ನೀಳ್ಗಥೆ ಶೇಖರಗೌಡ ವೀ..

ಆಧುನಿಕ ಸ್ವಭಾವದ ದಿಟ್ಟೆ, ಧೀರೆ ಡಾ. ಸುನಿಧಿ ತನಗೆ ಅರಿಯದಂತೆ ಪ್ರೇಮ ಪ್ರಣಯದ ಸುಳಿಯಲ್ಲಿ ಸಿಲುಕಿ, ನಂತರ ತಾನು ಮೋಸ ಹೋಗಿದ್ದೇನೆ ಎಂದು ಕಂಡುಕೊಂಡಳು. ಆತ್ಮಹತ್ಯೆಯೊಂದೇ ದಾರಿ ಎಂದು ಹತಾಶಳಾಗಿದ್ದ ಸುನಿಧಿಗೆ, ಅವಳ ಗೆಳತಿ ನೀಡಿದ ಮಾರ್ಗದರ್ಶನ ಎಂಥದ್ದು……?

ಡಾ. ಸುನಿಧಿ ಧಿಗ್ಗನೆದ್ದು ಕುಳಿತಳು. ಮೈ ನಡುಗುತ್ತಿತ್ತು. ಬೆವರಿನಿಂದ ದೇಹ ಒದ್ದೆಯಾಗಿ ತೊಪತೊಪ ಎನ್ನುತ್ತಿತ್ತು. ತೊಟ್ಟಿದ್ದ ನೈಟ್ ಡ್ರೆಸ್‌ ಒದ್ದೆಮುದ್ದೆಯಾಗಿತ್ತು. ಮುಖದ ಮೇಲೆ ಇಳಿಯುತ್ತಿದ್ದ ಬೆವರ ಹನಿಗಳನ್ನು ಕೈಗಳಿಂದ ಒರೆಸಿಕೊಳ್ಳುತ್ತಾ, ತಲೆದಿಂಬಿನ ಪಕ್ಕದಲ್ಲಿದ್ದ ಮೊಬೈಲ್ ‌ಕೈಗೆತ್ತಿಕೊಂಡು ಆನ್‌ ಮಾಡಿದಳು. ರಾತ್ರಿ ಒಂದು ಗಂಟೆಯಾಗಿತ್ತು. ಪಕ್ಕದ ಟೀಪಾಯ್‌ ಮೇಲಿದ್ದ ನೀರಿನ ಬಾಟಲ್ ನ್ನು ಎತ್ತಿಕೊಂಡು ಗಟಗಟನೇ ಒಂದಿಷ್ಟು ನೀರು ಕುಡಿದಳು.

ಏರಿಳಿಯುತ್ತಿದ್ದ ಎದೆಯ ತಿದಿಯನ್ನು ಶಮನ ಮಾಡಿಕೊಳ್ಳಲು ಪ್ರಯತ್ನಿಸಿದಳು. ಎಡಗೈಯಿಂದ ಹೃದಯದ ಭಾಗವನ್ನು ಒತ್ತಿಕೊಂಡು ಕುಳಿತಳು. ಹೃದಯದ ಬಡಿತ ಅವಳಿಗೆ ಸ್ಪಷ್ಟವಾಗಿ ಕೇಳಿಸುವಷ್ಟು ಜೋರಾಗಿತ್ತು. `ಅಬ್ಬಾ….! ಎಂತಹ ಭಯಾನಕ ಕನಸು!’ ಎಂದು ಉದ್ಗರಿಸಿ ತುಸು ಹೊತ್ತು ಕಣ್ಮುಚ್ಚಿಕೊಂಡು ಹಾಗೇ ಸುಮ್ಮನೆ ಕುಳಿತಳು. ವಿಪರೀತ ಚಡಪಡಿಕೆ, ತಳಮಳ ಮನದಲ್ಲಿ ಲಗಾಮು ಇಲ್ಲದ ಮನಸ್ಸೆಂಬ ಕುದುರೆ ಎತ್ತೆತ್ತೋ ಜಿಗಿದಾಡತೊಡಗಿತ್ತು.

ಕನಸಿನ ಚಿತ್ರಣವನ್ನು ಕಣ್ಣಗೊಂಬೆಯ ಮುಂದೆ ತಂದು ನಿಲ್ಲಿಸಲು ಪ್ರಯತ್ನಿಸಿದಳು. `ಉಹ್ಞೂಂ…..!’ ಚಿತ್ರ ಮೂಡುತ್ತಲೇ ಇಲ್ಲ. ಮೂಡಿದ್ದರಲ್ಲಿ ಸ್ಪಷ್ಟತೆ ಇಲ್ಲ. ಎಲ್ಲ ಗೋಜಲು ಗೋಜಲು….. ಮೆಲ್ಲಗೆ ಮಂಚದಿಂದ ಇಳಿದು ಕಿಟಕಿಯ ಪರದೆ ಸರಿಸಿ ಹೊರಗಡೆ ದೃಷ್ಟಿ ಹರಿಸಿದರು. ರಸ್ತೆ ಬದಿಯ ವಿದ್ಯುದ್ದೀಪಗಳು ಬೆಳಕನ್ನು ಚೆಲ್ಲತೊಡಗಿದ್ದವು. ಕೆಲವರಿಗೆ ಆಗಲೂ ರಾತ್ರಿಯೇ ಆಗಿಲ್ಲವೇನೋ ಎಂಬಂತೆ ಆಗೊಂದು, ಈಗೊಂದು ವಾಹನದ ಓಡಾಟ ನಡೆದೇ ಇತ್ತು.

ಸುನಿಧಿ ಮತ್ತೆ ಮಂಚದ ಮೇಲೆ ಬಂದು ಕುಳಿತಳು. ಎದೆಯ ತಿದಿ ಒಂದಿಷ್ಟು ಇಳಿಮುಖವಾಗಿತ್ತು. ಶಾಂತಚಿತ್ತದಿಂದ ಕುಳಿತು ಕನಸಿನಲ್ಲಿ ನಡೆದಿದ್ದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದಳು. ಕನಸಿನ ಚಿತ್ರಣ ಮನದ ಮುಂದೆ ಮೂಡತೊಡಗಿತು.

ನಾನು ನನ್ನ ಲವರ್‌ ಬಾಯ್‌ ಡಾ. ಉದಯ್‌ ಜೊತೆಗೆ ಔಟಿಂಗ್‌ ಗೆ ಹೋಗಿದ್ದೆ. ಒಂದಿಷ್ಟು ನಿಸರ್ಗ ರಮಣೀಯ ದೃಶ್ಯಗಳು, ಜಲಪಾತಗಳ ವೀಕ್ಷಣೆ ನಮ್ಮ ಪ್ರವಾಸದಲ್ಲಿತ್ತು. ಅವನ ಕಾರಿನಲ್ಲಿ ನಾವಿಬ್ಬರೇ. ಮಧುಚಂದ್ರದ ಸವಿ ಸವಿಯಲು ಹೊರಟ ಜೋಡಿಯಂತೆ ಸ್ವಚ್ಛಂದವಾಗಿ ಸುತ್ತತೊಡಗಿದ್ದೆ. ಹೀಗೇ ಅಂದು ಶಿರಸಿಯ ಅಧಿದೇವತೆ ಮಾರಿಕಾಂಬೆಯ ದರ್ಶನ ಪಡೆದು ಸುತ್ತಮುತ್ತಲಿನ ಶಿವಗಂಗಾ ಜಲಪಾತ, ಉಂಚಳ್ಳಿ ಜಲಪಾತ, ಯಲ್ಲಾಪುರದ ಮಾಗೋಡು ಜಲಪಾತಗಳನ್ನು ನೋಡಿಕೊಂಡು, ಜೋಗ ಜಲಪಾತ ತಲುಪುವಷ್ಟರಲ್ಲಿ ಕತ್ತಲೆ ಆವರಿಸತೊಡಗಿತ್ತು. ಒಂದು ಒಳ್ಳೆ ಹೋಟೆಲ್ ‌ನಲ್ಲಿ ತಂಗಿದೆ. ಇಡೀ ರಾತ್ರಿ ನಾನು ಅವನೆದೆಯಲ್ಲಿ, ಅವನು ನನ್ನೆದೆಯಲ್ಲಿ ಪವಡಿಸಿದ್ದೆ. ಮರುದಿನ ಬೆಳಗ್ಗೆ ಬೆಳಗಿನ ಉಪಾಹಾರದ ನಂತರ ಜಲಪಾತದ ವೀಕ್ಷಣೆಯ ಕಾರ್ಯಕ್ರಮ ಹಾಕಿಕೊಂಡಿದ್ದೆ.

ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಅಂತಹ ಕುಂಭಕರ್ಣ ನಿದ್ದೆ. ಅಲ್ಲಿ ಇಲ್ಲಿ ತಿರುಗಾಡಿ ದೇಹ ದಣಿದಿತ್ತಲ್ಲವೇ….? ಮೇಲಾಗಿ ರಾತ್ರಿಯ ಸರಸ ಸಲ್ಲಾಪದ ಮಧುರಾತಿ ಮಧುರ ಅನುಭವ ಗಾಢ ನಿದ್ರೆಗೆ ಅನುವು ಮಾಡಿಕೊಟ್ಟಿತ್ತು.

ಬೆಳಗ್ಗೆ ಒಂಬತ್ತಕ್ಕೆಲ್ಲಾ ನಾಷ್ಟಾ ಮುಗಿಸಿ ಜಲಪಾತದ ವೀಕ್ಷಣೆಗೆ ಹೊರಟಿದ್ದೆವು. ಯಾಕೋ ಅಂದು ಜೋಗದಲ್ಲಿ ಜನಸಂದಣಿಯೇ ಕಾಣಲಿಲ್ಲ. ಸೆಕ್ಯೂರಿಟಿಯವರ ಕಣ್ತಪ್ಪಿಸಿ ಉದಯ್‌ ನನ್ನನ್ನು ಮೇಲಿನಿಂದ ನೀರು ಬೀಳುವ ಮತ್ತು ಜಲಪಾತವನ್ನು ಸೃಷ್ಟಿಸುವ ಶರಾವತಿ ನದಿಯ ಹರವಿನತ್ತ ಕರೆದುಕೊಂಡು ಹೋಗಿದ್ದ. ಮೇಲಿನಿಂದ ನೋಡಿದಾಗ ಕೆಳಗಿನ ಜನರು ಇರುವೆಗಳಂತೆ ಕಾಣುತ್ತಿದ್ದರು.

“ಸು, ಇತ್ತ ನೋಡು, ಈ ದೃಶ್ಯ ಅದೆಷ್ಟು ರುದ್ರರಮಣೀಯವಾಗಿದೆ!” ಎನ್ನುತ್ತಾ ಅವನು ನನ್ನ ನಡುಬಳಸಿ ತೋರಿಸಿದ್ದ. ಅವನು ನನ್ನನ್ನು `ಸು’ ಎಂದೇ ಚಟುಕಾಗಿ ಕರೆಯುತ್ತಾ ನನ್ನೆದೆಯಲ್ಲಿ ಪ್ರೀತಿಯ, ಆತ್ಮೀಯ ತರಂಗಗಳನ್ನು ಎಬ್ಬಿಸುತ್ತಿದ್ದ.

“ಉದಯ್‌, ಇದು ತುಂಬಾ ಡೇಂಜರಸ್‌ ಜಾಗ ಎಂದು ಕಾಣುತ್ತಿದೆ. ಅದಕ್ಕೇ ಇಲ್ಲಿಗೆ ಬರಬಾರದೆಂದು ಅಲ್ಲಿ ಬ್ಯಾರಿಕೇಡ್‌ ಸಹ ಹಾಕಿದ್ದಾರೆ. ನಾವು ಸರ್ಕಾರದ ನಿಯಮ ಉಲ್ಲಂಘಿಸಿ ಇಲ್ಲಿಗೆ ಬಂದಿರುವೇನೋ ಎನಿಸುತ್ತಿದೆ,” ಎಂದು ಅನುಮಾನ ವ್ಯಕ್ತಪಡಿಸಿದ್ದೆ.

“ಇಲ್ಲಿಂದ ರಾಜಾ, ರಾಣಿ, ರೋರರ್‌, ರಾಕೆಟ್‌ ಹೇಗೆ ಹೃದಯಂಗಮವಾಗಿ ಕಾಣುತ್ತಿವೆ ನೋಡು. ಸುತ್ತಲಿನ ಹಸಿರು, ವನದೇವತೆ ಮನಸ್ಸಿಗೆ ಅದೆಷ್ಟು ಮುದ ನೀಡುತ್ತಿದ್ದಾಳೆಂದರೆ ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಇಂತಹ ರಮ್ಯ ನೋಟವನ್ನು ನೋಡಬೇಕೆಂದರೆ ಒಂದಿಷ್ಟು ರಿಸ್ಕ್ ತೆಗೆದುಕೊಳ್ಳಲೇಬೇಕು ಅಲ್ಲವೇ….? ಸಾಹಸದಲ್ಲಿ ಥ್ರಿಲ್ ‌ಇರುತ್ತದೆ ತಾನೇ….? ನಿನ್ನೆ ರಾತ್ರಿ ಸಮಾಗಮ ವರ್ಣಿಸಲಸದಳ ಥ್ರಿಲ್ ನಿಂದ ಕೂಡಿರಲಿಲ್ಲವೇ….? ಹಾಗೆ ಇದೂ….” ಎಂದು ನನ್ನನ್ನು ಕೆಣಕಲು ಮುಂದಾಗಿದ್ದ ಉದಯ್‌.

“ಸದಾಶಿವನಿಗೆ ಅದೇ ಧ್ಯಾನ. ಮಹಾಪೋಲಿ…!” ಜೋರು ಮಾಡಿದ್ದೆ, ಅವನು ಬಾಯ್ತುಂಬಾ ನಕ್ಕಿದ್ದ.

ಹೀಗೆ ಆರಾಮವಾಗಿ ಮೇಲಿನಿಂದ ಸುತ್ತಲಿನ ಕಾಡಿನ ವೈಭವದ ಜೊತೆಗೆ ಕೆಳಗೆ ದಬದಬನೇ ಬೀಳುತ್ತಿದ್ದ ನೀರಿನ ವೈಭವವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಿದ್ದೆ.

“ಸು, ಇನ್ನೂ ತುಸು ಬಗ್ಗಿ ನೋಡು. ಪ್ರಪಾತಕ್ಕೆ ಬೀಳುತ್ತಿರುವ ಜಲಧಾರೆ ತುಂಬಾ ಭಯಾನಕವಾಗಿ ಕಾಣುತ್ತಿದೆ,” ಎನ್ನುತ್ತಾ ಉದಯ್‌, ನನ್ನ ನಡುಬಗ್ಗಿ ನೋಡಲು ಅನುವು ಮಾಡಿಕೊಟ್ಟಿದ್ದ.

ಅದೇನೋ ಗೊತ್ತಿಲ್ಲ, ಉದಯ್‌ ಸುತ್ತಮುತ್ತಲೂ ಒಂದು ಕ್ಷಣ ವೀಕ್ಷಿಸಿದವನೇ ತಕ್ಷಣ, ನನ್ನನ್ನು ಬಿಗಿದಪ್ಪಿಕೊಂಡು ಮೈತುಂಬಾ ಮುತ್ತಿನ ಮಳೆಗರೆದೆ, ದೇಹದ ಉಬ್ಬುತಗ್ಗುಗಳಲ್ಲಿ ಕೈಯಾಡಿಸಿ ಸಂಭ್ರಮಿಸಿದ. ಹಾಗೇ ನನ್ನನ್ನು ಕೆಳಗೆ ನೂಕಿಬಿಟ್ಟ.

“ಯೂ ಬಾಸ್ಟರ್ಡ್‌,” ಎಂದು ಜೋರಾಗಿ ಚೀರುತ್ತಾ ಜಲಪಾತದ ನೀರಿನ ಜೊತೆಗೆ ನಾನೂ ಕೆಳಗೆ ಬೀಳತೊಡಗಿದೆ. ಇನ್ನೇನು ಕೆಳಗಿನ ನೀರಿನ ಮಡುವಿಗೆ ಬಿದ್ದೆ ಎನ್ನುವಷ್ಟರಲ್ಲಿ ಯಾರೋ ಉದ್ದನೆಯ ಗಡ್ಡದ, ಸಾಧುಸಂತನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ತನ್ನೆರಡು ಕೈಗಳಲ್ಲಿ ನನ್ನನ್ನು ಹಿಡಿದು ರಕ್ಷಿಸಿದ್ದ.

“ಮಗು, ಚಿಂತಿಸಬೇಡ, ಭಯಪಡಬೇಡ. ಕೊಲ್ಲುವವನು ಒಬ್ಬನಿದ್ದರೆ, ಕಾಯುವವನೂ ಒಬ್ಬನಿರುತ್ತಾನೆ. ನಿನಗೆ ಉಜ್ವಲ ಭವಿಷ್ಯ ಇದೆ. ನಿನ್ನ ಬಾಳಿನಲ್ಲಿ ಕವಿದಿದ್ದ ಕತ್ತಲೆ ಇಂದು ಮಾಯವಾಗಿ ಹೋಯಿತು. ನಿನ್ನ ಬಾಳ ಹಾದಿಯಲ್ಲಿ ಇನ್ಮುಂದೆ ಬರೀ ಬೆಳಕೇ  ತುಂಬಿದೆ. ಭಗವಂತ ನಿನ್ನ ಜೊತೆಗಿದ್ದಾನೆ, ಶುಭವಾಗಲಿ!” ಎಂದು ಹರಸುತ್ತಾ ನನ್ನನ್ನು ನೀರಿನ ಮಡುವಿನಿಂದ ದಂಡೆಗೆ ಕರೆದುಕೊಂಡು ಬಂದಿದ್ದ. ಗಡ್ಡಧಾರಿಯ ಪಾದಗಳಿಗೆ ನಮಿಸಿ ಥ್ಯಾಂಕ್ಸ್ ಹೇಳಬೇಕೆಂದು ಬಗ್ಗಿದರೆ ಆ ವ್ಯಕ್ತಿ ಕಾಣಲೇ ಇಲ್ಲ. ಸುತ್ತಲೂ ಕಣ್ಣಾಡಿಸಿದೆ. ಯಾರೊಬ್ಬರೂ ಕಾಣಿಸಲಿಲ್ಲ. ಆಗ ನನಗೆ ನಿಜವಾಗಿಯೂ ಭಯವಾಯಿತು. ಅಲ್ಲಿಗೇ ಕನಸು ಮುಗಿದುಹೋಗಿ ಸುನಿಧಿಗೆ ತಕ್ಷಣ ಎಚ್ಚರವಾಗಿತ್ತು.

`ಇಂತಹ ಭಯಾನಕ ಕನಸು ನನಗ್ಯಾಕೆ ಬಿತ್ತು….?’ ಡಾ. ಸುನಿಧಿ ಪರಾಮರ್ಶೆಗೆ ಮುಂದಾದಳು.

`ಹೌದು, ಡಾ. ಉದಯ್‌ ಒಬ್ಬ ನರಮಾಧಮ. ನನ್ನ ತನುಮನಗಳೆಲ್ಲನ್ನೂ ಸೂರೆ ಮಾಡಿಬಿಟ್ಟ. ನನ್ನ ಮೈ, ಮನಸ್ಸುಗಳನ್ನು ಮೈಲಿಗೆ ಮಾಡಿ, ನನ್ನನ್ನು ಕಳಂಕಿನಿಯನ್ನಾಗಿ ಮಾಡಿಬಿಟ್ಟ. ಕನಸಿನಲ್ಲಿ ಉದಯ್‌ ನನ್ನನ್ನು ಜಲಪಾತಕ್ಕೆ ನೂಕಿದಂತೆ ನನ್ನ ಮನಸ್ಸಿನಲ್ಲಿ ನೂರೆಂಟು ಮಧುರ ಕನಸುಗಳನ್ನು ಬಿತ್ತಿ ಆಕಾಶದೆತ್ತರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಧೊಪ್ಪನೇ ಪ್ರಪಾತಕ್ಕೆ ನೂಕಿದ. ನನ್ನದೆಲ್ಲವನ್ನೂ ಸೂರೆ ಮಾಡಿ ಹಿಂಡಿ ಹಿಪ್ಪೆ ಮಾಡಿದ. ನಾನು ಡಾಕ್ಟರ್ರೇ ಇರಬಹುದು, ಆದರೆ ನಾನೂ ಒಂದು ಹೆಣ್ಣಲ್ಲವೇ…? ಹೆಣ್ಣು ಕಾಯ್ದುಕೊಳ್ಳಬೇಕಿದ್ದ ಪಾವಿತ್ರ್ಯತೆಯನ್ನು ಮಲಿನ ಮಾಡಿಬಿಟ್ಟ. ಅವನು ಮುತ್ತಿಟ್ಟು, ಸ್ಪರ್ಶಿಸಿದ ನನ್ನ ದೇಹದ ಇಂಚಿಂಚೂ ಭಾಗ ಗಬ್ಬೆದ್ದು ನಾರುತ್ತಿದೆ.’ ಇಂದು ಸಂಜೆ ಕರ್ತವ್ಯ ಮುಗಿಸಿಕೊಂಡು ಬರುಷ್ಟವರಲ್ಲಿ ಸಮಯ ಆಗಲೇ ರಾತ್ರಿ ಎಂಟು ಗಂಟೆ ದಾಟಿತ್ತು. ಒಂದೆರಡು ಕಾಂಪ್ಲಿಕೇಟೆಡ್‌ಹೆರಿಗೆ ಕೇಸುಗಳು ಬಂದಿದ್ದರಿಂದ ಆರಕ್ಕೆ ಮನೆಗೆ ಬರಬೇಕಿದ್ದವಳು ಎಂಟಕ್ಕೆ ಬಂದೆ. ಎರಡೂ ಕೇಸುಗಳಲ್ಲಿ ನಾರ್ಮಲ್ ಡೆಲಿವರಿ ಮಾಡಿಸಿದ ತೃಪ್ತಿ ನನ್ನೆದೆಯಲ್ಲಿ ಅನುರಣಿಸುತ್ತಿತ್ತು. ಬರುವಷ್ಟರಲ್ಲಿ ಒಂದಿಷ್ಟು ಆಯಾಸ, ಬಳಲಿಕೆಯಾಗಿದ್ದು ನಿಜ. ಮನೆಗೆ ಬಂದವಳೇ ತಕ್ಷಣ ಗೀಝರ್‌ ಬಟನ್‌ ಹಾಕಿ ನೀರು ಕಾಯಿಸಿಕೊಂಡು ಶವರ್‌ ಗೆ ಮೈಯೊಡ್ಡಿದ್ದೆ. ಮುಡಿಯಿಂದ ಅಡಿಯವರೆಗೆ ಬೀಳುತ್ತಿದ್ದ ಬಿಸಿಬಿಸಿ ನೀರು ತುಂಬಾ ಆಹ್ಲಾದಕರ ಎಂದೆನಿಸತೊಡಗಿತ್ತು.

ನನ್ನ ಆಕರ್ಷಕ ಮೈಮಾಟದ ಬಗ್ಗೆ ನನಗಂತೂ ಬಹಳ ಗರ್ವವಿತ್ತು. ಸುಗಂಧ ಭರಿತ ಸಾಬೂನಿನಿಂದ ಮೈಯನ್ನು ತಿಕ್ಕಿ ತಿಕ್ಕಿ ತೊಳೆದುಕೊಳ್ಳತೊಡಗಿದೆ. ಶ್ಯಾಂಪೂ, ಕಂಡೀಶನರ್‌ ಹಾಕಿ ತಲೆಗೂದಲನ್ನು ತೊಳೆದುಕೊಳ್ಳತೊಡಗಿದೆ. ಅದೇನೋ ಗೊತ್ತಿಲ್ಲ, ಸುವಾಸನಾಭರಿತ ಸಾಬೂನು ಹಚ್ಚಿಕೊಂಡು ಮೈ ತೊಳೆದುಕೊಂಡರೂ ಒಂದು ರೀತಿ ಗಬ್ಬು ವಾಸನೆ ನನ್ನ ಮೈಯಿಂದ ಹರಡತೊಡಗಿತ್ತು. ಮತ್ತೊಂದು ಬಾರಿ ಸಾಬೂನು ಹಚ್ಚಿ ತಿಕ್ಕಿಕೊಂಡೆ. ಊಹ್ಞೂಂ ಗಬ್ಬು ವಾಸನೆ ನಿಲ್ಲಲಿಲ್ಲ. ಮತ್ತೊಂದು ಸಾರಿ ಸಾಬೂನು ಹಚ್ಚಿ ತಿಕ್ಕಿಕೊಂಡೆ ದುರ್ವಾಸನೆ ಕಡಿಮೆಯಾಗಲಿಲ್ಲ. ಇಂದು ಯಾಕೆ ಹೀಗಾಗುತ್ತಿದೆ….?

jiwansathi-story1a

ಮನದಲ್ಲೇ ದುರ್ಗಂಧಕ್ಕೆ ಕಾರಣ ಹುಡುಕಿಕೊಂಡು ಹೊರಟೆ. ಹ್ಞಾಂ….! ನೆನಪಿಗೆ ಬಂತು. ಅದೇ ಈ ನನ್ನ ಯೌವನ ಭರಿತ ದೇಹ ಉದಯ್‌ ನ ಸಾಂಗತ್ಯದಲ್ಲಿ ಹೊಲಸೆದ್ದು ಹೋಗಿದೆಯಲ್ಲ, ಅದಕ್ಕೇನೋ…..? ಹೌದೆನ್ನಿಸಿತು. ಮತ್ತೆ ತಿಕ್ಕಿ ತಿಕ್ಕಿ ತೊಳೆದರೂ ಹಿತ ಎನಿಸಲಿಲ್ಲ. ದೇಹದ ಮಲಿನತೆಯನ್ನು ಸುಗಂಧಭರಿತ ಸಾಬೂನು ಹಚ್ಚಿ ತೊಳೆದುಕೊಳ್ಳಬಹುದು. ಆದರೆ ಮನಸ್ಸಿನ ಮೈಲಿಗೆಯನ್ನು ತೊಳೆಯುವುದಾದರೂ ಹೇಗೆ….? ಹೇಗೋ ಸ್ನಾನ ಮುಗಿಸಿಕೊಂಡು ಬಂದಿದ್ದೆ.

ಮಂಚದ ಮೇಲೆ ಪವಡಿಸುತ್ತಲೇ ಮನದೊಳಗೆ ಮತ್ತೊಂದು ರೀತಿಯ ಹಿಂಸೆ. ಇದೇ ಬೆಡ್‌ ಮೇಲೆ ನಾನು, ಉದಯ್‌ ಅದೆಷ್ಟೋ ರಾತ್ರಿಗಳನ್ನು ರಸಮಯವಾಗಿ ಕಳೆದಿದ್ದು ಇದೆ. ನಮ್ಮಿಬ್ಬರ ಸಮಾಗಮದಿಂದ ಮಲಿನವಾಗಿರುವ ಈ ಬೆಡ್‌ ಮೇಲೆ ಮಲಗುವುದಕ್ಕೆ  ನನಗೆ ಹೇಸಿಗೆ ಎನಿಸತೊಡಗಿತು. ಸಿಂಬಳದಲ್ಲಿ ಸಿಲುಕಿ ಒದ್ದಾಡುವ ನೊಣದಂತೆ ಅದೆಷ್ಟು ದಿನ ಅಂತ ನಾನು ಈ ಹೇಸಿಗೆಯ ಜೀವನದಲ್ಲಿ ಸಿಕ್ಕಿ ಒದ್ದಾಡಲಿ….? ನಾನಿಲ್ಲದಿದ್ದರೆ ಜಗತ್ತು ನಿಲ್ಲುವುದೇ….? ಇಲ್ಲವಲ್ಲ….. ಚರಂಡಿ ನೀರಿನಂತೆ ಗಬ್ಬೆದ್ದು ನಾರುತ್ತಿರುವ ಈ ಮೈಮನಸ್ಸುಗಳನ್ನು ಹೊತ್ತುಕೊಂಡು ನಾನು ಅದ್ಹೇಗೆ ಜೀವಿಸಲಿ? ಎಲ್ಲವನ್ನೂ ಕಳೆದುಕೊಂಡ ಮೇಲೆ ಈ ಜೀವನದ ಸಂತೆಯಲ್ಲಿ ನನ್ನದೇನಿದೆ…..? ಅಂದರೆ ಇದಕ್ಕೆ ಕೊನೆ ಜೀವನವನ್ನೇ ಇಲ್ಲವಾಗಿಸಿಕೊಳ್ಳುವುದು ಅಲ್ಲವೇ…..? ನನ್ನಲ್ಲಾ ಪ್ರಶ್ನೆಗಳಿಗೆ ಆತ್ಮಹತ್ಯೆಯೊಂದೇ ಉತ್ತರ ನೀಡಬಲ್ಲದು ತಾನೇ….? ನಾನೇ ಇಲ್ಲವೆಂದ ಮೇಲೆ ಮೈ ಕೊಳೆಯಾಗಿದ್ದೂ ಗೊತ್ತಾಗುವುದಿಲ್ಲ. ಮನಸ್ಸು ಕೊಳೆಯಾಗಿದೆ ಎಂದು ಜೀವನಪರ್ಯಂತ ನರಳುವುದೂ ಇರುವುದಿಲ್ಲ ಅಲ್ಲವೇ…..? ಹೌದೌದು, ಅದೇ ಸರಿಯಾದ ಮಾರ್ಗ.

`ಛೀ ಹುಚ್ಚೀ…..! ನೂರೆಂಟು ಅವಘಡಗಳನ್ನು ಮಾಡಿಕೊಂಡ ಎಂತೆಂಥಹರೋ ಮತ್ತೆ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸ್ತ್ರೀರೋಗ ತಜ್ಞೆಯಾಗಿರುವ ನಿನ್ನಂತಹ ಡಾಕ್ಟರ್‌ ಈ ರೀತಿ ಯೋಚಿಸಿದರೆ ಹೇಗೆ….?’ ಎಂದಿತು ವಿವೇಕ.

`ಹಾಗಾದರೆ ಮತ್ತೇನು ಮಾಡಲಿ….?’

`ನಿನ್ನ ಎದೆಗುದಿಯನ್ನು ಆತ್ಮೀಯರಲ್ಲಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸು. ಕೆಟ್ಟದ್ದು ನಡೆಯಿತೆಂದು ಜೀವನದ ಪುಸ್ತಕವನ್ನೇ ಮುಚ್ಚುವುದು ಸರಿಯೇ? ಪುಟ ತಿರುಗಿಸಿ ಹೊಸ ಅಧ್ಯಾಯ ಪ್ರಾರಂಭಿಸು. ನಿನ್ನ ವೈದ್ಯಕೀಯ ಚಿಕಿತ್ಸೆಯಿಂದ ಅದೆಷ್ಟು ಜನ ಹೆಣ್ಣುಮಕ್ಕಳಿಗೆ ಉಪಯೋಗ ಆಗಬೇಕಿದೆಯೋ ಏನೋ? ಭಗವಂತ ನಿನಗೆ ಒಳ್ಳೆಯ ಯೋಚನಾ ಶಕ್ತಿ ಕೊಟ್ಟಿದ್ದಾನೆ. ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೋ. ಅವಸರದ ನಿರ್ಧಾರ ಸರಿಯಲ್ಲ.’

`ಸರಿ, ನಾಳೆ ನನ್ನ ಆತ್ಮೀಯ ಗೆಳತಿಯ ಜೊತೆ ಮಾತಾಡಿ ಮುಂದಿನ ನನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ.’

`ಓ.ಕೆ. ದಟ್ಸ್ ಲೈಕ್‌ ಎ ಗುಡ್‌ ಗರ್ಲ್. ಶುಭವಾಗಲಿ.’

ನನ್ನಲ್ಲಿನ ದ್ವಂದ್ವಗಳು ಒಂದು ಹಂತಕ್ಕೆ ತಲುಪಿದ್ದವು. ಯೋಚನೆಗಳ ತಾಕಲಾಟದಲ್ಲಿ ಡಾ. ಸುನಿಧಿಗೆ ಬೆಳಗಿನ ಜಾವದಲ್ಲಿ ನಿದ್ದೆ ಬಂದಿತ್ತು.

ಸುನಿಧಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಬಿಬಿಎಸ್‌, ಎಂ.ಎಸ್‌ ಗೈನಕಾಲಜಿ ಮುಗಿಸಿ ಧಾರಾಡದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅವಳಿಗೆ ಅಲ್ಲಿ ಡಾ. ಉದಯನ ಪರಿಚಯವಾಗಿತ್ತು. ಉದಯ್‌ ಶ್ವಾಸಕೋಶ ತಜ್ಞ. ಓದಿದ್ದು ಎಂಬಿಬಿಎಸ್‌, ಎಂಡಿ ಪಲ್ಮನಾಲಜಿ. ಈಗಾಗಲೇ ಮೂರು ವರ್ಷಗಳಿಂದ ಅವನು ಅಲ್ಲಿ ಕೆಲಸ ಮಾಡುತ್ತಿದ್ದ, ಬಳ್ಳಾರಿಯ ಹುಡುಗ.

ಸುನಿಧಿ ಮಧ್ಯಮ ವರ್ಗದ, ಶಾಲೆಯ ಶಿಕ್ಷಕರ ಮಗಳಾದರೆ, ಉದಯ್‌ ದೊಡ್ಡ ವ್ಯಾಪಾರಸ್ಥರ ಮನೆಯ ಹುಡುಗ. ಒಂದಿಷ್ಟು ಹೈಫೈ. ಉದಯ್‌ ಆಸ್ಪತ್ರೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದ. ಸುನಿಧಿಯ ಸಿಂಪ್ಲಿಸಿಟಿ ಉದಯ್‌ ಗೆ ಮೆಚ್ಚುಗೆಯಾಗಿತ್ತು. ಅವನ ನೇರ ನಡೆನುಡಿ ಸುನಿಧಿಗೆ ಮೆಚ್ಚುಗೆಯಾಗಿತ್ತು. ಗೆಳೆತನ ಪಕ್ವವಾಗುತ್ತಿದ್ದಂತೆ ಕೈ ಕೈ ಹಿಡಿದು ನಡೆದಾಡತೊಡಗಿದರು. ಗೆಳೆತನ ಪ್ರೀತಿಯಲ್ಲಿ, ಪ್ರೀತಿ ಪ್ರಣಯದಲ್ಲೂ ವಿಜೃಂಭಿಸಲು ಬಹಳ ದಿನಗಳೇನು ಬೇಕಾಗಲಿಲ್ಲ. ಭಾನುವಾರ, ರಜೆಯ ದಿನಗಳಲ್ಲಿ ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ತಿರುಗಾಡುವುದು ಸಾಮಾನ್ಯವಾಗತೊಡಗಿತು. ಕೈ ಕೈ ಹಿಡಿದು ಸುತ್ತಾಡುವುದು ನಡು ಬಳಸಿ, ಮೈಗೆ ಮೈ ಆನಿಸಿಕೊಂಡು ಸುತ್ತಾಡುವುದಕ್ಕೆ ಇಂಬು ಕೊಟ್ಟಿತು.

“ಸೂರ್ಯ ಕಿರಣ ಮುತ್ತಿಟ್ಟಾಗಲೇ ಹೂ ಅರಳುವಂತೆ ನಿನ್ನ ಬೆಚ್ಚನೆಯ ಪ್ರೀತಿಯಲಿ ನಾನು ಅರಳುತ್ತಿರುವೆ. ನೀನು ನನ್ನ ಬದುಕಿನ ಅತ್ಯಂತ ಸುಂದರ ಕವಿತೆ,” ಎನ್ನುತ್ತಿದ್ದ ಉದಯ್‌.

ಆ ವರ್ಷದ ಏಪ್ರಿಲ್ ಮೇ ತಿಂಗಳಲ್ಲಿ ಮದುವೆಯಾಗುವುದಾಗಿ ಉದಯ್‌ ಮಾತೂ ಸಹ ಕೊಟ್ಟ. ಹೀಗೇ ಒಂದು ದಿನ ವಿಜಯಪುರಕ್ಕೆ ಹೋಗಿದ್ದರು. ಅಲ್ಲೇ ಉಳಿಯಬೇಕಾದ ಪ್ರಮೇಯ ಬಂದಿತು. ಒಂದೇ ರೂಮಿನಲ್ಲಿ ಉಳಿದುಕೊಂಡರು. ಬೆಂಕಿಯ ಸಮೀಪ ಇರುವ ಬೆಣ್ಣೆ ಕರಗದೇ ಇದ್ದೀತೇ…..?

“ಹೇಗೋ ಇಷ್ಟರಲ್ಲೇ ಮದುವೆಯಾಗುತ್ತೇವಲ್ಲವೇ……” ಎಂದ ಪ್ರಣಯದಾಟಕ್ಕೆ ಉದಯ್‌ ಬೇಡಿಕೆ ಇಟ್ಟ.

“ಮದುವೆಗೆ ಮುನ್ನ ಇದೆಲ್ಲ ಬೇಡ…..” ಎಂದು ಸುನಿಧಿ ಹೇಳಿದಳಾದರೂ ಅವಳಲ್ಲೂ ಕುತೂಹಲ ತವಕ ಇದ್ದದ್ದು ನಿಜವೇ.

“ಸುನಿಧಿ, ನಿನಗೆ ಗೊತ್ತೇ ಇದೆ. ಇಟ್ಸ್ ಜಸ್ಟ್ ಎ ಬಯಲಾಜಿಕಲ್ ನ್ಯಾಚುರಲ್ ಇನ್‌ ಸ್ಟಿಂಕ್ಟ್. ಲೆಟಸ್‌ ಸ್ಮಾರ್ಟ್‌ ಎಂಜಾಯಿಂಗ್ ಲೈಫ್‌ ಫ್ರಂ ಟುಡೇ ಇಟ್‌ ಸೆಲ್ಫ್. ಹಳೇಕಾಲದ ಅಡುಗೂಲಜ್ಜಿ ತರಹ ಮಾತಾಡಬೇಡ,” ಎಂದು ಉದಯ್‌ ಸುನಿಧಿಯನ್ನು ವಿವಸ್ತ್ರಳನ್ನಾಗಿ ಮಾಡಿದ್ದ.

ಇಬ್ಬರೂ ಸಂತಸದಲ್ಲಿ ಮಿಂದೆದ್ದಿದ್ದರು. ಅಂದಿನಿಂದ ಅವರಿಬ್ಬರ ಪ್ರಣಯದಾಟ ಎಗ್ಗಿಲ್ಲದೇ ಸಾಗಿತ್ತು. ಅಡ್ಡ ಪರಿಣಾಮ ಆಗದಂತೆ ಮುಂಜಾಗರೂಕತೆ ಕ್ರಮ ತೆಗೆದುಕೊಳ್ಳುತ್ತಿದ್ದರು. ಎಷ್ಟಾದರೂ ಇಬ್ಬರೂ ಡಾಕ್ಟರ್ಸ್‌ ಅಲ್ಲವೇ….?

ಸುನಿಧಿಗೆ ಎಚ್ಚರವಾದಾಗ ಬೆಳಗ್ಗೆ ಎಂಟು ಗಂಟೆ ಆಗಿತ್ತು. ಅಂದು ಭಾನುವಾರ. ಅವಳಿಗೆ ಹತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಆಸ್ಪತ್ರೆಯ ಡ್ಯೂಟಿ ಇತ್ತು. ಮುಖ ತೊಳೆದು ಚಹಾ ಕುಡಿದ ನಂತರ ಗೆಳತಿಗೆ ಫೋನಾಯಿಸಿದಳು. ಸುನಿಧಿಯ ಗೆಳತಿ ಅಕ್ಕಮಹಾದೇವಿ. ಅವಳು ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ಗೆಳತಿ ಮತ್ತು ಸಹಪಾಠಿ. ಆಗ ಸುನಿಧಿಯ ತಂದೆ ಅಕ್ಕಮಹಾದೇವಿಯ ಊರಿನಲ್ಲಿ ಶಿಕ್ಷಕರಾಗಿದ್ದರು. ಅಕ್ಕಮಹಾದೇವಿಯ ತಂದೆ ಕೃಷಿಕರು. ಅಕ್ಕಮಹಾದೇವಿಯ ಮನೆಯ ಪಕ್ಕವೇ ಸುನಿಧಿಯ ತಂದೆ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಹೀಗಾಗಿ ಇಬ್ಬರೂ ಆಪ್ತ ಗೆಳತಿಯರಾಗಿದ್ದರು. ಕಷ್ಟಸುಖ ಹಂಚಿಕೊಳ್ಳುವಷ್ಟು ಇಬ್ಬರಲ್ಲೂ ಆತ್ಮೀಯತೆ ಬೆಳೆದಿತ್ತು. ಎಸ್‌.ಎಸ್‌.ಎಲ್.ಸಿಯಲ್ಲಿ ಸುನಿಧಿ ಶಾಲೆಗೆ ಮೊದಲನೆಯ ಸ್ಥಾನ ಪಡೆದಿದ್ದಳು. ಅಕ್ಕಮಹಾದೇವಿ ಮೂರನೇ ಸ್ಥಾನ ಗಳಿಸಿದ್ದಳು.

ಪಿಯುಸಿಗೆ ಐದು ಕಿಮೀ. ದೂರದ ತಾಲ್ಲೂಕು ಕೇಂದ್ರಕ್ಕೆ ಬಸ್ಸಿನಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಹೋಗಿ ಬರುತ್ತಿದ್ದರು. ಪಿಯುಸಿಯಲ್ಲಿ ಸುನಿಧಿ ಮೊದಲನೆಯ ಸ್ಥಾನ ಗಿಟ್ಟಿಸಿದ್ದಳು. ಅಕ್ಕಮಹಾದೇವಿ ಡಿಸ್ಟಿಂಕ್ಷನ್‌ ನಲ್ಲಿ ಪಾಸಾಗಿದ್ದಳು. ಪಿಯುಸಿ ಮುಗಿಸುವಷ್ಟರಲ್ಲಿ ಸುನಿಧಿಯ ತಂದೆಗೆ ಹುಬ್ಬಳಿಗೆ ವರ್ಗವಾಗಿತ್ತು. ಸುನಿಧಿ ಮೆಡಿಕಲ್ ಕಾಲೇಜಿಗೆ ಸೇರಿಕೊಂಡರೆ ಅಕ್ಕಮಹಾದೇವಿ ಅಲ್ಲೇ ಬಿಎಸ್ಸಿಗೆ ಸೇರಿಕೊಂಡಳು.

ದೂರ ದೂರ ಇದ್ದರೂ ಇಬ್ಬರೂ ಆಗಿನಿಂದ ಕಾಂಟ್ಯಾಕ್ಟ್ ನಲ್ಲಿ ಇದ್ದರು. ಅಕ್ಕಮಹಾದೇವಿಯ ಆದರ್ಶ, ದಾರ್ಶನಿಕರಂತೆ ಮಾತಾಡುವ ವೈಚಾರಿಕತೆ, ತಿಳಿ ನೀರಿನಂತಹ ನಡೆನುಡಿ ಸುನಿಧಿಗೆ ಇಷ್ಟವಾಗಿದ್ದವು. ಯಾವ ಹಮ್ಮೂಬಿಮ್ಮೂ ಇಲ್ಲದ ಸರಳ ವ್ಯಕ್ತಿತ್ವದ ಸುನಿಧಿ ಅಕ್ಕಮಹಾದೇವಿಯ ಮನಸ್ಸನ್ನು ಗೆದ್ದಿದ್ದಳು. ಹಿಂದಿನ ವರ್ಷವಷ್ಟೇ ಮದುವೆಯಾಗಿದ್ದ ಅಕ್ಕಮಹಾದೇವಿಯ ಪತಿ ಆರಾಧ್ಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರದ ಸಹಾಯಕ ಪ್ರೊಫೆಸರ್‌ ಆಗಿದ್ದ.

ಗೆಳತಿಯರಿಬ್ಬರ ಮಧ್ಯೆ ಶುಭೋದಯದ ವಿನಿಮಯವಾಯಿತು, “ಅಂತೂ ಬಹಳ ದಿನಗಳ ನಂತರ ದೊಡ್ಡ ಡಾಕ್ಟರ್‌ ಗೆ ಈ ಸಾಮಾನ್ಯ ಗೆಳತಿ ನೆನಪಾದಳಲ್ಲ…..? ನನ್ನ ಪುಣ್ಯವೆನ್ನಬೇಕು….” ಎಂದಳು ಅಕ್ಕಮಹಾದೇವಿ.

“ಅಕ್ಕೂ…. ಹಂಗ್ಯಾಕಂತೀದಿ? ನೀನೇಷ್ಟಾದರೂ ನನ್ನ ಆತ್ಮೀಯ ಗೆಳತಿ ಅಲ್ಲವೇನೇ….? ನೀನ್ಯಾವಾಗಲೂ ನನ್ನ ಮನದಲ್ಲಿ ನೆಲೆ ನಿಂತಿರುವ ಗ್ರೇಟ್‌ ಪರ್ಸನಾಲಿಟಿ.”

“ದೊಡ್ಡ ಮಾತಾಯಿತು ಬಿಡು ಸು. ನಾನೋ ಸಾಮಾನ್ಯ ಗೃಹಿಣಿ. ನೀನೋ ಹೆಸರಾಂತ ಡಾಕ್ಟರ್‌,” ಸುನಿಧಿಯನ್ನು ಅಕ್ಕಮಹಾದೇವಿ ಮೊದಲಿನಿಂದಲೂ ಪ್ರೀತಿಯಿಂದ, `ಸು’ ಎಂದೇ ಕರೆಯುತ್ತಿದ್ದಳು.

“ಏಯ್‌ ಅಕ್ಕೂ…. ನಿಂದು ಅತಿಯಾಯಿತು ಬಿಡು. ನಿನ್ನ ಒಂದು ಕೈ ನೋಡ್ಕೋತೀನಿ. ಅದಿರಲಿ, ಮಧ್ಯಾಹ್ನ ಒಂದು ಗಂಟೆಗೆ ನಿನ್ನ ಮನೆಗೆ ಬರಬೇಕೆಂದಿದ್ದೇನೆ. ನಿನ್ನ ಹಸ್ಬೆಂಡ್‌ ಮನೆಯಲ್ಲಿ ಇರ್ತಾರಾ ಹೇಗೆ….? ನಿನ್ನ ಜೊತೆಗೆ ಒಂದಿಷ್ಟು ಮಾತಾಡುವುದು ಇದೆ…..” ಎಂದಳು.

“ಹೌದಾ….? ತುಂಬಾ ಸಂತೋಷದ ಸಮಾಚಾರ. ನೀನು ನನ್ನ ಮನೆಗೆ ಬರುವುದಕ್ಕೆ ಅಪ್ಪಣೆ ತೆಗೆದುಕೊಳ್ಳಬೇಕಿದೆಯಾ….? ಪ್ರೊಫೆಸರ್‌ ಸಾಹೇಬರು ಯಾವುದೋ ಸೆಮಿನಾರ್‌ ಗೆಂದು ಬೆಂಗಳೂರಿಗೆ ಹೋಗಿದ್ದಾರೆ. ನಾಡದು ಬೆಳಗ್ಗೆ ಬರುತ್ತಾರೆ. ನೀನು ಒಂದು ಕೆಲಸ ಮಾಡು. ಮಧ್ಯಾಹ್ನ ಊಟಕ್ಕೆ ಇಲ್ಲಿಗೆ ಬಂದುಬಿಡು. ನೀನು ಬರುವುದರೊಳಗೆ ಊಟಕ್ಕೆ ರೆಡಿ ಮಾಡ್ತೀನಿ. ಇಬ್ಬರೂ ಜೊತೆಯಾಗಿ ಊಟ ಮಾಡೋಣ. ಓಕೇನಾ….? ರಾತ್ರಿ ನನ್ನ ಜೊತೆಗೇ ಇದ್ದು ಬೆಳಗ್ಗೆ ಕೆಲಸಕ್ಕೆ ಹೋಗುವೆಯಂತೆ…..”

jiwansathi-story2

`ನನ್ನ ಬಗ್ಗೆ ಇವಳಿಗೆಷ್ಟು ಕಾಳಜಿ? ಅದೆಷ್ಟು ಪರಾಮರಿಕೆ….? ನನ್ನ ಘನಂದಾರಿ ಕೆಲಸ ಗೊತ್ತಾದ ಮೇಲೆ ನನ್ನ ಮೇಲಿನ ಅವಳ ಪ್ರೀತಿ, ಅಭಿಮಾನ, ಗೌರವ ಎಕ್ಕುಟ್ಟಿ ಹೋಗಬಹುದಲ್ಲವೇ….?’ ಸುನಿಧಿಯ ಮನಸ್ಸಿನಲ್ಲಿ ಒಂದಿಷ್ಟು ತೊಳಲಾಟ.

“ಸರಿ, ನಿನ್ನಿಷ್ಟದಂತೆಯೇ ಆಗಲಿ ಅಕ್ಕೂ…. ನಾನು ಒಂದು ಗಂಟೆಗೆಲ್ಲ ನಿನ್ನ ಮನೆಯಲ್ಲಿರುವೆ…..” ಎಂದು ಮಾತು ಮುಗಿಸಿದಳು ಸುನಿಧಿ.

ಸರಿಯಾಗಿ 1 ಗಂಟೆಗೆ ಗೆಳತಿಯ ಮನೆಗೆ ಬಂದಳು ಸುನಿಧಿ. ನಗೆ ಮಲ್ಲಿಗೆ ಸೂಸುತ್ತಾ ಅಕ್ಕಮಹಾದೇವಿ ತೆರೆದ ತೋಳುಗಳಿಂದ ಗೆಳತಿ ಸುನಿಧಿಯನ್ನು ಆದರದಿಂದ ಸ್ವಾಗತಿಸಿದಳು. ಅವಳ ಹಾವಭಾವಗಳಲ್ಲಿ ಸಡಗರ, ಸಂಭ್ರಮವಿದ್ದವು. ಇಬ್ಬರೂ ತುಂಬಾ ಹೊತ್ತು ಪರಸ್ಪರ ತಬ್ಬಿಕೊಂಡೇ ನಿಂತಿದ್ದರು. ಮನದಣಿಯೇ ಮನದೊಳಗೇ ಮಾತಾಡಿಕೊಂಡರು. ಇಬ್ಬರ ಸಂತೋಷ, ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. `ತನ್ನ ಕೊಳಕು ಕಥೆ ಕೇಳಿದ ನಂತರ ಈ ಸಂಭ್ರಮ ಉಳಿದೀತೇ…?’ ಎಂದು ಸುನಿಧಿ ತನ್ನೊಳಗೇ ಅನುಮಾನಿಸಿದಳು.

ಒಂದಿಷ್ಟು ಪ್ರೀತಿಯ ಮಾತುಕಥೆಗಳಾದ ನಂತರ ಅಕ್ಕಮಹಾದೇವಿ ಗೆಳತಿಯನ್ನು ಮೊದಲು ಊಟಕ್ಕೆ ಹೊರಡಿಸಿದಳು. ಊಟದ ಸಮಯದಲ್ಲೂ ಒಂದಿಷ್ಟು ಅದು, ಇದೂ ಮಾತುಕತೆ ಕಳೆಗಟ್ಟಿದವು. ಊಟ ಮುಗಿದ ನಂತರ ಗೆಳತಿಯರಿಬ್ಬರೂ ಸೋಫಾವನ್ನು ಅಲಂಕರಿಸಿದರು.

“ಸು, ಈಗ ಹೇಳು ಅದೇನೋ ಮಾತನಾಡಬೇಕೆಂದು ಹೇಳಿದಿಯಲ್ಲ…..?” ಎಂದು ಗೆಳತಿಯ ಮುಖದಲ್ಲೇ ದೃಷ್ಟಿ ನೆಟ್ಟ ಅಕ್ಕಮಹಾದೇವಿ ಮಾತಿಗೆ ಪೀಠಿಕೆ ಹಾಕಿದಳು. ಸುನಿಧಿಯ ಎದೆ ಡವಗುಡುತ್ತಿತ್ತು. ಗೆಳತಿಯ ದೃಷ್ಟಿ ಎದುರಿಸಲಾರದೇ ಮುಖ ಕೆಳಗೆ ಹಾಕಿದಾಗ ಅವಳ ಮುಖದಲ್ಲಿ ಜೀವವೇ ಇಲ್ಲವೇನೋ ಎಂಬಂತಿತ್ತು. ಆ ಕ್ಷಣ ಒಂದಿಷ್ಟು ಅಧೀರಳಾದರೂ ಮರುಕ್ಷಣ ಪರಿಸ್ಥಿತಿಯನ್ನು ಎದುರಿಸಲು ಮುಖದಲ್ಲಿ ನಗೆ ತಂದುಕೊಂಡು ಮಾತಿಗೆ ಮುಂದಾದಳು. ಸುನಿಧಿ ತನ್ನ ಮತ್ತು ಉದಯ್‌ ನ ಸ್ನೇಹ, ಪ್ರೀತಿ, ಪ್ರಣಯ ಎಲ್ಲವನ್ನೂ ನಿಧಾನವಾಗಿ ಎಳೆಎಳೆಯಾಗಿ ಬಿಚ್ಚಿಟ್ಟಳು. ಇಷ್ಟು ಹೇಳುವಷ್ಟರಲ್ಲಿ ಅವಳ ದುಃಖದ ಕಟ್ಟೆ ಒಡೆದಿತ್ತು. ಉದ್ದೇಗಕ್ಕೆ ಒಳಗಾದಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಕ್ಕಮಹಾದೇವಿ ಗೆಳತಿಯನ್ನು ತೆಕ್ಕೆಗೆ ಹಾಕಿಕೊಂಡು, ಅವಳ ತಲೆಗೂದಲಲ್ಲಿ ಬೆರಳಾಡಿಸಿ, ಬೆನ್ನು ನೇವರಿಸತೊಡಗಿದಳು.

“ಸರಿ, ಪ್ರೀತಿ ಪ್ರಣಯದಲ್ಲೂ ಮುಂದುವರಿದಿರುವುದರಿಂದ ಆದಷ್ಟು ಬೇಗನೆ ಮದುವೆ ಆಗಿಬಿಟ್ಟರಾಯಿತಲ್ಲಾ…..”

“ಯಾವುದೇ ಪ್ರಿಕಂಡೀಶನ್‌ ಇಲ್ಲದೆ ಮದುವೆ ಆಗುವುದಾಗಿ ಭರವಸೆ ಕೊಟ್ಟು ಮಂಚಕ್ಕೆ ಎಳೆದವನು ಮದುವೆಗೆ ನೂರೆಂಟು ಕಂಡೀಶನ್ಸ್ ಹಾಕಿದ. ಅರ್ಧ ಕೋಟಿ ವರದಕ್ಷಿಣೆ, ದುಬಾರಿ ಬೆಲೆಯ ಕಾರು, ಕೇಜಿಗಟ್ಟಲೆ ಬಂಗಾರ, ಮನೆ, ಅದು, ಇದೂ ಕೇಳಿದ. ಇದನ್ನೆಲ್ಲ ಪೂರೈಸಲು ನನ್ನಿಂದ, ನನ್ನ ಹೆತ್ತವರಿಂದ ಸಾಧ್ಯವೇ…..? ವರದಕ್ಷಿಣೆ ಕೊಡಲು ಸಾಧ್ಯ ಇಲ್ಲವೆಂದು ಪ್ರತಿಭಟಸಿದಾಗ ಅಷ್ಟೆಲ್ಲ ಐಶ್ವರ್ಯವನ್ನು ಕೊಡುವ ಆಂಧ್ರ ಮೂಲದ ಡಾಕ್ಟರ್‌ ಒಬ್ಬಳ ಸಂಬಂಧವನ್ನು ಕುದುರಿಸಿಕೊಂಡು ಗಪ್‌ ಚಿಪ್ಪಾಗಿ ಕಡಪಾಕ್ಕೆ ಹಾರಿಬಿಟ್ಟ,” ಹೇಳುತ್ತಾ ಸುನಿಧಿಯ ಕಣ್ಣೀರು ಕಟ್ಟೆ ಒಡೆದಿತ್ತು. ಅಕ್ಕಮಹಾದೇವಿ ಮತ್ತೆ ಗೆಳತಿಯನ್ನು ತೆಕ್ಕೆಗೆ ಹಾಕಿಕೊಂಡು, ಕಣ್ಣೀರು ಒರೆಸುತ್ತಾ ಸಮಾಧಾನಿಸ ತೊಡಗಿದಳು.

ಸುನಿಧಿಯ ದುಃಖ ಒಂದಿಷ್ಟು ತಹಬಂದಿಗೆ ಬಂದಮೇಲೆ ಅಕ್ಕಮಹಾದೇವಿಯೇ ಮಾತಿಗೆ ಮುಂದಾದಳು, “ಬೆಂಗಳೂರಿನಲ್ಲಿ ಘಟಿಸಿದ ಇಂತಹುದೇ ಒಂದು ಪ್ರಕರಣದ ಬಗ್ಗೆ ಸುದ್ದಿ ಮಾಧ್ಯಮವೊಂದು ಮೊನ್ನೆಯಷ್ಟೇ ಬಿತ್ತರಿಸಿದ್ದನ್ನು ನೋಡಿದೆ. ಆ ಘಟನೆಯಲ್ಲೂ ಇಬ್ಬರೂ ಡಾಕ್ಟರ್ಸ್‌. ಅವನೂ ಹುಡುಗಿಗೆ ಏನೇನೋ ಬೇಕೆಂದು ಕೇಳಿದ. ಕೊಡಲು ಅಸಹಾಯಕಳಾಗಿದ್ದ ಹುಡುಗಿ ಕೊನೆಗೆ ಶರಣಾಗಿದ್ದು ಆತ್ಮಹತ್ಯೆಗೆ. ಅವಳ ಪ್ರೀತಿ ಎಲ್ಲಿಗೆ ಬಂದಿತ್ತೋ ಏನೋ….? ನಿನ್ನದಂತೂ ಪ್ರೀತಿಯ ಕೊನೆಯ ಮೆಟ್ಟಿಲೇರಿ ಸಂಭ್ರಮಿಸಿದೆ.

“ಪೋಲೀಸ್‌, ಕೋರ್ಟ್‌, ಕಛೇರಿ ಅಂತ ಹೋದರೆ ಕೆಲಸ ಬೊಗಸೆ ಬಿಟ್ಟು ಬರೀ ಅಲೆಯುವುದಷ್ಟೇ ಆಗುತ್ತದೆ. ದುಡ್ಡೂ ಹಾಳು, ಸಮಯ ವ್ಯರ್ಥ. ಒಂದು ವೇಳೆ ನಿಮ್ಮಿಬ್ಬರ ಕುಡಿ ನಿನ್ನೊಡಲಲ್ಲಿ ಅಂಕುರಿಸಿದ್ದರೆ ಅವನ ನಯವಂಚಕತನಕ್ಕೆ ಒಂದು ಪುರಾವೆ ಸಿಗುತ್ತಿತ್ತೇನೋ? ಅದೂ ಬಹಳ ವಿಳಂಬಗವಾಗುವ ಪ್ರಹಸನವೇ. ಕೂಸಿನ, ಹೆತ್ತವರ ಡಿಎನ್‌ಎ ಟೆಸ್ಟ್, ಅದರ ವರದಿ ಬರುವುಷ್ಟರಲ್ಲಿ ನಿನ್ನ ತಾಳ್ಮೆ ಕೊಚ್ಚಿ ಹೋಗಿರುತ್ತದೆ. ಈಗ ನಿನ್ನ ಮುಂದಿನ ನಡೆಯೇನು…..?”

“ಅಕ್ಕೂ, ಪ್ರೀತಿಯಲ್ಲಿ ಕೈ ಸುಟ್ಟುಕೊಳ್ಳುವವರಿಗೆ ಶಾಂತಿ ಎಲ್ಲಿ? ಪ್ರೀತಿ ನನ್ನ ಪಾಲಿಗೆ ಅರಳಿ ನಿಂತಿರುವ ಮುಳ್ಳಿನ ಗುಲಾಬಿಯಂತಾಗಿಬಿಟ್ಟಿದೆ. ಪ್ರೀತಿ ನಿದ್ದೆಯನ್ನು ಕದ್ದು, ಕಣ್ಣುಗಳನ್ನು ತೇವಗೊಳಿಸುತ್ತಾ ನೆಮ್ಮದಿಗಿಂತ ನೋವನ್ನು ಕೊಟ್ಟಿದ್ದೇ ಹೆಚ್ಚು. ಅಕ್ಕೂ…. ಅದಕ್ಕೆ ನಾನೂ ಕೂಡ ಆ ಬೆಂಗಳೂರು ಹುಡುಗಿ ತೆಗೆದುಕೊಂಡು ನಿರ್ಧಾದಂತೆ ಮುನ್ನಡೆಯಬೇಕು ಎಂದಿದ್ದೇನೆ, ತಪ್ಪಾಗಿ ಭಾವಿಸಬೇಡ…..” ಎಂದಳು.

“ಶಹಬ್ಬಾಸ್‌…..! ಒಳ್ಳೆ ನಿರ್ಧಾರ…..” ಚಪ್ಪಾಳೆ ತಟ್ಟಿ ಉದ್ಗರಿಸಿದ ಅಕ್ಕಮಹಾದೇವಿ, ವಿಕಟ ನಗು ನಕ್ಕಳು. ಸುನಿಧಿ ತಬ್ಬಿಬ್ಬಾದಳು.

“ನೀನೂ ಅದನ್ನೇ ಮಾಡಿಕೊಂಡಿದ್ದರೆ ಮಾಧ್ಯಮದವರಿಗೆ ಇನ್ನೊಂದು ಎಪಿಸೋಡ್‌ ಗೆ ಭರ್ಜರಿ ಸುದ್ದಿಯಾದರೂ ಸಿಗುತ್ತಿತ್ತೇನೋ….? ಥೂ ನಿನ್ನ…..! ನನ್ನ ಗೆಳತಿ ಮೊದಲಿನಿಂದಲೂ ಪ್ರತಿಭಾವಂತೆ, ಧೈರ್ಯವಂತೆ, ಪ್ರಬುದ್ಧಳೂ ಎಂದುಕೊಂಡಿದ್ದೆ. ಆದರೆ ನಿನ್ನ ಬಾಯಿಂದ  ಇಂಥ ಮಾತು ಬರಬಹುದೆಂದು ನಾನು ಕನಸುಮನಸ್ಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆದರೆ….? ನಿನ್ನದು ಎಂತಹ ಬಾಲಿಶ ನಿರ್ಧಾರ….? ಥೂ…! ರಣಹೇಡಿ! ಯಾರೊ ಒಬ್ಬ ನಾಮರ್ದ ನಿನ್ನನ್ನು ನಂಬಿಸಿ ವಂಚಿಸಿದ ಎಂಬ ಒಂದೇ ಕಾರಣಕ್ಕೆ ಜೀವವನ್ನೇ ಕೊನೆಗಾಣಿಸಿಕೊಳ್ಳುವುದೇ? ಆತ್ಮಹತ್ಯೆಯಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಕ್ಕುವುದೇ….?” ಎಂದು ಕೋಪದಿಂದ ಕೇಳಿದಳು.

“ಹೌದು…. ಯಾಕಿಲ್ಲ…..? ಜೀವ, ಜೀವನ ಇಲ್ಲದಿರುವಾಗ ಸಮಸ್ಯೆಗಳಾದರೂ ಎಲ್ಲಿರುತ್ತವೆ….? ಸಮಸ್ಯೆ, ಪಾಪಪ್ರಜ್ಞೆ, ಮನಸ್ಸಿನ ತೊಳಲಾಟಗಳಿಗೆ ಶಾಶ್ವತ ಮುಕ್ತಿಯಾದರೂ ಸಿಗುತ್ತದೆ ಅಲ್ಲವೇ….? ಇದ್ದು ಸಾಧಿಸುವುದಾದರೂ ಏನಿದೆ? ಮನಸ್ಸಿನ ನೆಮ್ಮದಿ, ಶಾಂತಿ ಕದಡಿರುವಾಗ ನಿತ್ಯ ಜೀವನವನ್ನು ನರಕವನ್ನಾಗಿ ಮಾಡಿಕೊಂಡು ಬದುಕುವುದಕ್ಕಿಂತ ಒಂದೇ ಸಲ ಸಾಯುವುದು ಒಳ್ಳೆಯದಲ್ಲವೇ….?” ಸುನಿಧಿ ಸಮರ್ಥಿಸಿಕೊಂಡಳು.

“ಹೌದೌದು…. ನೀನು ಹೇಳುವುದು ಬಹಳ ಅರ್ಥಪೂರ್ಣ ಸಮಯೋಚಿತ ಸಲಹೆ! ಥೂ ನಿನ್ನ ಮುಖಕ್ಕಿಷ್ಟು ಬೆಂಕಿ ಹಾಕ….! ಈ ರೀತಿ ಸಮರ್ಥನೆ ಮಾಡಿಕೊಳ್ಳುವುದಕ್ಕೆ ನಿನಗೆ ಮನಸ್ಸಾದರೂ ಹೇಗೆ ಬಂತು….? ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಕ್ಕಾ ನೀನು ಎಂಬಿಬಿಎಸ್‌, ಎಂ.ಎಸ್‌ ಗೈನಾಕಾಲಜಿ ಮಾಡಬೇಕಿತ್ತೇನು…..? ಕದಡಿರುವ ಮನಸ್ಸಿನ ನೆಮ್ಮದಿ, ಶಾಂತಿಯನ್ನು ಪುನಃ ಮರುಸ್ಥಾಪಿಸಲು ಪ್ರಯತ್ನಿಸಬೇಕು.

“ಅದಿರಲಿ, ಅವನೊಬ್ಬ ಸಮಯ ಸಾಧಕ ಅವನೇನೋ ಪುಸಲಾಯಿಸಿದ ಸರಿ, ನೀನು ಹಿಂದೆ ಮುಂದೆ ಯೋಚಿಸದೆ ಅವನ ತಾಳಕ್ಕೆ ಕುಣಿದಿದ್ದು ಸರಿಯೇ…? ಅಂದರೆ ನಿನಗೂ ಅದು ಬೇಕಿತ್ತು ಎಂದ ಹಾಗಾಯಿತು. ಒಂದೇ ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವೇ….? ಇಲ್ಲ ತಾನೇ….? ಹೊಸ ಅನುಭವಕ್ಕೆ ನಿನ್ನೆದೆಯಲ್ಲೂ ತುಡಿತ, ವಾಂಛೆ, ಬೇಗನೆ ಬಾಚಿಕೊಳ್ಳುವ ಹಪಹಪಿ ಇತ್ತು ತಾನೇ….? ಹಾಗಿದ್ದಾಗ ಮಾತ್ರವೇ ಹೀಗಾಗವುದು.

“ನೀನು ಅವನ ಅವಸರಕ್ಕೆ ಕುಣಿಯುವುದಕ್ಕೆ ಮೊದಲು ಅವನಿಗೆ, `ಅಷ್ಟು ಅವಸರವಿದ್ದರೆ ತಕ್ಷಣ ಮದುವೆಯಾಗು,’ ಎಂದು ಹೇಳಬೇಕಿತ್ತು. ನಿನ್ನ ಮನಸ್ಸಿನಲ್ಲಿ ದೃಢ ನಿರ್ಧಾರ ಇದ್ದಿದ್ದರೆ ನಿನ್ನ ಕೈ ಬೆರಳನ್ನ ಸಹ ಮುಟ್ಟಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅದೇನೋ ಅಂತರಾಲ್ಲ….. ಸಲಿಗೆ ಕೊಟ್ಟ ನಾಯಿ ಹೆಗಲಿಗೆ ಏರಿತ್ತಂತೆ, ಹಾಗೆ…. ಹೇಗಿದ್ದರೂ ಇವಳು ನನ್ನ ಮಾತನ್ನು ಮೀರುವುದಿಲ್ಲ ಎಂದು ತಿಳಿದುಕೊಂಡು ನಿನ್ನನ್ನು ಅವರಿಸಿಬಿಟ್ಟ, ಜೊತೆಗೆ ಏಮಾರಿಸಿಯೂಬಿಟ್ಟ.

“ನಿನ್ನ ಮನಸ್ಸು ನೋಯಿಸಬೇಕೆಂದು ನಾನು ಈ ಮಾತನ್ನು ಹೇಳುತ್ತಿಲ್ಲ. ಹೆಣ್ಣನ್ನು ಹಣ್ಣೆಂದು ತಿಂದು ಬಿಸಾಡುವ ಉದಯ್ ನಂಥವರಿಗೆ ಧಿಕ್ಕಾರವಿರಲಿ. ಅವನು ನಿನ್ನದೆಲ್ಲನ್ನೂ ಕೊಳ್ಳೆ ಹೊಡೆದ ನಂತರ, `ಮೈ ಮನಸ್ಸುಗಳು ಮಲಿನಾಗಿವೆ,’ ಎಂದು ನಿನಗೆ ನಿನ್ನ ತಪ್ಪಿನ ಅರಿವಾಗಿದೆ. ಈಗ ಹಲುಬಿದರೆ ಪ್ರಯೋಜನ ಏನು?

“ಸು, ನಿನಗೆ ಗೊತ್ತಿದೆಯೋ ಇಲ್ಲವೋ….? ತಾರುಣ್ಯದಿಂದ ಕಂಗೊಳಿಸುತ್ತಿದ್ದ ಶಿವಶರಣೆ ಮಹಾದೇವಿ ಅಕ್ಕ ದಿಗಂಬರೆಯಾಗಿ ಉಡುತಡಿಯಿಂದ ಕಲ್ಯಾಣಕ್ಕೆ ಹೊರಟಾಗ ಮಾರ್ಗ ಮಧ್ಯದಲ್ಲಿ ಬಹಳಷ್ಟು ತೊಂದರೆ ಅನುಭವಿಸಿದಳಂತೆ. ಹೀಗೇ ಒಂದು ದಿನ ರಾತ್ರಿ ದೇವಸ್ಥಾನವೊಂದರಲ್ಲಿ ತಂಗಿದ್ದಾಗ ಕಪಟ ಕಾವಿಧಾರಿ ಸನ್ಯಾಸಿಯೊಬ್ಬ ಅವಳ ಮೇಲೆ ಎರಗಲು ಮುಂದಾಗಿದ್ದಾಗ ಧೈರ್ಯದಿಂದ ಅವನಿಗೆ ಕಪಾಳಮೋಕ್ಷ ಮಾಡಿ ಬುದ್ಧಿ ಕಲಿಸಿದ್ದಳಂತೆ. ಈ ಸಂದರ್ಭಕ್ಕೆ ತಕ್ಕಂತೆ ಅಣ್ಣ ಬಸವಣ್ಣನವರ ಒಂದು ವಚನ ಹೇಳುವೆ ಕೇಳು,” ಎನ್ನುತ್ತಾ ಸುಶ್ರಾವ್ಯವಾಗಿ  ಹಾಡತೊಡಗಿದಳು.

`ಆನೆಯನೇರಿಕೊಂಡು ಹೋದಿರೇ ನೀ

ಕುದುರೆಯನೇರಿಕೊಂಡು ಹೋದಿರೇ ನೀ,

ಕುಂಕುಮ, ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ!

ಸತ್ಯ ನಿಲವನರಿಯದೆ ಹೋದಿರಲ್ಲಾ, ಸದ್ಗುಣವೆಬ ಫಲ ಬಿತ್ತದೆ ಬೆಳೆಯದೆ ಹೋದಿರಲ್ಲಾ!

ಅಹಂಕಾರವೆಂಬ ಸದಮದಗಜೀರಿ ವಿಧಿಗೆ ಗುರಿಯಾಗಿ ನೀ ಹೋದಿರಲ್ಲಾ!

ನಮ್ಮ ಕೂಡಲಸಂಗಮದೇವನರಿಯದೆ ನರಕಕ್ಕೆ ಭಾಜನರಾದಿರಲ್ಲಾ!’

“ಇದನ್ನು ಏಕೆ ಹೇಳುತ್ತಿರುವೆನೆಂದರೆ ಜಾಗತೀಕರಣ, ಉದಾರೀಕರಣದ ನಂತರ ಅದೂ ಮಾಹಿತಿ ತಂತ್ರಜ್ಞಾನದ ಅವಿಷ್ಕಾರದ ನಂತರ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳು ಎಕ್ಕುಟ್ಟಿ ಹೋಗುತ್ತಿವೆ. ವಿದ್ಯಾವಂತರು ಪಾಶ್ಚಾತ್ಯರ ರೀತಿನೀತಿ, ವೇಷ ಭೂಷಣಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಸ್ವಾತಂತ್ರ್ಯದ ದುರುಪಯೋಗ ಆಗತೊಡಗಿದೆ, ಸಮಾನತೆ, ಸ್ವಾತಂತ್ರ್ಯಗಳು ಸ್ವೇಚಾಚಾರದಲ್ಲಿ ಅಂತ್ಯವಾಗತೊಡಗಿವೆ.

“ಸ್ವಾತಂತ್ರ್ಯ ಎಂದರೆ ಸ್ವೇಚಾಚಾರ ಎಂದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅನೈತಿಕ ಸಂಬಂಧಗಳು, ಮುಕ್ತ ಲೈಂಗಿಕತೆ, ವಿಚ್ಛೇದನಗಳು, ಮಲ್ಟಿಪಲ್ ಅನೈತಿಕ ರಿಲೇಶನ್ಸ್ ಹೆಚ್ಚಾಗತೊಡಗಿವೆ. ಗಟ್ಟಿಗೊಳ್ಳಬೇಕಾದ ಸಂಬಂಧಗಳು ಸಡಿಲವಾಗತೊಡಗಿವೆ. ವೊರ್ಯಾಲಿಟಿ, ಶೀಲ, ಪಾವಿತ್ರ್ಯತೆ ಎಂಬ ಶಬ್ದಗಳು ಅರ್ಥ ಕಳೆದುಕೊಳ್ಳತೊಡಗಿವೆ. ಎಲ್ಲರೂ ಹಾಗೆ ಅಂತ ಅಲ್ಲ. ಆದರೂ ಬಹಳಷ್ಟು ಜನರು ಪಾಶ್ಚಾತ್ಯರ ನಡೆನುಡಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ವಿಷಾದಕರ ಸಂಗತಿ.

“ನೀನೂ ಕೂಡ ಮನೆಯ ಸಂಪ್ರದಾಯಕ್ಕೆ ಬದ್ಧಳಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲವೇನೋ…..? ಸರಿ ಬಿಡು, ಆದದ್ದು ಆಗಿಹೋಗಿದೆ. ಅದಕ್ಕೆ ಚಿಂತಿಸಿ ಫಲವಿಲ್ಲ. `ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿರಿ ಹುಚ್ಚಪ್ಪಗಳಿರಾ?,’ `ಈಸಬೇಕು ಇದ್ದು ಜಯಿಸಬೇಕು,’ `ತಲ್ಲಣಿಸದಿರು ಕಂಡ್ಯ ತಾಳು ಮನವೇ….’ ಎಂದು ದಾಸ ಶ್ರೇಷ್ಠರು ಹೇಳಿರುವುದು ನಿನಗೆ ಗೊತ್ತಿರಬೇಕು.

“ನೋಡು ಸು… ನೀನು ಜೀವನದ ಒಂದು ಆಯಾಮದಲ್ಲಿ ಸೋತಿರಬಹುದು. ಆದರೆ ಅದೊಂದೇ ಜೀವನವಲ್ಲ! ಜೀವನದಲ್ಲಿ ಬಹಳಷ್ಟು ಆಯಾಮಗಳಿವೆ. ನೀನು ಗಳಿಸಿರುವ ಜ್ಞಾನಾರ್ಜನನೆಯಿಂದ ಬಡವರ, ದೀನದಲಿತರ ಸೇವೆ ಮಾಡಿ ಸೈ ಎನಿಸಿಕೊಳ್ಳಬಹುದು. ಇಳಿವಯಸ್ಸಿನಲ್ಲಿ ಸಾಗುತ್ತಿರುವ ನಿನ್ನ ಹೆತ್ತವರ, ಒಡಹುಟ್ಟಿದವರನ್ನು ನೋಡು. ಈ ನಿನ್ನ ಗೆಳತಿಯನ್ನೂ ನೋಡು. ನನಗೆ ನಿನ್ನ ಬಗ್ಗೆ ತುಂಬಾ ಗೌರವ, ಅಭಿಮಾನ ಇರುವುದನ್ನು ಮರೆಯಬೇಡ.

“ಆ ಉದಯ್‌ ಗಿಂತಲೂ ಇನ್ನೂ ಹೆಚ್ಚು ಪ್ರೀತಿಸುವ ಹುಡುಗ ನಿನಗೆ ಸಿಕ್ಕೇ ಸಿಗುತ್ತಾನೆ. ಭರವಸೆ ಇರಲಿ. ಹಿಂದಿನದೆಲ್ಲವನ್ನೂ ಕೊಡವಿ ಮೇಲೆದ್ದುಬಿಡು. ಉದಯ್‌ ನ ಜೊತೆಗಿನ ಸಾಂಗತ್ಯವೊಂದು ಕೆಟ್ಟ ಕನಸು ಎಂದು ಮರೆತುಬಿಡು. ನಿನ್ನ ತಪ್ಪಿನ ಅರಿವು ನಿನಗಾಗಿದೆ. ಈಗ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿರುವಿ. ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ. ಬರುವ ನಾಳೆಗಳೆಲ್ಲ  ನೋವನ್ನು ತರಲಿಕ್ಕಿಲ್ಲ. ಭರವಸೆಯೇ ಬಾಳಿನ ಬೆಳಕು, ಭರವಸೆಯನ್ನು ಕಳೆದುಕೊಳ್ಳುವುದು ಸರಿಯಲ್ಲ. ಭರವಸೆ ಮನುಷ್ಯನನ್ನು ಬದುಕಿಸುತ್ತದೆ.

“ಉದಯ್‌ ಸಾಂಗತ್ಯದಿಂದ ನಿನ್ನ ಮೈ, ಮನಸ್ಸುಗಳು ಮಲಿನವಾಗಿವೆ ಎಂದು ಹೇಳುತ್ತಿರುವಿ ತಾನೇ…..? ಸರಿ, ನಾನು ಎರಡರ ಕೊಳೆಯನ್ನ ತೊಳೆದುಬಿಡುವೆ. ಮೊದಲು ನಿನ್ನ ದೇಹವನ್ನು ಶುಭ್ರಗೊಳಿಸಿಬಿಡುವೆ. ಒಂದೈದು ನಿಮಿಷ ಅಷ್ಟೇ. ಈಗ ನನ್ನೆದುರು ಎದ್ದು ನಿಂತುಕೋ. ಎರಡೂ ಕಣ್ಣು ಮುಚ್ಚಿಕೊಂಡು ಶಾಂತ ಮನಸ್ಸಿನಿಂದ ನಿನ್ನ ಆರಾಧ್ಯ ದೈವದ ಸ್ಮರಣೆ  ಮಾಡುತ್ತಿರು,” ಎನ್ನುತ್ತಾ  ಅಕ್ಕಮಹಾದೇವಿ ತಾನೂ ಎದ್ದು ನಿಂತಳು.

ಮೂಕ ಬಸವನಂತೆ, ಆಜ್ಞಾಧಾರಕ ವಿದ್ಯಾರ್ಥಿಯಂತೆ ಸುನಿಧಿ ಎದ್ದು ಗೆಳತಿಯ ಎದುರು ನಿಂತುಕೊಂಡಳು. ಗೆಳತಿಯ ಮನವಿಯಂತೆ ಕಣ್ಣುಗಳನ್ನು ಮುಚ್ಚಿಕೊಂಡಳು. ಅಕ್ಕಮಹಾದೇವಿ ಕೂಡ ಕಣ್ಣುಮುಚ್ಚಿಕೊಂಡಳು. ಒಂದು ಕ್ಷಣ ಸುನಿಧಿಯನ್ನು ಬಿಗಿದಪ್ಪಿಕೊಂಡಳು. ಹಾಗೇ ಅವಳು ಸುನಿಧಿಯ ದೇಹದ ಇಂಚಿಂಚೂ ಭಾಗವನ್ನು ತನ್ನ ಕೈಗಳೆರಡರಿಂದ ನಿಧಾನವಾಗಿ ನವಿರಾಗಿ ಸವರುತ್ತಾ ಹೋದಳು. ಅಡಿಯಿಂದ ಮುಡಿಯವರೆಗೆ ಸವರುವುದರಲ್ಲಿ ಐದು ನಿಮಿಷಕ್ಕಿಂತ ಹೆಚ್ಚಿನ ಸಮಯವನ್ನೇ ತೆಗೆದುಕೊಂಡಳು. ಅಕ್ಕಮಹಾದೇವಿಯ ಆಪ್ತ ಸ್ಪರ್ಶ ಸುನಿಧಿಯ ಇಂಚಿಂಚು ಭಾಗದಲ್ಲೂ ನವಿರಾದ ಪುಳಕನ್ನು ಎಬ್ಬಿಸತೊಡಗಿತಲ್ಲದೇ, ಏನೋ ಒಂದು ರೀತಿಯ ಸ್ವಚ್ಛತಾ ಕಾರ್ಯಕ್ರಮ ಜಾರಿಯಲ್ಲಿದೆ ಎಂಬಂತೆ ಅನಿಸುತ್ತಿತ್ತು. ಕೊನೆಗೆ ಸುನಿಧಿಗೆ ನಿಧಾನವಾಗಿ ಕಣ್ಣು ತೆರೆಯಲು ಹೇಳಿದ ಅಕ್ಕಮಹಾದೇವಿ, ಮೌನವಾಗಿ ತನ್ನೊಂದಿಗೆ ಬರಲು ಸೂಚಿಸಿದಳು. ದೇವರು ಮನೆಯ ಪಕ್ಕದ ಸಣ್ಣ ಕೋಣೆಗೆ ಅವಳನ್ನು ಕರೆದುಕೊಂಡು ಹೋದಳು. ಕೋಣೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ ಮತ್ತು ಸ್ವಾಮಿ ವಿವೇಕಾನಂದರ ಫೋಟೋಗಳು ರಾರಾಜಿಸುತ್ತಿದ್ದವು.

“ಸುನಿಧಿ, ಇಲ್ಲಿ ಇರುವುದು ಈ ನಾಲ್ಕೇ ಫೋಟೋಗಳು. ಇವರಲ್ಲಿ ನಿನ್ನ ಆರಾಧ್ಯ ದೇವರು ಇರದಿದ್ದರೆ ನಿನ್ನ ಆರಾಧ್ಯ ದೇವರನ್ನು ಸ್ಮರಿಸುತ್ತಾ ಕಣ್ಣುಚ್ಚಿಕೊಂಡು ಒಂದೈದು ನಿಮಿಷ ನಿಂತ್ಕೊ. ಇಲ್ಲಿ ನಿನ್ನ ಮನಸ್ಸಿನ ಕೊಳೆಯನ್ನು ತೆಗೆದುಬಿಡುವೆ. ಆವಾಗ ನೀನು ಹೊಸ ಮನುಷ್ಯಳಾಗುವಿ,” ಎಂದು ಅಕ್ಕಮಹಾದೇವಿ ಹೇಳಿದಾಗ ಸುನಿಧಿ ಮೌನವಾಗಿ ಅವಳ ಮಾತನ್ನು ಪಾಲಿಸಿದಳು.

ಇಲ್ಲೂ ಅಕ್ಕಮಹಾದೇವಿ ಒಂದು ಸಲ ಸುನಿಧಿಯನ್ನು ನವಿರಾಗಿ ಬಿಗಿದಪ್ಪಿಕೊಂಡು, ತನ್ನ ತೋರು ಬೆರಳಿನಿಂದ ತಲೆಯ ಮಧ್ಯಭಾಗದಿಂದ ಪಾದದವರೆಗೆ ಅವಳ ದೇಹದ ಭಾಗಗಳನ್ನು ಸ್ಪರ್ಶಿಸಿ ನಂತರ ತಲೆಯನ್ನು ಎರಡೂ ಕೈಗಳಿಂದ ಹಿಡಿದುಕೊಂಡು ನಿಂತಳು. ಸುನಿಧಿಯ ಮೈಯಲ್ಲಿ ಯಾವುದೋ ಒಂದು ತೇಜಸ್ಸು ಹರಿದಾಡಿ ದೇಹ, ಮನಸ್ಸುಗಳೆರಡೂ ಪುನಶ್ಚೇತನಗೊಂಡಂಥ ಅನುಭವ! ಒಂದೈದು ನಿಮಿಷಗಳ ನಂತರ ಸುನಿಧಿಗೆ ನಿಧಾನವಾಗಿ ಕಣ್ತೆರೆಯಲು ಹೇಳಿ ಅಲ್ಲಿದ್ದ ಮಹಾಮಹಿಮರ ಪಟಗಳಿಗೆ ನಮಸ್ಕರಿಸಿದಳು. ಸುನಿಧಿಯೂ ನಮಸ್ಕರಿಸಿದಳು. ಅಕ್ಕಮಹಾದೇವಿ ನಿಧಾನವಾಗಿ ಸುನಿಧಿಯನ್ನು ಕರೆದುಕೊಂಡು ಬಂದು ಸೋಫಾದಲ್ಲಿ ಕುಳಿತುಕೊಂಡಳು. ಸುನಿಧಿಯ ಮುಖದಲ್ಲಿ ಹೊಸದೊಂದು ಕಳೆ ಆವರಿಸಿತ್ತು. ಸುನಿಧಿಗೆ ಏನನ್ನಿಸಿತೋ ಏನೋ, ಅಕ್ಕಮಹಾದೇವಿಯ ಮಡಿಲಲ್ಲಿ ಕಣ್ಣುಚ್ಚಿಕೊಂಡು ಮಲಗಿಬಿಟ್ಟಳು. ತುಸು ಹೊತ್ತು ಇಬ್ಬರ ಮಧ್ಯೆ ಮಾತುಗಳಿರಲಿಲ್ಲ. ಮೌನದಲ್ಲೇ ಸಮಯ ಸರಿಯುತ್ತಿತ್ತು. ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ಸುನಿಧಿ ಮಲಗಿಬಿಟ್ಟಳು.

ನಂತರ ಎಚ್ಚರಗೊಂಡ ಸುನಿಧಿ, “ಅಕ್ಕೂ…. ಮಂತ್ರ ತಂತ್ರ ಏನಾದ್ರೂ ಹಾಕಿದಿಯೇನೇ….?” ಮಲಗಿದ್ದಲ್ಲೇ ಮೆಲ್ಲಗೆ ಉಲಿದಳು ಸುನಿಧಿ.

“ಸು…., ಈ ಮಂತ್ರ ತಂತ್ರಗಳಲ್ಲಿ ನನಗೆ ನಂಬಿಕೆ ಇಲ್ಲ. ಪ್ರಕೃತಿಯಲ್ಲಿ ಪವಾಡಗಳೇ ಇಲ್ಲ. ಪ್ರಕೃತಿಯೇ ಒಂದು ಪವಾಡ. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎನ್ನುವ ಸತ್ಯ ಅರಿತಿದ್ದರೂ ಆಕಸ್ಮಿಕವಾಗಿ ಉದುರಿದ್ದನ್ನೇ ಪಾವಡವೆಂದು ಬಿಂಬಿಸಿ ಜನಸಾಮಾನ್ಯರಿಗೆ ಮೊಸ ಮಾಡಿ ಮೆರೆಯುವ ಜನರಿಗೇನು ಕೊರತೆ ಇಲ್ಲ. ಅತಿಯಾದ ನಂಬಿಕೆ ನಮಗೇ ಮೋಸ ಮಾಡಿಕೊಳ್ಳುವುದು. ಮೌನದಲ್ಲಿ ಇದುವರೆಗೂ ನಾನು ನಿನ್ನೆದೆಯಲ್ಲಿ ಮಳೆಗರಿದಿದ್ದು ಆಪ್ತ ಭಾವದ ಸಿಂಚನವಷ್ಟೇ…..”

“ಹೌದಾ…..? ತುಂಬಾ ಪರಿಣಾಮಕಾರಿಯಾದ ಚಿಕಿತ್ಸೆ. ಅಕ್ಕೂ, ನಾನು ಇಷ್ಟುಹೊತ್ತಿನವರೆಗೆ ನನ್ನ ತಾಯಿಯ ಮಡಿಲ್ಲಲೇ ಮಲಗಿದ ಅನುಭವ. ನಿನ್ನ ಆತ್ಮೀಯ ಭಾವದ ಸಿಂಚನ. ಆಪ್ತ, ರಕ್ಷಣಾತ್ಮಕ ಸ್ಪರ್ಶ, ಮೃದು ಹಿತವಚನಗಳಿಂದ ನನ್ನ ಮೈ ಮನಸ್ಸುಗಳೆರಡೂ ಮುದಗೊಂಡು ಪುನಶ್ಚೇತನಗೊಂಡಿವೆ. ನನ್ನ ದೇಹದ ನರನಾಡಿಗಳಲ್ಲಿ ಏನೋ ಹೊಸಭಾವದ ಚಲನೆ. ನನಗೆ ಸಾಕಷ್ಟು ಡಾಕ್ಟರ್‌ ಗೆಳತಿಯರು, ಆಪ್ತ ಸಮಾಲೋಚಕಿಯರು, ಮನಶ್ಶಾಸ್ತ್ರಜ್ಞರು ಗೊತ್ತಿರುವರಾದರೂ ನಿನ್ನೊಂದಿಗೇ ನನ್ನ ಮನದಾಳದ ವೇದನೆಯನ್ನು ಹಂಚಿಕೊಳ್ಳಬೇಕೆಂಬ ಪ್ರೇರಣೆಯಾಗಿದ್ದರಿಂದ ನಿನ್ನಲ್ಲಿಗೆ ಬಂದೆ. ನಿನ್ನ ಆತ್ಮೀಯ ಪ್ರೀತಿಯ ಹೊಳೆಯಿಂದ ಮಿಂದೆದ್ದ ನಾನು ಹೊಸ ಮನುಷ್ಯಳಾಗಿರುವೆ. ನಿನ್ನ ಹಿತವಚನದಂತೆ ಮುನ್ನಡೆಯುವೆ,” ಎನ್ನುತ್ತಾ ಸುನಿಧಿ ಹಾಗೇ ಮೇಲೆದ್ದು ಅಕ್ಕಮಹಾದೇವಿಯನ್ನು ಆಲಂಗಿಸಿದಳು.

“ಹೌದಾ ಸು…..? ತುಂಬಾ ಖುಷಿಯಾಗುತ್ತಿದೆ. ಹಾಗಾದರೆ ನಾನೀಗ ನಿನ್ನ ತಾಯಿಯ ಸ್ಥಾನದಲ್ಲಿರುವೆ ನಿಜ ತಾನೇ….?” ಎನ್ನುತ್ತಾ ಅಕ್ಕಮಹಾದೇವಿ ತಾನೂ ಸುನಿಧಿಯನ್ನು ಆಲಂಗಿಸಿ, ಅವಳ ಹಣೆ, ಕೆನ್ನೆಗಳಿಗೆ ಮುದ್ದಿಟ್ಟು ಸಂಭ್ರಮಿಸಿದಳು. ಸುನಿಧಿಯ ಆನಂದಾತಿರೇಕಕ್ಕೆ ಮಿತಿ ಇರಲಿಲ್ಲ.

ಸುನಿಧಿಯ ತಪ್ತ ಮೈ, ಮನಸ್ಸುಗಳಲ್ಲಿ ಶಾಂತಿ, ನೆಮ್ಮದಿ, ಹೊಸ ಜೀವಕಳೆ ನೆಲೆಸಿದ್ದನ್ನು ಕಂಡು ಅಕ್ಕಮಹಾದೇವಿಯ ಕಣ್ಮನಗಳು ಬಿರಿದ ಮಲ್ಲಿಗೆಯಂತೆ ಅರಳಿದವು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ