ನೀಳ್ಗಥೆ - ಶೇಖರಗೌಡ ವೀ.ಸ.
ಆಧುನಿಕ ಸ್ವಭಾವದ ದಿಟ್ಟೆ, ಧೀರೆ ಡಾ. ಸುನಿಧಿ ತನಗೆ ಅರಿಯದಂತೆ ಪ್ರೇಮ ಪ್ರಣಯದ ಸುಳಿಯಲ್ಲಿ ಸಿಲುಕಿ, ನಂತರ ತಾನು ಮೋಸ ಹೋಗಿದ್ದೇನೆ ಎಂದು ಕಂಡುಕೊಂಡಳು. ಆತ್ಮಹತ್ಯೆಯೊಂದೇ ದಾರಿ ಎಂದು ಹತಾಶಳಾಗಿದ್ದ ಸುನಿಧಿಗೆ, ಅವಳ ಗೆಳತಿ ನೀಡಿದ ಮಾರ್ಗದರ್ಶನ ಎಂಥದ್ದು......?
ಡಾ. ಸುನಿಧಿ ಧಿಗ್ಗನೆದ್ದು ಕುಳಿತಳು. ಮೈ ನಡುಗುತ್ತಿತ್ತು. ಬೆವರಿನಿಂದ ದೇಹ ಒದ್ದೆಯಾಗಿ ತೊಪತೊಪ ಎನ್ನುತ್ತಿತ್ತು. ತೊಟ್ಟಿದ್ದ ನೈಟ್ ಡ್ರೆಸ್ ಒದ್ದೆಮುದ್ದೆಯಾಗಿತ್ತು. ಮುಖದ ಮೇಲೆ ಇಳಿಯುತ್ತಿದ್ದ ಬೆವರ ಹನಿಗಳನ್ನು ಕೈಗಳಿಂದ ಒರೆಸಿಕೊಳ್ಳುತ್ತಾ, ತಲೆದಿಂಬಿನ ಪಕ್ಕದಲ್ಲಿದ್ದ ಮೊಬೈಲ್ ಕೈಗೆತ್ತಿಕೊಂಡು ಆನ್ ಮಾಡಿದಳು. ರಾತ್ರಿ ಒಂದು ಗಂಟೆಯಾಗಿತ್ತು. ಪಕ್ಕದ ಟೀಪಾಯ್ ಮೇಲಿದ್ದ ನೀರಿನ ಬಾಟಲ್ ನ್ನು ಎತ್ತಿಕೊಂಡು ಗಟಗಟನೇ ಒಂದಿಷ್ಟು ನೀರು ಕುಡಿದಳು.
ಏರಿಳಿಯುತ್ತಿದ್ದ ಎದೆಯ ತಿದಿಯನ್ನು ಶಮನ ಮಾಡಿಕೊಳ್ಳಲು ಪ್ರಯತ್ನಿಸಿದಳು. ಎಡಗೈಯಿಂದ ಹೃದಯದ ಭಾಗವನ್ನು ಒತ್ತಿಕೊಂಡು ಕುಳಿತಳು. ಹೃದಯದ ಬಡಿತ ಅವಳಿಗೆ ಸ್ಪಷ್ಟವಾಗಿ ಕೇಳಿಸುವಷ್ಟು ಜೋರಾಗಿತ್ತು. `ಅಬ್ಬಾ....! ಎಂತಹ ಭಯಾನಕ ಕನಸು!' ಎಂದು ಉದ್ಗರಿಸಿ ತುಸು ಹೊತ್ತು ಕಣ್ಮುಚ್ಚಿಕೊಂಡು ಹಾಗೇ ಸುಮ್ಮನೆ ಕುಳಿತಳು. ವಿಪರೀತ ಚಡಪಡಿಕೆ, ತಳಮಳ ಮನದಲ್ಲಿ ಲಗಾಮು ಇಲ್ಲದ ಮನಸ್ಸೆಂಬ ಕುದುರೆ ಎತ್ತೆತ್ತೋ ಜಿಗಿದಾಡತೊಡಗಿತ್ತು.
ಕನಸಿನ ಚಿತ್ರಣವನ್ನು ಕಣ್ಣಗೊಂಬೆಯ ಮುಂದೆ ತಂದು ನಿಲ್ಲಿಸಲು ಪ್ರಯತ್ನಿಸಿದಳು. `ಉಹ್ಞೂಂ.....!' ಚಿತ್ರ ಮೂಡುತ್ತಲೇ ಇಲ್ಲ. ಮೂಡಿದ್ದರಲ್ಲಿ ಸ್ಪಷ್ಟತೆ ಇಲ್ಲ. ಎಲ್ಲ ಗೋಜಲು ಗೋಜಲು..... ಮೆಲ್ಲಗೆ ಮಂಚದಿಂದ ಇಳಿದು ಕಿಟಕಿಯ ಪರದೆ ಸರಿಸಿ ಹೊರಗಡೆ ದೃಷ್ಟಿ ಹರಿಸಿದರು. ರಸ್ತೆ ಬದಿಯ ವಿದ್ಯುದ್ದೀಪಗಳು ಬೆಳಕನ್ನು ಚೆಲ್ಲತೊಡಗಿದ್ದವು. ಕೆಲವರಿಗೆ ಆಗಲೂ ರಾತ್ರಿಯೇ ಆಗಿಲ್ಲವೇನೋ ಎಂಬಂತೆ ಆಗೊಂದು, ಈಗೊಂದು ವಾಹನದ ಓಡಾಟ ನಡೆದೇ ಇತ್ತು.
ಸುನಿಧಿ ಮತ್ತೆ ಮಂಚದ ಮೇಲೆ ಬಂದು ಕುಳಿತಳು. ಎದೆಯ ತಿದಿ ಒಂದಿಷ್ಟು ಇಳಿಮುಖವಾಗಿತ್ತು. ಶಾಂತಚಿತ್ತದಿಂದ ಕುಳಿತು ಕನಸಿನಲ್ಲಿ ನಡೆದಿದ್ದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದಳು. ಕನಸಿನ ಚಿತ್ರಣ ಮನದ ಮುಂದೆ ಮೂಡತೊಡಗಿತು.
ನಾನು ನನ್ನ ಲವರ್ ಬಾಯ್ ಡಾ. ಉದಯ್ ಜೊತೆಗೆ ಔಟಿಂಗ್ ಗೆ ಹೋಗಿದ್ದೆ. ಒಂದಿಷ್ಟು ನಿಸರ್ಗ ರಮಣೀಯ ದೃಶ್ಯಗಳು, ಜಲಪಾತಗಳ ವೀಕ್ಷಣೆ ನಮ್ಮ ಪ್ರವಾಸದಲ್ಲಿತ್ತು. ಅವನ ಕಾರಿನಲ್ಲಿ ನಾವಿಬ್ಬರೇ. ಮಧುಚಂದ್ರದ ಸವಿ ಸವಿಯಲು ಹೊರಟ ಜೋಡಿಯಂತೆ ಸ್ವಚ್ಛಂದವಾಗಿ ಸುತ್ತತೊಡಗಿದ್ದೆ. ಹೀಗೇ ಅಂದು ಶಿರಸಿಯ ಅಧಿದೇವತೆ ಮಾರಿಕಾಂಬೆಯ ದರ್ಶನ ಪಡೆದು ಸುತ್ತಮುತ್ತಲಿನ ಶಿವಗಂಗಾ ಜಲಪಾತ, ಉಂಚಳ್ಳಿ ಜಲಪಾತ, ಯಲ್ಲಾಪುರದ ಮಾಗೋಡು ಜಲಪಾತಗಳನ್ನು ನೋಡಿಕೊಂಡು, ಜೋಗ ಜಲಪಾತ ತಲುಪುವಷ್ಟರಲ್ಲಿ ಕತ್ತಲೆ ಆವರಿಸತೊಡಗಿತ್ತು. ಒಂದು ಒಳ್ಳೆ ಹೋಟೆಲ್ ನಲ್ಲಿ ತಂಗಿದೆ. ಇಡೀ ರಾತ್ರಿ ನಾನು ಅವನೆದೆಯಲ್ಲಿ, ಅವನು ನನ್ನೆದೆಯಲ್ಲಿ ಪವಡಿಸಿದ್ದೆ. ಮರುದಿನ ಬೆಳಗ್ಗೆ ಬೆಳಗಿನ ಉಪಾಹಾರದ ನಂತರ ಜಲಪಾತದ ವೀಕ್ಷಣೆಯ ಕಾರ್ಯಕ್ರಮ ಹಾಕಿಕೊಂಡಿದ್ದೆ.
ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಅಂತಹ ಕುಂಭಕರ್ಣ ನಿದ್ದೆ. ಅಲ್ಲಿ ಇಲ್ಲಿ ತಿರುಗಾಡಿ ದೇಹ ದಣಿದಿತ್ತಲ್ಲವೇ....? ಮೇಲಾಗಿ ರಾತ್ರಿಯ ಸರಸ ಸಲ್ಲಾಪದ ಮಧುರಾತಿ ಮಧುರ ಅನುಭವ ಗಾಢ ನಿದ್ರೆಗೆ ಅನುವು ಮಾಡಿಕೊಟ್ಟಿತ್ತು.





