ದಕ್ಷಿಣ ಭಾರತದ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ, ಅತ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬವೇ ಓಣಂ. ಆದರೆ ಓಣಂ ಕೇವಲ ಒಂದು ಧಾರ್ಮಿಕ ಹಬ್ಬವಲ್ಲ; ಕೇರಳದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಭಾವೈಕ್ಯತೆಯ ಪ್ರತೀಕವೂ ಹೌದು. ಧರ್ಮ, ಜಾತಿ, ಪಂಥಗಳ ಭೇದವಿಲ್ಲದೆ ಸಮಸ್ತ ಕೇರಳೀಯರು ಒಗ್ಗೂಡಿ ಆಚರಿಸುವ ಈ ಹಬ್ಬ ತಲೆತಲಾಂತರಗಳಿಂದಲೂ ಸಹಬಾಳ್ವೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತಾ ಬಂದಿದೆ.

ಮಲಯಾಳೀ ಪಂಚಾಂಗದ ಮೊದಲ ತಿಂಗಳಾದ **ಚಿಂಗಮ್ (ಆಗಸ್ಟ್–ಸೆಪ್ಟೆಂಬರ್)**ನಲ್ಲಿ ಓಣಂ ಆಚರಣೆ ನಡೆಯುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವದ ಸಂದರ್ಭದಲ್ಲಿ ಕೇರಳದ ಮನೆಮನೆಗಳ ಮುಂದೆ ವಿವಿಧ ಬಗೆಯ ಹೂಗಳಿಂದ ಕಂಗೊಳಿಸುವ ‘ಪೂಕ್ಕಳಂ’ ಎಂಬ ಪುಷ್ಪ ರಂಗವಲ್ಲಿಗಳು ಮೂಡುತ್ತವೆ. ಮನೆಗಳಲ್ಲಿ ವಿಶೇಷ ಅಡುಗೆಗಳು ತಯಾರಾಗುತ್ತವೆ; ದೇವಾಲಯಗಳಲ್ಲಿ ವಿಶೇಷ ಪೂಜೆ–ಪುನಸ್ಕಾರಗಳು ನಡೆಯುತ್ತವೆ; ಸಾಂಪ್ರದಾಯಿಕ ನೃತ್ಯ, ಜಾನಪದ ಕ್ರೀಡೆಗಳು, ದೋಣಿ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತವೆ.

ನಮ್ಮ ಕರ್ನಾಟಕದಲ್ಲಿ ಸುಗ್ಗಿಯ ಸಂಕೇತವಾದ ಸಂಕ್ರಾಂತಿ ಹಬ್ಬವನ್ನು ಹೇಗೆ ಸಡಗರದಿಂದ ಆಚರಿಸುತ್ತೇವೆಯೋ, ಕೇರಳದಲ್ಲಿ ಓಣಂ ಕೂಡ ಅಷ್ಟೇ ಮಹತ್ವದ ಹಬ್ಬ ಎನ್ನಬಹುದು. ‘ತಿರುವೋಣಂ’ ಎಂಬ ಹೆಸರು ಓಣಂ ಹಬ್ಬದ ಪ್ರಮುಖ ದಿನಕ್ಕೆ ಸಂಬಂಧಿಸಿದ್ದು, ‘ತಿರು’ ಎಂಬುದು ಗೌರವ, ಶ್ರೀ ಅಥವಾ ಪವಿತ್ರತೆಯನ್ನು ಸೂಚಿಸುವ ಪದವಾಗಿದೆ. ತಿರುವೋಣಂ ನಕ್ಷತ್ರದ ದಿನವೇ ಓಣಂ ಆಚರಣೆಯ ಪ್ರಮುಖ ಘಟ್ಟವಾಗುತ್ತದೆ.

ಮಹಾಬಲಿ ಚಕ್ರವರ್ತಿಯ ನೆನಪಿನ ಹಬ್ಬ

ಓಣಂ ಹಬ್ಬದ ಹಿಂದೆ ಅತ್ಯಂತ ಜನಪ್ರಿಯವಾದ ಪೌರಾಣಿಕ ಐತಿಹ್ಯವಿದೆ.

ಪುರಾಣಕಾಲದಲ್ಲಿ ಕೇರಳವನ್ನು ಮಹಾಬಲಿ ಚಕ್ರವರ್ತಿ ಆಳುತ್ತಿದ್ದನು ಎಂದು ನಂಬಲಾಗುತ್ತದೆ. ಆತ ಅಸುರರ ರಾಜನಾಗಿದ್ದರೂ ಅತ್ಯಂತ ದಯಾಮಯ, ಕರುಣಾಳು ಮತ್ತು ಪ್ರಜಾಹಿತೈಷಿಯಾಗಿದ್ದನು. ಅವನ ರಾಜ್ಯದಲ್ಲಿ ಜನರು ಸುಖ, ಸಮೃದ್ಧಿ ಮತ್ತು ನೆಮ್ಮದಿಯಿಂದ ಬದುಕುತ್ತಿದ್ದರು. ಅಧಿಕಾರ ಮತ್ತು ಐಶ್ವರ್ಯವಿದ್ದರೂ ಮಹಾಬಲಿ ನಿರಹಂಕಾರಿಯಾಗಿದ್ದನೆಂಬುದು ಈ ಕಥೆಯ ವಿಶೇಷತೆ.

ಮಹಾಬಲಿಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಂತೆ ದೇವತೆಗಳಿಗೆ ಆತಂಕ ಉಂಟಾಯಿತು. ಅವನ ಶಕ್ತಿಯಿಂದ ದೇವಾನು ದೇವತೆಗಳಿಗೆ ತೊಂದರೆ ಉಂಟಾಗಬಹುದು ಎಂಬ ಕಾರಣದಿಂದ ಅವನ ಅಹಂಕಾರವನ್ನು ಪರೀಕ್ಷಿಸಲು ಭಗವಾನ್ ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ವಿಷ್ಣುವು ವಾಮನನ ರೂಪದಲ್ಲಿ, ಪುಟ್ಟ ವಟುವಾಗಿ ಮಹಾಬಲಿ ಚಕ್ರವರ್ತಿ ನಡೆಸುತ್ತಿದ್ದ ಯಾಗದ ಸ್ಥಳಕ್ಕೆ ಬರುತ್ತಾನೆ. ದಾನಶೂರನಾಗಿದ್ದ ಬಲಿ, ಬಂದ ಬಾಲಕನಿಗೆ ಬೇಕಾದ ವರವನ್ನು ಕೇಳುವಂತೆ ಹೇಳುತ್ತಾನೆ.

ಆಗ ವಾಮನನು ಕೇಳಿದ್ದು ದೊಡ್ಡ ರಾಜ್ಯವನ್ನಾಗಲಿ, ಅಪಾರ ಸಂಪತ್ತನ್ನಾಗಲಿ ಅಲ್ಲ. “ನನಗೆ ಮೂರು ಹೆಜ್ಜೆ ಇಡುವಷ್ಟು ಜಾಗವನ್ನು ದಾನವಾಗಿ ಕೊಡು”ಎಂದು ಕೇಳುತ್ತಾನೆ.

ಇಷ್ಟು ಚಿಕ್ಕ ಬೇಡಿಕೆಯೇ ಎಂದು ಭಾವಿಸಿದ ಮಹಾಬಲಿ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಆದರೆ ಮುಂದಿನ ಕ್ಷಣವೇ ವಾಮನನು ತ್ರಿವಿಕ್ರಮನಾಗಿ ವಿಶ್ವರೂಪವನ್ನು ತಾಳುತ್ತಾನೆ. ಮೊದಲ ಹೆಜ್ಜೆಯಲ್ಲಿ ಆಕಾಶವನ್ನು ಅಳೆಯುತ್ತಾನೆ. ಎರಡನೇ ಹೆಜ್ಜೆಯಲ್ಲಿ ಸಮಸ್ತ ಭೂಮಂಡಲವನ್ನು ಆವರಿಸುತ್ತಾನೆ. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಮಹಾಬಲಿಯನ್ನು ಪ್ರಶ್ನಿಸುತ್ತಾನೆ.

ತಾನು ಎದುರಿಸುತ್ತಿರುವುದು ಸಾಮಾನ್ಯ ವಟುವಲ್ಲ ಎಂಬುದನ್ನು ಅರಿತ ಬಲಿಚಕ್ರವರ್ತಿ, “ಮೂರನೇ ಹೆಜ್ಜೆಯನ್ನು ನನ್ನ ತಲೆಯ ಮೇಲಿಡಿ” ಎಂದು ವಿನಯದಿಂದ ಹೇಳುತ್ತಾನೆ. ಅದರಂತೆ ವಾಮನನು ಅವನನ್ನು ಪಾತಾಳ ಲೋಕಕ್ಕೆ ಕಳುಹಿಸುತ್ತಾನೆ. ಆದರೆ ಬಲಿಯ ಪ್ರಾಮಾಣಿಕತೆ, ದಾನಶೀಲತೆ ಮತ್ತು ಪ್ರಜೆಗಳ ಮೇಲಿನ ಅಪಾರ ಪ್ರೀತಿಯಿಂದ ಸಂತುಷ್ಟನಾದ ವಿಷ್ಣು, ಪ್ರತಿವರ್ಷವೂ ಒಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸುವ ಅವಕಾಶವನ್ನು ಅವನಿಗೆ ವರವಾಗಿ ನೀಡುತ್ತಾನೆ.

ಮಹಾಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಭೂಮಿಗೆ ಮರಳಿ ಬರುವ ದಿನವೇ ಓಣಂ ಎಂಬ ನಂಬಿಕೆ ಕೇರಳೀಯರ ಮನದಲ್ಲಿ ಆಳವಾಗಿ ಬೇರೂರಿದೆ.

ಅದಕ್ಕಾಗಿಯೇ ಓಣಂ ಸಂದರ್ಭದಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿ, ಅಲಂಕರಿಸಿ, ಹೂವಿನ ಪೂಕ್ಕಳಂ ಹಾಕಿ, ಸಾಂಪ್ರದಾಯಿಕ ಉಡುಪು ಧರಿಸಿ, ಭರ್ಜರಿ ಭೋಜನ ತಯಾರಿಸಿ ಮಹಾಬಲಿಯನ್ನು ಸ್ವಾಗತಿಸಲಾಗುತ್ತದೆ.

ಜಗತ್ತಿನ ಮೂಲೆಮೂಲೆಗಳಿಂದ ಊರಿಗೆ ಮರಳುವ ಕೇರಳೀಯರು

ಉದ್ಯೋಗ, ವ್ಯಾಪಾರ ಮತ್ತಿತರ ಕಾರಣಗಳಿಂದ ಪ್ರಪಂಚದಾದ್ಯಂತ ಹರಡಿಹೋಗಿರುವ ಕೇರಳಿಗರು, ಓಣಂ ಸಂದರ್ಭದಲ್ಲಿ ಸಾಧ್ಯವಾದಷ್ಟು ತಮ್ಮ ತವರು ಮನೆಗಳಿಗೆ ಮರಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಓಣಂ ಎನ್ನುವುದು ಕೇವಲ ಹಬ್ಬವಲ್ಲ; ಕುಟುಂಬಗಳನ್ನು ಮತ್ತೆ ಒಂದೆಡೆ ಸೇರಿಸುವ ಸಂದರ್ಭವೂ ಹೌದು. ಹಬ್ಬದ ದಿನ ಮುಂಜಾನೆ ಸ್ನಾನ ಮಾಡಿ ಶುಚಿರ್ಭೂತರಾಗಿ ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ಸಂಭ್ರಮಿಸುವುದು ಸಾಮಾನ್ಯ. ಹತ್ತು ದಿನಗಳಲ್ಲೂ ಪ್ರತಿದಿನವೂ ಹೊಸ ಹೊಸ ವಿನ್ಯಾಸಗಳಲ್ಲಿ ಪೂಕ್ಕಳಂ ರಚಿಸುವ ಸಂಪ್ರದಾಯವಿದೆ. ಮೊದಲ ದಿನ ಸಣ್ಣದಾಗಿ ಆರಂಭವಾಗುವ ಹೂವಿನ ಅಲಂಕಾರವು ತಿರುವೋಣಂ ದಿನದ ವೇಳೆಗೆ ಮತ್ತಷ್ಟು ವಿಶಾಲ ಮತ್ತು ಆಕರ್ಷಕವಾಗುತ್ತದೆ.

ಸಾಂಪ್ರದಾಯಿಕ ಉಡುಪಿನಲ್ಲೊಂದು ಸಂಭ್ರಮ

ಓಣಂ ಸಂದರ್ಭದಲ್ಲಿ ಕೇರಳದ ಸಾಂಪ್ರದಾಯಿಕ ಉಡುಪುಗಳಿಗೆ ವಿಶೇಷ ಮಹತ್ವವಿದೆ.

ಪುರುಷರು ಸಾಮಾನ್ಯವಾಗಿ ಅಂಗಿ ಮತ್ತು ಬಿಳಿಯ ಪಂಚೆ ಅಥವಾ ‘ಮುಂಡು’ ಧರಿಸುತ್ತಾರೆ. ಮಹಿಳೆಯರು ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪಿನೊಂದಿಗೆ ಚಿನ್ನದ ಬಣ್ಣದ ಅಂಚು ಹೊಂದಿರುವ ‘ನೇರಿಯತ್ತು’ ಎಂಬ ಮೇಲಂಗಿಯನ್ನು ಧರಿಸುತ್ತಾರೆ.

ಹೆಣ್ಣು ಮಕ್ಕಳು ಪಾವಡೆ ಮತ್ತು ರವಿಕೆ ಧರಿಸಿದರೆ, ಗಂಡು ಮಕ್ಕಳು ತಮ್ಮ ತಂದೆಯರಂತೆ ಮುಂಡು ಧರಿಸಿ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ. ಬಿಳಿ ಬಟ್ಟೆಯ ಮೇಲೆ ಹೊಳೆಯುವ ಚಿನ್ನದ ಅಂಚು ಕೇರಳದ ಓಣಂ ಸಂಭ್ರಮಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಗುರುತನ್ನೇ ನೀಡುತ್ತದೆ.

ಓಣಂ ಸಾದ್ಯ: ಬಾಳೆ ಎಲೆಯ ಮೇಲಿನ ಭರ್ಜರಿ ಭೋಜನ

ಓಣಂ ಉತ್ಸವದ ಅತ್ಯಂತ ಆಕರ್ಷಕ ಅಂಶಗಳಲ್ಲಿ ಒಂದೆಂದರೆ ‘ಓಣಂ ಸಾದ್ಯ’.

ತಿರುವೋಣಂ ದಿನ ತಯಾರಿಸಲಾಗುವ ಈ ಸಾಂಪ್ರದಾಯಿಕ ಭೋಜನದಲ್ಲಿ 9 ತರದ ಭೋಜನ ಮತ್ತು 11 ರಿಂದ 13 ಬಗೆಯ ವಿವಿಧ ಖಾದ್ಯಗಳುಇರುತ್ತವೆ ಎಂದು ಈ ಸಂಪ್ರದಾಯವನ್ನು ವಿವರಿಸಲಾಗುತ್ತದೆ. ಬಾಳೆ ಎಲೆಯ ಮೇಲೆ ವಿವಿಧ ಖಾದ್ಯಗಳನ್ನು ಸುವ್ಯವಸ್ಥಿತವಾಗಿ ಬಡಿಸಿ, ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದೇ ಸಾದ್ಯದ ವಿಶೇಷತೆ. ಅನ್ನ, ವಿವಿಧ ಬಗೆಯ ಪಲ್ಯ, ಸಾಂಬಾರ್, ಅವಿಯಲ್, ಓಲನ್, ತೋರನ್, ಉಪ್ಪೇರಿ, ಉಪ್ಪಿನಕಾಯಿ, ಪಾಯಸ ಮುಂತಾದ ಹಲವಾರು ರುಚಿಗಳು ಒಂದೇ ಎಲೆಯಲ್ಲಿ ಸೇರುತ್ತವೆ.

ಇದು ಕೇವಲ ಭೋಜನವಲ್ಲ; ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಸಮಾನತೆ ಮತ್ತು ಸಾಮೂಹಿಕತೆಯನ್ನು ಸಾರುವ ಒಂದು ಸಾಂಸ್ಕೃತಿಕ ಆಚರಣೆ. ಎಲ್ಲಕ್ಕಿಂತಲೂ ಸಿಹಿಯಾದ ಉಣ್ಣಿಯಪ್ಪಂನ ರುಚಿಯನ್ನು ಬಣ್ಣಿಸುವುದಕ್ಕಿಂತ ಸವಿದರೇನೇ ಅದರ ಸೊಗಸು ಅರ್ಥವಾಗುತ್ತದೆ!

ವಲ್ಲಂಕಲಿ: ನೀರಿನ ಮೇಲೆ ಮೂಡುವ ರೋಮಾಂಚನ

ಓಣಂ ಹಬ್ಬದ ಸಂದರ್ಭದಲ್ಲಿ ದೇಶ-ವಿದೇಶಗಳ ಗಮನ ಸೆಳೆಯುವ ಮತ್ತೊಂದು ಪ್ರಮುಖ ಆಕರ್ಷಣೆ ‘ವಲ್ಲಂಕಲಿ’ ಅಥವಾ ಹಾವು ದೋಣಿ ಸ್ಪರ್ಧೆ.

ವಿಶೇಷವಾಗಿ ಪಂಪಾ ನದಿಯಲ್ಲಿ ನಡೆಯುವ ಈ ಸ್ಪರ್ಧೆ ಕೇರಳದ ಜಲಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿದೆ. ಹಾವು ರೀತಿಯಲ್ಲಿ ಉದ್ದವಾಗಿ ನಿರ್ಮಿಸಿರುವ ದೋಣಿಗಳನ್ನು ಅದ್ದೂರಿಯಾಗಿ ಅಲಂಕರಿಸಲಾಗುತ್ತದೆ. ನೂರಾರು ನಾವಿಕರು ಒಂದೇ ದೋಣಿಯಲ್ಲಿ ಕುಳಿತು, ಶಿಸ್ತಿನ ಸೈನಿಕರಂತೆ ಏಕಕಾಲದಲ್ಲಿ ಹುಟ್ಟು ಹಾಕುತ್ತಾ ಸಾಗುವ ದೃಶ್ಯ ರೋಮಾಂಚನಕಾರಿ. ದೋಣಿಯಲ್ಲಿರುವ ಹಾಡುಗಾರರು ತಾಳ ಮತ್ತು ಲಯಬದ್ಧವಾಗಿ ಹಾಡುಗಳನ್ನು ಹಾಡುತ್ತಾ ನಾವಿಕರ ಉತ್ಸಾಹವನ್ನು ಹೆಚ್ಚಿಸುತ್ತಾರೆ.

ನದಿಯ ಎರಡೂ ದಡಗಳಲ್ಲಿ ಸಾವಿರಾರು ಮಂದಿ ನೆರೆದು ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸುತ್ತಾರೆ. ಹತ್ತಾರು ದೋಣಿಗಳು, ನೂರಾರು ನಾವಿಕರು ಮತ್ತು ಸಾವಿರಾರು ಪ್ರೇಕ್ಷಕರು ಸೇರಿಕೊಳ್ಳುವ ಈ ದೋಣಿ ಸ್ಪರ್ಧೆ ಇಂದು ಕೇರಳದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ. ಓಣಂ ಕಾಲದಲ್ಲಿ ಕೇರಳಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಮರೆಯಲಾಗದ ಅನುಭವವಾಗುತ್ತದೆ.

ಓಣಕಲಿಕಾಲ್: ಯುವಕರಿಗೆ ಸಾಂಪ್ರದಾಯಿಕ ಕ್ರೀಡಾ ಸಂಭ್ರಮ

ಓಣಂ ಕೇವಲ ಊಟ, ಉಡುಪು ಮತ್ತು ನೃತ್ಯಕ್ಕೆ ಸೀಮಿತವಾಗಿಲ್ಲ. ಯುವಕರ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸುವ ‘ಓಣಕಲಿಕಾಲ್’ ಎಂಬ ಸಾಂಪ್ರದಾಯಿಕ ಕ್ರೀಡೆಗಳಿಗೂ ಇಲ್ಲಿ ಮಹತ್ವವಿದೆ.

ತಳಪ್ಪಂತುಕಲಿ ಎಂಬ ಚೆಂಡಿನ ಆಟ, ಆಮ್ಬೆಯಲ್ ಎಂಬ ಬಿಲ್ಲಿನಾಟ, ಕುಟುಕುಟು, ಕಯ್ಯಮಕಲಿ ಮತ್ತು ಅತ್ತಕಳಂ ಮೊದಲಾದ ಆಟಗಳನ್ನು ತಂಡಗಳಾಗಿ ಆಡುವ ಸಂಪ್ರದಾಯವಿದೆ.

ಈ ಆಟಗಳಲ್ಲಿ ಸ್ಪರ್ಧೆಯ ಉತ್ಸಾಹ, ದೈಹಿಕ ಸಾಮರ್ಥ್ಯ ಮತ್ತು ತಂಡದ ಒಗ್ಗಟ್ಟು ಸ್ಪಷ್ಟವಾಗಿ ಕಾಣುತ್ತದೆ.

ಪೂಕ್ಕಳಂನಿಂದ ಪುಲಿಕಲಿವರೆಗೆ…

ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಸಂಕೇತವಾಗಿ ಮಹಿಳೆಯರು ಓಣಂನ ಹತ್ತು ದಿನಗಳೂ ಮನೆಯ ಮುಂದೆ ‘ಪೂಕ್ಕಳಂ’ ರಚಿಸುತ್ತಾರೆ.

ವಿವಿಧ ಬಣ್ಣದ ಹೂಗಳನ್ನು ಬಳಸಿಕೊಂಡು ಪ್ರತಿದಿನವೂ ಹೊಸ ವಿನ್ಯಾಸಗಳನ್ನು ರೂಪಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಮನೆಮನೆಗಳ ನಡುವೆ ಪೂಕ್ಕಳಂ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ ಕೈಕೊತ್ತಿಕಲಿ ಮತ್ತು ತುಂಬಿ ತುಳ್ಳಾಲ್ ಮೊದಲಾದ ಮನಮೋಹಕ ನೃತ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದರ ಜೊತೆಗೆ ಕುಮ್ಮಟ್ಟಿಕಲಿ, ಪುಲಿಕಲಿ ಮತ್ತು ತಲಕ್ ಪಂತುಕಲಿ ಮೊದಲಾದ ಜಾನಪದ ನೃತ್ಯಗಳು ಓಣಂ ಉತ್ಸವಕ್ಕೆ ಇನ್ನಷ್ಟು ಜೀವ ತುಂಬುತ್ತವೆ.ವಿಶೇಷವಾಗಿ ಪುಲಿಕಲಿಯಲ್ಲಿ ಕಲಾವಿದರು ಹುಲಿಯಂತೆ ದೇಹಕ್ಕೆ ಬಣ್ಣ ಹಚ್ಚಿಕೊಂಡು ಬೀದಿಗಳಲ್ಲಿ ನೃತ್ಯ ಮಾಡುವ ದೃಶ್ಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಪಾರ ಕುತೂಹಲ ಮೂಡಿಸುತ್ತದೆ.

ಅಲಂಕೃತ ಆನೆಗಳ ಮೆರವಣಿಗೆ

ಓಣಂ ಸಂದರ್ಭದಲ್ಲಿ ದೊಡ್ಡ ದೇವಸ್ಥಾನಗಳಲ್ಲಿನ ಅಲಂಕೃತ ಆನೆಗಳ ಮೆರವಣಿಗೆ ಮತ್ತೊಂದು ಪ್ರಮುಖ ಆಕರ್ಷಣೆ. ಆನೆಗಳನ್ನು ವರ್ಣರಂಜಿತವಾಗಿ ಅಲಂಕರಿಸಿ, ಬಗೆಬಗೆಯ ಆಭರಣಗಳನ್ನು ತೊಡಿಸಿ, ಚಂಡೆಯ ನಾದದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ರಸ್ತೆಯುದ್ದಕ್ಕೂ ನೆರೆದಿರುವ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಈ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಆನೆಗಳಿಗೆ ಹಣ್ಣು-ಹಂಪಲುಗಳನ್ನು ನೀಡುವ ದೃಶ್ಯವೂ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡುತ್ತದೆ.

ಪಟಾಕಿಗಳ ಬೆಳಕಿನಲ್ಲಿ ಮುಗಿಯುವ ಸಂಭ್ರಮ

ಸಂಜೆ ಕತ್ತಲಾಗುತ್ತಿದ್ದಂತೆ ದೇವಾಲಯಗಳಲ್ಲಿ ಮಹಾಮಂಗಳಾರತಿ ನೆರವೇರುತ್ತದೆ. ಬಳಿಕ ಕೆಲವು ಕಡೆಗಳಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಪಟಾಕಿ ಮತ್ತು ಸಿಡಿಮದ್ದುಗಳ ಪ್ರದರ್ಶನ ನಡೆಯುತ್ತಿತ್ತು. ಆಕಾಶದಲ್ಲಿ ಹೊಳೆಯುವ ಪಟಾಕಿಗಳ ಬೆಳಕು, ಕೇರಳದ ರಾತ್ರಿಯನ್ನೇ ಬಣ್ಣಗಳ ಲೋಕವನ್ನಾಗಿ ಮಾಡುತ್ತಿತ್ತು.

ಆದರೆ ಕೆಲವು ವರ್ಷಗಳ ಹಿಂದೆ ದೇವಾಲಯವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ದಾಸ್ತಾನಿಗೆ ಬೆಂಕಿ ತಗುಲಿ ಹಲವಾರು ಪ್ರಾಣಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ, ಪಟಾಕಿ ಪ್ರದರ್ಶನಗಳ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಿಂದಿನಷ್ಟು ಮುಕ್ತ ಸಂಭ್ರಮವಿಲ್ಲದಿದ್ದರೂ, ಎಚ್ಚರಿಕೆಯಿಂದ ಮತ್ತು ನಿಯಮಾನುಸಾರ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸಲಾಗುತ್ತಿದೆ.

ಓಣಂ ಹೇಳುವ ದೊಡ್ಡ ಸಂದೇಶ

ಓಣಂನ ನಿಜವಾದ ವೈಶಿಷ್ಟ್ಯ ಕೇವಲ ಪೂಕ್ಕಳಂನಲ್ಲಿಲ್ಲ, ವಲ್ಲಂಕಲಿಯಲ್ಲಿಲ್ಲ, ಸಾದ್ಯದಲ್ಲಿಲ್ಲ, ಪಟಾಕಿಗಳಲ್ಲಿಲ್ಲ. ಅದು ಕೇರಳೀಯರನ್ನು ಒಂದೇ ಭಾವನೆಯಲ್ಲಿ ಒಗ್ಗೂಡಿಸುವ ಶಕ್ತಿಯಲ್ಲಿದೆ.

ಮಹಾಬಲಿ ಚಕ್ರವರ್ತಿಯ ಕಾಲದಲ್ಲಿ ಎಲ್ಲರೂ ಸಮಾನವಾಗಿ, ಸುಖ-ಸಮೃದ್ಧಿಯಿಂದ ಬದುಕಿದ್ದರು ಎಂಬ ಜನನಂಬಿಕೆಯೇ ಓಣಂನ ಮೂಲಭಾವ. ಅದಕ್ಕಾಗಿಯೇ ಧರ್ಮದ ಗಡಿಗಳನ್ನು ಮೀರಿ ಕೇರಳೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಓಣಂ ಬಂದಾಗ ತಾಯ್ನಾಡಿನ ನೆನಪು, ಮನೆಯ ಅಂಗಳದ ಪೂಕ್ಕಳಂ, ಬಾಳೆ ಎಲೆಯ ಮೇಲಿನ ಸಾದ್ಯ, ವಲ್ಲಂಕಲಿಯ ಹುಟ್ಟುಗಳ ಸದ್ದು, ಚಂಡೆಯ ನಾದ—ಇವೆಲ್ಲವೂ ಕೇರಳೀಯರ ಮನಸ್ಸಿನಲ್ಲಿ ತವರುಮಣ್ಣಿನ ನೆನಪನ್ನು ಮೂಡಿಸುತ್ತವೆ.

ಓಣಂ ನಮಗೆ ಹೇಳುವ ಸಂದೇಶವೂ ಅದೇ—ಸಮೃದ್ಧಿ ಎಲ್ಲರಿಗೂ ಇರಲಿ, ಸಂತೋಷ ಎಲ್ಲರ ಮನೆಗೂ ತಲುಪಲಿ, ಭಿನ್ನತೆಯ ನಡುವೆಯೂ ಭಾವೈಕ್ಯತೆ ಉಳಿಯಲಿ. ಓಣಂ ಕೇವಲ ಕೇರಳದ ಹಬ್ಬವಲ್ಲ; ಒಗ್ಗಟ್ಟಾಗಿ ಬದುಕುವ ಭಾರತದ ಸಾಂಸ್ಕೃತಿಕ ಮನೋಭಾವದ ಒಂದು ಸುಂದರ ಪ್ರತಿಬಿಂಬ.  ಎಲ್ಲರಿಗೂ ಹೃದಯಪೂರ್ವಕ ಓಣಂ ಹಬ್ಬದ ಶುಭಾಶಯಗಳು!

ಇಡೀ ಕೇರಳ ರಾಜ್ಯದಲ್ಲಿ ಆ ಹತ್ತು–ಹದಿನೈದು ದಿನಗಳು ಯಾವುದೇ ಕೋಮು ಗಲಭೆಯಿಲ್ಲದೆ, ಭಾವೈಕ್ಯತೆ ಮತ್ತು ಸಡಗರ–ಸಂಭ್ರಮದಿಂದ ಓಣಂ ಆಚರಿಸುವ ಪರಂಪರೆ ನಿಜಕ್ಕೂ ಗಮನಾರ್ಹ. ಹಬ್ಬಗಳು ಕೇವಲ ಆಚರಣೆಗಳಾಗದೆ, ಮನುಷ್ಯರನ್ನು ಮನುಷ್ಯರೊಂದಿಗೆ ಬೆಸೆಯುವ ಸೇತುವೆಗಳಾದಾಗ ಅವುಗಳ ಅರ್ಥ ಮತ್ತಷ್ಟು ದೊಡ್ಡದಾಗುತ್ತದೆ. ಇದೇ ರೀತಿಯ ಭಾವೈಕ್ಯತೆ ವರ್ಷವಿಡೀ ಇದ್ದರೆ ಜನರಿಗೂ ನೆಮ್ಮೆದಿ ದೇಶಕ್ಕೂ ನೆಮ್ಮದಿ ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ