2023ರ ಜನವರಿಯಲ್ಲಿ, ಭಾರತದ ಪರ ಮಹಿಳಾ ಕುಸ್ತಿಪಟುಗಳಾದ ಮತ್ತು ಓಲಂಪಿಕ್ ಪದಕ ವಿಜೇತರಾದ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಅಂಶು ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಸುಮಾರು ಮೂವತ್ತು ಭಾರತೀಯ ಕುಸ್ತಿಪಟುಗಳು, ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಬಿಜೆಪಿ ಸಾಂಸದರಾದ ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅದರ ತರಬೇತುದಾರರ ವಿರುದ್ಧ ಮಹಿಳಾ ಲೈಂಗಿಕ ಕಿರುಕುಳವನ್ನು ಆರೋಪಿಸಿ ಧರಣಿ ನಡೆಸಿದ್ದಲ್ಲದೇ ಈ ಕೂಡಲೇ ಕುಸ್ತಿ ಫೆಡರೇಶನ್ ಅನ್ನು ವಿಸರ್ಜಿಸಲು ಒತ್ತಾಯಿಸಿದರು.

ಸರ್ಕಾರ ಈ ಕುರಿತಾಗಿ ತನಿಖೆಗಾಗಿ ಮೇಲುಸ್ತುವಾರಿ ಸಮಿತಿಯನ್ನು ರಚಿಸುವ ಭರವಸೆಯಿಂದಾಗಿ ಜನವರಿ 2023 ರಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಆದರೆ ಮತ್ತೆ ಏಪ್ರಿಲ್ 23, 2023 ರಲ್ಲಿ ನವದೆಹಲಿಯ ಜಂತರ್ ಮಂತರ್‌ನಲ್ಲಿ, ಆದೇ ಕುಸ್ತಿ ಪಟುಗಳು, ಸರ್ಕಾರ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಆರೋಪಿಸುತ್ತಾ, ಸರ್ಕಾರ ನೇಮಿಸಿದ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಒತ್ತಾಯಿಸಿದರು. ಸುಮಾರು 2012 ರಿಂದಲೂ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಕುಸ್ತಿಪಟುಗಳು ಆರೋಪಿಸಿದ ಮಹಿಳಾ ಕುಸ್ತಿಪಟುಗಳು, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನು ಪುನರಾರಂಭಿಸಿದರು. ಕೇವಲ ಭಾರತವಷ್ಟೇ ಅಲ್ಲದೇ, ಭಾರತದ ಹೊರಗೆಯೂ ಕೂಡ ಕಿರುಕುಳದ ಘಟನೆಗಳು ನಡೆದಿದ್ದು, ಬ್ರಿಜ್ ಭೂಷಣ್ ವಿರುದ್ಧ ಏಳು ಕುಸ್ತಿಪಟುಗಳು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದರೂ, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸದೇ ಹೋದಾಗ, ದೂರುದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 25 ಏಪ್ರಿಲ್ 2023 ರಂದು, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ, ಅರ್ಜಿಯಲ್ಲಿನ ಆರೋಪಗಳು ಗಂಭೀರವಾಗಿರುವ ಕಾರಣ, ಎಫ್‌ಐಆರ್ ದಾಖಲಿಸಲು ಸೂಚಿಸಲಾಯಿತು. ಕುಸ್ತಿಪಟುಗಳ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಆರೋಪಿಯು ಆಡಳಿತ ಪಕ್ಷದವರಾಗಿರುವುದರಿಂದ ಎಫ್‌ಐಆರ್ ದಾಖಲಿಸಿರಲಿಲ್ಲವಾದ್ದರಿಂದ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದೂ ಸಹಾ ಒತ್ತಾಯಿಸಿದರು.

ಆರಂಭದಲ್ಲಿ, ಕುಸ್ತಿಪಟುಗಳ ಪ್ರತಿಭಟನೆಗೆ ಕುರಿತಾಗಿ ಬಹುತೇಕರು ಸಹಾನುಭೂತಿ ವ್ಯಕ್ತವಾದರೂ, ನಂತರ ದಿನಗಳಲ್ಲಿ ಆ ಹೋರಾಟ ಪಡೆದ ರೀತಿ ಮತ್ತು ಅದನ್ನು ಬೆಂಬಲಿಸುವವರನ್ನು ನೋಡಿದಾಗ ಮತ್ತು ಬ್ರಿಜ್ ಭೂಷಣ್ ಸಿಂಗ್ ಅವರಿಂದ 1000ಕ್ಕೂ ಅಧಿಕ ಹುಡುಗಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಗಂಭೀರವಾದ ಆರೋಪ ಮಾಡಿದರೂ, ಆ ರೀತಿ ಕಿರುಕುಳಕ್ಕೆ ಒಳಗಾದ ಒಬ್ಬರ ಹೆಸರನ್ನೂ ಸಹಾ ಬಹಿರಂಗ ಬಿಡಿ, ದೂರಿನಲ್ಲೂ ಸಹಾ ನಮೂದಿಸದೇ ಹೋದಾಗ, ಎಲ್ಲರ ಸಹಾನುಭೂತಿಯು ಅನುಮಾನಕ್ಕೆ ತಿರುಗಿದ್ದಂತೂ ಸುಳ್ಳಲ್ಲ.
ಆರಂಭದಲ್ಲಿ ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಅವರು ಮಹಿಳಾ ಫಿಸಿಯೋಗೆ ಕಿರುಕುಳ ನೀಡಿದ್ದಾರೆ ಎಂದು ಸಮಿತಿಯ ಮುಂದೆ ಹೇಳಿಕೊಂಡರಾದರೂ, ಆ ಮಹಿಳಾ ಫಿಸಿಯೋ ಕಿರುಕುಳವನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಂತರ 2015 ರಲ್ಲಿ ಟರ್ಕಿ ಭೇಟಿಯ ಸಮಯದಲ್ಲಿ ತನಗೆ ಮತ್ತು ಸಾಕ್ಷಿ ಮಲಿಕ್ ಗೆ ಕಿರುಕುಳ ನೀಡಿದ್ದರು ಎಂದು ವಿನೇಶ್ ಫೋಗಟ್ ಆರೋಪಿಸಿದರು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ, ಆ ತಂಡದೊಂದಿಗೆ ಬ್ರಿಜ್ ಭೂಷಣ್ ಸಿಂಗ್ ಅವರು ಟರ್ಕಿಗೆ ಹೋಗಿರಲಿಲ್ಲ ಎಂಬ ಸಂಗತಿ ಬಹಿರಂಗವಾದಾಗ, ಅದೇ ವಿನೇಶ್ ಫೋಗಟ್ ನಾನು ನಿಖರವಾದ ದಿನಾಂಕವನ್ನು ಮರೆತಿದ್ದೇನೆ ಎಂದು ಹೇಳಿ ಜಾರಿಕೊಂಡಿದ್ದಲ್ಲದೇ, ಆ ಘಟನೆ ನಡೆದದ್ದು 2016 ರಲ್ಲಿ ಮಂಗೋಲಿಯಾ ಪ್ರವಾಸದ ಸಮಯದಲ್ಲಿ ಎಂದು ಹೇಳಿದರು. ಅದರ ಕುರಿತಾಗಿ ಸಮಿತಿಯು ಮತ್ತೊಮ್ಮೆ ತನಿಖೆ ನಡೆಸಿದಾಗಲೂ, ಬ್ರಿಜ್ ಭೂಷಣ್ ಸಿಂಗ್ ಅವರು ಮಂಗೋಲಿಯಾ ಪ್ರವಾಸದ ಸಮಯದಲ್ಲಿಯೂ ತಂಡದೊಂದಿಗೆ ಇರಲಿಲ್ಲ ಎಂಬುದು ತಿಳಿದು ಬಂದಿತು. ಆದಾದ ನಂತರ, ಅನೇಕ ಅಪ್ರಾಪ್ತ ವಯಸ್ಕರು ಸೇರಿದಂತೆ ಸಾವಿರಾರು ಹುಡುಗಿಯರು ಕಿರುಕುಳಕ್ಕೆ ಒಳಗಾಗಿದ್ದರು ಎಂಬ ಆರೋಪದ ಕುರಿತಾಗಿ, ಆ ಸಮಿತಿಯು ಹಾಗೆ ಕಿರುಕುಳಕ್ಕೆ ಒಳಗಾದ ಕೆಲವರ ಹೆಸರನ್ನು ತಿಳಿಸಿದರೆ ಅವರನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ಹೇಳಿದಾಗ ಅದೇ ಕುಸ್ತಿಪಟುಗಳು ನಮಗೆ ಆ ಹುಡುಗಿಯರ ಹೆಸರುಗಳು ತಿಳಿದಿಲ್ಲ. ಆದರೆ ಆಘಟನೆಗಳು ಮಾತ್ರಾ ಸಂಭವಿಸಿದೆ ಎಂದು ವಾದಿಸಿದ್ದಲ್ಲದೇ, ಆರೋಪಿಯು ಬಿಜೆಪಿ ಸಂಸದ ಎಂಬ ಕಾರಣಕ್ಕೆ ಸರ್ಕಾರ ಅವರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೀದಿಗೆ ಬಂದರು.





