ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕೆಲವೇ ವಾರಗಳ ಬಳಿಕ ಸಿನಿಮಾ ಡಿಜಿಟಲ್ ವೇದಿಕೆಗೆ ಬರಲಿದ್ದು, ವಿಜಯ್ ಅಭಿಮಾನಿಗಳಿಗೆ ಮನೆಯಲ್ಲೇ ಚಿತ್ರ ವೀಕ್ಷಿಸುವ ಅವಕಾಶ ಸಿಗಲಿದೆ.

‘ಜನ ನಾಯಗನ್’ ಸಿನಿಮಾ ಆಗಸ್ಟ್ 21ರಿಂದ ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಕುರಿತು ಜೀ ತಮಿಳು ತನ್ನ ಸೋಶಿಯಲ್​ ಮೀಡಿಯಾದಲ್ಲಿ ಎಐ ಟೀಸರ್ ಹಂಚಿಕೊಂಡು ಅಧಿಕೃತ ಮಾಹಿತಿ ನೀಡಿದೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಾಧ್ಯವಾಗದಿದ್ದ ವಿಜಯ್ ಅಭಿಮಾನಿಗಳು ಇದೀಗ ಒಟಿಟಿ ಮೂಲಕ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಹೆಚ್. ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ನರೇನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

‘ಜನ ನಾಯಗನ್’ ಆರಂಭದಲ್ಲಿ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಕಾರಣಗಳಿಂದ ಚಿತ್ರದ ಬಿಡುಗಡೆ ಮುಂದೂಡಲಾಗಿತ್ತು. ಬಳಿಕ ಕಾನೂನು ಹೋರಾಟದ ನಂತರ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ದೊರೆಯಿತು. ಅಂತಿಮವಾಗಿ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದವರಿಗೆ ಆಗಸ್ಟ್ 21ರಿಂದ ಜೀ5ನಲ್ಲಿ ‘ಜನ ನಾಯಗನ್’ ನೋಡುವ ಅವಕಾಶ ಸಿಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ