ಮಿನಿಕಥೆ –  ಉಮಾ ಶೂರ್ಪಾಲಿ

ಯಾವ ಕಾರಣಕ್ಕಾಗಿ ಶ್ರಾವಣಿ ತನ್ನ ಪತಿಯಿಂದ ದೂರ ಸರಿದಿದ್ದಳೋ, ಮುಂದೆ ಮಗಳು ಚಿನ್ಮಯಿ ಮದುವೆಯೇ ಬೇಡವೆಂದು ತಳೆದ ನಿರ್ಧಾರ ಯಾವುದು…..?

ಕ್ಷಣ ಕ್ಷಣಕ್ಕೂ ಒಡಲಲ್ಲಿ ತಳಮಳ ಹೆಚ್ಚುತ್ತಿದೆ ನನಗೇನಾಗಿದೆ ಎಂದು ಯೋಚಿಸುತ್ತಲೇ ನಿನ್ನೆ ನಡೆದ ಘಟನಾವಳಿಗಳು ಕಣ್ಮುಂದೆ ಸವಾಲಾಗಿ ಸುಳಿದಾಗ…… ಗೊಂದಲ ಹೆಚ್ಚತೊಡಗಿತು.

“ಅಮ್ಮಾ ಜೀವನಪೂರ್ತಿ ನಿನ್ನೊಂದಿಗೆ ಸಂತೋಷದಿಂದ ಇರಬೇಕೆಂಬುದೇ ನನ್ನ ಮಹದಾಸೆ….. ಅದಕ್ಕೋಸ್ಕರ ಅಂತ,” ಎಂದ ಚಿನ್ಮಯಿ ಮಾತು ಮುಗಿಸುವಷ್ಟರಲ್ಲಿ ನಾನು ಕುಸಿದು ಬಿದ್ದಿದ್ದೆ.

`ಇದ್ಯಾಕೆ ಭಗವಂತಾ ಇಂತಹ ಘೋರ ಶಿಕ್ಷೆ ಗಂಡು ಮಗುವಿನ ನಿರೀಕ್ಷೆಯಲ್ಲಿ ಸವಾಲಾಗಿ ಎರಡು ಭ್ರೂಣ ಹತ್ಯೆಗೆ ಒಳಪಡಿಸಿದ ನರ ರಾಕ್ಷಸನನ್ನು ತೊರೆದು ಮನೆ ಮತ್ತು ಸಮಾಜದೆದುರು ಧೈರ್ಯದಿಂದ ಬದುಕಿ ತೋರಿಸಬೇಕೆಂದು ಎಲ್ಲ ಬಂಧುಗಳಿಂದ ಮುಕ್ತಳಾಗಿ ಒಡಲಲ್ಲಿರುವ ಕುಡಿಯೊಂದಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡ ಸಂಭ್ರಮ ನನ್ನದಾಗಿತ್ತು.

ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ಕರುಳಕುಡಿ ಚಿನ್ಮಯಿಗೋಸ್ಕರ ಜೀವ ತೇಯ್ದು ಹೆಣ್ಣು ಅಬಲೆಯಲ್ಲ, ಸಬಲೆ ಎಂದು ಇಡೀ ಜಗತ್ತಿಗೇ ಸಾರುವ ಹಂತ ತಲುಪಿದ್ದೆ. ಸ್ನಾತಕೋತ್ತರ ಪದವಿ ಮುಗಿಸಿ ಚಿನ್ಮಯಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ದೊರೆತು ಲಕ್ಷ ಲಕ್ಷ ಸಂಪಾದಿಸ ತೊಡಗಿದಾಗ ಅದೆಷ್ಟು ಸಂಭ್ರಮ ಪಟ್ಟಿದ್ದೆ…..ಆದರೆ ಹೆತ್ತೊಡಲ ಸಂಕಟವರಿತ ಚಿನ್ಮಯಿ ಮದುವೆಯಾದ ಮೇಲೆ ತನ್ನ ಭರವಸೆಯನ್ನು ಅದಾಗಲೇ ಕಳೆದುಕೊಂಡಾಗಿತ್ತು. ಹಿಂದಿನ ಕಾಲದಂತೆ ಮದುವೆ, ಗಂಡ, ಮನೆ ಮತ್ತು ಮಕ್ಕಳು ಇದೇ ಹೆಣ್ಣಿನ ಸುತ್ತಲಿರುವ ನಾಲ್ಕು ಗೋಡೆಗಳಾಗಿ ಬಂಧಿಸಿ ಪ್ರತಿದಿನ ಯಾಂತ್ರಿಕವಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಅದೆಷ್ಟೋ ಜನುಮ ತಾಳಿದ ಮೇಲೆ ದೊರೆತ ಮಾನವ ಜನ್ಮವಿದು. ಇದನ್ನು ತನ್ನಿಷ್ಟದಂತೆ ತಾನು ಬದುಕುವ ಎಲ್ಲ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇದೆ ಅಲ್ವಾ…

“ಅಮ್ಮ ದಯವಿಟ್ಟು ನನ್ನ ಮಹದಾಸೆಗೆ ನೀನು ಗುರುವಾಗಿ ಶುಭಾಶೀರ್ವದಿಸು…..”

ಯಾವ ವೈಜ್ಞಾನಿಕ ಚಿಕಿತ್ಸೆಯಿಂದ ಭ್ರೂಣ ಹತ್ಯೆ ಮಾಡಿಸಲು ಹಿಂಜರಿಯದ ಕ್ರೂರ ಪುರುಷತ್ವಕ್ಕೆ ಧಿಕ್ಕಾರವಿರಲಿ ಇಂದು ಅದೇ ಮುಂದುವರಿದ ತಾಂತ್ರಿಕತೆಯನ್ನು ಅನುಸರಿಸಿ ಯಾರೋ ಹೆತ್ತ ಮಗುವಿಗೆ ಹಾಲೆರೆಯುವ ಬದಲಾಗಿ, ಹೆಣ್ಣಿಗೆ ದೊರೆತಿರುವ ವರದಾನ ತಾಯ್ತನವನ್ನು ಐವಿಎಫ್‌ ಮೂಲಕ ಗರ್ಭ ಧರಿಸಿ ನನ್ನದೇ ಪುಟ್ಟ ಪ್ರಪಂಚವನ್ನು ನಾನು ರೂಪಿಸಿಕೊಳ್ಳುತ್ತೇನೆಂದು ದೃಢವಾಗಿ ನುಡಿದಾಗ ಒಂದು ಕ್ಷಣದಲ್ಲಿ ಕುಸಿದಿದ್ದೆ….ಇಷ್ಟೆಲ್ಲಾ ಯೋಚಿಸುತ್ತಲೇ ಶ್ರಾವಣಿ ಶತಮಾನಗಳ ಹಿಂದೆ ತಾನು ಅನುಭವಿಸಿದ ನೋವು ಯಾತನೆಗಳು ಚಿನ್ಮಯಿಯ ಇಂದಿನ ಈ ಗಟ್ಟಿ ನಿರ್ಧಾರಕ್ಕೆ ಬುನಾದಿ ಎಂದುಕೊಂಡಳು.

ನಿಜವೇ….. ಹೆಣ್ಣು ಹೆಣ್ಣೆಂದು ಹೀಗಳೆಯುವ ಸಮಾಜದೆದುರು ಯಾವ ನಿರ್ಬಂಧಗಳಿಲ್ಲದೇ ಸ್ವಾಭಿಮಾನಿಯಾಗಿ ಜೀವನ ರೂಪಿಸಿಕೊಳ್ಳುವ ಹಕ್ಕಿದೆ. ಬಹುಶಃ ಈ ನಡೆ ಜಗತ್ತಿನಾದ್ಯಂತ ಹೆಣ್ಣಿನ ಮಹತ್ತರ ಪಾತ್ರವನ್ನು ಗುರುತಿಸುವಂತೆ ಮಾಡಿದರೆ ಇಷ್ಟು ವರ್ಷಗಳ ಸಹನೆಗೆ ದೊರೆತ ವರದಾನವೆಂದು ಭಾವಿಸುತ್ತಾ ಅಪ್ಪಟ ಚಿನ್ನದಂತಹ ಮನದ ಮಗಳು ಚಿನ್ಮಯಿಯನ್ನು ಅಪ್ಪಿಕೊಂಡು ತನ್ನ ಭರವಸೆಯ ಅಭಯವನ್ನು ಸೂಚಿಸಿದಾಗ ಸೃಷ್ಟಿಕರ್ತನಿಗೆ ತನ್ನ ಅತ್ಯದ್ಭುತ ಸೃಷ್ಟಿಯಾದ ಹೆಣ್ಣಿನ ಮೇಲೆ ಉಂಟಾದ ಅತೀ ಹೆಮ್ಮೆಯಿಂದ ಕೊನೆಗೂ ದೇವಿ ಆದಿಶಕ್ತಿಯ ಮೊಗದಲ್ಲಿ ವಿಜಯದ ಮುಗುಳ್ನಗೆ ಮೂಡಿಸಿದ ಅಪೂರ್ವ ಕ್ಷಣ ಅದಾಗಿತ್ತು…..!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ