–   ರಾಘವೇಂದ್ರ ಅಡಿಗ ಎಚ್ಚೆನ್.

ವಿಭಿನ್ನ ಕಥಾಹಂದರದ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ‘A Date’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಿಮಲ್ ರಾಜ್ ಎನ್ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 4ರಂದು ರಾಜ್ಯಾದ್ಯಂತ ತೆರೆಕಾಣಲಿದೆ.ಟ್ರೈಲರ್ ಬಿಡುಗಡೆ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವಿಮಲ್ ರಾಜ್ ಎನ್, ನಟರಾದ ದೇವೇಂದ್ರ ರೆಡ್ಡಿ, ಸುಜನಿತ್ ಶೆಟ್ಟಿ ಹಾಗೂ ನಟಿ ಅಶ್ವಿನಿ ಶೆಣೈ ಸೇರಿದಂತೆ ಚಿತ್ರತಂಡದ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿಮಲ್ ರಾಜ್ ಎನ್, 2020ರಲ್ಲಿ ‘A Date’ ಹೆಸರಿನಲ್ಲೇ ಇಂಗ್ಲಿಷ್ ಭಾಷೆಯಲ್ಲಿ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾಗಿ ತಿಳಿಸಿದರು. ನಿರ್ಮಾಪಕರನ್ನು ಹುಡುಕುವ ಉದ್ದೇಶದಿಂದ ಮಾಡಿದ್ದ ಈ ಕಿರುಚಿತ್ರಕ್ಕೆ ನಿರ್ಮಾಪಕರು ಸಿಗದ ಹಿನ್ನೆಲೆಯಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಕಿರುಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 72 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು ಎಂದು ಹೇಳಿದರು.

date1

ಕಿರುಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇದೀಗ ಸುಜನಿತ್ ಶೆಟ್ಟಿ ಹಾಗೂ ಅಶ್ವಿನಿ ಶೆಣೈ ಅವರನ್ನು ಮುಖ್ಯಪಾತ್ರಗಳಲ್ಲಿ ಆಯ್ಕೆ ಮಾಡಿಕೊಂಡು ‘A Date’ ಸಿನಿಮಾ ಮಾಡಲಾಗಿದೆ ಎಂದು ನಿರ್ದೇಶಕರು ವಿವರಿಸಿದರು.

ಬೆಂಗಳೂರು ಮೂಲದ ಯುವಕನೊಬ್ಬ ದೆಹಲಿ ಮೂಲದ ಯುವತಿಯನ್ನು ಭೇಟಿಯಾಗುವ ಮತ್ತು ಅವರ ಸುತ್ತ ಒಂದು ದಿನದಲ್ಲಿ ನಡೆಯುವ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ರೂಪಿಸಲಾಗಿದೆ. 2016ರಿಂದ ಕಿರುಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿರುವ ವಿಮಲ್ ರಾಜ್ ಎನ್, ‘A Date’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

date2

‘Hope’, ‘Laughing Buddha’ ಹಾಗೂ ‘Boss’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸುಜನಿತ್ ಶೆಟ್ಟಿ, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನವ ಪ್ರತಿಭೆ ಅಶ್ವಿನಿ ಶೆಣೈ ಆಡಿಷನ್ ಮೂಲಕ ಆಯ್ಕೆಯಾಗಿದ್ದು, ನಾಯಕಿಯಾಗಿ ನಟಿಸಿದ್ದಾರೆ.

ಪಿವಿಆರ್ ಐನಾಕ್ಸ್ ಸಂಸ್ಥೆ ಚಿತ್ರವನ್ನು ಅರ್ಪಿಸುವುದರ ಜೊತೆಗೆ ವಿತರಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದೆ. ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರ ತಂಡ ‘A Date’ ಚಿತ್ರವನ್ನು ನಿರ್ಮಿಸಿದೆ.

ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆ ಮಾಡಿದ್ದು, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವಿಮಲ್ ರಾಜ್ ಎನ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದು, ಸುಜನಿತ್ ಶೆಟ್ಟಿ ಹಾಗೂ ವಿಮಲ್ ರಾಜ್ ಎನ್ ಸಾಹಿತ್ಯ ರಚಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ