“ಅಬ್ಬಾ… ಎಷ್ಟು ಆ್ಯಪ್‌ಗಳಲ್ಲಿ ಅಪ್ಲಿಕೇಶನ್ ಹಾಕಿದ್ರೂ ನೋಟಿಫಿಕೇಶನ್ ಬರ್ತಾನೇ ಇದೆ. ಆದರೆ ಒಂದೂ ಕೆಲಸ ಸಿಗುತ್ತಿಲ್ಲ, ತಲೆ ಕೆಟ್ಟುಹೋಗಿದೆ…”

​ನನ್ನ ಜೊತೆಯಿದ್ದ ಸ್ನೇಹಿತೆ ಬೇಸರದಿಂದ ಹೀಗೆ ಹೇಳಲು ಆರಂಭಿಸಿದಾಗ ನನಗೆ ಆಶ್ಚರ್ಯವಾಯಿತು. “ಏಕೆ ಈಕೆ ಹೀಗೆ ಹೇಳುತ್ತಿದ್ದಾಳೆ?” ಎಂಬ ನನ್ನ ಪ್ರಶ್ನೆಗೆ ಅವಳ ಬಾಯಿಂದಲೇ ಉತ್ತರವೂ ದೊರೆಯಿತು. ಪ್ರತಿ ಬಾರಿಯೂ ನೇರವಾಗಿ ಕಂಪನಿಗೆ ಹೋಗಿ ಉದ್ಯೋಗಾವಕಾಶ ಕೋರುತ್ತಿದ್ದ ನನಗೆ, ಈ ಆನ್‌ಲೈನ್ ಅಪ್ಲಿಕೇಶನ್‌ಗಳ ಪ್ರಪಂಚ ನಿಜಕ್ಕೂ ಹೊಸದು ಮತ್ತು ವಿಚಿತ್ರವೆನಿಸಿತು.

​ಇಂದಿನ ಡಿಜಿಟಲ್ ಯುಗದಲ್ಲಿ LinkedIn, Naukri, Apna ನಂತಹ ಹಲವಾರು ವೆಬ್‌ಸೈಟ್ ಹಾಗೂ ಆ್ಯಪ್‌ಗಳ ಮೂಲಕ ನೂರಾರು ಉದ್ಯೋಗಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ,

ಹೀಗೆ ದಿನವಿಡೀ ಅರ್ಜಿ ಸಲ್ಲಿಸುತ್ತಿದ್ದರೂ ಕೆಲಸ ಸಿಗದೆ ಉದ್ಯೋಗಾಕಾಂಕ್ಷಿಗಳಲ್ಲಿ ಒತ್ತಡ, ಆತಂಕ ಮತ್ತು ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

​ಪ್ರೊಫೈಲ್ ಒಂದೇ, ಅರ್ಜಿ ನೂರಾರು: ಎಲ್ಲಿ ತಪ್ಪಾಗುತ್ತಿದೆ?

​ಹೌದು, ಪ್ರತಿಯೊಂದು ಆನ್‌ಲೈನ್ ಪ್ಲಾಟ್‌ಫಾರ್ಮ್ ಸಂಪೂರ್ಣ ನಿಖರತೆಯಿಂದ ಕೂಡಿರುವುದಿಲ್ಲ. ಅನೇಕ ಉದ್ಯೋಗಾಕಾಂಕ್ಷಿಗಳು ಸಮಯದ ಕೊರತೆಯಿಂದ ಅಥವಾ ಸರಿಯಾದ ಮಾಹಿತಿಯಿಲ್ಲದೆ, ಕೇವಲ ಒಂದೇ ರೀತಿಯ ಆಕರ್ಷಕ ಟೆಂಪ್ಲೇಟ್ (Template) ಅಥವಾ ಬ್ಯಾಕ್‌ಗ್ರೌಂಡ್ ಬಳಸಿ ಪ್ರೊಫೈಲ್ ಕ್ರಿಯೇಟ್ ಮಾಡುತ್ತಾರೆ.

​ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಒಂದೇ ರೆಸ್ಯೂಮ್ (Resume) ಬಳಸಿ, ತಮಗೆ ಸಿಕ್ಕಿದ್ದೆಲ್ಲಾ ಕೆಲಸಗಳಿಗೂ ಒಂದೇ ಬಾರಿಗೆ ಅಪ್ಲಿಕೇಶನ್ ಹಾಕಿಬಿಡುತ್ತಾರೆ! ಆದರೆ, ಪ್ರತಿಯೊಂದು ಕಂಪನಿಯ ಅಗತ್ಯತೆ ಬೇರೆಯೇ ಇರುತ್ತದೆ. ಹೀಗೆ ಒಂದೇ ರೆಸ್ಯೂಮ್ ಎಲ್ಲದಕ್ಕೂ ಕಳುಹಿಸಿದಾಗ, ಉದ್ಯೋಗಕ್ಕೆ ಆಯ್ಕೆ ಮಾಡುವ ಹೆಚ್.ಆರ್ (HR) ವಿಭಾಗಕ್ಕೂ ಗೊಂದಲ ಉಂಟಾಗುವುದು ಸಹಜವಲ್ಲವೇ?

​’ಡೂಮ್‌ಜಾಬಿಂಗ್’ ವರದಿ ಏನು ಹೇಳುತ್ತದೆ?

​2026ರ ‘ಡೂಮ್‌ಜಾಬಿಂಗ್’ (Doomjobbing) ಕುರಿತಾದ ವರದಿಯೊಂದು ಬೆಚ್ಚಿಬೀಳಿಸುವ ಅಂಶಗಳನ್ನು ಬಹಿರಂಗಪಡಿಸಿದೆ:

​ಶೇಕಡಾ 48 ರಷ್ಟು ಉದ್ಯೋಗಿಗಳು ಕೆಲಸದ ಸರಿಯಾದ ವಿವರಣೆಯನ್ನು (Job Description) ಓದದೆಯೇ ನೇರವಾಗಿ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ.

​ಶೇಕಡಾ 42 ರಷ್ಟು ಜನರು ಒಂದೇ ಬಾರಿಗೆ ಕನಿಷ್ಠ ನಾಲ್ಕು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.

​ಕೇವಲ ಶೇಕಡಾ 32 ರಷ್ಟು ಜನರು ಮಾತ್ರ ಅರ್ಜಿ ಸಲ್ಲಿಸುವ ಮೊದಲು ಕಂಪನಿ ಮತ್ತು ಹುದ್ದೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

​ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮಗಳು

​ಈ ರೀತಿ ಆಲೋಚನೆಯಿಲ್ಲದೆ ನಿರಂತರವಾಗಿ ಅರ್ಜಿ ಸಲ್ಲಿಸುವುದು ಉದ್ಯೋಗಾಕಾಂಕ್ಷಿಗಳ ಮಾನಸಿಕ ಸ್ಥಿತಿಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ:

​ಡೋಪಮೈನ್ ಬಿಡುಗಡೆ ಮತ್ತು ತಾಳ್ಮೆಯ ಕೊರತೆ (Dopamine Release): ಒಂದೇ ವಿಷಯದ ಬಗ್ಗೆ ನಿರಂತರವಾಗಿ ಆಲೋಚಿಸುವುದು, ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಮಯದ ಮಿತಿಯಿಲ್ಲದೆ ರೀಲ್ಸ್ ಸ್ಕ್ರೋಲ್ ಮಾಡುತ್ತಾ ನೋಟಿಫಿಕೇಶನ್‌ಗಾಗಿ ಕಾಯುವುದರಿಂದ ಮೆದುಳಿನಲ್ಲಿ ಅತಿಯಾಗಿ ಡೋಪಮೈನ್ ಬಿಡುಗಡೆಯಾಗುತ್ತದೆ. ಇದು ತಾತ್ಕಾಲಿಕವಾಗಿ ಉತ್ತೇಜನ ನೀಡಿದರೂ, ದೀರ್ಘಾವಧಿಯಲ್ಲಿ ತಾಳ್ಮೆ ಹಾಗೂ ಉತ್ಸಾಹವನ್ನು ಕುಗ್ಗಿಸಿ ಆತಂಕವನ್ನು ಹೆಚ್ಚಿಸುತ್ತದೆ.

​ನಕಾರಾತ್ಮಕ ಪಕ್ಷಪಾತ (Negativity Bias): ಇಂದಿನ ಯುವಜನತೆ ಧನಾತ್ಮಕ ಅಂಶಗಳಿಗಿಂತ ಹೆಚ್ಚಾಗಿ ಋಣಾತ್ಮಕ ವಿಷಯಗಳಿಗೆ ಬೇಗನೆ ಸ್ಪಂದಿಸುತ್ತಿದ್ದಾರೆ. ಹಿಂದೆ ನಕಾರಾತ್ಮಕ ಅಂಶಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಧನಾತ್ಮಕವಾಗಿ ಬದಲಾಯಿಸಿಕೊಳ್ಳುವ ಸಾಮರ್ಥ್ಯವಿತ್ತು, ಆದರೆ ಈಗಿನ ಗಡಿಬಿಡಿಯ ಜೀವನದಲ್ಲಿ ಆ ಸಹನೆ ಕಡಿಮೆಯಾಗುತ್ತಿದೆ.

​ನಿಯಂತ್ರಣದ ಭ್ರಮೆ (Illusion of Control): ‘ನಾನು ನೂರಾರು ಅರ್ಜಿಗಳನ್ನು ಹಾಕಿದ್ದೇನೆ, ಹಾಗಾಗಿ ಏನಾದರೂ ಒಳ್ಳೆಯದಾಗುತ್ತದೆ’ ಎಂಬ ಆತುರದ ಆಲೋಚನೆ ತಾತ್ಕಾಲಿಕವಾಗಿ ಸಮಾಧಾನ ನೀಡಿದರೂ, ಅಂತಿಮವಾಗಿ ಫಲಿತಾಂಶ ಸಿಗದಿದ್ದಾಗ ಮುಂದೇನಾಗಬಹುದು ಎಂಬ ಚಿಂತೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಕೊನೆಯದಾಗಿ ಹೇಳುವುದಾದರೆ,​ಪ್ರಮಾಣಕ್ಕಿಂತ, ಗುಣಮಟ್ಟಕ್ಕೆ ಆದ್ಯತೆ ನೀಡುವುದು ಇಂದಿನ ಅಗತ್ಯ. ನೂರಾರು ಕೆಲಸಗಳಿಗೆ ಕುರುಡಾಗಿ ಅರ್ಜಿ ಸಲ್ಲಿಸುವ ಬದಲು, ನಿಮ್ಮ ಅರ್ಹತೆಗೆ ಹೊಂದುವ ಕೆಲಸವನ್ನು ಆಯ್ಕೆ ಮಾಡಿ, ಕಂಪನಿಯ ಅಗತ್ಯಕ್ಕೆ ತಕ್ಕಂತೆ ರೆಸ್ಯೂಮ್ ಬದಲಾಯಿಸಿ ಅರ್ಜಿ ಸಲ್ಲಿಸುವುದು ಯಶಸ್ಸಿನ ಹಾದಿಯಾಗಿದೆ. ಆನ್‌ಲೈನ್ ಜಗತ್ತಿನ ಈ ಒತ್ತಡಕ್ಕೆ ಸಿಲುಕದೆ, ತಾಳ್ಮೆಯಿಂದ ಸರಿಯಾದ ಹಾದಿಯಲ್ಲಿ ಪ್ರಯತ್ನಿಸಿದರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ.

ಬರಹಗಾರರು :-

ಭಾರ್ಗವಿ, ಜಿ, ಆರ್

ಭದ್ರಾವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ