“ಗಜನಿ”, “ಲಗಾನ್” ಸೇರಿದಂತೆ ಹಲವಾರು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್ (74) ಮಂಗಳವಾರ ನಿಧನರಾಗಿದ್ದಾರೆ.
‘ಗಜಿನಿ’, ‘ಲಾಗಾನ್’ ಚಿತ್ರದ ದೇವಾ ಪ್ರದೀಪ್ ರಾವತ್ ಇನ್ನು ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿʼ ಎಂದು ಯಶ್ಪಾಲ್ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಪ್ರದೀಪ್ ರಾವತ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಮ್ಯಾನೇಜರ್ ಸಿದ್ಧಾರ್ಥ್ ತಿವಾರಿ ತಿಳಿಸಿದ್ದಾರೆ.
ಪ್ರದೀಪ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಯ ನಂತರ ರೋಗವು ಮರಳಿ ಕಾಣಿಸಿಕೊಂಡಿತ್ತು. ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಿದ್ದಾರ್ಥ್ ತಿಳಿಸಿದ್ದಾರೆ.
ಪ್ರದೀಪ್ ರಾವತ್ ಅವರು ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ “ಮಹಾಭಾರತ” ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರದ ಮೂಲಕ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ ಮತ್ತು ಭೋಜ್ಪುರಿ ಭಾಷೆಗಳ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಹಿಂದಿಯಲ್ಲಿ “ಲಗಾನ್”, “ಸರ್ಫರೋಶ್”, “ಗಜನಿ”, “ಆವಾರಾಪನ್”, “ಗ್ರ್ಯಾಂಡ್ ಮಸ್ತಿ” ಸೇರಿದಂತ ಹಲವಾರು ಸಿನಿಮಾಗಳಲ್ಲಿ ಪ್ರದೀಪ್ ರಾವತ್ ಕಾಣಿಸಿಕೊಂಡಿದ್ದರು. ತೆಲುಗಿನ “ಸೈ” ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟ ಅವರು ಪ್ರಮುಖ ಖಳನಟನಾಗಿ ಗುರುತಿಸಿಕೊಂಡರು. 2005ರ ತಮಿಳಿನ ಗಜನಿ ಚಿತ್ರದಲ್ಲಿನ ಅವರ ದ್ವಿಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಹಿಂದಿ ರಿಮೇಕ್ನಲ್ಲೂ ವಿಲನ್ ಆಗಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು.
ಕನ್ನಡದ “ಗಜ”, ಮಲಯಾಳಂನ “ಚೈನಾ ಟೌನ್” ಹಾಗೂ ಭೋಜ್ಪುರಿಯ “ಕ್ರ್ಯಾಕ್ ಫೈಟರ್” ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.





