ನೇಣುಗಂಬದ ಮುಂದೆ ನಿಂತು ನಕ್ಕಿದ್ದ 25 ವರ್ಷದ ಅಗ್ನಿಪುರುಷನ ಅತಿ ವಿಚಿತ್ರ ಅಂತ್ಯದ ವೀರಗಾಥೆ!
“ವಕೀಲನೂ ಬೇಡ.. ಕ್ಷಮೆಯೂ ಬೇಡ.. ಅಸಲಿಗೆ ಈ ಕೋರ್ಟಿಗೆ ನನ್ನ ತೀರ್ಪು ಕೊಡುವ ಹಕ್ಕೇ ಇಲ್ಲ”
ಸಿಂಹದಂತೆ ಕಟಕಟೆಯಲ್ಲೇ ನಿಂತು ಗರ್ಜಿಸಿದ್ದ ಆ ಕ್ರಾಂತಿಕಾರಿ!
ಆಗಸ್ಟ್ 17, 1909.
ಲಂಡನ್ನ ಪೆಂಟನ್ವಿಲ್ಲೆ ಜೈಲು.
ಬೆಳಗ್ಗೆ 9 ಗಂಟೆ.
ಜೈಲಿನ ಹೊರಗೆ ಭಾರತೀಯ ವಿದ್ಯಾರ್ಥಿಗಳ ಗುಂಪು ನಿಂತಿದೆ..
ಒಳಗೆ, 25 ವರ್ಷದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣುಗಂಬದ ಕಡೆ ನಡೆದು ಹೋಗ್ತಿದ್ದಾನೆ.
ಕೈಯಲ್ಲಿ ಭಗವದ್ಗೀತೆ..
ಬಾಯಲ್ಲಿ ರಾಮ-ಕೃಷ್ಣ ನಾಮ..
ಮುಖದಲ್ಲಿ ಏನನ್ನೋ ಗೆದ್ದ ಮಂದಹಾಸ.
ಆ ಹುಡುಗನ ಹೆಸರು ಮದನ್ ಲಾಲ್ ಧಿಂಗ್ರಾ!!
ಧಿಂಗ್ರಾ ಬಡವನಲ್ಲ..
ಕಷ್ಟದಲ್ಲಿ ಬೆಳೆದ ಹುಡುಗನಲ್ಲವೇ ಅಲ್ಲ..
ಅವನದು ಪಂಜಾಬ್ನ ಸ್ಥಿತಿವಂತ ಕುಟುಂಬ.
ತಂದೆ ಬ್ರಿಟಿಷ್ ಸರ್ಕಾರದ ನಿಷ್ಠಾವಂತ ಬೆಂಬಲಿಗ.
ಕುಟುಂಬದ ನಿರೀಕ್ಷೆ, ಮಗ ಇಂಗ್ಲೆಂಡ್ನಲ್ಲಿ ಓದಲಿ..
ದೊಡ್ಡ ಹುದ್ದೆ ಪಡೆದು ಸುಖವಾಗಿರಲಿ ಅನ್ನೋದು..
ಅವನೂ ಹಾಗೆಯೇ ಇದ್ದ.. ಷೋಕಿವಾಲಾ!
ಆದ್ರೆ ಲಂಡನ್ನ ಇಂಡಿಯಾ ಹೌಸ್ಗೆ ಆತ ಕಾಲಿಟ್ಟ ಕ್ಷಣವೇ ಎಲ್ಲವೂ ಬದಲಾಯ್ತು..
ಸಾವರ್ಕರ್ ಅವರ ಸಂಪರ್ಕ ದೊರೆಯಿತು..
ಭಾರತದಲ್ಲಿ ನಡೀತಿರೋ ಶೋಷಣೆ, ಅವಮಾನ, ಬಡತನ — ಒಟ್ಟಾಗಿ ಅವನೊಳಗೆ ಬೆಂಕಿ ಹೊತ್ತಿಸಿತ್ತು..
ನಿರ್ಧರಿಸಿದ…
ಬ್ರಿಟೀಷರ ಡಿಗ್ರಿ ಬೇಡ..
ಅವರ ಸರ್ಕಾರಿ ಹುದ್ದೆಯೂ ಬೇಡ..
ಆದರೆ ಒಂದು ಕೆಲಸ ಮಾಡ್ಬೇಕು..
ಏನದು?

ಜುಲೈ 1, 1909
ಲಂಡನ್ನ ಸಾರ್ವಜನಿಕ ಕಾರ್ಯಕ್ರಮ.
ಭಾರತೀಯ ಕ್ರಾಂತಿಕಾರಿಗಳಿಗೆ ಕ್ರೂರ ಶಿಕ್ಷೆ ಕೊಡಿಸಿದ್ದ ಸರ್ ವಿಲಿಯಂ ಕರ್ಜನ್ ವೈಲಿ ಅಲ್ಲಿದ್ದ.
ಧಿಂಗ್ರಾ ಅಲ್ಲಿಗೆ ಬಂದ.. ಗುಂಡು ಹಾರಿಸಿದ..
ವೈಲಿ ಸತ್ತುಬಿದ್ದಿದ್ದ..
ಕೊಂದವನು ಮಾತ್ರ ಓಡಲಿಲ್ಲ..
ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ..
ನಿಂತಲ್ಲೇ ನಿಂತಿದ್ದ..
ಬ್ರಿಟಿಷ್ ಪೊಲೀಸರು ಬಂಧಿಸಿದ್ರು.
ಕೋರ್ಟಿನಲ್ಲಿ ವಿಚಾರಣೆ ಶುರುವಾಯ್ತು.
ಜಡ್ಜ್ ಕೇಳಿದ ‘ನಿನ್ನ ಪರ ವಕೀಲ ಯಾರು? ’
ಧಿಂಗ್ರಾ ಉತ್ತರ ಕೊಟ್ಟ
“ವಕೀಲ..? ನನಗೆ ಬೇಕಿಲ್ಲ.”
“ಯಾಕೆ?”
“ಈ ಕೋರ್ಟ್ಗೆ ನನ್ನ ವಿಚಾರ ತೀರ್ಪು ಕೊಡುವ ಹಕ್ಕೇ ಇಲ್ಲ. ನಮ್ಮ ನೆಲದಲ್ಲಿ ನಿಮ್ಮ ಕಾನೂನು ಕಳ್ಳ ಆಳ್ವಿಕೆ ಮಾತ್ರ.”
ಕಡೆಗೆ ಅದೇ ಕೋರ್ಟ್ ಮರಣ ದಂಡನೆ ವಿಧಿಸಿತ್ತು..
ಆ ಸಾವಿನ ತೀರ್ಪು ಕೇಳಿಯೂ ನಗುತ್ತಲೇ ಕೋರ್ಟಿನಿಂದ ಹೊರನಡೆದಿದ್ದ ಧಿಂಗ್ರಾ..
ಇದು ಬ್ರಿಟಿಷ್ ನ್ಯಾಯಾಲಯ ನೋಡಿದ ಅತ್ಯಂತ ಅಸಾಮಾನ್ಯ ದೃಶ್ಯ!
ಕೊನೆಗೂ ಆ ದಿನ ಬಂತು..
ಅವನ ಮರಣದಂಡನೆ ಸಾಮಾನ್ಯ ಮರಣದಂಡನೆಯಾಗಿರಲಿಲ್ಲ..
ಅದರ ಹಿಂದೆ ಲೆಕ್ಕಾಚಾರದ ಹೆಸರಲ್ಲಿ ಹೆಣೆಯಲಾದ ಘೋರ ಸಂಚು ಅಡಗಿತ್ತು.
ಬ್ರಿಟಿಷರು ಮರಣದಂಡನೆ ನೀಡಲು “ಲಾಂಗ್ ಡ್ರಾಪ್” ಅನ್ನೋ ಸೂತ್ರ ಬಳಸುತ್ತಿದ್ದರು..
ಅದೇನು ಅಂದರೆ..
ಕೊರಳಿಗೆ ಹಗ್ಗ ಕಟ್ಟಿ ಸುಮ್ಮನೆ ತೂಗಾಡಿಸಿ ಕೊಲ್ಲುವುದರ ಬದಲಿಗೆ,
ವ್ಯಕ್ತಿಯ ಎತ್ತರ ಮತ್ತು ತೂಕವನ್ನು ಲೆಕ್ಕ ಹಾಕಿ,
ಕ್ಷಣಾರ್ಧದಲ್ಲಿ ಆತನ ಬೆನ್ನುಮೂಳೆ ಮುರಿಯುವಂತೆ ಮರದ ಹಲಗೆಯನ್ನು ಕೆಳಗೆ ಬೀಳಿಸುವ ತಂತ್ರಜ್ಞಾನ!!
ಹಗ್ಗದ ಲೆಕ್ಕಾಚಾರದಲ್ಲಿ ಕೆಲವು ಇಂಚು ಕಡಿಮೆಯಾದರೂ ಸಾಕು,
ಆ ವ್ಯಕ್ತಿ ಉಸಿರುಗಟ್ಟಿ ನರಳಿ ನರಳಿ ಸಾಯಬೇಕಾಗುತ್ತದೆ!
ಅದೇ ಹಗ್ಗ ಸ್ವಲ್ಪ ಉದ್ದವಾದರೆ, ಬಿದ್ದ ರಭಸಕ್ಕೆ ಕುತ್ತಿಗೆಯೇ ಶರೀರದಿಂದ ಬೇರ್ಪಟ್ಟು ಚೆಲ್ಲಾಪಿಲ್ಲಿಯಾಗುತ್ತದೆ!!
ಅಂದು ಆ 25 ವರ್ಷದ ಯುವಕನಿಗೆ ಬ್ರಿಟಿಷ್ ಎಕ್ಸಿಕ್ಯೂಷನರ್, ಹುಡುಗನ ದೈಹಿಕ ಎತ್ತರ ಮತ್ತು ತೂಕಕ್ಕೆ ಸರಿಯಾಗಿ ಅತಿಯಾದ, ಅಸಹಜವಾದ, ಕೌರ್ಯ ಪ್ರಹಾರ ಮಾಡಲು ಸಜ್ಜಾಗಿದ್ದ.
ಅದು ಶಿಕ್ಷೆಯಲ್ಲ..
ಭಾರತೀಯ ಕ್ರಾಂತಿಕಾರಿಯೊಬ್ಬನ ದೇಹವನ್ನು ತುಂಡರಿಸಿ, ಆತನ, ಆತನ ಕತೆ ಕೇಳಿದವರ ಆತ್ಮಬಲವನ್ನೇ ಅಳಿಸಿಹಾಕುವ ಬ್ರಿಟಿಷರ ವಿಕೃತ ಮನಸ್ಥಿತಿ!!
ಗಲ್ಲಿಗೇರೋ ಮೊದಲು ಧಿಂಗ್ರಾ ಒಂದು ಲಿಖಿತ ಹೇಳಿಕೆ ಬರೆದ..
ಅದರ ಶೀರ್ಷಿಕೆ “Challenge”.
ಅದರಲ್ಲಿ ಅವನು ಬರೆದ..
“ಒಂದು ದೇಶ ದಾಸ್ಯದಲ್ಲಿರುವಾಗ, ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪ್ರತಿಯೊಬ್ಬ ದೇಶಭಕ್ತನೂ, ಆ ದೇಶದ ಧರ್ಮ ಮಾಡ್ತಿದ್ದಾನೆ.
ನಾನು ಮತ್ತೆ ಭಾರತ ಮಾತೆಯ ಸೇವೆ ಮಾಡಲಿಕ್ಕಾಗಿಯೇ ಹುಟ್ಟಿ ಬರಲು ಕಾಯುತ್ತಿರುತ್ತೇನೆ.
ವಂದೇ ಮಾತರಂ!”
ಈ ಹೇಳಿಕೆಯ ಬಗ್ಗೆ ಮುಂದೊಂದು ದಿನ ವಿನ್ಸ್ಟನ್ ಚರ್ಚಿಲ್ ಹೇಳಿದ್ದ..
“ಇದು ನಾನು ಓದಿದ ಅತ್ಯಂತ ಅದ್ಭುತ ದೇಶಭಕ್ತಿಯ ಬರಹ.”
ಭಾರತದ ವಿರುದ್ಧವೇ ಬದುಕಿದ್ದ ಆ ಶತ್ರು, ಭಾರತೀಸುತನನ್ನು ಮೆಚ್ಚಿಕೊಂಡ..
ಇದಕ್ಕಿಂತ ದೊಡ್ಡ ಮನ್ನಣೆ ಬೇಕಾ?
ಅಂತೂ ಬ್ರಿಟಿಷ್ ಸರ್ಕಾರ ಗೆದ್ದಿತ್ತು..
ಧಿಂಗ್ರಾನನ್ನ ಕೊಂದಿತ್ತು..
ಆದ್ರೆ ಅಷ್ಟು ಮಾಡಿದ್ದೂ ಅವರಿಗೆ ಸಾಲಲಿಲ್ಲ.
ಬ್ರಿಟಿಷರ ಕ್ರೌರ್ಯ ಶುರುವಾಗಿದ್ದೇ ಆತನ ಪ್ರಾಣ ಪಕ್ಷಿ ಹಾರಿದ ಮೇಲೆ..
ಧಿಂಗ್ರಾ ತನ್ನ ಕೊನೆಯ ಆಸೆ ಏನಂತ ಸ್ಪಷ್ಟವಾಗಿ ವಿನಂತಿಸಿದ್ದ,
“ನನ್ನ ದೇಹವನ್ನ ಸಾಂಪ್ರದಾಯಿಕ ಹಿಂದೂ ಸಂಸ್ಕಾರದಂತೆಯೇ ದಹನ ಮಾಡಬೇಕು. ಯಾವುದೇ ಹಿಂದೂಯೇತರರು ನನ್ನ ಶರೀರವನ್ನು ಮುಟ್ಟಬಾರದು.”
ಆದರೆ, ಆ ಬ್ರಿಟಿಷ್ ಸರಕಾರ ಆ ವಿನಂತಿಯನ್ನ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿತು.
ಧಿಂಗ್ರಾನ ಆತ್ಮೀಯ ಒಡನಾಡಿ, ಗುರು, ವಿನಾಯಕ್ ದಾಮೋದರ್ ಸಾವರ್ಕರ್, ಅಂತಿಮ ಸಂಸ್ಕಾರಕ್ಕಾಗಿ ಆತನ ಮೃತದೇಹವನ್ನು ತಮಗೆ ಹಸ್ತಾಂತರಿಸುವಂತೆ ಕೇಳಿಕೊಂಡರು..
ಆಂಗ್ಲರು ಆ ಮನವಿಯನ್ನೂ ಕಸದ ಬುಟ್ಟಿಗೆ ಎಸೆದರು.
ಯಾಕೆ?
ಅವರ ನಿಜವಾದ ಭಯವೇ ಬೇರೆ!!
ಧಿಂಗ್ರಾನ ಸಮಾಧಿ ಭಾರತೀಯ ಸ್ವತಂತ್ರ ಹೋರಾಟಗಾರರಿಗೆ ಪುಣ್ಯಕ್ಷೇತ್ರವಾಗಿ ಬದಲಾಗಿಬಿಟ್ಟರೆ?
ಅವನ ಹೆಸರು ಹೇಳಿಕೊಂಡು, ಅವನಂತವರೇ ಹುಟ್ಟಿಬಿಟ್ಟರೇ!!
ಬ್ರಿಟೀಷರು ನಡುಗಿದರು!!
ಆ ಭಯದಿಂದಲೇ, ಪೆಂಟನ್ವಿಲ್ ಜೈಲಿನ ಅಂಗಳದ ಕತ್ತಲೆಯಲ್ಲೇ ಆತನ ಮೃತದೇಹವನ್ನ ಅಜ್ಞಾತ ಸ್ಥಳದಲ್ಲಿ ಹೂತುಹಾಕಿದರು..
ಅಷ್ಟೇ ಅಲ್ಲ, ಆ ದೇಹದ ಗುರುತು ಕಳೆದುಹೋಗಲಿ ಅಂತ,
ರಹಸ್ಯ ಗುಂಡಿಯೊಳಗೆ ಹೂತು ಹಾಕಿ, ನೆಪಮಾತ್ರಕ್ಕೆ
ಹೆಸರಿಲ್ಲದ ಕಲ್ಲನ್ನಿಟ್ಟರು!
ಒಬ್ಬ ಧೀರನ ಭೌತಿಕ ಅಸ್ತಿತ್ವವನ್ನೇ ಭೂಮಿಯ ಆಳದಲ್ಲಿ ಹೂತುಹಾಕುವ ಕುತಂತ್ರ!!
ಛೀ.. ಥೂ..
ಇನ್ನೊಂದೆಡೆ, ಧಿಂಗ್ರಾನ ಸ್ವಂತ ಕುಟುಂಬವೂ ಆತನನ್ನ ಬಹಿಷ್ಕರಿಸಿತ್ತು..
ಆತನ ತಂದೆ ಬ್ರಿಟಿಷರ ಮೇಲಿದ್ದ ನಿಷ್ಠೆಯಿಂದಾಗಿ ತನ್ನ ಮಗನನ್ನೇ ಹೊರಹಾಕಿದ್ದರು..
ಹೆತ್ತವರಿಂದ ಬಹಿಷ್ಕಾರ..
ವೈರಿಯಿಂದ ವಂಚನೆ..
ಗುರುತಿಲ್ಲದ ಆ ಸಮಾಧಿಯೊಳಗೆ ಕರಗುತ್ತಿದ್ದ ದೇಹ!!
ಒಬ್ಬ ಧೀರ ಹೋರಾಟಗಾರನಿಗೆ ಸಿಕ್ಕ ಈ ಅವಮಾನ ಕಣ್ಣೀರು ತರಿಸದಿದ್ದರೆ..
ನಿಮ್ಮ ಅಂತಃಕರಣ ಕಲುಕದಿದ್ದರೆ…
ಛೇ, ನೀವು ಇತಿಹಾಸ ಓದಲೇಬಾರದು.!
ಎಲ್ಲದಕ್ಕೂ ಉತ್ತರ ಕೊಡುವುದೇ ಕಾಲದ ಸ್ವಭಾವ..!
ಬರೋಬ್ಬರಿ 67 ವರ್ಷಗಳ ನಂತರ
“ಧಿಂಗ್ರಾ ಏನಾದ?”
ಅನ್ನೋ ಪ್ರಶ್ನೆಗೆ ಕಾಲ ಉತ್ತರ ಕೊಟ್ಟಿತ್ತು..
ಆ ವೀರನ ಮೃತದೇಹ ಅದೇ ಕತ್ತಲ ಕೋಣೆಯ ಮಣ್ಣಿನಲ್ಲಿ ಹೂತುಹೋಗಿತ್ತು..
ಆದರೆ…
13 ಡಿಸಂಬರ್ 1976 ರಲ್ಲಿ, ಹುತಾತ್ಮ ಉಧಮ್ ಸಿಂಗ್ ಅವರ ಅಸ್ಥಿಪಂಜರವನ್ನು ಹುಡುಕುವಾಗ ಆಕಸ್ಮಿಕವಾಗಿ ಧಿಂಗ್ರಾನ ಶವಪೆಟ್ಟಿಗೆಯೂ ಸಿಕ್ಕಿತು!
ಆ ನಂತರವೇ ಆತನ ಭೌತಿಕ ಅವಶೇಷಗಳನ್ನ ಗೌರವಪೂರ್ವಕವಾಗಿ ಭಾರತಕ್ಕೆ ತರಲಾಯಿತು..
ಲಂಡನ್ನಲ್ಲಿ ನಿಂತು, ಬ್ರಿಟಿಷರ ರಾಜಧಾನಿಯ ನಡುವೆ, ಮದನ್ ಲಾಲ್ ಧಿಂಗ್ರಾ ಒಂದು ಸಂದೇಶ ನೀಡಿದ..
“ನಿಮ್ಮ ನ್ಯಾಯಾಲಯ, ನಿಮ್ಮ ಜೈಲು, ನಿಮ್ಮ ನೇಣುಗಂಬ — ಇವ್ಯಾವುದೂ ನಮ್ಮ ಸ್ವಾಭಿಮಾನ ಕೊಲ್ಲಲಾರವು.”
ಅಂದ ಹಾಗೆ, ಧಿಂಗ್ರಾನಂಥಾ ಹುಡುಗನನ್ನ ರೂಪಿಸಿದ ಇಂಡಿಯಾ ಹೌಸ್ ಹೇಗಿತ್ತು?
ಅಲ್ಲೇನಾಗ್ತಾ ಇತ್ತು?
ಅದು ಸರಿ..
ಈ ಉಧಮ್ ಸಿಂಗ್ ಯಾರು?
ಮಾತಾಡೋಣ.. ಮುಂದೊಂದು ದಿನ..





