“ಗಜನಿ”, “ಲಗಾನ್​” ಸೇರಿದಂತೆ ಹಲವಾರು ಬ್ಲಾಕ್​ಬಸ್ಟರ್​ ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್ (74) ಮಂಗಳವಾರ ನಿಧನರಾಗಿದ್ದಾರೆ.

‘ಗಜಿನಿ’, ‘ಲಾಗಾನ್’ ಚಿತ್ರದ ದೇವಾ ಪ್ರದೀಪ್ ರಾವತ್ ಇನ್ನು ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿʼ ಎಂದು ಯಶ್‌ಪಾಲ್ ಶರ್ಮಾ ಅವರು ಇನ್ಸ್​ಟಾಗ್ರಾಮ್​ನಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಪ್ರದೀಪ್​ ರಾವತ್​ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಮ್ಯಾನೇಜರ್​ ಸಿದ್ಧಾರ್ಥ್​ ತಿವಾರಿ ತಿಳಿಸಿದ್ದಾರೆ.

ಪ್ರದೀಪ್​ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಯ ನಂತರ ರೋಗವು ಮರಳಿ ಕಾಣಿಸಿಕೊಂಡಿತ್ತು. ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಿದ್ದಾರ್ಥ್​ ತಿಳಿಸಿದ್ದಾರೆ.

ಪ್ರದೀಪ್​ ರಾವತ್​ ಅವರು ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ “ಮಹಾಭಾರತ” ಧಾರಾವಾಹಿಯಲ್ಲಿ ಅಶ್ವತ್ಥಾಮನ ಪಾತ್ರದ ಮೂಲಕ ತಮ್ಮ ನಟನಾ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ ಮತ್ತು ಭೋಜ್​ಪುರಿ ಭಾಷೆಗಳ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ಹಿಂದಿಯಲ್ಲಿ “ಲಗಾನ್”​, “ಸರ್ಫರೋಶ್”​, “ಗಜನಿ”, “ಆವಾರಾಪನ್​”, “ಗ್ರ್ಯಾಂಡ್​ ಮಸ್ತಿ” ಸೇರಿದಂತ ಹಲವಾರು ಸಿನಿಮಾಗಳಲ್ಲಿ ಪ್ರದೀಪ್​ ರಾವತ್​ ಕಾಣಿಸಿಕೊಂಡಿದ್ದರು. ತೆಲುಗಿನ “ಸೈ” ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟ ಅವರು ಪ್ರಮುಖ ಖಳನಟನಾಗಿ ಗುರುತಿಸಿಕೊಂಡರು. 2005ರ ತಮಿಳಿನ ಗಜನಿ ಚಿತ್ರದಲ್ಲಿನ ಅವರ ದ್ವಿಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಹಿಂದಿ ರಿಮೇಕ್​ನಲ್ಲೂ ವಿಲನ್​ ಆಗಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು.

ಕನ್ನಡದ “ಗಜ”, ಮಲಯಾಳಂನ “ಚೈನಾ ಟೌನ್​” ಹಾಗೂ ಭೋಜ್​ಪುರಿಯ “ಕ್ರ್ಯಾಕ್​ ಫೈಟರ್​” ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ