ಮಿನಿ ಕಥೆ ವಾಣಿ

ಗಂಡನೆಂಬ ಬೇಜವಾಬ್ದಾರಿ ಪ್ರಾಣಿಯೊಂದಿಗೆ ಹೆಣಗಿ ಹೆಣಗಿ ಬೇಸತ್ತ ಆದ್ಯಾ ಕೊನೆಗೆ ಕೈಗೊಂಡ ನಿರ್ಧಾರವೇನು…..?

“ಹೊರಗಡೆ ಕೆಲಸ ಮಾಡಿ ಸಾಕಾಗಿದೆ…. ಮನೆಯಲ್ಲೂ ನಾನೊಬ್ಬಳೇ ಮಾಡಿ ಸಾಯಬೇಕು… ಅದರಲ್ಲೂ ಈ ಅಡುಗೆಮನೆಯಿಂದ ಎಂದು ಮುಕ್ತಿ ಸಿಗುವುದೋ….? ಬೆಳಗ್ಗೆ ಎದ್ದು ಕಾಫಿ ಮಾಡುವುದರಿಂದ ಹಿಡಿದು ರಾತ್ರಿ ಊಟದವರೆಗೂ ನನ್ನೊಬ್ಬಳದ್ದೇ ಕಾರುಬಾರು. ಇನ್ನು ಸಹಿಸಿಕೊಳ್ಳುವ ಸಹನೆ ನನ್ನಲ್ಲಿ ಇಲ್ಲ. ಇಷ್ಟೆಲ್ಲಾ ಮಾಡುವ ನನಗೆ ಅಂತಸ್ತು ಬೇಡ…. ಸ್ವಲ್ಪ ಪ್ರೀತಿ ಕಾಳಜಿ, ನೆಮ್ಮದಿ ಸಿಕ್ಕೀತೇ…..?

“ಬೇಜಾಬ್ದಾರಿ ಅಷ್ಟೇ ಇದ್ದರೆ, ಒಪ್ಪಿಕೊಳ್ಳಬಹುದಿತ್ತು. ಆದರೆ ಧೂಮಪಾನ, ಮಧುಪಾನಕ್ಕೆ ದಾಸನಾಗಿ…. ಅದೂ ನನ್ನ ಸಂಪಾದನೆಯಲ್ಲೇ ಮೋಜು ಮಸ್ತಿ ಮಾಡುವ ಗಂಡನ ಜೊತೆ ಬಾಳು ಹಣೆಬರಹ ನನಗೆ….. ಬೇಡವಾಗಿದೆ ಬೇಸತ್ತು ಹೋಗಿದೆ ಈ ಜೀವನ…..” ಎಂದು ಆದ್ಯಾ ಬಡಬಡಿಸುತ್ತಿದ್ದಳು.

“ಆದ್ಯಾ….. ಏನಿವತ್ತು ನಾಲಿಗೆ ಉದ್ದ ಆಗ್ತಾ ಇದೆ….. ಕೆಲಸಕ್ಕೆ ಹೋಗ್ತೀನಿ ಅನ್ನೋ ಅಹಂಕಾರಾನಾ……? ಇಲ್ಲಾ ದುರಂಹಕಾರಾನಾ…. ಆ ನಿಮ್ಮ ಬಾಸ್‌ ಜೊತೆ ಆಫೀಸ್‌ ನಲ್ಲಿ ಮಾತಾಡೋದು ಸಾಲದು ಅಂತ, ಮನೆಗೆ ಬಂದೂ ಲ್ಯಾಪ್‌ ಟಾಪ್ ಮುಂದೆ ಕುಳಿತು ಗಂಟೆಗಟ್ಟಲೇ ಲಲ್ಲೇ ಹೊಡಿತೀಯಾ….. ಮೈ ಉರಿಯುತ್ತೆ…… ಕಣ್ಣು ಕೆಂಪಾಗುತ್ತೆ…..!” ಅರುಣ್‌ ಕೋಪದಿಂದ ಕಣ್ಣರಳಿಸುತ್ತಾ ಕಿರುಚಿದ.

“ಓಹೋ…. ನಿಮ್ಮ ತಲೆಯೊಳಗೆ ಅನುಮಾನ ಬೇರೆ ಶುರುವಾಗಿದೆ ಅಂದಮೇಲೆ ಈ ಸಂಬಂಧವನ್ನು ಮುಂದುರಿಸುವುದರಲ್ಲಿ ಅರ್ಥವಿಲ್ಲ…..” ಎಂದಳು ಆದ್ಯಾ.

ಅರುಣ್‌ ಆದ್ಯಾಳ ಜುಟ್ಟು ಹಿಡಿದು, “ಅಂದ್ರೆ ನನ್ನನ್ನು ಬಿಡ್ಬೇಕು ಅಂತ ಡಿಸೈಡ್‌ ಮಾಡಿದ್ದೀಯಾ ಅಂತಾಯ್ತು….. ನನಗೆ ಡೈವೋರ್ಸ್‌ ಕೊಟ್ಟು ನನ್ನನ್ನು ಬಿಟ್ಟು ಆ ಮನೆಹಾಳ ನಿಮ್ಮ ಬಾಸ್‌ ಜೊತೆ ಹೋಗಬೇಕು ಅಂತ ಪ್ಲಾನ್‌ ಮಾಡಿದ್ಯಾ….” ಎಂದು ಕೋಪದಿಂದ ಕಿರುಚಿ ಅವಳ ಕಪಾಳಕ್ಕೆ ಜೋರಾಗಿ ಹೊಡೆದ.

ಆದ್ಯಾ ನೋವಾದ ಕೆನ್ನೆಯನ್ನು ಸವರಿಕೊಳ್ಳುತ್ತಾ, ಗಂಡನಿಂದ ಬಹಳ ದೂರ ಸರಿದು, “ಇಷ್ಟು ನೀಚ ಮಟ್ಟಕ್ಕೆ ಯೋಚನೆ ಮಾಡ್ತೀಯಾ ಅಂತ ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಹೌದು, ನಾನು ಮನೆಗೆಲಸ ಆಫೀಸ್‌ ಕೆಲಸದ ಬಗ್ಗೆ ಮಾತನಾಡುತ್ತಿದ್ದೆ. ಅದನ್ನು ಬಿಟ್ಟರೆ ನನಗೂ ನಮ್ಮ ಬಾಸ್‌ ಗೂ ಯಾವುದೇ ಸಂಬಂಧ ಇಲ್ಲ. ನಾನೇನು ಅನ್ನೋದು ನಿನಗೆ ಗೊತ್ತಿಲ್ಲ ಅಂದಮೇಲೆ ನಿನ್ನ ಜೊತೆ ಬದುಕೋಕೆ ನನಗೆ ಇಷ್ಟ ಇಲ್ಲ. ಹಾಗಂತ ಸಾಯ್ತೀನಿ ಅಂದುಕೊಳ್ಳಬೇಡ.

“ಮಕ್ಕಳು ಆಗುವ ಭಾಗ್ಯವನ್ನು ದೇವರು ನನ್ನಿಂದ ಕಸಿದುಕೊಂಡ ಎನ್ನುವ ಕಾರಣಕ್ಕೆ ನಿನಗೆ ಬೇಜಾಬ್ದಾರಿತನ ಬಂದಿದೆ ಅಂತ ನನಗೆ ಗೊತ್ತು. ಮದುವೆಯಾದ ಹೊಸತರಲ್ಲಿ ಗರ್ಭ ಧರಿಸಿದ್ದೆ. ಆದರೆ ನಿನಗೆ ಕೆಲಸ ಇಲ್ಲ ಎನ್ನುವ ಕಾರಣದಿಂದ ಮಗು ಆದ್ರೆ, ತುಂಬಾ ಖರ್ಚಾಗುತ್ತೆ ಅಂತ ಬಲವಂತವಾಗಿ ಅಬಾರ್ಶನ್‌ ಮಾಡಿಸಿದೆ.

“ನಿನ್ನ ಬಲವಂತಕ್ಕೆ ಒಪ್ಪಿ ನನ್ನ ಕರುಳಕುಡಿಯನ್ನು ಕಳೆದುಕೊಂಡೆ. ಆ ಮಗುವನ್ನು ಸಾಯಿಸಿದ ಪಾಪಿ ಏನೋ….. ದೇವರು ನನಗೆ ಸರಿಯಾದ ಶಿಕ್ಷೆ ಕೊಟ್ಟ. ಮುಂದೆ ಮಕ್ಕಳಾಗುವ ಭಾಗ್ಯವನ್ನೇ ಕಿತ್ತುಕೊಂಡ. ಇಷ್ಟೆಲ್ಲಾ ನೋವಿದ್ದರೂ, ನೀನು ಇಂದಲ್ಲ ನಾಳೆ ಬದಲಾಗುವೆ ಎನ್ನುವ ನಿರೀಕ್ಷೆಯಲ್ಲಿ ಎಲ್ಲವನ್ನೂ ಸಹಿಸಿಕೊಂಡಿದ್ದೆ.

“ಆದರೆ ನಿನ್ನಲ್ಲಿ ಬದಲಾಗುವ ಯಾವ ಲಕ್ಷಣ ಇಲ್ಲ. ನಿನ್ನ ಬೇಜವಾಬ್ದಾರಿತನದಿಂದ ನಾನು ಹೊರಗಡೆ ಒಳಗಡೆ ಎರಡೂ ಕಡೆ ದುಡಿಯುವಂತೆ ಮಾಡಿದೆ. ಇಂದು  ನನ್ನನ್ನು ನಾನು ಸಾಕಿಕೊಳ್ಳುವ ಧೈರ್ಯ ನನಗಿದೆ.

“ನಿಮ್ಮಮ್ಮನ ಜೊತೆ ನೀನು ಫೋನ್‌ ನಲ್ಲಿ, `ಆದ್ಯಾಳಿಗೆ ತಿಳಿಯದಂತೆ ಕದ್ದು ಮದುವೆ ಮಾಡಿಕೊಳ್ತೀನಿ. ಇವಳನ್ನು  ಬಿಡಲ್ಲ…. ಆಮೇಲೆ ಗೊತ್ತಾದ್ರೆ ಇವಳೇನು ಮಾಡೋಕೆ ಸಾಧ್ಯ…..? ಇವಳನ್ನು ಬಿಟ್ಟರೆ ನನ್ನ ಖರ್ಚಿಗೆ ಇನ್ಯಾರು ಹಣ ಕೊಡ್ತಾರೆ….? ದುಡಿದು ತಂದು ನನಗೆ ದುಡ್ಡು ಕೊಡುತ್ತಾ ನನ್ನ ಜೊತೆಯಲ್ಲೇ ಕೊನೆಯವರೆಗೂ ಬಿದ್ದಿರಬೇಕು. ಅದನ್ನು ಬಿಟ್ಟರೆ ಇವಳಿಗೆ ಬೇರೆ ಯಾವುದೇ ದಾರಿ ಇಲ್ಲ…..’ ಎಂದ ಮಾತಾಡಿದ್ದನ್ನು ಕೇಳಿಸಿಕೊಂಡೆ. ನಿನಗೆ ಇನ್ನೊಂದು ಮದುವೆ ಆಗುವ ಇಚ್ಛೆ ಇದೆ ಅಂತ ಗೊತ್ತಾಯ್ತು.

“ನೀನಾಡಿದ ಮಾತುಗಳನ್ನು ಕೇಳಿಯೇ ನನ್ನ ಮನಸ್ಸು ಒಡೆದು ಹೋಗಲು ಮತ್ತು ನಿನ್ನನ್ನು ಬಿಡುವ ನಿರ್ಧಾರ ಮಾಡಲು ಕಾರಣ. ಇನ್ನೂ ನಿನ್ನ ಜೊತೆಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳಲು ನನಗೆ ಆಸೆಯೇ ಇಲ್ಲ.

“ಹೊರಗಿನ ಪ್ರಪಂಚ ತುಂಬಾ ವಿಶಾಲವಾಗಿದೆ. ನನ್ನ ಬದುಕನ್ನು ನಾನು ಕಟ್ಟಿಕೊಳ್ಳ ಬಲ್ಲೆ….. ಹೆಣ್ಣಿನ ಬದುಕು ಈ ಅಡುಗೆಮನೆಯ ನಾಲ್ಕು ಗೋಡೆಗೆ ಅಷ್ಟೇ ಸೀಮಿತವಾಗಿರುವುದಿಲ್ಲ,” ಎನ್ನುತ್ತಾ ತನ್ನೆಲ್ಲಾ ಬಟ್ಟೆಗಳನ್ನೆಲ್ಲಾ ಪ್ಯಾಕ್‌ ಮಾಡಿ ಸೂಟ್‌ಕೇಸ್‌ ತೆಗೆದುಕೊಂಡು ಮನೆಯಿಂದ ಹೊರಗೆ ಬಂದಳು ಆದ್ಯಾ.

ಅರುಣ್‌ ನಟನೆ ಮಾಡಿ ತಡೆಯಲು ಪ್ರಯತ್ನಿಸಿದ. ಅರಣನಿಗೆ ಕೊನೆಯದಾಗಿ, “ನಿನ್ನ ಸ್ವಾರ್ಥಕ್ಕೆ ನನ್ನನ್ನು ಬಳಸಿಕೊಳ್ಳಬೇಡ…. ಸ್ವಾಭಿಮಾನದಿಂದ ಬದುಕಲು ಬಿಡು. ಲೀವ್ ‌ಮಿ ಅಲೋನ್‌…..!” ಎಂದವಳೇ ಆದ್ಯಾ, ಸೀದಾ ತನ್ನ ಗೆಳತಿ ನಡೆಸುತ್ತಿದ್ದ ಪಿಜಿ ಕಡೆ ಪಯಣ ಬೆಳೆಸಿದಳು. 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ