ಜಾಗೀರ್ದಾರ್*
ನಾಡಿನ ಶ್ರೇಷ್ಠ ಹರಿದಾಸರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸಿದವರು ಮಧುಸೂದನ್ ಹವಾಲ್ದಾರ್. ಅವರ ಮುಂದಿನ ನಿರ್ದೇಶನದ ಚಿತ್ರ ” ನಮ್ಮ ರಾಯರು”. ಪ್ರಸ್ತುತ ಈ ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ನಮ್ಮ ಮಾತಾಂಬುಜ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಆರನೇ ಚಿತ್ರ “ನಮ್ಮ ರಾಯರು”. ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದು ಸಂಗೀತ ಸಂಯೋಜಿಸುವುದರ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದೇನೆ. ಜೆ.ಎಂ.ಪ್ರಹ್ಲಾದ್ ಸಂಭಾಷಣೆ ಬರೆಯುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಪುರಂದರದಾಸರ “ತಂಬೂರಿ ಮೀಟಿದವ” ಹಾಡಿನ ಚಿತ್ರೀಕರಣದೊಂದಿಗೆ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಖ್ಯಾತ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಈ ಹಾಡನ್ನು ಹಾಡಿದ್ದಾರೆ. “ನಮ್ಮ ರಾಯರು” ಈಗಿನ ಕಾಲಘಟ್ಟ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಜೀವನದ ಕಾಲಘಟ್ಟ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ರಾಯರ ಮಹಿಮೆಯನ್ನು ಸಾರುವ ಚಿತ್ರವೂ ಹೌದು. ಈ ಚಿತ್ರದ

ದ್ವಿತೀಯಾರ್ಧದ ಕಥೆ ಪೂರ್ತಿ ಮಂತ್ರಾಲಯದಲ್ಲಿ ನಡೆಯಲಿದೆ. ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಸಹ ಈ ಚಿತ್ರದಲ್ಲಿ ರಾಯರ ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿದ್ದಾರೆ. “ಜಗನ್ನಾಥದಾಸರು” ಚಿತ್ರದಲ್ಲಿ ವಿಠಲರ ಪಾತ್ರ ನಿರ್ವಹಿಸಿದ್ದ ಪುಷ್ಕರ್ ದೇಶಪಾಂಡೆ ಈ ಚಿತ್ರದ ನಾಯಕನಾಗಿ ಹಾಗೂ ಭರತನಾಟ್ಯ ಕಲಾವಿದೆ ಪ್ರೇರಣ ಕುಂಶಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಎರಡು ಪುರಂದರದಾಸರ ಕೃತಿಗಳನ್ನು ಬಳಸಿಕೊಳ್ಳುತ್ತಿದ್ದು, ಉಳಿದ ಮೂರು ಹಾಡುಗಳನ್ನು ನಾನೇ ಬರೆದಿದ್ದೇನೆ ಎಂದು ನಿರ್ದೇಶಕ – ನಿರ್ಮಾಪಕ ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.





