ಪೋಷಕರು ತಮ್ಮ ಹದಿಹರೆಯದ ಮಕ್ಕಳ ಜೊತೆ ಗಾಢವಾದ ಮತ್ತು ಸಕಾರಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸಿದರೆ, ಕೆಳಗಿನ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು…….!

ಹೆಣ್ಣುಮಕ್ಕಳಿರಲಿ, ಗಂಡು ಮಕ್ಕಳಿರಲಿ ಅವರು ಹದಿಹರೆಯಕ್ಕೆ ಬಂದಾಗ ಅವರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದಕ್ಕೆ ಬಹಳ ದೊಡ್ಡ ಕಾರಣವೇನೆಂದರೆ ಹಾರ್ಮೋನುಗಳು. ಒಂದು ಕಡೆ, ಅವರ ದೇಹದಲ್ಲಿ ಬಹಳ ಬೇಗ ಬದಲಾವಣೆಗಳು ಆದಂತೆ, ಅವರ ಭಾವನೆಗಳಲ್ಲೂ ಬದಲಾವಣೆಗಳು ಕಂಡುಬರುತ್ತವೆ. ಪ್ರೀತಿ, ಆಕರ್ಷಣೆ, ಕೋಪ, ನೋವು ಇತ್ಯಾದಿ ಭಾವನೆಗಳು ಹೆಚ್ಚಾಗತೊಡಗುತ್ತವೆ.

ಒಂದೆಡೆ ಅವರು ಈ ಭಾವನೆಗಳನ್ನು ಮತ್ತು ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಶಾಲೆಯಲ್ಲಿ  ಅಧ್ಯಯನದ ಒತ್ತಡ ಅವರಿಗೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಒತ್ತಡ ಮತ್ತು ಹಾರ್ಮೋನುಗಳು ಯುವ ಮನಸ್ಸುಗಳ ಬದಲಾಗುತ್ತಿರುವ ಸ್ವಭಾವಕ್ಕೆ ಕಾರಣವಾಗುತ್ತದೆ.

ಸಕಾರಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ.

ಮಾಹಿತಿ ಇರಲಿ

ತಮ್ಮ ಟೀನೇಜ್‌ ಮಕ್ಕಳ ಬಗ್ಗೆ ಎಷ್ಟೇ ನಂಬಿಕೆ ಇದ್ದರೂ, ನೀವು ಅವರಿಗೆ ಸ್ವಾತಂತ್ರ್ಯ ನೀಡಲು ಬಯಸಿದ್ದರೂ ಸಹ, ನಿಮ್ಮ ಹದಿಹರೆಯದ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ? ಯಾರನ್ನು ಭೇಟಿಯಾಗುತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಅಥವಾ ಅವರ ಸ್ನೇಹಿತರು ಯಾರು? ಎಂಬುದರ ಕುರಿತು ಪೋಷಕರು ತಿಳಿದಿರಬೇಕು.

ಗುರಿ ತಲುಪಲು ಸಹಾಯ ಮಾಡಿ

ಪ್ರತಿಯೊಬ್ಬ ಹದಿರಹರೆಯದವರೂ ತನ್ನದೇ ಆದ ಗುರಿ ಇಟ್ಟುಕೊಂಡಿರುತ್ತಾರೆ ಹಾಗೂ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ತಮ್ಮ ಪೋಷಕರ ಸಹಾಯವನ್ನೂ ಅವರು ಬಯಸುತ್ತಾರೆ. ಈ ಸಂದರ್ಭದಲ್ಲಿ ಗುರಿ ಸಾಧನೆಗೆ ಪ್ರೋತ್ಸಾಹ ನೀಡಲು ನಾನು ನಿನ್ನೊಂದಿಗಿದ್ದೇನೆ ಎಂಬ ನಂಬಿಕೆಯನ್ನು ಪೋಷಕರು ಮೂಡಿಸಬೇಕು. ಗುರಿ ಸಾಧಿಸುವಲ್ಲಿ ತಮ್ಮ ಮಕ್ಕಳು ವಿಫಲರಾದರೆ ಕೋಪಗೊಳ್ಳದೆ, ತಪ್ಪಾಗಿ ಭಾವಿಸದೆ, ಅವರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಲು ತಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ಸಹಾಯವನ್ನೂ ಮಾಡಬೇಕು.

ಸ್ನೇಹಿತರಾಗಿರಿ

ಹದಿಹರೆಯದವರ ಉತ್ತಮ ಪಾಲನೆಗಾಗಿ, ಪೋಷಕರಾಗುವುದರ ಜೊತೆಗೆ, ಅವರೊಂದಿಗೆ ಉತ್ತಮ ಸ್ನೇಹಿತರಂತೆ ಸಂಬಂಧವನ್ನು ಬೆಳೆಸಿಕೊಳ್ಳಿ. ಇದರಿಂದ ಹದಿಹರೆಯದವರು ತಮ್ಮ ಸಮಸ್ಯೆಗಳನ್ನು ಅಥವಾ ಎಲ್ಲಾ ರೀತಿಯ ವಿಷಯಗಳನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ. ಇದರಿಂದ ಅವರು ಯಾವುದೇ ರೀತಿಯ ತಪ್ಪುಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಬಹುದು. ಸ್ನೇಹಪರ ನಡವಳಿಕೆಯು ಹದಿಹರೆಯದವರನ್ನು ನಿಮ್ಮ ಹತ್ತಿರ ತರುತ್ತದೆ. ಆಗ ಮಾತ್ರ ಹಿರಿಯರು ಅವರಿಗೆ ಸರಿ ಮತ್ತು ತಪ್ಪುಗಳ ಬಗ್ಗೆ ಉತ್ತಮ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ಸಾಧ್ಯವಾಗುತ್ತದೆ.

IB125527-125527165344627-SM277644

ಸ್ವಲ್ಪ ಸಮಯ ಒಟ್ಟಿಗೆ ಕಳೆಯಿರಿ

ಹಿರಿಯರು ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ತಮ್ಮ ಹದಿಹರೆಯದ ಮಕ್ಕಳೊಂದಿಗೆ ಕಳೆಯುವುದು ಮುಖ್ಯ. ಈ ಸಮಯದಲ್ಲಿ ಒಟ್ಟಿಗೆ ಊಟ, ಅಡುಗೆ, ಸ್ವಚ್ಛಗೊಳಿಸುವುದು ಅಥವಾ ಇನ್ನೇನಾದರೂ ಆಗಿರಬಹುದು. ರಾತ್ರಿ ಮಲಗುವ ಮೊದಲು 2025 ನಿಮಿಷಗಳ ಕಾಲ ಒಟ್ಟಿಗೆ ಲಾಕ್‌ ಕೂಡ ಮಾಡಬಹುದು. ಅವರೊಂದಿಗೆ ದಿನದ ವಿಷಯಗಳನ್ನು ಹಂಚಿಕೊಳ್ಳಬಹುದು. ವೀಡಿಯೋ ಗೇಮ್ಸ್ ಅಥವಾ ಬೋರ್ಡ್‌ ಆಟಗಳನ್ನೂ ಆಡಬಹುದು. ಪುಸ್ತಕಗಳು ಅಥವಾ ನಿಯತಕಾಲಿಕೆಗಳಲ್ಲಿ ಬಂದ ವಿಷಯಗಳು ಅಥವಾ ರಾಜಕೀಯದ ಬಗ್ಗೆಯೂ ಗಂಭೀರವಾಗಿ ಚರ್ಚೆ ನಡೆಸಬಹುದು.

ಧೈರ್ಯವಾಗಿ ಇರಿ

ಹದಿಹರೆಯದವರಿಗೆ ಉತ್ತಮ ಪಾಲನೆಯನ್ನು ಒದಗಿಸುವ ಮಾರ್ಗ ಎಂದರೆ, ಪೋಷಕರು ಧೈರ್ಯವಾಗಿರಬೇಕು. ಹದಿಹರೆಯದವರು ಅನೇಕ ಬದಲಾವಣೆಗಳನ್ನು ಅನುಭವಿಸುತ್ತಿರುವಾಗ, ಹಿರಿಯರು ಅಥವಾ ಪೋಷಕರ ಬೆಂಬಲ ಅತ್ಯಗತ್ಯ. ಇಲ್ಲಿ ಪೋಷಕರು ತಮ್ಮ ಮಗಳು/ಮಗ ಏಕೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅವರ ಮನಸ್ಥಿತಿಯ ಬದಲಾವಣೆಗಳಿಂದಾಗಿ ಅವರ ಮೇಲೆ ಕೂಗಾಡಬೇಡಿ.

ಅಂತಹ ಪರಿಸ್ಥಿತಿಯಲ್ಲಿ ಅವನ/ಳ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಎಂತಹದೇ ಸಂದರ್ಭ ಇದ್ದರೂ ಅವರನ್ನು ಗದರಿಸಬೇಡಿ ಅಥವಾ ಕೋಪಗೊಳ್ಳದೆ ತಾಳ್ಮೆಯನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ಹದಿಹರೆಯದವರು ತಾರುಣ್ಯಕ್ಕೆ ಬರುವ ಹೊತ್ತಿಗೆ ಜೋರಾಗಿ ಮಾತನಾಡಲು ಮತ್ತು ಕೋಪಗೊಳ್ಳಲು ಕಲಿತಿರುತ್ತಾರೆ ಎಂಬುದು ನೆನಪಿನಲ್ಲಿರಲಿ. ವಯಸ್ಕರಿಗೆ ತಿಳಿದಿರುವ ಅನೇಕ ವಿಷಯಗಳು ಅವರಿಗೂ ತಿಳಿದಿರುತ್ತವೆ.

ಹದಿ ಹರೆಯದವರಿಗೆ ಅವರ ಭಾವನೆಗಳ ಬಗ್ಗೆ ಕೇಳಿ. ಅವರು ತಮ್ಮ ಬಗ್ಗೆ ಹಿರಿಯರೊಂದಿಗೆ ಏನನ್ನೂ ಹೇಳಲು ಬಯಸದಿದ್ದರೆ, ಅವರು ಉತ್ತರಿಸುವಂತೆ ಒತ್ತಾಯಿಸಬೇಡಿ. ನಾವು ನಿನ್ನೊಂದಿಗೆ ಸದಾ ಇದ್ದೇವೆ ಎಂಬ ಭರವಸೆ ನೀಡಿ. ಅವರು ಮಾತನಾಡಲು ಬಂದಾಗ, ಅವರಿಗೆ ಪೂರ್ಣ ಸಮಯ ನೀಡಿ. ಅವರನ್ನು ಕೆಣಕುವ ಬದಲು, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳಿ. ಇದರೊಂದಿಗೆ ಅವರು ಯಾವುದೇ ರೀತಿಯ ಒತ್ತಡವನ್ನು ಅನುಭವಿಸುವುದಿಲ್ಲ. ಹಿರಿಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಸಾಧ್ಯವಾಗುತ್ತದೆ.

ಹಿರಿಯರನ್ನು ಗೌರವಿಸಲು ಕಲಿಸಿ

ಅನೇಕ ಬಾರಿ, ತಮ್ಮ ಕೋಪ ಮತ್ತು ಕಿರಿಕಿರಿಯಲ್ಲಿ ಹದಿಹರೆಯದವರು, ತಮ್ಮ ಮಿತಿಗಳನ್ನು ಮೀರುತ್ತಾರೆ ಮತ್ತು ಹೆತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ದೊಡ್ಡವರು ತಾಳ್ಮೆಯನ್ನು ಕಳೆದುಕೊಳ್ಳಬಾರದು. ಅವರ ಕೋಪ ಹಾಗೂ ಸಮಸ್ಯೆಯನ್ನು ತಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ತಾಯಿ ಮಕ್ಕಳಿಗೆ ಮನವರಿಕೆ ಮಾಡಿ ಕೊಡಬೇಕು. ಹಾಗಿದ್ದರೂ ಸಹ ಮಕ್ಕಳು ತಮ್ಮ ತಾಯಿಯೊಂದಿಗೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳಬಾರದು.

ಅವರ ದೇಹ ಮತ್ತು ಮನಸ್ಸಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಾವು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರಿಗೆ ಪ್ರೀತಿಯಿಂದ ವಿವರಿಸಬೇಕು. ಆದರೆ ಸುಳ್ಳು ಹೇಳುವುದು, ಟೀಕೆ ಮಾತು, ಹಿರಿಯರನ್ನು ನಿಂದಿಸುವುದು, ಹಿರಿಯರೊಂದಿಗೆ ಧ್ವನಿ ಏರಿಸಿ ಜೋರಾಗಿ ಮಾತನಾಡುವುದು ಮುಂತಾದ ಕೆಲವು ವಿಷಯಗಳನ್ನು ಸಹಿಸಲು ಆಗುವುದಿಲ್ಲ. ಹದಿಹರೆಯದವರು ಅಥವಾ ಯುವಕರು ಈ ಕೆಲಸಗಳನ್ನು ಮಾಡಿದರೆ, ಹಿರಿಯರು ಅವರನ್ನು ಗದರಿಸದೆ, ತಮ್ಮ ತಪ್ಪನ್ನು ಅರಿತುಕೊಳ್ಳುವಂತೆ ಮಾಡಿ, ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿ.

ನಂಬಿಕೆಯೇ ಮುಖ್ಯ

ಈ ವಯಸ್ಸಿನಲ್ಲಿ ಹದಿಹರೆಯದವರು ಮತ್ತು ಯುವಕರು ತಮ್ಮ ಸ್ನೇಹಿತರೊಂದಿಗೆ ಬಹಳ ಹತ್ತಿರವಾಗಿರುತ್ತಾರೆ. ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ತಮ್ಮ ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರ ಸ್ನೇಹಿತೆ ಅಥವಾ ಸ್ನೇಹಿತನ ಬಗ್ಗೆ ಮಾತನಾಡಿ. ಆದರೆ, ಅವರ ತಪ್ಪುಗಳನ್ನು ಕಂಡುಹಿಡಿಯಲು ಪ್ರಯತ್ನಿಸಬೇಡಿ. ಅವರು ಏನಾದರೂ ತಪ್ಪು ಮಾಡಲು ಪ್ರೇರೇಪಿಸುತ್ತಿದ್ದಾರೆಯೇ? ಅಂತಹ ಯಾವುದೇ ಸ್ನೇಹಿತರನ್ನು ಹೊಂದಿದ್ದಾರೆಯೇ? ಎಂದು ಕಂಡುಹಿಡಿಯಲು ಪ್ರಯತ್ನಿಸಿ.

ಹಿರಿಯರಿಗೆ ಆ ರೀತಿ ಅನಿಸಿದರೆ, ಯುವಕರಿಗೆ ಎಚ್ಚರಿಕೆ ನೀಡಿ ವಿವರಿಸಿ. ಈ ವಯಸ್ಸಿನಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲವಿದ್ದು, ತಪ್ಪು ಮಾಡದೇ ಇದ್ದರೆ ಅವರ ಮೇಲೆ ಕಣ್ಣಿಡದೆ ಅವರನ್ನು ನಂಬಿ. ಅನೇಕ ಬಾರಿ ಅವರು ತಪ್ಪುಗಳನ್ನು ಮಾಡಿದ ನಂತರವೇ ಕಲಿಯುತ್ತಾರೆ. ಆದ್ದರಿಂದ ಅವರು ತಮ್ಮ ತಪ್ಪುಗಳಿಂದ ಕಲಿಯುವ ಅವಕಾಶ ಪಡೆಯುತ್ತಾರೆ.

ಹೋಲಿಕೆ ಬೇಡ

ಹದಿಹರೆಯದವರು ಏನಾದರೂ ತಪ್ಪು ಮಾಡುವುದನ್ನು ನೋಡುವ ಪೋಷಕರು, ತಕ್ಷಣವೇ ಅವನನ್ನು ಅವನ ತರಗತಿಯ ಟಾಪರ್‌, ತಮ್ಮ ಸ್ನೇಹಿತರ ಮಕ್ಕಳು ಅಥವಾ ನೆರೆಹೊರೆಯ ಮಕ್ಕಳೊಂದಿಗೆ ಹೋಲಿಸಲು ಪ್ರಾರಂಭಿಸುತ್ತಾರೆ. `ನೋಡು ಮದನ್‌ ರ ಮಗ ನಿನ್ನ ತರಗತಿಯಲ್ಲೇ ಇದ್ದಾನೆ. ಶಾಲೆ ಮತ್ತು ಕೋಚಿಂಗ್‌ ನಲ್ಲೂ ಅವನು ಟಾಪರ್‌ ಆಗಿದ್ದಾನೆ,’ `ನಿನಗಿಂತ ನಿನ್ನ ತಮ್ಮ ಕೂಡಾ ಆಟದ ಕಡೆ ಗಮನ ನೀಡದೆ, ಚೆನ್ನಾಗಿ ಓದುತ್ತಿದ್ದಾನೆ,’ ಇಂತಹ ಮಾತುಗಳನ್ನು ಎಲ್ಲಾ ಪೋಷಕರು ತಿಳಿದೋ, ತಿಳಿಯದೆಯೋ ಹೇಳುತ್ತಲೇ ಇರುತ್ತಾರೆ. ಹೀಗೆ ತಪ್ಪಿಯೂ ಹೇಳಬೇಡಿ. ಇದರಿಂದ ನಿಮ್ಮ ಟೀನೇಜ್‌ ಮಕ್ಕಳಿಗೆ ತಮ್ಮಲ್ಲೇ ಕೀಳರಿಮೆ ಮೂಡಲು ಆರಂಭಿಸುತ್ತದೆ. ತನ್ನ ಗುರಿ ಸಾಧಿಸುವಲ್ಲಿ ಹಿಂದೇಟು ಹಾಕಬಹುದು. ಮಾತ್ರವಲ್ಲ, ಈ ಮೂಲಕ ನಿಮ್ಮ ಟೀನೇಜ್‌ ಮಕ್ಕಳನ್ನು ದೂರವಿಡುತ್ತೀರಿ.

ಹದಿಹರೆಯದವರು ತಮ್ಮದೇ ಆದ ಗುಣಲಕ್ಷಣಗಳನ್ನು ಮತ್ತು ಸಾಮರ್ಥ್ಯಗಳೊಂದಿಗೆ ಸಂಪೂರ್ಣವಾಗಿ ಭಿನ್ನರಾಗಿರುತ್ತಾರೆ. ಇದನ್ನು ಪೋಷಕರು ಸಹ ಅರ್ಥ ಮಾಡಿಕೊಳ್ಳಬೇಕು. ಆ ಮಕ್ಕಳಿಗೆ ಅವರೇ ಜನ್ಮ ನೀಡಿದ್ದರೂ ಸಹ, ಅವರೂ ಸ್ವತಂತ್ರರು ಎಂಬುದು ತಿಳಿದಿರಲಿ. ಪ್ರತಿಯೊಂದರಲ್ಲೂ ತಾವು ಕೂಡ ಟಾಪರ್‌ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಏಕೆಂದರೆ ಕೆಲವು ಮಕ್ಕಳ ಅಧ್ಯಯನದಲ್ಲಿ ಮುಂದಿದ್ದರೆ, ಮತ್ತೆ ಕೆಲವರು ಚಿತ್ರಕಲೆ, ಕ್ರೀಡೆ ಹೀಗೆ ಒಂದಲ್ಲಾ ಒಂದು ವಿಶೇಷ ಪ್ರತಿಭೆಯನ್ನು ಹೊಂದಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯ ವಿಶೇಷತೆಯನ್ನು ಗುರುತಿಸಿ. ಅವರ ಅನುಕೂಲಕ್ಕೆ ತಕ್ಕಂತೆ ಪ್ರಗತಿಗೆ ಅವಕಾಶ ನೀಡಿ.

ಖುಷಿಯಾಗಿರಿ

ಹದಿಹರೆಯದವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪೋಷಕರ ಬಳಿಗೆ ಬಂದರೆ, ಹೆತ್ತವರು ಅವರ ಸಮಸ್ಯೆಗಳನ್ನು ಆಲಿಸಬೇಕು. ಈಗ ಬೇಡ, ಆಮೇಲೆ ಹೇಳು, ಯಾಕೆ ಪದೇ ಪದೇ ನಿನ್ನ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತೀಯಾ? ನಿನ್ನ ಸಮಸ್ಯೆಗಳಿಗೆ ನೀನೇ ಪರಿಹಾರ ಕಂಡುಕೋ ಎನ್ನುತ್ತಾ, ಅವರನ್ನು ಎಂದೂ ದೂರ ತಳ್ಳಬೇಡಿ. ಮಕ್ಕಳು ಅವರ ಸಮಸ್ಯೆಗೆ ನಿಮ್ಮಿಂದ ಪರಿಹಾರ ದೊರೆಯಬಹುದು ಎಂಬ ಕಾರಣಕ್ಕೆ ನಿಮ್ಮ ಬಳಿ ಬಂದು ಹೇಳಿಕೊಳ್ಳಲು ಬಯಸುತ್ತಾರೆ. ಹಾಗಾಗಿ ನೀವು ಅವರ ಸಮಸ್ಯೆಗಳನ್ನು ಆಲಿಸಿ, ನಿಮಗೆ ತಿಳಿದ ಪರಿಹಾರವನ್ನು ಹೇಳಿ. ಆಗ ಅವರಿಗೆ ತಮ್ಮ ಪೋಷಕರ ಬಗ್ಗೆ ವಿಶ್ವಾಸ ಹೆಚ್ಚುತ್ತದೆ. ಮಕ್ಕಳು ತಮ್ಮ ಸಮಸ್ಯೆ ಹೊತ್ತು ಬೇರೆಲ್ಲೂ ಹೋಗದೆ ನಿಮ್ಮ ಬಳಿ ಬಂದಿದ್ದರ ಬಗ್ಗೆ ಸಂತೋಷಪಡಿ. ಅವರಿಗಾಗಿ ಸಾಕಷ್ಟು ಕಾಲಾವಕಾಶ ನೀಡಿ.

ಕೆಲವು ನಿಯಮಗಳನ್ನು ಮಾಡಿ

ಅತಿ ಬುದ್ಧಿವಂತಿಕೆ ತೋರಿಸಲು ಅವರು ನಿಮ್ಮನ್ನು ಅಥವಾ ನೀವು ಹೇಳುವ ವಿಷಯಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ತುಂಬಾ ಕಟ್ಟುನಿಟ್ಟು ಚೆನ್ನಾಗಿ ಕಾಣುವುದಿಲ್ಲ. ಆದರೆ ಸಂಪೂರ್ಣವಾಗಿ ಫ್ರೀ ಬಿಡುವುದು ಸಹ ಸರಿಯಲ್ಲ. ಮನೆಯ ವಾತಾವರಣದಲ್ಲಿ ಸಮತೋಲನ ಕಾಯ್ದುಕೊಳ್ಳಲು ಕೆಲವು ನಿಯಮಗಳನ್ನು ರೂಪಿಸಿದರೆ, ಯುವಜನತೆ ಅದನ್ನು ಸಂತೋಷದಿಂದ ಅಳವಡಿಸಿಕೊಳ್ಳುತ್ತಾರೆ.

ನಿಮಯಮಗಳನ್ನು ಹೇಳುವುದರೊಂದಿಗೆ, ಅವುಗಳನ್ನು ಮಾಡಲು ಕಾರಣವನ್ನು ಸಹ ತಿಳಿಸಿ ಮತ್ತು ಅದರಿಂದ ಯಾವ ಪ್ರಯೋಜನ ಪಡೆಯಲಾಗುತ್ತದೆ ಎಂಬುದನ್ನು ಸಹ ಹೇಳಿ. ಆಗ ಅವನು ಯಾವಾಗ, ಎಲ್ಲಿ, ಹೇಗೆ ಮತ್ತು ಏಕೆ ವರ್ತಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಎಂತಹ ಪರಿಸ್ಥಿತಿಯಲ್ಲೂ ಶಾಂತವಾಗಿರಿ

ಹದಿಹರೆಯದವರು ತಾವೇ ಬುದ್ಧಿವಂತರು. ಆದರೆ ತಮ್ಮ ಪೋಷಕರು ನೀಡುವ ಜ್ಞಾನ ಹಳೆಯ ಫ್ಯಾಷನ್‌ ಎಂದು ಭಾವಿಸುತ್ತಾರೆ. ಯಾವುದೇ ಸಮಸ್ಯೆ ಬಂದರೆ ಅಥವಾ ಯಾವುದೇ ಮಾಹಿತಿ ಬೇಕಾದಲ್ಲಿ ಅವರು ತಮ್ಮ ಪೋಷಕರನ್ನು ಕೇಳುವ ಬದಲು ತಮ್ಮ ಸ್ನೇಹಿತರನ್ನು ಅಥವಾ ಗೂಗಲ್ ನ್ನು ಕೇಳುತ್ತಾರೆ. ನಂತರ ಅನೇಕ ಬಾರಿ ಪೋಷಕರು ಮತ್ತು ಟೀನೇಜ್‌ ಮಕ್ಕಳ ನಡುವೆ ಅಹಂಕಾರ ಅಡ್ಡ ಬರಲು ಆರಂಭಿಸುತ್ತದೆ. ಅದು ಜಗಳ ಅಥವಾ ನಕಾರಾತ್ಮಕತೆಗೆ ಕಾರಣವಾಗಲು ಪ್ರಾರಂಭಿಸುತ್ತದೆ. ಈ ಪರಿಸ್ಥಿತಿಯಲ್ಲಿ ನೀವು ಪ್ರಬುದ್ಧ ವ್ಯಕ್ತಿಯಂತೆ ವರ್ತಿಸಬೇಕು. ಆ ಸಂದರ್ಭದಲ್ಲಿ ಶಾಂತವಾಗಿ ಉಳಿಯುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ.

ಹದಿಹರೆಯ ಪೋಷಕರಿಗೆ ಮತ್ತು ಅವರಿಗೂ ಸಹ ಕಷ್ಟಕರ ಅವಧಿಯಾಗಿದೆ. ಆದರೆ ಉತ್ತಮ ಪೋಷಕರಾಗುವ ಮೂಲಕ ನೀವು ಖಂಡಿತವಾಗಿಯೂ ಈ ಹಂತದ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡಬಹುದು. ತಮ್ಮ ನಡವಳಿಕೆ ಮತ್ತು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಉತ್ತಮ ಪೋಷಕರಾಗಿ ಉಳಿದರೆ, ಹದಿಹರೆಯದವರು ತಮ್ಮ ಹೆತ್ತವರ ಮಾತನ್ನು ಕೇಳುವ ಸಾಧ್ಯತೆ ಇರುತ್ತದೆ. ಹಿರಿಯರೊಂದಿಗೆ ಏನೇ ಸಮಸ್ಯೆಗಳಿದ್ದರೂ ಹಂಚಿಕೊಳ್ಳಲು ಯಾವುದೇ ಹಿಂಜರಿಕೆಯನ್ನು ಅವರು ಮಾಡಲಾರರು.

ಅದಕ್ಕಾಗಿಯೇ ಹದಿಹರೆಯದವರನ್ನು ಅರ್ಥ ಮಾಡಿಕೊಳ್ಳುವ ಪೋಷಕರ ಅಗತ್ಯವಿದೆ. ಅದರೊಂದಿಗೆ ಹಿರಿಯರೂ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು.

ಕೆ. ಸಂಧ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ