ಡಿಸೆಂಬರ್ ನ ಈ ಚುಮುಚುಮು ಚಳಿಯಲ್ಲಿ ಏನಾದರೂ ವೈವಿಧ್ಯಮಯ ರೆಸಿಪೀಸ್ ಸವಿಯಲು ಮನಸ್ಸಾಗುತ್ತದೆ. ಅದಕ್ಕೆ ತಕ್ಕಂತಿರುವ ಈ ಕೆಳಗಿನ ರೆಸಿಪಿಗಳನ್ನು ನೀವೇಕೆ ಟ್ರೈ ಮಾಡಿ ನೋಡಬಾರದು……?
ವೆಜಿಟೆಬಲ್ ಟೊಮೇಟೊ ಸೂಪ್
ಸಾಮಗ್ರಿ : 5-6 ಮಾಗಿದ ಹುಳಿ ಟೊಮೇಟೊ, ಒಂದಿಷ್ಟು ಹೆಚ್ಚಿದ ಮಿಶ್ರ ತರಕಾರಿ (ಬೀನ್ಸ್, ಕ್ಯಾರೆಟ್, ಆಲೂ, ಸೌತೇಕಾಯಿ), ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಎಲ್.ಜಿ. ಇಂಗು, ಟೊಮೇಟೊ ಕೆಚಪ್, ತುಸು ಬ್ರೆಡ್ ಕ್ರೂಟಾನ್ಸ್, ಬೆಣ್ಣೆ.
ವಿಧಾನ : ಚಿಕ್ಕ ಪ್ರೆಶರ್ ಕುಕ್ಕರ್ ಗೆ ಸಣ್ಣಗೆ ಹೆಚ್ಚಿದ ಎಲ್ಲಾ ತರಕಾರಿ, 2 ಲೋಟ ನೀರು ಬೆರೆಸಿ ಹದನಾಗಿ ಬೇಯಿಸಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ತಿರುವಿಕೊಂಡು, ಬ್ಲೆಂಡ್ ಮಾಡಿ. ನಂತರ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಉಪ್ಪು, ಮೆಣಸು, ಎಲ್.ಜಿ. ಇಂಗು ಸೇರಿಸಿ ಕೆದಕಿರಿ. ನಂತರ ಕೆಚಪ್, ಸೋಸಿಕೊಂಡು ವೆಜ್ ಸ್ಟಾಕ್ ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ಇದಕ್ಕೆ ಚಿತ್ರದಲ್ಲಿರುವಂತೆ ಕ್ರೂಟಾನ್ಸ್ ಬೆರೆಸಿ, ಸೂಪ್ ಬಟ್ಟಲುಗಳಿಗೆ ತುಂಬಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಸೇಬಿನ ಟಿಕ್ಕಿ
ಸಾಮಗ್ರಿ : 1 ದೊಡ್ಡ ಸೇಬು, 3-4 ಚಮಚ ಕಾರ್ನ್ ಫ್ಲೇಕ್ಸ್ ಚೂರು, 1-2 ಚಮಚ ಬೆಣ್ಣೆ, ಒಂದಿಷ್ಟು ಗೋಡಂಬಿ, ಅಖರೋಟು, ದ್ರಾಕ್ಷಿ, ಅಗತ್ಯವಿದ್ದಷ್ಟು ಸಕ್ಕರೆ ಪುಡಿ, ಬ್ರೆಡ್ ಕ್ರಂಬ್ಸ್, ಬೆಣ್ಣೆ, ಉಪ್ಪು, ಮೆಣಸು, ಎಲ್.ಜಿ. ಇಂಗು.
ವಿಧಾನ : ಮೊದಲು ಸೇಬಿನ ಸಿಪ್ಪೆ ಹೆರೆದು, ನೀಟಾಗಿ ತುರಿದಿಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಕಾರ್ನ್ ಫ್ಲೇಕ್ಸ್ ಚೂರು ಹಾಕಿ ಹುರಿಯಿರಿ. ಇದಕ್ಕೆ ತುರಿದ ಸೇಬು, ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್, ಪುಡಿ ಸಕ್ಕರೆ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಕೆಳಗಿಳಿಸಿ ಆರಲು ಬಿಡಿ. ನಂತರ ಇದಕ್ಕೆ ಉಪ್ಪು, ಮೆಣಸು, ಎಲ್.ಜಿ. ಇಂಗು, ಬ್ರೆಡ್ ಕ್ರಂಬ್ಸ್ ಬೆರೆಸಿ, ಸಣ್ಣ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ತಟ್ಟಿಕೊಳ್ಳಿ. ತವಾ ಮೇಲೆ ಬೆಣ್ಣೆ ಹಾಕಿ, ಇದನ್ನು ಅದರಲ್ಲಿ ಎರಡೂ ಬದಿ ತಿರುವಿಹಾಕುತ್ತಾ ಬಿಸಿ ಮಾಡಿ.

ಕಾರ್ನ್ ಟಿಕ್ಕಿ
ಸಾಮಗ್ರಿ : ತಾಜಾ ಆಗಿರುವ 2 ದಿಂಡು ಜೋಳ, ಬೇಯಿಸಿ ಮಸೆದ 1 ದೊಡ್ಡ ಆಲೂ, ಒಂದಿಷ್ಟು ಕಾರ್ನ್ ಫ್ಲೇಕ್ಸ್, ಚೀಸ್ ಸ್ಪ್ರೆಡ್, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಟೊಮೇಟೊ, ಉಪ್ಪು, ಖಾರ ಎಲ್.ಜಿ. ಇಂಗು, ಕರಿಯಲು ಎಣ್ಣೆ.
ವಿಧಾನ : ಜೋಳದ ಕಾಳು ಬಿಡಿಸಿ ಮಿಕ್ಸಿಯಲ್ಲಿ ಹಸಿ ಮೆಣಸಿನ ಜೊತೆ ನೀಟಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಉಳಿದ ಸಾಮಗ್ರಿ, ಎಲ್.ಜಿ. ಇಂಗು, ಮಸೆದ ಆಲೂ ಸೇರಿಸಿ ಮಿಶ್ರಣ ಕಲಸಿಡಿ. ಡ್ರೈ ಮಿಕ್ಸಿಗೆ ಕಾರ್ನ್ ಫ್ಲೇಕ್ಸ್ ಹಾಕಿ ತರಿತರಿ ಮಾಡಿಕೊಳ್ಳಿ. ಚೀಸ್ ಸ್ಪ್ರೆಡ್ ಸಮೇತ ಇದನ್ನು ಮಿಶ್ರಣಕ್ಕೆ ಕಲಸಿರಿ. ಅದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ಜಿಡ್ಡಿನ ಕೈಗಳಿಂದ ಅಂಗೈ ಮೇಲೆ (ಚಿತ್ರದಲ್ಲಿರುವಂತೆ) ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿಯಾಗಿ ಇದನ್ನು ಟೊಮೇಟೊ ಸಾಸ್ ಜೊತೆ ಕಾಫಿಯೊಂದಿಗೆ ಕೊಡಿ.

ಸ್ಪೈಸಿ ಪೊಟೇಟೊ
ಸಾಮಗ್ರಿ : ಬೇಯಿಸಿ ಮಸೆದ 2-3 ಆಲೂ, ಹೆಚ್ಚಿದ 1-2 ಹಸಿಮೆಣಸು, 2 ಚಮಚ ಫ್ರೆಶ್ ಕ್ರೀಂ, ರುಚಿಗೆ ತಕ್ಕಷ್ಟು ಬೆಣ್ಣೆ, ಚೀಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹುಳಿ ಮೊಸರು, ಉಪ್ಪು, ಖಾರ, ಎಲ್.ಜಿ. ಇಂಗು, 2 ಕಪ್ ಕಡಲೆಹಿಟ್ಟು, ಅಲಂಕರಿಸಲು ಕೊಬ್ಬರಿ ರೇಕು.
ವಿಧಾನ : ಮಸೆದ ಆಲುವಿಗೆ ಮೇಲಿನ ಎಲ್ಲಾ ಸಾಮಗ್ರಿ, ಎಲ್.ಜಿ. ಇಂಗು, ತುಸು ನೀರು ಬೆರೆಸಿ ಪಕೋಡ ಮಿಶ್ರಣದಂತೆ ಕಲಸಿಡಿ. ಜಿಡ್ಡು ಸವರಿದ ಅಂಗೈನಲ್ಲಿ ಇದನ್ನು ಚಪ್ಪಟೆಯಾಗಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ತೆಗೆಯಿರಿ ಅಥವಾ ಓವನ್ ನಲ್ಲಿ 180 ಡಿಗ್ರಿ ಶಾಖದಲ್ಲಿ ಹದನಾಗಿ 10 ನಿಮಿಷ ಬೇಕ್ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಸ್ಪೆಷಲ್ ಪಾಪ್ಸ್
ಸಾಮಗ್ರಿ : 1 ಕಪ್ ಮೈದಾ, ಅರ್ಧ ಸೌಟು ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಲ್.ಜಿ. ಇಂಗು, ಗೋಡಂಬಿ, ದ್ರಾಕ್ಷಿ, ಬಾದಾಮಿ, ಅಖರೋಟು ಚೂರು, ಜ್ಯಾಂ, ತುರಿದ ಪನೀರ್, ಒಂದಿಷ್ಟು ಟೂಥ್ ಪಿಕ್ಸ್.
ವಿಧಾನ : ಮೈದಾಗೆ ಉಪ್ಪು, ಖಾರ, ಎಲ್.ಜಿ. ಇಂಗು, ಬೆಣ್ಣೆ ಸೇರಿಸಿ ತುಸು ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ ಡ್ರೈ ಫ್ರೂಟ್ಸ್, ಜ್ಯಾಂ ಸೇರಿಸಿ ಮಿಕ್ಸ್ ಮಾಡಿಡಿ. ಮೈದಾ ಮಿಶ್ರಣಕ್ಕೆ ಬೆಣ್ಣೆ ಸವರಿ ಮತ್ತೆ ನಾದಿಕೊಳ್ಳಿ. ಉಂಡೆ ಮಾಡಿ, ಚಪಾತಿಗಳಾಗಿ ಲಟ್ಟಿಸಿ. ಚಿತ್ರದಲ್ಲಿರುವಂಥ ಆಕಾರ ಬರಲು ಸೂಕ್ತ ಕಟರ್ ನಿಂದ ಹಾರ್ಟ್ ಶೇಪ್ ನಲ್ಲಿ ಕಟ್ ಮಾಡಿಕೊಳ್ಳಿ. ಒಂದು ಪದರದ ಮೇಲೆ ತುಸು ಡ್ರೈ ಫ್ರೂಟ್ಸ್ ಮಿಶ್ರಣ ಹರಡಿ. ಅದರ ಮೇಲೆ ಅಂಥದ್ದೇ ಮತ್ತೊಂದು ಪದರ ಇರಿಸಿ, ಒದ್ದೆ ಕೈಯಿಂದ ಇವೆರಡರನ್ನೂ ಅಂಟಿಸಿಬಿಡಿ. ತಲಾ 1-1 ಟೂಥ್ ಪಿಕ್ ಸಿಗಿಸಿಡಿ. ಈ ರೀತಿ ಎಲ್ಲಾ ಸಿದ್ಧಪಡಿಸಿಕೊಂಡು, ಪ್ರೀಹೀಟೆಡ್ ಓವನ್ ನಲ್ಲಿ 180 ಡಿಗ್ರಿ ಶಾಖದಲ್ಲಿ 10 ನಿಮಿಷ ಹದನಾಗಿ ಬೇಕ್ ಮಾಡಿ.

ಚೀಝೀ ಪ್ಯಾಕೆಟ್
ಸಾಮಗ್ರಿ : 1 ಕಪ್ ಮೈದಾ, ಅರ್ಧ ಸೌಟು ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ವೈಟ್ ಸಾಸ್, ತುರಿದ ಚೀಸ್, ಎಲ್.ಜಿ. ಇಂಗು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಕ್ಯಾಪ್ಸಿಕಂ, ಹಸಿಮೆಣಸು, ಕರಿಯಲು ಎಣ್ಣೆ.
ವಿಧಾನ : ಮೈದಾಗೆ ಉಪ್ಪು, ಬೆಣ್ಣೆ, ತುಸು ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಚಿಕ್ಕ ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ. ನಂತರ ಉಳಿದ ಪದಾರ್ಥ, ಉಪ್ಪು, ಖಾರ, ಎಲ್.ಜಿ. ಇಂಗು, ತುರಿದ ಚೀಸ್ ಎಲ್ಲಾ ಸೇರಿಸಿ ಮಿಶ್ರಣ ಕೆದಕಿ ಕೆಳಗಿಳಿಸಿ. ಇದು ಚೆನ್ನಾಗಿ ಆರಿದ ನಂತರ, ಮೈದಾ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ, ಅದರೊಳಗಿರಿಸಿ, ಓವನ್ ನಲ್ಲಿ ಬೇಕ್ ಮಾಡಿ.

ಪೀನಟ್ ಬಟರ್ ಆನ್ ಟೋಸ್ಟ್
ಸಾಮಗ್ರಿ : 1-2 ವೈಟ್ ಬ್ರೆಡ್ ಸ್ಲೈಸ್, 1 ದೊಡ್ಡ ಚಮಚ ಶುಗರ್ ಫ್ರೀ ಪೀನಟ್ ಬಟರ್, 1 ಪ್ಯಾಕೆಟ್ ಶುಗರ್ ಫ್ರೀ, 1 ಮಾಗಿದ ಬಾಳೆಹಣ್ಣು, ತುಸು ಏಲಕ್ಕಿ ಪುಡಿ.
ವಿಧಾನ : ಮೊದಲು ಬ್ರೆಡ್ ಸ್ಲೈಸ್ ಗೆ ಬೆಣ್ಣೆ ಸವರಿ ತವಾ ಮೇಲೆ ಬಿಸಿ ಮಾಡಿ. ನಂತರ ಇದರ ಮೇಲೆ ಪೀನಟ್ ಬಟರ್ ಹಚ್ಚಿಡಿ. ಇದರ ಮೇಲೆ ಶುಗರ್ ಫ್ರೀ ಉದುರಿಸಿ. ಇದರ ಮೇಲೆ ಸಣ್ಣ ಬಿಲ್ಲೆಗಳಾಗಿ ಕತ್ತರಿಸಿದ ಬಾಳೆಹಣ್ಣು ಬರಲಿ. ಅದರ ಮೇಲೆ ಏಲಕ್ಕಿ ಪುಡಿ ಉದುರಿಸಿ, ಸವಿಯಲು ಕೊಡಿ.

ವೆಜ್ ಮಂಚೂರಿಯನ್
ಮಂಚೂರಿಯನ್ ಬಾಲ್ಸ್ ಗಾಗಿ ಸಾಮಗ್ರಿ : 1 ಸಣ್ಣ ಎಲೆಕೋಸು, 1 ಹೂಕೋಸು, 2 ಕ್ಯಾರೆಟ್, 200 ಗ್ರಾಂ ಪನೀರ್ (ಎಲ್ಲವನ್ನೂ ನೀಟಾಗಿ ತುರಿದಿಡಿ), ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಬೆಳ್ಳುಳ್ಳಿ, 1-2 ಈರುಳ್ಳಿ, ಅರ್ಧ ಕಪ್ ಮೈದಾ, 1 ಕಪ್ ಕಾರ್ನ್ ಫ್ಲೋರ್, ಕರಿಯಲು ಎಣ್ಣೆ.
ಗ್ರೇವಿಗಾಗಿ ಸಾಮಗ್ರಿ : ಅರ್ಧ ಸೌಟು ರೀಫೈಂಡ್ ಎಣ್ಣೆ, ಒಂದಿಷ್ಟು ಹೆಚ್ಚಿಕೊಂಡ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಜಿನೋಮೋಟೋ, ಸೋಯಾ ಸಾಸ್, ಚಿಲೀ ಸಾಸ್, ಟೊಮೇಟೊ ಸಾಸ್, ವಿನಿಗರ್, ಸಕ್ಕರೆ, ತುಸು ಬಿಸಿ ಹಾಲಲ್ಲಿ ಕದಡಿಕೊಂಡ ಕಾರ್ನ್ ಫ್ಲೋರ್.
ವಿಧಾನ : ಮೊದಲು ತುರಿದ ಸಾಮಗ್ರಿ ಬೇಯಿಸಿ, ಸೋಸಿಕೊಳ್ಳಿ. (ಆ ನೀರನ್ನು ಗ್ರೇವಿಗೆ ಬಳಸಿರಿ). ಇದಕ್ಕೆ ಹೆಚ್ಚಿದ ಇತರ ಸಾಮಗ್ರಿ, ಉಪ್ಪು, ತುಸು ಖಾರ, ಅರಿಶಿನ, ಕಾರ್ನ್ ಫ್ಲೋರ್ ಸೇರಿಸಿ ಪಕೋಡ ತರಹ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆ ಕಟ್ಟಿಡಿ. ಮೈದಾಗೆ ತುಸು ನೀರು ಬೆರೆಸಿ ಬೋಂಡ ಹಿಟ್ಟಿನಂತೆ ಗಟ್ಟಿ ಕಲಸಿಡಿ. ಅದರಲ್ಲಿ ಈ ಉಂಡೆಗಳನ್ನು ಅದ್ದಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಳಸಿಕೊಂಡು, ಗ್ರೇವಿಯ ಎಲ್ಲಾ ಹೆಚ್ಚಿದ ಸಾಮಗ್ರಿ ಹಾಕಿ ಬಾಡಿಸಿ. ನಂತರ ಉಳಿದ ಮಸಾಲೆ, ಸಾಸ್, ಉಪ್ಪು, ಖಾರ ಹಾಕಿ ನಿಧಾನವಾಗಿ ಕೆದಕಬೇಕು. ತರಕಾರಿ ಸ್ಟಾಕ್ ಬೆರೆಸಿರಿ ಕುದಿಸಿರಿ. ಇದಕ್ಕೆ ಕರಿದ ಬಾಲ್ಸ್ ಹಾಕಿ, ಒಡೆಯದಂತೆ ತುಸು ಕೆದಕಿ, ಕೆಳಗಿಳಿಸಿ. ಊಟದ ಜೊತೆ ಬಿಸಿ ಬಿಸಿಯಾಗಿ ಸವಿಯಿರಿ.

ಪಾನ್ ಶಾಟ್ಸ್
ಸಾಮಗ್ರಿ : 5-6 ಎಳೆ ವಿಳ್ಳೇದೆಲೆ, ರುಚಿಗೆ ತಕ್ಕಷ್ಟು ಗುಲ್ ಕಂದ್, ರೆಡಿಮೇಡ್ ಪಾನ್ ಮಸಾಲ, ಸೋಂಪು, 3 ಕಪ್ ವೆನಿಲಾ ಐಸ್ ಕ್ರೀಂ, ಒಂದಿಷ್ಟು ಐಸ್ ಕ್ಯೂಬ್ಸ್.
ವಿಧಾನ : ಮೊದಲು ವಿಳ್ಳೇದೆಲೆಯನ್ನು ತುಂಡರಿಸಿ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ. ಅದು ಮ್ಯಾಶ್ ಆದಾಗ, ಉಳಿದೆಲ್ಲ ಸಾಮಗ್ರಿ ಹಾಕಿ ಬ್ಲೆಂಡ್ ಮಾಡಿ. ಚಿತ್ರದಲ್ಲಿರುವಂತೆ ಗ್ಲಾಸುಗಳಿಗೆ ತುಂಬಿಸಿ, ಐಸ್ ಕ್ಯೂಬ್ಸ್ ತೇಲಿಬಿಟ್ಟು ಸವಿಯಲು ಕೊಡಿ.

ಮಸಾಲೆ ಮಿಲ್ಕ್
ಸಾಮಗ್ರಿ : ಬಾದಾಮಿ, ಪಿಸ್ತಾ, ಗೋಡಂಬಿ, ದ್ರಾಕ್ಷಿ, ಹಸಿ ಖರ್ಜೂರ (ತಲಾ ಅರ್ಧರ್ಧ ಕಪ್), ಅರ್ಧ ಲೀ. ಗಟ್ಟಿ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಜಾಯಿಕಾಯಿ ರಸ, ಜಾಪತ್ರೆ, ಹಾಲಿನಲ್ಲಿ ನೆನೆಸಿದ ಕೇಸರಿ, ಮೆಣಸು, ಅರಿಶಿನ, ಏಲಕ್ಕಿಪುಡಿ, ಒಣಶುಂಠಿ ಪುಡಿ, ಒಣ ಗುಲಾಬಿ ದಳ.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪದೊಂದಿಗೆ ಡ್ರೈಫ್ರೂಟ್ಸ್ ಹುರಿದು, ಆರಲು ಬಿಡಿ. ನಂತರ ಮಿಕ್ಸಿಯಲ್ಲಿ ಪುಡಿ ಮಾಡಿ. ಹಾಲು ಕಾಯಿಸಿ, ಮಂದ ಉರಿಯಲ್ಲಿ ಕೈಯಾಡಿಸುತ್ತಾ ಕುದಿಸಿರಿ. ಅರ್ಧದಷ್ಟು ಹಿಂಗಿದ ನಂತರ ಇದಕ್ಕೆ ಡ್ರೈ ಫ್ರೂಟ್ಸ್ ಪುಡಿ ಜೊತೆ ಉಳಿದೆಲ್ಲ ಮಸಾಲೆ ಬೆರೆಸಿಕೊಳ್ಳಿ. 1-2 ಕುದಿ ಬಂದ ನಂತರ ಕೆಳಗಿಳಿಸಿ ಚಿಕ್ಕ ಗ್ಲಾಸುಗಳಿಗೆ ತುಂಬಿಸಿ, ಬಿಸಿಯಾಗಿ ಸವಿಯಲು ಕೊಡಿ.

ಆ್ಯಪಲ್ ಟೀ
ಸಾಮಗ್ರಿ : 2 ಮಾಗಿದ ಸೇಬು, 2 ಕಪ್ ನೀರು, ಅಗತ್ಯವಿದ್ದಷ್ಟು ಗ್ರೀನ್ ಟೀ ಬ್ಯಾಗ್ಸ್, 1 ತುಂಡು ದಾಲ್ಚಿನ್ನಿ, ರುಚಿಗೆ ತಕ್ಕಷ್ಟು ಜೇನುತುಪ್ಪ, ನಿಂಬೆ ರಸ, ಶುಂಠಿ ರಸ.
ವಿಧಾನ : ಒಂದು ಸಾಸ್ ಪ್ಯಾನಿನಲ್ಲಿ ನೀರು ಕುದಿಸಿರಿ. ಮಂದ ಉರಿ ಮಾಡಿ, ಅದಕ್ಕೆ ಸಿಪ್ಪೆ ಹೆರೆದು ಸಣ್ಣಗೆ ಹೆಚ್ಚಿದ ಸೇಬು, ಗ್ರೀನ್ ಟೀ ಬ್ಯಾಗ್ಸ್, ಶುಂಠಿ ರಸ ಬೆರೆಸಿ (ಒಂದು ದೊಡ್ಡ ತುಂಡು ಶುಂಠಿಯನ್ನು ಜಜ್ಜಿ, ಮಿಕ್ಸಿಯಲ್ಲಿ ತಿರುವಿಕೊಂಡು, ಅದರ ರಸ ರೆಡಿ ಮಾಡಿಕೊಳ್ಳಿ) ಮಂದ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಮರಳಿಸಿ. ನಂತರ ಇದನ್ನು ಸೋಸಿಕೊಂಡು, ಆ ಚಹಾಗೆ ಜೇನುತುಪ್ಪ, ನಿಂಬೆರಸ ಬೆರೆಸಿ ಚೆನ್ನಾಗಿ ಕದಡಿಕೊಂಡು ಸವಿಯಲು ಕೊಡಿ.

ಚಿಕನ್ ಸೂಪ್
ಸಾಮಗ್ರಿ : 3-4 ಪೀಸ್ ಬೋನ್ ಲೆಸ್ ಚಿಕನ್, ಹೆಚ್ಚಿಕೊಂಡ ಅರ್ಧದಷ್ಟು ಸೌತೇಕಾಯಿ, 1 ಆಲೂ, 1-2 ಈರುಳ್ಳಿ, ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, 2-3 ಕಪ್ ನೀರು.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿಯನ್ನೂ ಚಿಕ್ಕ ಪ್ರೆಶರ್ ಕುಕ್ಕರ್ ಗೆ ಹಾಕಿ 1 ಸೀಟಿ ಕೂಗಿಸಿ. ನಂತರ ಬ್ಲೆಂಡರ್ ನಲ್ಲಿ ಬ್ಲೆಂಡ್ ಮಾಡಿಕೊಂಡು, ದೊಡ್ಡ ಬಟ್ಟಲಿಗೆ ಹಾಕಿಡಿ. ಉಪ್ಪು, ಮೆಣಸು ಬೆರೆಸಿ ಕದಡಿ, ಸೂಪ್ ಬೌಲ್ಸ್ ಗೆ ತುಂಬಿಸಿ ಸವಿಯಲು ಕೊಡಿ.





