ರಾಘವೇಂದ್ರ ಅಡಿಗ ಎಚ್ಚೆನ್.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಆಗಸ್ಟ್ 26)ಕ್ಕೆವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹಲವು ವರ್ಷಗಳಿಂದ ಸಿನಿಮಾಕ್ಕಾಗಿ ಕಾದಿದ್ದ ಯಶ್ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದ್ದು, ಮುಂಜಾನೆ 6 ಗಂಟೆಯಿಂದಲೇ ಹಲವು ಚಿತ್ರಮಂದಿರಗಳಲ್ಲಿ ಶೋ ಆರಂಭವಾಗಿದೆ.
ಜಾಗತಿಕವಾಗಿ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ‘ಟಾಕ್ಸಿಕ್’ ತೆರೆಕಂಡಿದ್ದು, ವಿಶ್ವದಾದ್ಯಂತ ಯಶ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಜಮಾಯಿಸಿ, ಪಟಾಕಿ ಸಿಡಿಸಿ, ಯಶ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಸಿನಿಮಾ ಬಿಡುಗಡೆ ಸಂಭ್ರಮಿಸಿದ್ದಾರೆ.
‘ಟಾಕ್ಸಿಕ್’ ಚಿತ್ರವನ್ನು ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಬಳಿಕ ಇತರ ಪ್ರಮುಖ ಭಾಷೆಗಳಿಗೆ ಡಬ್ ಮಾಡಲಾಗಿದ್ದು, ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕ ಸೇರಿದಂತೆ ಮುಂಬೈ, ಗೋವಾ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಚಿತ್ರಕ್ಕೆ ವ್ಯಾಪಕ ಬಿಡುಗಡೆ ನೀಡಲಾಗಿದೆ. ಅಮೆರಿಕ, ಕೆನಡಾ, ಗಲ್ಫ್ ರಾಷ್ಟ್ರಗಳು, ಆಸ್ಟ್ರೇಲಿಯಾ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಸಿನಿಮಾ ತೆರೆಕಂಡಿದೆ.
ದೃಶ್ಯ ವೈಭವಕ್ಕೆ ಹೆಚ್ಚಿನ ಒತ್ತು ನೀಡಿರುವ ‘ಟಾಕ್ಸಿಕ್’ ಸಿನಿಮಾವನ್ನು ಸ್ಟ್ಯಾಂಡರ್ಡ್ 2D, ಡಾಲ್ಬಿ ಸಿನಿಮಾ, 4DX ಹಾಗೂ EPIQ ಫಾರ್ಮ್ಯಾಟ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಸರ್ಟಿಫಿಕೇಟ್ ದೊರೆತಿದ್ದು, 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಿನಿಮಾ ವೀಕ್ಷಿಸಲು ಅವಕಾಶವಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

world

ಬಳ್ಳಾರಿ-ದಾವಣಗೆರೆಯಲ್ಲಿ  ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ತೆರೆಕಾಣುತ್ತಿದ್ದಂತೆ ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮುಂಜಾನೆಯಿಂದಲೇ ಚಿತ್ರಮಂದಿರಗಳತ್ತ ದೌಡಾಯಿಸಿದ ಫ್ಯಾನ್ಸ್, ಪಟಾಕಿ ಸಿಡಿಸಿ, ಜೈಕಾರ ಕೂಗಿ, ಯಶ್ ಎಂಟ್ರಿಗೆ ಹೂಮಳೆಗರೆದು ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಿಸಿದ್ದಾರೆ. ಬಳ್ಳಾರಿ ನಗರದ ಶಿವ-ಗಂಗಾ ಹಾಗೂ ನಟರಾಜ್ ಸೇರಿದಂತೆ ಮೂರು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ‘ಟಾಕ್ಸಿಕ್’ ಪ್ರದರ್ಶನ ಆರಂಭಗೊಂಡಿದೆ. ಮೊದಲ ಶೋ ವೀಕ್ಷಿಸಲು ಮುಂಜಾನೆಯಿಂದಲೇ ಅಭಿಮಾನಿಗಳು ಚಿತ್ರಮಂದಿರಗಳತ್ತ ಆಗಮಿಸಿದ್ದು, ಥಿಯೇಟರ್‌ಗಳು ಹೌಸ್‌ಫುಲ್ ವಾತಾವರಣದಿಂದ ಕಂಗೊಳಿಸಿವೆ.
ಯಶ್ ಅವರ ಪೋಸ್ಟರ್‌ಗಳನ್ನು ಹಿಡಿದು ಅಭಿಮಾನಿಗಳು ಜೈಕಾರ ಕೂಗಿದ್ದು, ಚಿತ್ರಮಂದಿರದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತೆರೆ ಮೇಲೆ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ ಸ್ಕ್ರೀನ್ ಮುಂದೆ ಜೈಕಾರ, ಚಪ್ಪಾಳೆ ಹಾಗೂ ಹರ್ಷೋದ್ಗಾರ ಮೊಳಗಿದೆ.
ಇತ್ತ ದಾವಣಗೆರೆಯಲ್ಲೂ ‘ಟಾಕ್ಸಿಕ್’ ಬಿಡುಗಡೆಯ ಮೊದಲ ದಿನವೇ ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಮಿತಿ ಇರಲಿಲ್ಲ. ನಗರದ ಮೂರು ಚಿತ್ರಮಂದಿರಗಳು ಹಾಗೂ ಎಸ್‌ಎಸ್ ಮಾಲ್‌ನಲ್ಲಿ ಸಿನಿಮಾ ತೆರೆಕಂಡಿದ್ದು, ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ.
ಪಟಾಕಿ ಸಿಡಿಸಿ, ನಾಸಿಕ್ ಡೋಲ್ ಬಾರಿಸಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಸಾವಿರಾರು ಮಂದಿ ಥಿಯೇಟರ್‌ಗಳ ಬಳಿ ಜಮಾಯಿಸಿದ್ದು, ಯಶ್ ಅವರ ಎಂಟ್ರಿ ಸೀನ್‌ಗೆ ಹೂಮಳೆ ಸುರಿಸಿದ್ದಾರೆ. ಕುಂಬಳಕಾಯಿ ಹಿಡಿದು ಆರತಿ ಬೆಳಗಿದ ಅಭಿಮಾನಿಗಳು, ‘ಜೈ ಯಶ್’, ‘ಜೈ ರಾಕಿಂಗ್ ಸ್ಟಾರ್’ ಘೋಷಣೆಗಳನ್ನು ಕೂಗಿ ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಟಾಕ್ಸಿಕ್ಅಬ್ಬರ
ಕೋಟೆನಾಡು ಚಿತ್ರದುರ್ಗದಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಅಬ್ಬರ ಜೋರಾಗಿದೆ. ನಗರದ ಬಸವೇಶ್ವರ ಹಾಗೂ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಬೆಳಗ್ಗಿನಿಂದಲೇ ಪ್ರದರ್ಶನಗಳು ಆರಂಭವಾಗಿದ್ದು, ಎರಡೂ ಚಿತ್ರಮಂದಿರಗಳು ಹೌಸ್‌ಫುಲ್ ಆಗಿವೆ. ಯಶ್ ಅಭಿಮಾನಿಗಳು ಚಿತ್ರಮಂದಿರಗಳ ಸುತ್ತಮುತ್ತ ಭರ್ಜರಿ ಕಟೌಟ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ಸಂಭ್ರಮಿಸಿದ್ದಾರೆ. ಬೆಳಗ್ಗಿನಿಂದಲೇ ಚಿತ್ರಮಂದಿರಗಳತ್ತ ಅಭಿಮಾನಿಗಳ ದಂಡೇ ಹರಿದುಬಂದಿದ್ದು, ‘ಟಾಕ್ಸಿಕ್’ ಬಿಡುಗಡೆ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ತೆರೆಯ ಮೇಲೆ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಹೂವುಗಳನ್ನು ಎರಚಿ ಹರ್ಷೋದ್ಗಾರ ಮಾಡಿದರು. ಯಶ್ ಅವರ ಕಟೌಟ್‌ಗಳಿಗೆ ಕರ್ಪೂರ ಬೆಳಗಿ ತಮ್ಮ ಅಭಿಮಾನ ಹಾಗೂ ಪ್ರೀತಿ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ, ಹಲವು ವರ್ಷಗಳಿಂದ ಯಶ್ ಅವರ ಹೊಸ ಸಿನಿಮಾಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ಇಂದು ‘ಟಾಕ್ಸಿಕ್’ ಬಿಡುಗಡೆಯೊಂದಿಗೆ ಸಂಭ್ರಮದ ದಿನವಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಮಾಡುವ ಸಾಧನೆ ಇದೀಗ ಕುತೂಹಲ ಮೂಡಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ