ಪ್ರೇಮಿಗಳಿರಲಿ ಯಾ ದಂಪತಿ, ನಿಮ್ಮ ಸಂಬಂಧದಲ್ಲಿ ಕೋಪತಾಪ ದೂರಗೊಳಿಸಲು ಈ ಸಲಹೆಗಳನ್ನು ಅಗತ್ಯ ಅನುಸರಿಸಿ....
ಯಾವ ಸಂಬಂಧವೇ ಇರಲಿ, ಕಾಲಾನಂತರದಲ್ಲಿ ಪರಸ್ಪರ ಕೋಪ ಬರುವುದು ಸಾಮಾನ್ಯವಾದ ವಿಷಯ. ಅದು ಫ್ರೆಂಡ್ಸ್, ಕುಟುಂಬದವರು, ಒಡಹುಟ್ಟಿದವರು, ಇನ್ಯಾರೇ ವಿಶೇಷ ವ್ಯಕ್ತಿ ಆಗಿರಬಹುದು, ಪ್ರತಿಯೊಂದು ಸಂಬಂಧದಲ್ಲೂ ಇಂಥ ಭಿನ್ನಾಭಿಪ್ರಾಯ ಇದ್ದದ್ದೇ. ಆದರೆ ಈ ಕೋಪ ವಿಪರೀತಕ್ಕೆ ಹೋಗಬಾರದಷ್ಟೆ. ಅದು ಹಾಲಿನಂಥ ಸಂಬಂಧಕ್ಕೆ ಹುಳಿ ಹಿಂಡೀತು. ಹೀಗಾಗಿ ಈ ಸಿಕ್ಕನ್ನು ಬಿಡಿಸಿ, ಸಂಬಂಧವನ್ನು ಬೆಟರ್ ಆಗಿಸುವುದು ಬಲು ಮುಖ್ಯ.ಬಂದಿದೆ, ಮತ್ತೊಂದು ವ್ಯಾಲೆಂಟೈನ್ಸ್ ಡೇ! ಎಲ್ಲೆಲ್ಲೂ ಪ್ರೀತಿ ಪ್ರೇಮ ಪ್ರಣಯದ ಈ ತಿಂಗಳಿನಲ್ಲಿ ಮುಖ್ಯವಾಗಿ ಸಂಗಾತಿಗಳ ಮಧ್ಯೆ ವೈಮನಸ್ಯ ಎಂದೂ ತರವಲ್ಲ. ಅವರ ನಡುವಿನ ಕೋಪತಾಪ ದೂರೀಕರಿಸಲು ಇಲ್ಲಿವೆ ಕೆಲವು ಟಿಪ್ಸ್ :
ಸದಾ ಶಾಂತರಾಗಿರಿ : ನಾವು ಕೋಪಗೊಂಡಾಗೆಲ್ಲ ಸಾಮಾನ್ಯವಾಗಿ ನಮ್ಮ ಮಾತು ಕೆಲಸ ಒಂದಿಷ್ಟೂ ವಿಚಾರಿಸದೆ ಬಡಬಡಿಸುವಂತೆ ಆಗುತ್ತದೆ. ಆದ್ದರಿಂದ ಎಲ್ಲಕ್ಕೂ ಮೊದಲು ನಿಮ್ಮನ್ನು ನೀವು ಶಾಂತವಾಗಿ ಇರಿಸಿಕೊಳ್ಳಿ. ಆಳವಾಗಿ ಉಸಿರು ಎಳೆದುಕೊಂಡು ಬಿಡುತ್ತಾ, ಪರಿಸ್ಥಿತಿಯನ್ನು ತಣ್ಣಗೆ ಅವಲೋಕಿಸಿ. ನೀವು ಶಾಂತರಾದಾಗ ಮಾತ್ರ ಸರಿಯಾಗಿ ಮಾತನಾಡಬಲ್ಲಿರಿ. ಆಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕೀತು.
ಮುಕ್ತ ಮನದಿಂದ ಮಾತನಾಡಿ : ಯಾವುದೇ ಕೋಪ ತಣಿಯಲು ಸುಲಭ ಮಾರ್ಗ ಎಂದರೆ, ಮುಕ್ತರಾಗಿ ಪ್ರಾಮಾಣಿಕವಾಗಿ ಮಾತನಾಡಬೇಕು. ನಿಮ್ಮ ಭಾವನೆಗಳನ್ನು ಶಾಂತರಾಗಿ, ಸಮಚಿತ್ತದಿಂದ, ಆರೋಪ ಪ್ರತ್ಯಾರೋಪಗಳಿಲ್ಲದೆ, ಎದುರಿನವರಿಗೆ ಹೇಳಿ. ನಿಮಗೇಕೆ ಕೋಪ ಎಂದು ಸ್ಪಷ್ಟ ಹೇಳಿ. ಹಾಗೇ ಅವರೂ ಹೇಳಿದಾಗ, ಒಂದೆಡೆ ಕಾಂಪ್ರಮೈಸ್ ಆಗಿ.
ಕೇಳಿಸಿಕೊಳ್ಳುವ ತಾಳ್ಮೆ ಇರಲಿ : ಕೇವಲ ನಿಮ್ಮ ಮಾತುಗಳನ್ನು ಒತ್ತಿ ಹೇಳುವುದಷ್ಟೇ ಅಲ್ಲ, ಎದುರಿಗಿರುವವರ ಮಾತುಗಳನ್ನು ಸಾವಧಾನವಾಗಿ ಕೇಳಿಸಿಕೊಳ್ಳು ಸಹನೆ ಇರಬೇಕು. ನಮ್ಮದೇ ಸರಿ ಎಂದು ನಿರೂಪಿಸುವ ಧಾವಂತ ಬೇಡ. ಎದುರಿಗಿರುವವರ ಭಾವನೆಗಳನ್ನು ನಿರ್ಲಕ್ಷಿಸುತ್ತೇವೆ. ಸಂಬಂಧಗಳ ನಡುವೆ ಕೋಪತಾಪ ತಗ್ಗಲು, ನೀವಿಬ್ಬರೂ ಪರಸ್ಪರರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ.
ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ : ಎಷ್ಟೋ ಸಲ ನಾವು ನಮ್ಮ ತಪ್ಪುಗಳನ್ನು ನಿರ್ಲಕ್ಷಿಸುತ್ತೇವೆ. ಈ ಕೋಪಕ್ಕೆ ನಿಮ್ಮ ತಪ್ಪು ಕಾರಣ ಎಂದು ಅನಿಸಿದರೆ, ಅದನ್ನು ಒಪ್ಪಿಕೊಳ್ಳಿ, ಕ್ಷಮೆ ಕೇಳಿ. ಈ ಹೆಜ್ಜೆ ನಿಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುತ್ತದೆ. ಕ್ಷಮೆ ಕೇಳುವುದರಿಂದ, ಎದುರಿನವರು ನೀವು ಈ ಸಂಬಂಧಕ್ಕೆ ಎಷ್ಟು ಮಹತ್ವ ಕೊಡುತ್ತಿದ್ದೀರಿ ಎಂದು ಸ್ಪಷ್ಟ ಗುರುತಿಸುತ್ತಾರೆ.
ಪರಸ್ಪರ ಟೈಂ ಕೊಡಿ : ಕೆಲವೊಂದು ಕೋಪಗಳು ಬೇಗ ತಗ್ಗುವಂಥದ್ದಲ್ಲ. ಹಾಗಿರುವಾಗ ನೀವು ಧಾರಾಳ ಟೈಂ ಕೊಡಬೇಕು, ಸಹನೆಯಿಂದ ವರ್ತಿಸಬೇಕು. ಇಬ್ಬರೂ ತಂತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಿದ್ದರೆ, ಇಬ್ಬರೂ ಆ ಪರಿಸ್ಥಿತಿ ಸರಿಹೋಗಲು ಸ್ವಲ್ಪ ಕಾಲಾವಕಾಶ ಕೊಡಬೇಕು. ಕೆಲವು ದಿನಗಳ ನಂತರ, ಇಬ್ಬರೂ ಆ ಸ್ಥಿತಿ ಬಗ್ಗೆ ಯೋಚಿಸಲು, ತಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.





