ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಮಹಾನಗರ. ಒಂದು ಕಡೆ ಲಕ್ಷಾಂತರ ಜನರು ಸ್ವಂತ ಮನೆಯ ಕನಸು ಕಾಣುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ನಿವೇಶನಗಳು ವರ್ಷಾನುಗಟ್ಟಲೆ ಖಾಲಿಯಾಗಿಯೇ ಉಳಿದಿವೆ. ಇಂತಹ ಖಾಲಿ ಜಾಗಗಳು ಇಂದು ಕೇವಲ ಹೂಡಿಕೆ ಆಸ್ತಿಗಳಾಗಿರದೆ, ಕಸದ ತೊಟ್ಟಿಗಳಾಗಿ, ಕಳೆ–ಗಿಡಗಂಟಿಗಳ ತಾಣವಾಗಿ, ಸೊಳ್ಳೆ ಮತ್ತು ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗುತ್ತಿರುವುದು ವಾಸ್ತವ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಹಿಂದಿನ ಸಿಐಟಿಬಿ (CITB), ಕಾರ್ಪೊರೇಷನ್ ಹಾಗೂ ವಿವಿಧ ಸಹಕಾರ ಸಂಘಗಳಿಂದ ನಿವೇಶನ ಪಡೆದವರು ಐದು ವರ್ಷಗಳೊಳಗೆ ಮನೆ ನಿರ್ಮಿಸಬೇಕು. ಇಲ್ಲವಾದರೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವುದು ಅಥವಾ ನಿವೇಶನವನ್ನೇ ಸರ್ಕಾರ ವಾಪಸ್ ಪಡೆಯುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದ ಹಿಂದಿನ ಉದ್ದೇಶವೇನು?

ಹೆಬ್ಬಾಳ ಜಂಕ್ಷನ್‌ನಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, ನಗರದಲ್ಲಿ ಖಾಲಿ ನಿವೇಶನಗಳೇ ಅಕ್ರಮ ಕಸ ಸುರಿಯುವ ಪ್ರಮುಖ ತಾಣಗಳಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ನಿವೇಶನ ನೀಡುವುದು ಮನೆ ನಿರ್ಮಿಸಿಕೊಳ್ಳಲೆಂದೇ ಹೊರತು ದಶಕಗಳ ಕಾಲ ಖಾಲಿ ಇಟ್ಟು ಬೆಲೆ ಏರಿಕೆಗೆ ಕಾಯಲು ಅಲ್ಲ. ಕೆಲವರು 20, 30, 40 ವರ್ಷಗಳಾದರೂ ಮನೆ ಕಟ್ಟಿಲ್ಲ. ಅಗತ್ಯವಿದ್ದರೆ ಅವರು ಪಾವತಿಸಿದ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸಿ ನಿವೇಶನವನ್ನು ಸರ್ಕಾರ ವಾಪಸ್ ಪಡೆಯಲಿದೆ. ಎಂಬ ಅವರ ಮಾತು ನಗರಾಭಿವೃದ್ಧಿಯ ಕುರಿತು ಸರ್ಕಾರದ ಗಂಭೀರ ನಿಲುವನ್ನು ತೋರಿಸುತ್ತದೆ.
ಖಾಲಿ ನಿವೇಶನ… ಆದರೆ ಹೊಣೆಗಾರಿಕೆ ಯಾರದ್ದು?

ಅನೇಕರು “ನಮ್ಮ ಜಾಗದಲ್ಲಿ ನಾವು ಕಸ ಹಾಕಿಲ್ಲ” ಎಂದು ಹೇಳಬಹುದು. ಆದರೆ ಸಾರ್ವಜನಿಕ ಸ್ಥಳದಂತೆ ಬಿಟ್ಟಿರುವ ಖಾಲಿ ನಿವೇಶನದಲ್ಲಿ ಇತರರು ಕಸ ಸುರಿದರೂ ಅದರ ಹೊಣೆ ಮಾಲೀಕರಿಗೂ ಇದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಕನಿಷ್ಠ ಕಾಂಪೌಂಡ್ ನಿರ್ಮಿಸುವುದು, ಜಾಗವನ್ನು ಸ್ವಚ್ಛವಾಗಿಡುವುದು ಮತ್ತು ಅಕ್ರಮ ಕಸ ಸುರಿಯುವುದನ್ನು ತಡೆಯುವುದು ನಿವೇಶನ ಮಾಲೀಕರ ಕರ್ತವ್ಯ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸ್ವಚ್ಛ ಬೆಂಗಳೂರು – ಸರ್ಕಾರದಷ್ಟೇ ನಾಗರಿಕರ ಜವಾಬ್ದಾರಿ

ಮಹಾತ್ಮ ಗಾಂಧೀಜಿ ಹೇಳಿದ “ಸ್ವಚ್ಛತೆಯೇ ದೇವರು” ಎಂಬ ಸಂದೇಶವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, “ಬೆಂಗಳೂರು ಸರ್ಕಾರದ ಆಸ್ತಿಯಲ್ಲ, ಬೆಂಗಳೂರಿನ ಜನರ ಆಸ್ತಿ. ಅದನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದು ಕರೆ ನೀಡಿದ್ದಾರೆ. ಅದೇ ವೇಳೆ ಅನುಮತಿ ಇಲ್ಲದೆ ನಗರದಲ್ಲಿ ಕಸ ಸುರಿಯುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಸಮಸ್ಯೆಯ ಮೂಲ ಎಲ್ಲಿದೆ?
ಇಂದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕಾಣುವ ಕಸದ ಸಮಸ್ಯೆಗೆ ಕೇವಲ ಸರ್ಕಾರವನ್ನೇ ದೂರುವುದು ನ್ಯಾಯವಲ್ಲ.
- ಖಾಲಿ ನಿವೇಶನಗಳನ್ನು ನಿರ್ವಹಿಸದ ಮಾಲೀಕರು,
- ಎಲ್ಲೆಂದರಲ್ಲಿ ಕಸ ಎಸೆಯುವ ನಾಗರಿಕರು,
- ನಿಯಮ ಉಲ್ಲಂಘಿಸುವ ವ್ಯಾಪಾರಿಗಳು,
- ಮತ್ತು ಕಾನೂನು ಜಾರಿಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು…
ಇವರೆಲ್ಲರೂ ಈ ಸಮಸ್ಯೆಯ ಪಾಲುದಾರರು. ಆದ್ದರಿಂದ ಪರಿಹಾರವೂ ಎಲ್ಲರ ಸಹಭಾಗಿತ್ವದಿಂದಲೇ ಸಾಧ್ಯ.
ಸರ್ಕಾರದ ಕರ್ತವ್ಯ ಆಡಳಿತ ನಡೆಸುವುದೇ ಹೊರತು, ಜನರ ಆಸ್ತಿಯ ಮೇಲೆ ಹಿಡಿತ ಸಾಧಿಸುವುದಲ್ಲ!
ಹಾಗೆ ನೋಡಿದರೆ ಸರ್ಕಾರ ಯಾವುದೇ ನಿವೇಶನವನ್ನು ಉಚಿತವಾಗಿ ನೀಡುವುದಿಲ್ಲ. ಆಯಾ ಕಾಲದ ಮಾರುಕಟ್ಟೆ ದರಕ್ಕೆ ತಕ್ಕಂತೆ ಹಣ ಪಡೆದು ನಿವೇಶನಗಳನ್ನು ಮಾರಾಟ ಮಾಡುತ್ತದೆ. ಅಷ್ಟೇ ಅಲ್ಲ, ನಿವೇಶನ ಖಾಲಿ ಇದ್ದರೂ ಪ್ರತಿವರ್ಷ ತಪ್ಪದೇ ಆಸ್ತಿ ತೆರಿಗೆ ವಸೂಲಿ ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಸ ನಿರ್ವಹಣೆ ಹೆಸರಿನಲ್ಲಿ ಪ್ರತ್ಯೇಕ ತೆರಿಗೆಯನ್ನೂ ಸಂಗ್ರಹಿಸುತ್ತಿದೆ. ಹೀಗಿರುವಾಗ, “
ವಾಸ್ತವವಾಗಿ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಮನೆಮನೆಗೆ ಒಣ ಮತ್ತು ಹಸಿ ಕಸ ಸಂಗ್ರಹಿಸುವ ವ್ಯವಸ್ಥೆ ಇದೆ. ಆದರೆ ಆ ವ್ಯವಸ್ಥೆಯೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ? ಕಸ ಸಂಗ್ರಹಿಸುವ ವಾಹನಗಳು ಪ್ರತಿದಿನ ಸಮಯಕ್ಕೆ ಬರುತ್ತಿವೆಯೇ? ಮನೆ ಮುಂದೆ ಇಟ್ಟಿರುವ ಎಲ್ಲಾ ಕಸವನ್ನು ಸಂಪೂರ್ಣವಾಗಿ ತೆಗೆದುಕೊಂಡು ಹೋಗುತ್ತಿವೆಯೇ? ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಹುಡುಕಿದರೆ, ಸಮಸ್ಯೆಯ ಮೂಲ ಎಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಬಹಳ ಕಡೆ ಕಸ ಸಂಗ್ರಹಣೆ ಅಸಮರ್ಪಕವಾಗಿರುವುದರಿಂದಲೇ ಕೆಲವರು ಅನಿವಾರ್ಯವಾಗಿ ಪಕ್ಕದ ಖಾಲಿ ನಿವೇಶನ ಅಥವಾ ರಸ್ತೆ ಬದಿಯಲ್ಲಿ ಕಸ ಎಸೆಯುವ ದುಸ್ಥಿತಿ ನಿರ್ಮಾಣವಾಗುತ್ತದೆ. ಇದು ಖಂಡಿತವಾಗಿಯೂ ತಪ್ಪು. ಆದರೆ ಆ ತಪ್ಪಿಗೆ ಕಾರಣವಾದ ಆಡಳಿತದ ವೈಫಲ್ಯವನ್ನು ಸರಿಪಡಿಸದೆ, ಅದರ ಸಂಪೂರ್ಣ ಹೊಣೆಯನ್ನು ನಿವೇಶನ ಮಾಲೀಕರ ಮೇಲೆ ಹಾಕುವುದು ನ್ಯಾಯಸಮ್ಮತವೇ?
ಆದರೆ ಇನ್ನೊಂದು ಮುಖವೂ ಇದೆ…
ಹಾಗೆಯೇ, ಪ್ರತಿಯೊಬ್ಬ ನಿವೇಶನ ಮಾಲೀಕರೂ ಶ್ರೀಮಂತರೇ ಎನ್ನಲು ಸಾಧ್ಯವಿಲ್ಲ. ಅನೇಕ ಮಧ್ಯಮ ವರ್ಗದ ಕುಟುಂಬಗಳು ಜೀವನಪೂರ್ತಿ ದುಡಿದು, ಉಳಿತಾಯ ಮಾಡಿ, ಸಾಲ ಮಾಡಿ ನಿವೇಶನ ಖರೀದಿಸಿ, ನಂತರ ಮನೆ ಕಟ್ಟಲು ಆರ್ಥಿಕ ಸಾಮರ್ಥ್ಯವಿಲ್ಲದೆ ವರ್ಷಗಟ್ಟಲೆ ಕಾಯುತ್ತಿರುವ ಅಥವಾ ಖರೀದಿಸಿದ ನಿವೇಶನ, ಅಗತ್ಯ ಬಂದಾಗ ಮಾರಾಟ ಮಾಡಿ ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯ ಅಥವಾ ನಿವೃತ್ತಿ ಜೀವನಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಅದನ್ನು ಉಳಿಸಿಕೊಳ್ಳುವ ಉದಾಹರಣೆಗಳೂ ಸಾಕಷ್ಟಿವೆ. ಹೀಗಿರುವಾಗ ಎಲ್ಲರಿಗೂ ಒಂದೇ ನಿಯಮ ಅನ್ವಯಿಸುವುದು ನ್ಯಾಯವೇ? ಅಥವಾ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ವಿನಾಯಿತಿ ಅಥವಾ ಹಂತ ಹಂತವಾಗಿ ಅನುಷ್ಠಾನಗೊಳಿಸುವ ವ್ಯವಸ್ಥೆ ಇರಬೇಕೇ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಪ್ರತೀ ಸಮಸ್ಯೆಗೂ ದಂಡ ಅಥವಾ ಬೆದರಿಕೆಯೇ ಪರಿಹಾರವಾಗದು
ಸರ್ಕಾರ ಪ್ರತಿಯೊಂದು ಸಮಸ್ಯೆಗೂ ದಂಡ ಮತ್ತು ಬೆದರಿಕೆಯನ್ನೇ ಪರಿಹಾರ ಎಂದು ಭಾವಿಸಿದರೆ, ಇದೇ ರಾಜಕಾರಣಿಗಳು ಪ್ರತಿದಿನ ಮಾಡುವ ಕಾನೂನು ಉಲ್ಲಂಘನೆ, ಭ್ರಷ್ಟಾಚಾರ, ಅಕ್ರಮ ಮತ್ತು ಸಾರ್ವಜನಿಕ ಆಸ್ತಿಯ ದುರುಪಯೋಗಕ್ಕೂ ಇದೇ ಮಾನದಂಡ ಅನ್ವಯಿಸಬೇಕಲ್ಲವೇ? ಹಾಗಾದರೆ ಹೆಜ್ಜೆ ಹೆಜ್ಜೆಗೂ ತಪ್ಪು ಮಾಡುವ ಅನೇಕ ಜನಪ್ರತಿನಿಧಿಗಳು ರಾಜಕೀಯದಿಂದಲೇ ನಿವೃತ್ತರಾಗಬೇಕಾದ ಪರಿಸ್ಥಿತಿ ಬರಬಹುದು.
ಕಸ ನಿರ್ವಹಣೆಯಂತಹ ಮೂಲಭೂತ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾದ ಆಡಳಿತ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ “ದುಪ್ಪಟ್ಟು ತೆರಿಗೆ”, “ನಿವೇಶನ ವಾಪಸ್” ಎಂಬ ಬೆದರಿಕೆಯ ಭಾಷೆ ಬಳಸುವುದು ಆರೋಗ್ಯಕರ ಆಡಳಿತದ ಲಕ್ಷಣವಲ್ಲ. ಸರ್ಕಾರ ಪ್ರಜೆಗಳ ಸೇವೆಗಾಗಿ ಅಸ್ತಿತ್ವದಲ್ಲಿದೆಯೇ ಹೊರತು, ಅವರ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಅಲ್ಲ.
ಕೆಲವು ದಿನಗಳ ಹಿಂದೆ ಪಿತ್ರಾರ್ಜಿತ ಆಸ್ತಿ ಹಂಚಿಕೆಯ ಸಂದರ್ಭದಲ್ಲೂ ಸರ್ಕಾರಕ್ಕೆ 45% ಪಾಲು ಸಿಗುವಂತೆ ಕಾನೂನು ತರಲು ಚಿಂತನೆ ನಡೆದಿದೆ ಎಂಬ ಸುದ್ದಿಯೂ ವ್ಯಾಪಕವಾಗಿ ಹರಿದಾಡಿತ್ತು. ಇಂತಹ ಆಲೋಚನೆಗಳೇ ಜನರಲ್ಲಿ ಆತಂಕ ಹುಟ್ಟಿಸುವಂತಿವೆ. ನಿಜವಾಗಿಯೂ ಸಾರ್ವಜನಿಕ ಹಿತಾಸಕ್ತಿ ಸರ್ಕಾರದ ಉದ್ದೇಶವಾಗಿದ್ದರೆ, ಮೊದಲು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನುಗಳನ್ನು ಬೇನಾಮಿ ಹೆಸರಿನಲ್ಲಿ ಕಬಳಿಸಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಆ ಆಸ್ತಿಗಳನ್ನು ವಶಪಡಿಸಿಕೊಳ್ಳಬೇಕು. ಸಾಮಾನ್ಯ ಪ್ರಾಮಾಣಿಕ ನಾಗರಿಕರ ಮೇಲೆ ಹೊಸಹೊಸ ನಿಯಮಗಳು ಮತ್ತು ದಂಡಗಳನ್ನು ಹೇರುವುದು ಸುಲಭ; ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದೇ ನಿಜವಾದ ಆಡಳಿತದ ಪರೀಕ್ಷೆ.
ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ಆದರೆ ಅಧಿಕಾರದಲ್ಲಿರುವಾಗ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ಇತಿಹಾಸದಲ್ಲಿ ಉಳಿಯುತ್ತವೆ. ಆದ್ದರಿಂದ ಜನರನ್ನು ಬೆದರಿಸುವ ನೀತಿಗಳಿಗಿಂತ, ಅವರೊಂದಿಗೆ ಕೈಜೋಡಿಸಿ ಸಮಸ್ಯೆಗಳನ್ನು ಪರಿಹರಿಸುವ ಆಡಳಿತವೇ ಪ್ರಜಾಪ್ರಭುತ್ವದ ನಿಜವಾದ ಮೌಲ್ಯ.
ಕೊನೆಯ ಮಾತು

ಖಾಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವುದು, ಕಸ ಮುಕ್ತ ನಗರ ನಿರ್ಮಿಸುವುದು ಹಾಗೂ ಯೋಜಿತ ನಗರಾಭಿವೃದ್ಧಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದ್ದರೆ, ಅದು ಸ್ವಾಗತಾರ್ಹ. ಆದರೆ ಇದೇ ವೇಳೆ ನಿಜವಾಗಿಯೂ ಆರ್ಥಿಕ ಸಂಕಷ್ಟದಿಂದ ಮನೆ ಕಟ್ಟಲು ಸಾಧ್ಯವಾಗದ ಮಧ್ಯಮ ವರ್ಗದ ಕುಟುಂಬಗಳಿಗೂ ನ್ಯಾಯ ಸಿಗುವಂತಹ ಮಾನವೀಯ ನೀತಿಗಳನ್ನು ರೂಪಿಸುವುದು ಅಷ್ಟೇ ಅಗತ್ಯ.
ನಗರವನ್ನು ಸ್ವಚ್ಛವಾಗಿಡುವುದು ಕೇವಲ ಸರ್ಕಾರದ ಕರ್ತವ್ಯವಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಆದರೆ ನಾಗರಿಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೀತಿಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಹಾಗಾದರೆ… ಐದು ವರ್ಷದಲ್ಲಿ ಮನೆ ಕಟ್ಟದಿದ್ದರೆ ದುಪ್ಪಟ್ಟು ತೆರಿಗೆ ಅಥವಾ ನಿವೇಶನ ವಾಪಸ್ ಪಡೆಯುವ ಸರ್ಕಾರದ ನಿರ್ಧಾರ ಸರಿಯೇ? ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಇದು ಅನಿವಾರ್ಯ ಕ್ರಮವೇ? ಅಥವಾ ಮಧ್ಯಮ ವರ್ಗದ ಜನರ ಮೇಲೆ ಹೆಚ್ಚುವರಿ ಒತ್ತಡವೇ? ಸರ್ಕಾರವು ಮೊದಲು ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೇ, ಅಥವಾ ಪ್ರಜೆಗಳ ಮೇಲೆ ಹೊಸಹೊಸ ದಂಡ ಮತ್ತು ನಿರ್ಬಂಧಗಳನ್ನು ಹೇರುವುದೇ ಆಡಳಿತವೆಂದು ಭಾವಿಸಬೇಕೇ? ಈ ಎಲ್ಲಾ ಸಮಸ್ಯೆಗಳಿಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮಗೆ ತಿಳಿಸ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





