ಮಿನಿ ಕಥೆ - ಶೈಲಾ ಎಸ್. ವಾಲಿ
ಅತ್ತೆಗೆ ಹೊಂದಿಕೊಳ್ಳುವ ಆದರ್ಶ ಸೊಸೆಯ ಗುಣವಿರದ ನೀತಾ, ಏನೋ ನೆಪ ತೆಗೆದು ಅತ್ತೆಯನ್ನು ಊರಿಗೆ ಓಡಿಸಿದಳು. ಮುಂದೆ ಇದರಿಂದ ಮಗುವಿನ ಆರೋಗ್ಯಕ್ಕಾದ ಪರಿಣಾಮ.......?
``ರೀ.... ನಿಮ್ಮಮ್ಮನ್ನ ಮೊದಲು ಹಳ್ಳಿಗೆ ಕಳಿಸಿಬಿಡಿ, ನಂಗೆ ಈ ಮನೆಯಲ್ಲಿ ಸ್ವಾತಂತ್ರ್ಯವೇ ಇಲ್ಲದಂಗೆ ಆಗಿದೆ, ನಾನು ನನ್ನ ಮಗುನ ಹೇಗೆ ನೋಡ್ಕೋಬೇಕು ಅಂತ ಇವರತ್ರ ಕೇಳ್ಬೇಕಾ....? ನೆಗಡಿ ಆದ್ರೆ ಅದು ಹಾಕು, ಕೆಮ್ಮಿದ್ರೆ ಇದು ಹಾಕು, ಅಂತ ಅಬ್ಬಾ..... ಒಂದೊಂದಲ್ಲ ನಿಮ್ಮಮ್ಮನ ಮದ್ದುಗಳು, ಪ್ರತಿಯೊಂದರಲ್ಲೂ ಮೂಗು ತೂರಿಸ್ತಾರೆ. ನಂಗಂತೂ ಸಾಕು ಸಾಕಾಗಿದೆ, ನೀವು ಅವರನ್ನ ಕಳಿಸದಿದ್ರೆ ನಾನೇ ನಮ್ಮಮ್ಮನ ಮನೆಗೆ ಹೋಗ್ತೀನಿ,'' ಎಂದು ಸೊಸೆ ನೀತಾ ಮಗ ರವಿಯ ಹತ್ತಿರ ಹೇಳುತ್ತಿದ್ದಳು.
ಇದನ್ನು ಕೇಳಿಸಿಕೊಂಡ ಸಾವಿತ್ರಮ್ಮ ಕೂಡಲೇ ತಮ್ಮ ಬಟ್ಟೆ ಬರೆ ಪ್ಯಾಕ್ ಮಾಡಿಕೊಂಡು, ``ರವಿ, ಹಳ್ಳಿಯಿಂದ ನಿನ್ನೆ ಫೋನ್ ಬಂದಿತ್ತು, ನಿಂಗ್ ಹೇಳೋಕೆ ಮರೆತೋದೆ, ಅಲ್ಲಿ ತೋಟದ ಕೆಲಸಕ್ಕೆ ಆಳುಗಳು ಸಿಗ್ತಿಲ್ಲಂತೆ, ನಾನು ಹೋದರೇ ಹೇಗಾದ್ರೂ ವ್ಯವಸ್ಥೆ ಮಾಡ್ತೀನಿ, ಅದಕ್ಕೆ ನಾನು ಹೋಗಿ ಬರ್ತೀನಿ. ಈಗ ನಿನ್ನ ಮಗನೂ ಸ್ವಲ್ಪ ದೊಡ್ಡನಾದ, ಇಲ್ಲಿ ಸಿಟಿಯಲ್ಲಿ ಬೇಕಾದಷ್ಟು ಜನ ಕೆಲಸಕ್ಕೆ ಸಿಗ್ತಾರೆ, ಯಾರಿಗಾದ್ರೂ ಹೇಳಿ ವ್ಯವಸ್ಥೆ ಮಾಡ್ಕೊಳ್ಳಿ, ನಾನು ಹೋಗಿ ಬರ್ತೀನಿ. ಹಾಗೆ ಸ್ವಲ್ಪ ರಿಕ್ಷಾ ಕರಿಯಪ್ಪ ರವಿ. ಬೇಗ ಹೋಗ್ಬೇಕು, ಇಲ್ಲಾಂದ್ರೆ ಇನ್ನೂ ಮಧ್ಯಾಹ್ನದವರೆಗೂ ಕಾಯ್ಬೇಕು,'' ಎಂದರು.
``ಅಮ್ಮಾ.... ಯಾಕೆ ಒಮ್ಮೆಲೇ ಹೀಗೆ ಹೊರಟಿದ್ದೀಯ, ನಿಂಗ್ ಏನಾದ್ರೂ ಬೇಜಾರ್ ಆಯ್ತಾ.....?'' ಎಂದು ರವಿ ಕೇಳಿದ.
``ಛೇ, ಇಲ್ಲಪ್ಪ ಹಂಗೇನಿಲ್ಲ. ಹೇಳಿದೆ ಅಲ್ವಾ ಆಳುಗಳು ಸಿಗ್ತಿಲ್ಲ, ಪಾಪ ನಿಮ್ಮಪ್ಪ ಒಬ್ಬರೇ ಒದ್ದಾಡ್ತಿದ್ದಾರೆ, ನಾನು ಹೋದ್ರೆ ಹೇಗೋ ವ್ಯವಸ್ಥೆ ಮಾಡ್ತೀನಿ,'' ಎಂದರು ಸಾವಿತ್ರಮ್ಮ.
ರವಿ ತಾಯಿಯನ್ನು ತನ್ನ ಕಾರಿನಲ್ಲೇ ಬಸ್ ಸ್ಟಾಂಡ್ ಗೆ ಹೋಗಿ ಬಿಟ್ಟುಬಂದ.
ಮರುದಿನ ಬೆಳಗ್ಗೆನೇ ನೀತಾ ಕಿಚನ್ ನಲ್ಲಿ ಚೀರಾಡುತ್ತಾ ಕೆಲಸ ಮಾಡುತ್ತಿರುವುದನ್ನು ನೋಡಿದ ರವಿ, ``ಏನಾಯ್ತೆ ನಿಂಗೆ, ಇಷ್ಟ್ಯಾಕೆ ಟೆಂಪರ್ ಆಗಿದ್ದೀಯಾ....? ಬಿಪಿ ಗಿಪಿ ಹೆಚ್ಚಾಯ್ತಾ ನೋಡು,'' ಎಂದು ಕಾಲೆಳೆದ.
``ರೀ ಸುಮ್ನೆ ಇರ್ತೀರಾ, ನನ್ನ ಕೆಲಸವೇ ಇಲ್ಲಿ ಸಾಕಷ್ಟಿರುವಾಗ ನೀವು ಬೇರೆ....'' ಎಂದು ಗದರಿದಳು.
``ನೋಡು ಅಮ್ಮ ಇರುವಾಗ ಒಂದಿನಾನೂ ನೀನು ಕಿಚನ್ ಗೆ ಬರ್ತಿರಲಿಲ್ಲ. ಪಾಪ, ಅವರೇ ಎಲ್ಲಾ ನೋಡ್ಕೋತ್ರಿದ್ರು. ಹೊತ್ತು ಹೊತ್ತಿಗೆ ಬಿಸಿ ಬಿಸಿ ತಿಂಡಿ, ಊಟ, ಎಲ್ಲಾ ಮಾಡಿ ಕೊಡ್ತಿದ್ರು..... ಅಲ್ಲ ಕಣೇ, ನಮ್ಮ ಸಲುವಾಗಿ ಅಷ್ಟೆಲ್ಲಾ ಮಾಡ್ತಿದ್ದ ಅಮ್ಮನಿಗೆ ಮಗೂಗೆ ಏನಾದ್ರೂ ಆದಾಗ ಹೀಗೆ ನೋಡ್ಕೋಬೇಕು, ಹಾಗೆ ಮಾಡಬೇಕು ಅಂತ ಹೇಳೋ ಅಧಿಕಾರನೂ ಇಲ್ವಾ..... ಅವರು ಅನುಭವಸ್ಥರು, ಅವರ ಮುಂದೆ ನಮ್ಮ ಡಿಗ್ರಿ ಸರ್ಟಿಫಿಕೇಟ್ ಗಳು ವೇಸ್ಟ್, ಇನ್ಮೇಲೇ ಅದ್ಹೇಗೆ ಎಲ್ಲಾ ಮೇಂಟೇನ್‌ಮಾಡ್ತೀಯಾ ನಾನೂ ನೋಡ್ತೀನಿ.....'' ಎಂದ ರವಿ ಸಿಡಿಮಿಡಿಗೊಂಡ.





