ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಈ ಬಾರಿ ಮಹಿಳೆಯರಿಗೆ ಆದ್ಯತೆ ಇಲ್ಲ ಎಂಬ ಕೂಗು ಕೇಳಿಬರುತ್ತಿದೆ. ಖಾಲಿ ಇದ್ದಿದ್ದ 20 ಸ್ಥಾನಗಳ ಎರಡನೇ ಪಟ್ಟಿಯಲ್ಲಿ ಎರಡು ಸ್ಥಾನ ಮಹಿಳೆಯರಿಗೆ ಮಿಸಲು ಅಂತಲೇ ಹೇಳಲಾಗುತ್ತಿತ್ತು. ಆದರೆ, ಕೊನೇ ಕ್ಷಣದಲ್ಲಿ 20 ಜನರ ಪೈಕಿ 19 ಮಂದಿ ಬರೀ ಪುರುಷ ಶಾಸಕರೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸದ್ಯಕ್ಕೆ ಉಳಿದಿರೋದು ಒಂದೇ ಒಂದು ಸಚಿವ ಸ್ಥಾನ.
ಕಾಂಗ್ರೆಸ್ ಪಕ್ಷದಲ್ಲಿ ಘಟಾನುಘಟಿ ಮಹಿಳಾ ನಾಯಕರಿಯರು ಇದ್ದರೂ ಕೂಡ ಯಾರೊಬ್ಬರಿಗೂ ಸಚಿವ ಸ್ಥಾನ ಹಂಚಿಕೆ ಮಾಡದೇ ಇರೋದು ಬೇಸರದ ಸಂಗತಿ. ದಶಕಗಳ ಇತಿಹಾಸ ಹೊಂದಿರೋ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕೂಡ ಮಹಿಳೆ. ಪುತ್ರಿ ಪ್ರಿಯಾಂಕಾ ಗಾಂಧಿ ಕೂಡ ಇದ್ದಾರೆ. ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಮಹಿಳಾ ಮೀಸಲು ಬಗ್ಗೆ ಮಾತನಾಡುತ್ತಾರೆ.. ಮಹಿಳಾ ಮೀಸಲಾತಿ ಕುರಿತು ಹೋರಾಟ ಮಾಡ್ತಾರೆ.. ಆದರೂ ರಾಜ್ಯ ಸರ್ಕಾರದಲ್ಲಿ ಮಹಿಳೆಗೆ ಸ್ಥಾನ ಕೊಟ್ಟಿಲ್ಲ. ಶೇ.33ರಷ್ಟು ಮೀಸಲಾತಿ ಅಂತಾ ಕೊಟ್ಟಿದ್ದರೂ ಬರೋಬ್ಬರಿ 9 ಮಹಿಳೆಯರಿಗೆ ಚಾನ್ಸ್ ಸಿಗಬೇಕಿತ್ತು. ರಾಜ್ಯ ಕಾಂಗ್ರೆಸ್ ನಲ್ಲಿ ಸರಿಯಾಗಿ ಲೆಕ್ಕ ಹಾಕಿ ನೋಡಿದರೆ ಬರೋಬ್ಬರಿ ಮಹಿಳಾ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಬರೋಬ್ಬರಿ 10 ಮಂದಿ ಮಹಿಳಾ ನಾಯಕಿಯರಿದ್ದಾರೆ. ಆದರೂ ರಾಹುಲ್ ಗಾಂಧಿ ಅವರೇ.. ಪ್ರಿಯಾಂಕಾ ಗಾಂಧಿ ಅವರೇ.. ಯಾಕಿನ್ನೂ ಮೀನಾಮೇಷ..? ಅನ್ನೋ ಪ್ರಶ್ನೆ ಎದ್ದಿದೆ. ಖಾಲಿ ಇಟ್ಟಿರೋ ಆ ಒಂದೇ ಒಂದು ಸ್ಥಾನವನ್ನಾದ್ರೂ ಮಹಿಳಾ ನಾಯಕರಿಗೆ ಕೊಟ್ಟುಬಿಡಿ ಎಂದು ಪಕ್ಷದೊಳಗೇ ಮನವಿ ಮಾಡಲಾಗುತ್ತಿದೆ.
ಅಸಲಿಗೆ ಎರಡು ಸಚಿವ ಸ್ಥಾನಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ ಸಿ ಆರತಿ ಕೃಷ್ಣ ಅವರ ಹೆಸರು ಕೇಳಿಬಂದಿತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ ಮಂತ್ರಿ ಆಗಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೀಗಾಗಿ ಅವರು ಇದ್ದರೆ ಉತ್ತಮ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಶಿಫಾರಸ್ಸು ಮಾಡಿದ್ದರು. ಆರತಿ ಕೃಷ್ಣ ಅವರು ದೆಹಲಿ ವರಿಷ್ಠರ ಮೂಲಕವೇ ಲಾಬಿ ಮಾಡಿದ್ದರು. ಆದರೂ ಇಬ್ಬರನ್ನೂ ಪರಿಗಣಿಸದೇ ಇದ್ದದ್ದು ಮತ್ತು ಕೇವಲ ಒಂದೇ ಒಂದು ಸ್ಥಾನ ಖಾಲಿ ಬಿಟ್ಟಿರೋದು ಪಕ್ಷದ ಮಹಿಳಾ ನಾಯಕಿಯರಿಗೆ ಬೇಸರ ಮೂಡಿಸಿದೆ.
ಕಾಂಗ್ರೆಸ್ ನಲ್ಲಿರೋ ಮಹಿಳಾ ನಾಯಕಿಯರು
- ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ, ಬೆಳಗಾವಿ ಗ್ರಾಮೀಣ (2 ಬಾರಿ ಶಾಸಕಿ)
- ರೂಪಕಲಾ ಶಶಿಧರ್, ಶಾಸಕಿ, ಕೆಜಿಎಫ್ (2 ಬಾರಿ ಶಾಸಕಿ)
- ಖನೀಸ್ ಫಾತಿಮಾ, ಶಾಸಕಿ, ಕಲಬುರಗಿ ಉತ್ತರ (2 ಬಾರಿ ಶಾಸಕಿ)
- ಅನ್ನಪೂರ್ಣ ತುಕರಾಂ, ಶಾಸಕಿ, ಸಂಡೂರು (ಮೊದಲ ಬಾರಿಗೆ ಶಾಸಕಿ)
- ನಯನ ಮೋಟಮ್ಮ, ಶಾಸಕಿ, ಮೂಡಿಗೆರೆ (ಮೊದಲ ಬಾರಿಗೆ ಶಾಸಕಿ)
- ಲತಾ ಮಲ್ಲಿಕಾರ್ಜುನ್, ಶಾಸಕಿ, ಹರಪ್ಪನಹಳ್ಳಿ (ಮೊದಲ ಬಾರಿಗೆ ಶಾಸಕಿ)
- ಉಮಾಶ್ರೀ, ಎಂಎಲ್ಸಿ, ಮಾಜಿ ಸಚಿವೆ
- ಆರತಿಕೃಷ್ಣ, ಎಂಎಲ್ಸಿ
- ಬಿಲ್ಕೀಸ್ ಭಾನು, ಎಂಎಲ್ಸಿ
- ಗಾಯತ್ರಿ ಶಾಂತೇಗೌಡ, ಎಂಎಲ್ಸಿ





