–  ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್‌ವುಡ್‌ನ (Sandalwood) ಹ್ಯಾಟ್ರಿಕ್ ಹೀರೋ, ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್‌ಕುಮಾರ್ (Shivarajkumar) ತಮ್ಮ ಅಭಿನಯದ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ (Pan India Film) ಚಿತ್ರಕ್ಕೆ ಚಾಲನೆ ನೀಡುವ ಮೂಲಕ ಚಿತ್ರಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.

ಶ್ರೀ ಮಹಾವಿಷ್ಣುವಿನ ಪ್ರಸಿದ್ದ ಎರಡನೇ ಅವತಾರವಾದ ‘ಕೂರ್ಮಾವತಾರ’ದ ಪೌರಾಣಿಕ ಕಥಾಹಂದರವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಈ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್ ಸಿನಿಮಾಗೆ ‘ಕೂರ್ಮಾವತಾರ್’ ಎಂದು ಶೀರ್ಷಿಕೆ ನೀಡಲಾಗಿದ್ದು, ಚಿತ್ರತಂಡ ಇತ್ತೀಚೆಗಷ್ಟೇ ಅತ್ಯಂತ ರೋಮಾಂಚನಕಾರಿ ಟೈಟಲ್ ರಿವೀಲ್ ಟೀಸರ್ ಹಂಚಿಕೊಂಡಿದೆ.

ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ವಿಷ್ಣುವಿನ ಕೂರ್ಮಾವತಾರದ ಹಿನ್ನೆಲೆಯನ್ನು ಕೇಂದ್ರವಾಗಿರಿಸಿಕೊಂಡು ಕಥೆಯನ್ನು ಹೆಣೆಯಲಾಗುತ್ತಿರುವುದು ಈ ಚಿತ್ರದ ವಿಶೇಷತೆಯಾಗಿದೆ. ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎದ್ದಿದ್ದು, ಶಿವಣ್ಣ ಅವರ ಪಾತ್ರದ ವೈವಿಧ್ಯತೆ ಹಾಗೂ ಹೊಸ ಲುಕ್ ನೋಡಲು ಅಭಿಮಾನಿಗಳು ಅತ್ಯಂತ ಉತ್ಸುಕರಾಗಿದ್ದಾರೆ.

ದೈತ್ಯ ತಾರಾಗಣ ಮತ್ತು ಮೆಗಾ ಮೇಕಿಂಗ್

ಈ ವೈವಿಧ್ಯಮಯ ಸಿನಿಮಾವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ‘ಪಂಚವಕ್ತ್ರ ಪಿಕ್ಚರ್ಸ್’ ಹಾಗೂ ‘ರುಕ್ವಿನಾ ಸ್ಟುಡಿಯೋಸ್’ ಜಂಟಿ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಪೂಜಿತ ಕಡಿಯಾಲ ಮತ್ತು ನರೇಂದ್ರ ಕೊಂಡ ಅವರು ನೂರಾರು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಬಹುಭಾಷಾ ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಜೊತೆಗೆ ತೆಲುಗಿನ ಜನಪ್ರಿಯ ನಟ ರಾಜ್ ತರುಣ್, ಹಿರಿಯ ನಟರಾದ ಶಿವಾಜಿ, ಸಾಯಿಕುಮಾರ್, ವರಲಕ್ಷ್ಮಿ ಶರತ್‌ಕುಮಾರ್, ರಾಜಾ ರವೀಂದ್ರ, ವಿಟಿವಿ ಗಣೇಶ್, ಸಪ್ತಗಿರಿ, ಗೆಟಪ್ ಶ್ರೀನು, ಶತ್ರು, ಮಹೇಶ್ ವಿಟ್ಟ ಹಾಗೂ ಅತಿರಾ ರಾಜ್ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಉನ್ನತ ತಾಂತ್ರಿಕ ತಂಡದ ಜುಗಲ್‌ಬಂದಿ

‘ಕೂರ್ಮಾವತಾರ್’ ಚಿತ್ರವು ತಾಂತ್ರಿಕವಾಗಿಯೂ ಅತ್ಯಂತ ಉನ್ನತ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿದ್ದು, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜಗದೀಶ್ ಚೀಕಾಟಿ ಅವರ ಛಾಯಾಗ್ರಹಣ, ಮಾರ್ತಾಂಡ್ ಕೆ. ವೆಂಕಟೇಶ್ ಅವರ ಚುರುಕಿನ ಸಂಕಲನ ಮತ್ತು ರಾಘವ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಜೊತೆಗೆ ಲೇಖಕ್ ರಾಮ್ ಅವರು ಹೆಚ್ಚುವರಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹೈ-ಎಂಡ್ ವಿಎಫ್‌ಎಕ್ಸ್ (VFX) ತಂತ್ರಜ್ಞಾನದ ದೃಶ್ಯ ವೈಭವದೊಂದಿಗೆ ರೂಪುಗೊಳ್ಳುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ