– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಅವರು ನಿರ್ಮಾಣ ಕ್ಷೇತ್ರಕ್ಕೆ ಕಾಲಿಡಲು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರೇ ಪ್ರಮುಖ ಕಾರಣ ಎಂದು ಬಹಿರಂಗಪಡಿಸಿದ್ದಾರೆ. ವರ್ಷಗಳ ಬಳಿಕ ಈ ಕುತೂಹಲಕಾರಿ ಸಂಗತಿಯನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಚಂದನ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಸ್ನೇಹನಾ ಪ್ರೀತಿನಾ’ ಹಾಗೂ ‘ಭೂಪತಿ’ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಗಳಿಗೆ ದರ್ಶನ್ ಕುಟುಂಬದೊಂದಿಗೆ ತೆರಳಿದ್ದೆವು. ಆ ವೇಳೆ ವಿಜಯಲಕ್ಷ್ಮಿ ಮೇಡಂ, ‘ನೀವೇ ಹಣ ಹೂಡಿ ಸಿನಿಮಾ ನಿರ್ಮಾಣ ಮಾಡಿ. ಲಾಭವೂ ನಿಮಗೇ ಸಿಗಲಿ. ಕಾಲ್‌ಶೀಟ್ ನಾವು ಕೊಡುತ್ತೇವೆ’ ಎಂದು ಪ್ರೀತಿಯಿಂದ ಒತ್ತಾಯಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಆರಂಭದಲ್ಲಿ ಸಿನಿಮಾ ನಿರ್ಮಾಣದ ರಿಸ್ಕ್ ಮತ್ತು ಕಷ್ಟಗಳ ಅರಿವಿದ್ದ ಕಾರಣ ನಿರ್ಮಾಪಕರಾಗುವ ಆಸಕ್ತಿಯೇ ಇರಲಿಲ್ಲ. ವಿತರಣೆ ಮತ್ತು ಪ್ರದರ್ಶನ ಕ್ಷೇತ್ರದಲ್ಲೇ ಮುಂದುವರಿಯುವ ಯೋಚನೆ ಇತ್ತು. ಆದರೆ ವಿಜಯಲಕ್ಷ್ಮಿ ಅವರ ಮಾತಿನಿಂದ ಮನಸ್ಸು ಬದಲಾಗಿ, ‘ಅರ್ಜುನ್’ ಚಿತ್ರದ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟೆವು ಎಂದು ಜಯಣ್ಣ-ಭೋಗೇಂದ್ರ ತಿಳಿಸಿದ್ದಾರೆ.
ವಿಜಯಲಕ್ಷ್ಮಿ ಅವರ ಪ್ರೋತ್ಸಾಹಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ‘ಅರ್ಜುನ್’ ಚಿತ್ರದ ಟೈಟಲ್‌ನಲ್ಲಿ ‘Vijayalakshmi Darshan Presents’ ಎಂದು ಕ್ರೆಡಿಟ್ ನೀಡಿದ್ದಾಗಿ ಜಯಣ್ಣ ಹೇಳಿದ್ದಾರೆ. ಅಂದಿನಿಂದ ಇಂದಿನವರೆಗೂ ನಿರ್ಮಾಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದೇವೆ ಎಂದು ಭೋಗೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.





