–  ರಾಘವೇಂದ್ರ ಅಡಿಗ ಎಚ್ಚೆನ್.

ರೆಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಜೈಲಿನಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಟ ದರ್ಶನ್ ಸೇರಿದಂತೆ ಜೈಲಿನಲ್ಲಿರುವ ಆರೋಪಿಗಳು ವಿಸಿ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾದರು. ಈ ವೇಳೆ ದರ್ಶನ್ ಸಪ್ಪೆ ಮುಖದಲ್ಲಿ, ಚಿಂತಾಕ್ರಾಂತರಾಗಿ ಲಾಸ್ಟ್ ಬೆಂಚ್‌ನಲ್ಲಿ ಕುಳಿತಿದ್ದರೆ, ಆರೋಪಿ ಪ್ರದೋಶ್ ಫಸ್ಟ್ ಬೆಂಚ್‌ನಲ್ಲಿ ಕುಳಿತಿರುವುದು ಕಂಡುಬಂತು.

ಇದೇ ವೇಳೆ ದರ್ಶನ್ ಅವರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರವೂ ವಿಚಾರಣೆಯ ಪ್ರಮುಖ ಅಂಶವಾಯಿತು. ಆರೋಪಿಯನ್ನು ನೇರವಾಗಿ ಕೋರ್ಟ್‌ಗೆ ಹಾಜರುಪಡಿಸುವುದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶವೊಂದನ್ನು ಉಲ್ಲೇಖಿಸಿದ ಎಸ್‌ಪಿಪಿ, ಬಿಹಾರ ಪ್ರಕರಣದ ತೀರ್ಪನ್ನೂ ಪ್ರಸ್ತಾಪಿಸಿದರು.

ಎಸ್‌ಪಿಪಿ ವಾದವನ್ನು ಆಲಿಸಿದ ನ್ಯಾಯಾಧೀಶರು, ಉಲ್ಲೇಖಿಸಿರುವ ಆದೇಶದ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಪ್ರಾಸಿಕ್ಯೂಷನ್ ಸಲ್ಲಿಸುವಂತೆ ಕೋರ್ಟ್ ನಿರ್ದೇಶನ ನೀಡಿತು. ಮಧ್ಯಾಹ್ನದೊಳಗೆ ಈ ಕುರಿತು ಮಾಹಿತಿ ನೀಡುವಂತೆಯೂ ಸೂಚಿಸಲಾಯಿತು.

ಇತ್ತ ವಿಚಾರಣೆ ವೇಳೆ ಆರೋಪಿ ಪವಿತ್ರಾಗೌಡ ತಡವಾಗಿ ಹಾಜರಾಗಿದ್ದು ಕೂಡ ನ್ಯಾಯಾಲಯದ ಗಮನ ಸೆಳೆಯಿತು. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಎದುರಾದ ಬೆನ್ನಲ್ಲೇ, ಪವಿತ್ರಾಗೌಡ ಹೆಡ್‌ಫೋನ್ ಬಳಸುತ್ತಿರುವುದನ್ನು ಜಡ್ಜ್ ಗಮನಿಸಿದರು.

“ಹೆಡ್‌ಫೋನ್ ಯಾಕೆ ಬಳಸುತ್ತಿದ್ದಾರೆ? ಯಾರು ಪರ್ಮಿಷನ್ ಕೊಟ್ಟಿದ್ದಾರೆ? ವುಮೆನ್ಸ್ ಸೆಲ್‌ನಲ್ಲಿ ಹೆಡ್‌ಫೋನ್ ಕೊಡುತ್ತಾರಾ?” ಎಂದು ಜಡ್ಜ್ ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದರು.

ತಾವು ಹೆಡ್‌ಫೋನ್ ಬಳಸಿಲ್ಲ ಎಂದು ಪವಿತ್ರಾಗೌಡ ಸ್ಪಷ್ಟಪಡಿಸಿದರೂ, “ನಾನು ನೋಡಿದ್ದೇನೆ” ಎಂದು ಜಡ್ಜ್ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿ ಜೈಲಾಧಿಕಾರಿಗಳಿಂದ ಸ್ಪಷ್ಟನೆ ಕೇಳಿದ ನ್ಯಾಯಾಲಯ, ಅಧಿಕಾರಿಗಳಿಗೆ ತರಾಟೆಯನ್ನೂ ತೆಗೆದುಕೊಂಡಿತು.

ಪ್ರಾಸಿಕ್ಯೂಷನ್‌ನ ವಾದ ಹಾಗೂ ಸಲ್ಲಿಕೆಯಾಗಬೇಕಿರುವ ವರದಿಯನ್ನು ಗಮನಿಸಿದ ಬಳಿಕ ಮುಂದಿನ ಆದೇಶ ನೀಡುವುದಾಗಿ ನ್ಯಾಯಾಲಯ ತಿಳಿಸಿದೆ. ದರ್ಶನ್‌ರನ್ನು ಖುದ್ದಾಗಿ ಕೋರ್ಟ್‌ಗೆ ಹಾಜರುಪಡಿಸುವ ವಿಚಾರ ಸೇರಿದಂತೆ ಪ್ರಮುಖ ಅಂಶಗಳ ಕುರಿತು ಸೋಮವಾರ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ