–  ರಾಘವೇಂದ್ರ ಅಡಿಗ ಎಚ್ಚೆನ್.

ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. 95 ವರ್ಷದ ನಟಿ ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಬುಧವಾರ ರಾತ್ರಿ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದಲ್ಲಿ ಜನಿಸಿದ ಸಾಹುಕಾರ್ ಜಾನಕಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದರು. 1950ರಲ್ಲಿ ಬಿಡುಗಡೆಯಾದ ‘ಸಾಹುಕಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು, ಮೊದಲ ಸಿನಿಮಾದ ಯಶಸ್ಸಿನಿಂದಲೇ ‘ಸಾಹುಕಾರ್ ಜಾನಕಿ’ ಎಂದೇ ಪ್ರಸಿದ್ಧರಾದರು.

1952ರಲ್ಲಿ ‘ವಲಯಪತಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಅವರು, ‘ಪನಮ್ ಪಡುತುಂ ಪಾಡು’, ‘ಪುತಿಯ ಪರವೈ’, ‘ನೀರ್ಕುಮಿಝಿ’, ‘ಮಹಾಕವಿ ಕಾಳಿದಾಸ್’, ‘ಅತಿರಹ್ ನೀಚಲ್’, ‘ಇರು ಕೋಡುಗಲ್’, ‘ಉಯರ್ನ್ದ ಮನಿಥನ್’, ‘ದಿಲ್ಲು ಮುಲ್ಲು’ ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಬಿಸ್ಕೋತ್’ ಅವರ ಕೊನೆಯ ತಮಿಳು ಸಿನಿಮಾವಾಗಿತ್ತು.

ಕನ್ನಡ ಚಿತ್ರರಂಗದಲ್ಲೂ ಸಾಹುಕಾರ್ ಜಾನಕಿ ಅವರಿಗೆ ವಿಶೇಷ ಸ್ಥಾನವಿತ್ತು. ‘ಮಹಿಷಾಸುರ ಮರ್ದಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅವರು, ‘ಸಾಕುಮಗಳು’, ‘ಕನ್ಯಾರತ್ನ’, ‘ಗೌರಿ’, ‘ರತ್ನಗಿರಿ ರಹಸ್ಯ’, ‘ನವಕೋಟಿ ನಾರಾಯಣ’, ‘ನಿರಪರಾಧಿ’, ‘ಮನಸಾಕ್ಷಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಡಾ. ರಾಜ್‌ಕುಮಾರ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ಸಾಹುಕಾರ್ ಜಾನಕಿ, ‘ಶಬ್ದವೇಧಿ’ ಚಿತ್ರದಲ್ಲಿ ತಾಯಿಯ ಪಾತ್ರದಲ್ಲೂ ಗಮನ ಸೆಳೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ‘ಅಭಿ’ ಸಿನಿಮಾದಲ್ಲಿ ರಮ್ಯಾ ಅವರ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸುದೀರ್ಘ ಕಲಾ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2022ರಲ್ಲಿ ಸಾಹುಕಾರ್ ಜಾನಕಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನದಿಂದ ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ