧರ್ಮ ಹೆಣ್ಣನ್ನು ಹೀಗೆ ಕಂಟ್ರೋಲ್ ಮಾಡುತ್ತಾ ಸಮಾಜದ ಕಾಲಕಸ ಆಗಿಸಿದೆ. ಮಕ್ಕಳ ನೆಪದಲ್ಲಿ ಹೆಣ್ಣನ್ನು ಗುಲಾಮಳಾಗಿಸಿದೆ.
ಆಧುನಿಕ ವಿಜ್ಞಾನ, ತಂತ್ರಜ್ಞಾನ, ಅದರಿಂದ ಸಿಗುವ ಶಿಕ್ಷಣ, ಸಮಾನತೆಯ ಭಾವನೆಗಳು, ಹೆಣ್ಣಿಗೆ ಸ್ವಾತಂತ್ರ್ಯ, ಗೌರವಾದರಗಳನ್ನು ತಂದುಕೊಟ್ಟಿವೆ. ಹೆಂಗಸರು ಎಂದೂ ಗಂಡಸರ ಸೊತ್ತಲ್ಲ, ಮಕ್ಕಳನ್ನು ಹೊತ್ತು ಹೆತ್ತು ಸಾಕಿ ಸಲಹುವ ಆಯಾ ಅಲ್ಲ, ಸೆಕ್ಸ್ ಸುಖಕ್ಕಾಗಿ ಮಾತ್ರ ಇವರು ತೊಗಲು ಬೊಂಬೆಯಲ್ಲ, ಮನೆವಾರ್ತೆ ನೋಡಿಕೊಂಡು ಅಡುಗೆ ಮಾಡುತ್ತಾ ಬಿದ್ದಿರುವ ಆಳಲ್ಲ. ಅವಳು ಗಂಡಿಗೆ ಸರಿಸಮಾನಳು!
ಹೀಗಾಗಿ ಹೆಂಗಸರ ಘೋರ ವಿರೋಧಿ ಟ್ರಂಪಣ್ಣ, ತನ್ನ ಹೊಸ ಬಿಗ್ ಬ್ಯೂಟಿಫುಲ್ ಕಾನೂನಿನಲ್ಲಿ ಪ್ರತಿ ಹೊಸ ಮಗುವಿಗೆ 1000 ಡಾಲರ್ ನೀಡುವೆ ಎಂದು ಘೋಷಿಸಿ, ಪ್ರತಿ ಮನೆಗೂ 500 ಡಾಲರ್ ನೀಡುತ್ತಾ, ಮಗುವಿಗೆ 18 ವರ್ಷ ಆಗುವವರೆಗೂ ಅದು ಟ್ಯಾಕ್ಸ್ ಬಡ್ಡಿ ರಹಿತವಾಗಿ ಸಿಗಲಿದೆ ಎಂದಿದ್ದಾರೆ.
ಯೂರೋಪಿನ ಎಲ್ಲಾ ದೇಶಗಳೂ ಹೆಚ್ಚು ಮಕ್ಕಳನ್ನು ಹೆರಲೆಂದೇ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿವೆ. ಮಕ್ಕಳ ಜನ್ಮದರ ಅತಿ ಕಡಿಮೆ ಇರುವಂಥ ಕೊರಿಯಾ, ಚೀನಾಗಳಲ್ಲಿ ವಿಧವಿಧವಾದ ಪ್ರಲೋಭನೆಗಳನ್ನು ಒಡ್ಡಾಗುತ್ತಿದೆ. ಇಲ್ಲಿನ ಅತಿ ದೊಡ್ಡ ಕಷ್ಟ ಎಂದರೆ ಸುಶಿಕ್ಷಿತ ಹೆಣ್ಣು ಇಂಥದ್ದಕ್ಕೆಲ್ಲ ಮರುಳಾಗುವವಳಲ್ಲ. ತನ್ನನ್ನು ಕಂಟ್ರೋಲ್ ಮಾಡಲೆಂದೇ ಸರ್ಕಾರ ಇಂಥ ಹುನ್ನಾರ ನಡೆಸುತ್ತಿದೆ ಎಂದು ಅವಳು ಬಲ್ಲಳು. ಅಸಲಿಗೆ ಪ್ರತಿ ದೇಶದಲ್ಲೂ ಧರ್ಮ/ಸಂಸ್ಕೃತಿಯ ಹೆಸರಲ್ಲಿ ಇಂದಿಗೂ ದಬ್ಬಾಳಿಕೆ ನಡೆದೇ ಇದೆ, ಅದು ಬೇಕೆಂದೇ ಹೆಣ್ಣನ್ನು ದುರ್ಬಲಗೊಳಿಸುತ್ತಿದೆ. ಗಂಡಿನ ಸುಖಕ್ಕಾಗಿಯೇ ಹೆಣ್ಣು ಇರುವುದು ಎಂಬುದೇ ಇದರ ಹಿಂದಿನ ಗುಟ್ಟು.
ಇಂದು ವಿಶ್ವದ ಜನಸಂಖ್ಯೆ ಸರಿಸುಮಾರು 8.2 ಸಹಸ್ರ ಕೋಟಿಗೂ ಮೀರಿದೆ, ಮುಂದಿನ 15-20 ವರ್ಷಗಳಲ್ಲಿ ಮತ್ತಷ್ಟು ಹೆಚ್ಚಲಿದೆ, ನಂತರ ವೇಗವಾಗಿ ತಗ್ಗಲಿದೆ. ಆದರೆ ಎಲ್ಲಿಯವರೆಗೆ 34 ಸಹಸ್ರ ಕೋಟಿವರೆಗೂ ಆಗುವುದಿಲ್ಲವೇ, ಮಾನವರಿಗೆ ಇಂದು ಸಿಗುತ್ತಿರುವ ಸುಖ, ಅದರಲ್ಲಿ ಯಾವ ಕೊರತೆಯೂ ಆಗದು, ಏಕೆಂದರೆ ಬಹಳಷ್ಟು ಕೆಲಸಗಳು ಇಂದು ಯಾಂತ್ರಿಕವಾಗಿಯೇ ಜರುಗುತ್ತಿವೆ.
ಜನಸಂಖ್ಯೆ ಹೆಚ್ಚಲಿ ಎಂಬ ಅಪೇಕ್ಷೆ ಕೇವಲ ಧರ್ಮಗುರು ಯಾ ಸರ್ಕಾರಗಳದ್ದು ಮಾತ್ರ. ಇವೆರಡಕ್ಕೂ ಜನತೆಯಿಂದ ರಾಶಿ ಹಣ ಬೇಕು. ಒಂದಕ್ಕೆ ದಾನವಾಗಿ, ಇನ್ನೊಂದಕ್ಕೆ ಟ್ಯಾಕ್ಸ್ ರೂಪದಲ್ಲಿ. ಹೆಂಗಸರ ಶ್ರೇಯಸ್ಸು ಕಟ್ಟಿಕೊಂಡು ಇವೆರಡಕ್ಕೂ ಏನೂ ಆಗಬೇಕಿಲ್ಲ. ಶತಶತಮಾನಗಳ ಹಿಂದಿನಿಂದಲೂ ಇವೆರಡೂ ಕೂಡಿಯೇ ಹೆಣ್ಣನ್ನು ಮದುವೆ ಎಂಬ ಬಂಧನದಲ್ಲಿ ಸಿಕ್ಕಿಸಿ, ಗಂಡಿಗೆ ಮಾತ್ರ ಮಾರುಕಟ್ಟೆಯಲ್ಲಿ ಸ್ವಚಂಧವಾಗಿ ವೇಶ್ಯಾ ಸುಖ ಸಿಗುವಂತೆ ಮಾಡಿದೆ. ವಿಶ್ವದ ಪ್ರತಿ ಧರ್ಮ ವೇಶ್ಯೆಯನ್ನು ಪಾಪದಕೂಪ ಎಂದೇ ಭಾವಿಸುತ್ತದೆ. ಆದರೆ ಯಾವ ಗಂಡನ್ನೂ ವೇಶ್ಯೆ ಬಳಿ ಹೋಗದಂತೆ ತಡೆಯಲಿಲ್ಲ! ನಮ್ಮ ಪುರಾಣದ ರಂಭಾ, ಊರ್ವಶಿ, ಮೇನಕೆಯರೂ ಈ ಶಾಪದಿಂದ ಮುಕ್ತರಲ್ಲ, ಆದರೆ ಸೀತಾ ಅಹಲ್ಯೆಯರ ಮೇಲೆ ಪರಪುರುಷನ ದೃಷ್ಟಿ ಬಿದ್ದ ತಕ್ಷಣ ಅವರು ಸಮಾಜದ ದೃಷ್ಟಿಯಲ್ಲಿ ಪತಿವತೆಯರಾದರು!
ಮಕ್ಕಳ ಜವಾಬ್ದಾರಿಯಿಂದ ಮುಕ್ತರಾದಾಗ ಮಾತ್ರ ಹೆಣ್ಣಿಗೆ ಸ್ವಾತಂತ್ರ್ಯ ಸಿಗುತ್ತದೆ. ಸಮಾಜ, ಧರ್ಮ, ಸರ್ಕಾರ, ಪತಿ ಹೊರತಾಗಿ ತನ್ನ ತಾಯ್ತನದ ಸುಖಕ್ಕಾಗಿ ಮಾತ್ರ ಹೆಣ್ಣು, ಮಕ್ಕಳನ್ನು ಹೆರುವಂತಾಗಬೇಕು. ಇದು ಪ್ರಕೃತಿಧರ್ಮ, ಆದರೆ ಶತಶತಮಾನಗಳಿಂದಲೂ ಧರ್ಮ ಹೆಣ್ಣನ್ನು ತನಗೆ ಬೇಕಾದಂತೆ ಕುಣಿಸುತ್ತಿದೆ, ಅನಂತ ದೇವರುಗಳನ್ನು ಸೃಷ್ಟಿಸಿ ಅವಳ ತಲೆಗೆ ಅನಗತ್ಯ ಭಾವನೆಗಳನ್ನು ತುಂಬಿಸಿ, ಮೂರ್ಖಳನ್ನಾಗಿಸಿದೆ. ಗಂಡನನ್ನು `ಪತಿ ಪರಮೇಶ್ವರ’ ಆಗಿಸಿ, ಪತ್ನಿಗೆ ಪತಿವ್ರತೆಯ ಪಟ್ಟ ಕಟ್ಟಿ, ಮಕ್ಕಳು ಹೆರುವ ಯಂತ್ರ ಆಗಿಸಿದೆ. ಶಿಕ್ಷಣದಿಂದ ಮಾತ್ರ ಹೆಣ್ಣಿಗೆ ಇವೆಲ್ಲದರಿಂದ ಮುಕ್ತಿ.
ಮದುವೆ ತೊಂದರೆ ಆಗಿ ಹೋಗಬಾರದು
ಪತಿಪತ್ನಿ ಜಗಳ ಆಡಿದಾಗೆಲ್ಲ ಹೊಳೆಯುವ ಸುಲಭ ಪರಿಹಾರ ಎಂದರೆ, ಧರ್ಮದ ಹೆಸರಲ್ಲಿ ಪುರೋಹಿತರು, ಫಾದರ್ಸ್, ಮೌಲ್ವಿಗಳು ಕ್ಷಣಾರ್ಧದಲ್ಲಿ ಮದುವೆ ಮಾಡಿಸುವಂತೆಯೇ, ಇಂದಿನ ಕೋರ್ಟುಗಳು ನಿಮಿಷಗಳಲ್ಲಿ ಅಲ್ಲದಿದ್ದರೂ ತಿಂಗಳುಗಳಲ್ಲಾದರೂ ಇಬ್ಬರಿಗೂ ಈ ಬಂಧನ ಬಿಡಿಸಿ, ವಿಚ್ಛೇದನ ಕೊಡಿಸುವಂತಾಗಬೇಕು. ಇತ್ತೀಚಿನ ಒಂದು ಹೊಸ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಪಂಜಾಬಿನ ಒಬ್ಬ ಪತ್ನಿಗೆ ಮಗನಿಂದ ದೂರ ಇರುವಂತೆ ಆದೇಶಿಸಿ, ಆ ಮಗನ ಜವಾಬ್ದಾರಿಯನ್ನು ತಂದೆಗೇ ವಹಿಸಿತು. ಆದರೆ ಅವರಿಬ್ಬರಿಗೂ ವಿಚ್ಛೇದನ ನೀಡಲೇ ಇಲ್ಲ! ಇದರ ಕುರಿತಾಗಿ ಹೊರಬಿದ್ದ ಸತ್ಯಾಂಶಗಳ ಪ್ರಕಾರ, ಈ ಜೋಡಿಗೆ 2 ಮಕ್ಕಳಿವೆ, ಮಗ ಮತ್ತು ಮಗಳು. ಇಂಗ್ಲೆಂಡ್ ಗೆ ಹೊರಟುಹೋದ ಪತ್ನಿ ಅಲ್ಲಿಂದಲೇ ವಿಚ್ಛೇದನಕ್ಕೆ ಪ್ರಯತ್ನಿಸಿದಳು. ಪತಿ ಅವಳ ಈ ಇಂಗ್ಲೆಂಡ್ ಕೋರ್ಟಿನ ಅಹವಾಲನ್ನು ವಿರೋಧಿಸಿದ.
ಇತ್ತ ಪಂಜಾಬ್ ನ ತನ್ನ ನಗರದಲ್ಲೇ ಡೈವೋರ್ಸ್ ಗೆ ಅಪ್ಲೈ ಮಾಡಿದ ಪತಿಗೆ ವಿರುದ್ಧ ಆಕೆ ಅಲ್ಲಿಂದಲೇ ತಡೆ ಒಡ್ಡಿದಳು. ಹೀಗಾಗಿ ಈ ಜಗ್ಗಾಟದಲ್ಲಿ ಮಕ್ಕಳು ನಲುಗುತ್ತಿವೆ. ಏಕೆಂದರೆ ಪತ್ನಿ ಪ್ರಕಾರ ಅಲ್ಲಿನ ಕೋರ್ಟಿನಲ್ಲಿ ಹೇಳಿದ್ದು, ಇಬ್ಬರು ಮಕ್ಕಳೂ ತನ್ನ ಬಳಿ ಇಂಗ್ಲೆಂಡ್ ನಲ್ಲೇ ಸುರಕ್ಷಿತವಾಗಿ ಇದ್ದಾರೆ ಅಂತ. ಆದರೆ ಅದರಲ್ಲಿ ಒಂದು ಮಗು ಅವಳ ತಾಯಿತಂದೆ ಬಳಿ ಇತ್ತು. ಹೈಕೋರ್ಟಿಗೆ ಈ ವಿಷಯ ತಿಳಿದಾಗ, ಆ ಮಗನ ಕಸ್ಟಡಿ ತಂದೆಗೇ ವಹಿಸಿತು! ಆ ಪತ್ನಿಗೆ ಬೇಕಿದ್ದರೆ ಸುಪ್ರೀಂಕೋರ್ಟಿಗೆ ಹೋಗು ಎಂದು ಗದರಿಸುತ್ತಾ, ಈ ಹೆಂಗಸು ಎರಡೂ ದೇಶಗಳ ಕೋರ್ಟಿನ ಸಮಯ ಹಾಳು ಮಾಡುತ್ತಿದ್ದಾಳೆ ಎಂದು ಧಿಕ್ಕರಿಸಿತು. ಅಂತೂ ಆ ಮಗ ಅಜ್ಜಿ ತಾತಂದಿರ ಬಳಿಯಿಂದ ಅಪ್ಪನ ಬಳಿ ಬರುವಂತಾಯಿತು.
ತಾಯಿತಂದೆಯರ ಜಗಳದಲ್ಲಿ ಫುಟ್ಬಾಲ್ ನಂತಾಗುವ ಈ ಮಕ್ಕಳ ಪಾಡು ಏನು? ಇದನ್ನು ಯಾರಾದರೂ ತಿಳಿಯಬಹುದು. ಆದರೆ ಈ ಪತಿಪತ್ನಿ ಮಧ್ಯೆ ನಡೆಯುತ್ತಿರುವ ಘೋರವನ್ನು ಯಾರು ಅರಿಯಬೇಕು? ಧರ್ಮ ಹೇರಿರುವ ಮದುವೆ ವ್ಯವಸ್ಥೆಯನ್ನು ಉಳಿಸಿಕೊಳ್ಳಲೇಬೇಕು ಎಂದು ವಿಶ್ವದೆಲ್ಲೆಡೆಯ ಕೋರ್ಟುಗಳು ಇವರಿಬ್ಬರನ್ನೂ ವರ್ಷಗಟ್ಟಲೆ ಕಟಕಟೆಗೆ ಎಳೆದಾಡುತ್ತಿರುತ್ತವೆ. ಇಬ್ಬರೂ ಒಪ್ಪಿದಾಗ ಮಾತ್ರ ಹೆಚ್ಚಿನ ದೇಶಗಳು ವಿಚ್ಛೇದನಕ್ಕೆ ಅವಕಾಶ ನೀಡುವುದು. ಆದರೆ ಒಬ್ಬರು ಕೋಪಗೊಂಡು ಕೋರ್ಟಿಗೆ ಹೋದರೂ, ವಿಚ್ಛೇದನ ಸಿಗುವಂತಾಗಬೇಕು.
ಧರ್ಮದ ಸೂಚನೆಗಳಂತೆ ನಡೆದ ಮದುವೆಯನ್ನು ಉಳಿಸಲೇಬೇಕೆಂದು ಎಲ್ಲಾ ಕೋರ್ಟ್ ಗಳೂ ವಿವಿಧ ಒತ್ತಡ ಹೇರುವುದು ನಿಜಕ್ಕೂ ಅನ್ಯಾಯವೇ ಸರಿ. ಕ್ಯಾಥೋಲಿಕ್ಸ್ ನಲ್ಲಿ ಹಿಂದೆಲ್ಲ ಈ ಮಟ್ಟದಲ್ಲಿ ಡೈವೋರ್ಸ್ ಆಗುತ್ತಿರಲಿಲ್ಲ. ಹೀಗಾಗಿ ಎಷ್ಟೋ ಪ್ರಕರಣಗಳಲ್ಲಿ ಪ್ರಬಲಿಗರಾದ ಪತಿಪತ್ನಿ ಮತ್ತೊಬ್ಬರನ್ನು ಕೊಂದು ಬದುಕುಳಿಯುತ್ತಿದ್ದರು. ಯಾವಾಗ ಕಾನೂನು ಒಪ್ಪಿ ವಿಚ್ಛೇದನಕ್ಕೆ ಅನುಮತಿ ಕೊಟ್ಟಿತೋ, ಅಂದಿನಿಂದ ಇಂಥ ಕೊಲೆಗಳು ತಪ್ಪುತ್ತಿವೆ. ಆದರೆ ಕೋರ್ಟಿನ ಕಟಕಟೆ ಹತ್ತಿಳಿದು, ವಕೀಲರ ಬಳಿ ಎಡತಾಕುವಷ್ಟರಲ್ಲಿ ಇಬ್ಬರಿಗೂ ಯೌವನ ಸೋರಿ ಹೋಗಿರುತ್ತದೆ.
ಈ ಮೇಲ್ಕಂಡ ಪ್ರಕರಣದಲ್ಲಿ ಡೈವೋರ್ಸ್ ನೀಡಬಹುದಾಗಿತ್ತು, ಆಗ ಇಬ್ಬರೂ ತಮ್ಮ ಜೀವನವನ್ನು ಹೊಸ ದಿಶೆಯಿಂದ ಶುರು ಮಾಡಬಹುದಿತ್ತು. ಕೋರ್ಟ್ ಅದೇ ಆಧಾರದಲ್ಲಿ ಮಕ್ಕಳ ಕಸ್ಟಡಿಯನ್ನು ಪತಿಪತ್ನಿಯರ ಹೊಸ ಸ್ಥಿತಿಗೆ ಅನುಗುಣವಾಗಿ ಕೊಡಬಹುದು. ಈ ಕೇಸ್ ನಲ್ಲಂತೂ ಇಬ್ಬರೂ ಕಾನೂನಬದ್ಧವಾಗಿ ಹೊಸ ಮದುವೆ ಆಗುವಂತಿಲ್ಲ, ಇಬ್ಬರೂ ಮಕ್ಕಳನ್ನು ಹೇಗೆ ಸಲಹುತ್ತಿದ್ದಾರೋ ಕೋರ್ಟಿಗಂತೂ ಗೊತ್ತಾಗೋದೇ ಇಲ್ಲ. ಇಬ್ಬರ ಹೊಸ ಜೀವನ ಒಂಟಿಯಾಗಿಯೇ ಅಥವಾ ಹೊಸ ಸಂಗಾತಿಗಳೊಂದಿಗೆ ಆರಂಭಗೊಳ್ಳುವುದಾದರೆ ಮಾತ್ರ ನಿರ್ಧಾರ ಕೈಗೊಳ್ಳುವುದು ಇಬ್ಬರಿಗೂ ಸುಲಭ, ಆಗ ಮಾತ್ರ ಮದುವೆ ಎಂಬುದು ಒಂದು ತೊಂದರೆ ಆಗದೆ ಸುಖದ ಸಂಗಮ ಆದೀತು.
ಹೆಂಗಸರ ಆಸ್ತಿಯ ಮೇಲೆ ಕಣ್ಣು
ದಿನೇದಿನೇ ಹೆಚ್ಚುತ್ತಿರುವ ಚಿನ್ನದ ಬೆಲೆಯಿಂದಾಗಿ ಆಗಿರುವ ನಷ್ಟವೆಂದರೆ, ಹೆಂಗಸರು ತಮ್ಮ ಒಡವೆಗಳನ್ನು ಮನೆಯ ಬೀರುವಿನಿಂದ ಬ್ಯಾಂಕ್ ಲಾಕರ್ ಗೆ ರವಾನಿಸುತ್ತಿರುವುದು. ಹಿಂದೆಲ್ಲ ಜನ ತಮ್ಮ ಖರ್ಚುಗಳಾದ ಕಾರು, ಮನೆ, ಮಕ್ಕಳ ಓದು, ರೋಗ, ಇನ್ನಿತರ ವೈಯಕ್ತಿಕ ಕಾರಣಗಳಿಗಾಗಿ ಹೆಂಗಸರ ಈ ಒಡವೆ ಮುಟ್ಟದೆ ಬೇರೆ ರೀತಿಯಲ್ಲೇ ಸುಧಾರಿಸುತ್ತಿದ್ದರು. ಅದಕ್ಕೆ ದೊಡ್ಡ ಮೊತ್ತದ ಬಡ್ಡಿ ಕಟ್ಟಿ ಹೇಗೋ ನಿಭಾಯಿಸುತ್ತಿದ್ದರು. ಯಾವಾಗ ಬ್ಯಾಂಕ್ ಹಾಗೂ ಸಾಲ ನೀಡುವ ಕಂಪನಿಗಳು ಬಡ್ಡಿ ಹೆಸರಲ್ಲಿ ಚಿನ್ನಕ್ಕೆ ಬದಲಿಯಾಗಿ ಸಾಲ ನೀಡಲಾರಂಭಿಸಿದವೋ, ಈಗ ಪ್ರತಿಯೊಬ್ಬರ ಕಣ್ಣೂ ಹೆಂಗಸರ ಒಡವೆ ಮೇಲೆ!
ಹಿಂದಿನ ಕಾಲದಿಂದಲೂ ಏನೇ ಕಷ್ಟಕಾಲ ಬಂದಿದ್ದರೂ ಕೊನೆ ಉಪಾಯವಾಗಿ ಮಾತ್ರ ಹೆಂಗಸರ ಒಡವೆ ಅಡವಿಡುವುದು, ಮಾರುವುದರ ಕುರಿತು ಚಿಂತಿಸುತ್ತಿದ್ದರು. ಇದೀಗ ಸರ್ಕಾರಿ, ಸರ್ಕಾರೇತರ ಪ್ರಚಾರಗಳಿಂದಾಗಿ, ದುಬಾರಿ ಬಡ್ಡಿ ತೀರಿಸುವುದಕ್ಕಾಗಿ ಹೆಣ್ಣಿನ ಒಡವೆ ಈ ನಿಟ್ಟಿನಲ್ಲಿ ಇದೀಗ ಮೊದಲ ಗುರಿ ಆಗಿಹೋಗಿದೆ. ಇಲ್ಲಿ ಮನೆಯವರ ಕಣ್ಣು ಅಂದ್ರೆ ಮುಖ್ಯವಾಗಿ ಪತಿಯೇ ತನ್ನ ಪತ್ನಿಯ ಒಡವೆ ಲಪಟಾಯಿಸುವನು. ಯಾವುದೋ ನೆಪಕ್ಕೆ ಸಾಲ ಮಾಡಿರಲಿ, ಪತ್ನಿಯ ಒಡವೆ ಮೂಲಕ ಅದನ್ನು ತೀರಿಸುವುದೇ ಮೊದಲ ಕೆಲಸವಾಗುತ್ತದೆ.
ರಿಸರ್ವ್ ಬ್ಯಾಂಕಿನ ಅಂಕಿಸಂಖ್ಯೆಗಳ ಪ್ರಕಾರ, ಈ ವರ್ಷ ಚಿನ್ನದ ಸಾಲವಾಗಿ 122% ವೃದ್ಧಿ ಆಗಿದೆ. ಜನರೆಲ್ಲ ಸೇರಿ 3 ಲಕ್ಷ ಕೋಟಿಯ ಸಾಲವನ್ನು ಬ್ಯಾಂಕುಗಳಿಂದ ಚಿನ್ನ ಅಡವಿಟ್ಟೇ ವಸೂಲಿ ಮಾಡಿದ್ದಾರೆ. ಇದರ ಒಟ್ಟಾರೆ ತಾತ್ಪರ್ಯ, ಇಂದು ಜನತೆಯ 56 ಲಕ್ಷದ ಕೋಟಿಯ ಚಿನ್ನದಲ್ಲಿನ ಹೂಡಿಕೆ ಪೂರ್ತಿ ಬ್ಯಾಂಕಿನ ಪಾಲಾಯಿತು. ಆ ಬ್ಯಾಂಕುಗಳು ಈ ಚಿನ್ನದ ಮೂಲ ಬೆಲೆಗಿಂತ ಅತಿ ಕಡಿಮೆ ದರದಲ್ಲೇ ಹಣ ಕೊಡುವುದು. ಬ್ಯಾಂಕಿನ ವ್ಯಾಲ್ಯೂಯೆರ್ ಹೇಳುವ ಮೊತ್ತದಲ್ಲಿ ಕೇವಲ 70% ಮಾತ್ರವೇ ಸಾಲವಾಗಿ ಸಿಗುತ್ತದೆ. ಚಿನ್ನದ ಬೆಲೆಯೇನೋ ಏರಿದೆ, ಹಾಗಾಗಿ ಈ ರೀತಿ ಅಡವಿಡುವವರಿಗೆ, 3-4 ವರ್ಷಗಳ ಹಿಂದೆ ತಾವು ಚಿನ್ನಕ್ಕೆ ಮಾಡಿದ ಖರ್ಚು ಈಗ ಸಿಗುತ್ತಿದೆ ಎನಿಸುತ್ತದೆ.
ಇದಂತೂ ಹೆಂಗಸರ ಒಡವೆಯ ಮೇಲಿನ ನೇರ ಹಗಲುದರೋಡೆ ಆಗಿದೆ. ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳೆರಡೂ ಇದರ ಲಾಭ ಗಳಿಸುತ್ತಿವೆ. ಇಂಥ ಸಮಯದಲ್ಲಿ ಸರ್ಕಾರವೇ ಮುಂದಾಗಿ, ಕೊನೆಯ ಕ್ಷಣದವರೆಗೂ ಚಿನ್ನವನ್ನು ಉಳಿಸಿಕೊಳ್ಳಿ ಎಂದು ಹೆಂಗಸರಿಗೆ ಹೇಳಬೇಕು, ಅದು ಬಿಟ್ಟು ವಿಲಾಸಿ ಜೀವನಕ್ಕಾಗಿ ಹೀಗೆ ಅಡ ಇಡುವುದು, ಮಾರುವುದು ತಪ್ಪಲ್ಲವೆಂದು ಮನವರಿಕೆ ಮಾಡಿಕೊಡಬೇಕು.
ಚಿನ್ನದ ಬೆಲೆಯಂತೂ ದಿನೇದಿನೇ ಗಗನಕ್ಕೇರುತ್ತಿದೆ. ಏಕೆಂದರೆ ವಿಶ್ವದೆಲ್ಲೆಡೆ ಸರ್ಕಾರಗಳು ಹಿಂದೆಲ್ಲ ಡಾಲರ್ ಬಾಂಡ್ ನ್ನು ಸುರಕ್ಷಿತ ಎಂದು ಭಾವಿಸಿ ನಡೆಯುತ್ತಿತ್ತು, ಇದೀಗ ಅಮೆರಿಕಾದ ಡಾಲರ್ ಮೇಲೆ ಯಾರಿಗೂ ನಂಬಿಕೆ ಉಳಿದಿಲ್ಲ. ಹೀಗಾಗಿ ಎಲ್ಲರ ಬಂಗಾರ ಕಿತ್ತು ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ. ಯಾವ ದೇಶದ ರಫ್ತು ಕಡಿಮೆ ಆಗಿದ್ದು, ಆಮದು ಹೆಚ್ಚಾಗಿರುತ್ತದೋ, ವಿದೇಶೀ ವಿನಿಮಯದ ಮೊತ್ತ ಹೆಚ್ಚಾಗಿದ್ದರೆ, ಅಲ್ಲೆಲ್ಲ ಮೊದಲು ಡಾಲರ್ ಯಾ ಇತರ ದೇಶದ ಸರ್ಕಾರಗಳ ಕರೆನ್ಸಿಯ ಬಾಂಡ್ ಗಳಲ್ಲಿ ಹಣವಿಡುತ್ತಿತ್ತು. ಇದೀಗ ಟ್ರಂಪಣ್ಣನ ದೆಸೆಯಿಂದ ಪ್ರತಿ ದೇಶ ಭಯಭೀತವಾಗಿದೆ. ಡಾಲರ್ ಯೂರೋ ಬಾಂಡ್ ಗಳ ಜಾಗದಲ್ಲಿ, ಚಿನ್ನವನ್ನೇ ಬಯಸುತ್ತಿದೆ! ಇದರ ದುಷ್ಪರಿಣಾಮ ಖಂಡಿತಾ ನಮ್ಮ ಹೆಂಗಸರ ಮೇಲಾಗುತ್ತದೆ. ಇದರ ಲೆಕ್ಕಾಚಾರ ಅರಿಯದೆ ಹೆಚ್ಚುತ್ತಿರುವ ಚಿನ್ನದ ಬೆಲೆಯಿಂದ ಖುಷಿಗೊಂಡು, ಚಿನ್ನ ಉಳಿಸಿಕೊಳ್ಳುವ ಬದಲು ದುಂದು ವೆಚ್ಚಕ್ಕೆ ಖರ್ಚು ಮಾಡುವುದು ಮೂರ್ಖತನ ಅಲ್ಲದೆ ಮತ್ತೇನು?





