ಬೆಂಗಾಳಿ ಬೆಡಗಿಯನ್ನು ಮನಸಾರೆ ಪ್ರೀತಿಸಿದ ದೂದ್ ಪೇಡ
ಸ್ಯಾಂಡಲ್ ವುಡ್ ನಲ್ಲಿ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲೂ ಕ್ಯೂಟಿ ಜೋಡಿ ಎನಿಸಿಕೊಂಡವರು ದಿಗಂತ್ ಮತ್ತು ಐಂದ್ರಿತಾ ರೇ. `ಮನಸಾರೆ' ಸಿನಿಮಾಗೂ ಮುನ್ನವೇ ಬೆಂಗಾಳಿ ಬೆಡಗಿ ಐಂದ್ರಿತಾ ಮೇಲೆ ದೂದ್ ಪೇಡ ದಿಗಂತ್ ಗೆ ಲವ್ ಆಗಿತ್ತಂತೆ. ಟಿವಿಯಲ್ಲಿ ಪ್ರಸಾರವಾದ ಐಂದ್ರಿತಾ ಸಂದರ್ಶನ ನೋಡಿ ತುಂಬಾ ಮುದ್ದಾಗಿದ್ದಾಳೆ ಎಂದುಕೊಂಡಿದ್ದರಂತೆ. ಈ ಘಟನೆ ಆಗಿ ಕೆಲವೇ ದಿನಗಳಲ್ಲಿ ದಿಗಂತ್ ಗೆ `ಮನಸಾರೆ' ಸಿನಿಮಾದಲ್ಲಿ ಐಂದ್ರಿತಾ ಜೊತೆ ನಟಿಸುವ ಅವಕಾಶ ಸಿಕ್ಕಿತು. `ಮನಸಾರೆ' ಚಿತ್ರದ ಸೆಟ್ ನಲ್ಲಿ ಪ್ರೀತಿಯಲ್ಲಿ ಬಿದ್ದು, ಮದುವೆಯಾದರು. `ಪಾರಿಜಾತ' ಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದಾರೆ.

ಪ್ರೀತ್ಸೇ ಪ್ರೀತ್ಸೆ ಅಂತ ಪ್ರೀತಿಯಲ್ಲಿ ಬಿದ್ದ ಉಪ್ಪಿ
ಸ್ಯಾಂಡಲ್ ವುಡ್ ನ ಮಾದರಿ ಜೋಡಿ ರಿಯಲ್ ಸ್ಟಾರ್ ಉಪೇಂದ್ರ ಮಿಸ್ ಕೋಲ್ಕತಾ ಪ್ರಿಯಾಂಕಾ. ತೆರೆ ಮೇಲೆ ರೀಲ್ ನಲ್ಲಿ `ಈ ಪ್ರೀತಿ ಪ್ರೇಮಾ ಎಲ್ಲಾ ಪುಸ್ತಕದ ಬದನೆಕಾಯಿ,' ಎಂದಿದ್ದ ರಿಯಲ್ ಸ್ಟಾರ್ ಉಪ್ಪಿ, ರಿಯಲ್ ಲೈಫ್ ನಲ್ಲಿ ಪ್ರಿಯಾಂಕಾರನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾಂಕಾ ಉಪೇಂದ್ರ ದಂಪತಿ ವಿವಾಹ ಬಂಧನಕ್ಕೆ ಒಳಗಾಗಿ ಇದೀಗ ಬರೋಬ್ಬರಿ 25 ವರ್ಷ. ತೆಲುಗು ಸಿನಿಮಾ `ರಾ' ವೇಳೆ ಮೊದಲ ಬಾರಿ ಉಪ್ಪಿ, ಪ್ರಿಯಾಂಕಾರನ್ನು ಭೇಟಿಯಾಗಿದ್ದರು. ನಂತರ `2ಶಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾ ವೇಳೆ ಉಪೇಂದ್ರ ಹಾಗೂ ಪ್ರಿಯಾಂಕಾ ನಡುವೆ ಪ್ರೇಮಾಂಕುರವಾಯ್ತು. 2003ರಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಯ್ತು. `ಶ್ರೀಮತಿ, ಉಪ್ಪಿ 2' ಸಿನಿಮಾಗಳಲ್ಲೂ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಶಾಸ್ತ್ರ ಸಂಪ್ರದಾಯ ಬಿಟ್ಟುಕೊಡದ ಈ ಜೋಡಿ, ಎಲ್ಲಾ ಹಬ್ಬಗಳನ್ನೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಗಿಟಾರ್ ನುಡಿಸಿ ಇಂಪ್ರೆಸ್ ಮಾಡಿದ ಕಿಚ್ಚ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾರದ್ದು ಲವ್ ಮ್ಯಾರೇಜ್. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲೂ ಸದಾ ಸುದ್ದಿಯಲ್ಲಿರುವ ಹೆಸರು ಕಿಚ್ಚ ಸುದೀಪ್. ಸಿನಿಮಾ ಬೇರೆ, ಪರ್ಸನಲ್ ಲೈಫ್ ಬೇರೆ ಅಂತಲೇ ಕಿಚ್ಚ 2001ರಲ್ಲಿ ಪ್ರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಪ್ರಿಯಾ ಮತ್ತು ಸುದೀಪ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಆಗಲೇ ಪ್ರಿಯಾರನ್ನು ಇಂಪ್ರೆಸ್ ಮಾಡಲು ಸುದೀಪ್ ಗಿಟಾರ್ ನುಡಿಸುತ್ತಿದ್ದರಂತೆ. ಅದನ್ನು ಕೇಳಿಯೇ ಪ್ರಿಯಾ, ಕಿಚ್ಚನ ಪ್ರೀತಿಯಲ್ಲಿ ಬಿದ್ದವರು ಎನ್ನಲಾಗುತ್ತೆ. ಪ್ರಿಯಾ ಸುದೀಪ್ ಬ್ಯಾಂಕ್ ನಲ್ಲೂ ಕೆಲಸ ಮಾಡಿದ್ದಾರೆ. ಏರ್ ಲೈನ್ಸ್ನಲ್ಲೂ ಜಾಬ್ ಮಾಡಿದ್ದಾರೆ. ಇದೇ ವೇಳೆ 2000ದಲ್ಲಿಯೇ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸ್ನೇಹ ಬೆಳೆದಿತ್ತು. ಒಂದು ವರ್ಷದಲ್ಲಿಯೇ ಈ ಜೋಡಿ ಮದುವೆ ಕೂಡ ಆದರು.

ಪ್ರೇಮಾಂಕುರಕ್ಕೆ ಕಾರಣ `ಕ್ರಿಸ್ಟಲ್' ಎಂದ ಉಗ್ರಂ ನಟಿ
ಸ್ಯಾಂಡಲ್ ವುಡ್ ಕ್ಯೂಟ್ ಕಪ್ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ. ಇವರ ನಡುವೆ ಪ್ರೀತಿ ಶುರುವಾಗಲು ಕಾರಣವಾಗಿದ್ದು ಒಂದು ನಾಯಿಮರಿಯಂತೆ. ವಸಿಷ್ಠ ಸಿಂಹ ನೀಡಿದ ನಾಯಿಮರಿ (ಕ್ರಿಸ್ಟಲ್)ಯಿಂದ ತಮ್ಮ ಪ್ರೇಮ್ ಕಹಾನಿ ಶುರುವಾಯಿತು ಎಂದು ಹೇಳಿಕೊಂಡಿದ್ದಾರೆ ಉಗ್ರಂ ನಟಿ ಹರಿಪ್ರಿಯಾ. ವಸಿಷ್ಠ ನಾಯಿಮರಿ ಗಿಫ್ಟ್ ಮಾಡಿದಾಗ ಅದರ ಹೊಟ್ಟೆಯಲ್ಲಿ ಹಾರ್ಟ್ ಶೇಪ್ ನ ಒಂದು ಬರ್ತ್ ಮಾರ್ಕ್ ಇತ್ತು. ಅದು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಗಾಢವಾಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಹಿಡಿದಿದ್ದ ಎಂದಿದ್ದಾರೆ ಹರಿಪ್ರಿಯಾ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ತೆಲುಗಿನ `ಎವರು' ರಿಮೇಕ್ ಸಿನಿಮಾದಲ್ಲಿ ನಟಿಸಿದ್ದರು. ಆರು ವರ್ಷಗಳ ಕಾಲ ಗೆಳೆತನದಲ್ಲಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿದ ನಂತರವಷ್ಟೇ ಮದುವೆ ನಿರ್ಧಾರ ತೆಗೆದುಕೊಂಡರಂತೆ.





