ಮದುವೆ ಆಗಿ ಹಲವು ವರ್ಷಗಳಾಯಿತು ಅಂತ ವ್ಯಾಲೆಂಟೈನ್ಸ್ ಡೇ ಸಂಭ್ರಮಾಚರಣೆ ಬೇಡವೇ? ನಿಮ್ಮ ಜೀವನದಲ್ಲಿ ರೊಮಾನ್ಸ್ ಸದಾ ಉಳಿಯುವಂತೆ ಈ ಸಲಹೆಗಳನ್ನು ಅನುಸರಿಸಿ.....
ಫೆಬ್ರವರಿ ಬಂದಿತೆಂದರೆ ಸಾಕು, ಇಡೀ ವಿಶ್ವಾದ್ಯಂತ ಎಲ್ಲೆಲ್ಲೂ ಲವ್ ಫೀವರ್ ಹರಡುತ್ತದೆ, ಎಲ್ಲರೂ ವ್ಯಾಲೆಂಟೈನ್ಸ್ ಡೇಗಾಗಿ ಸಂಭ್ರಮದಿಂದ ಎದುರು ನೋಡುತ್ತಾರೆ. ಇದು ಕೇವಲ ಅವಿವಾಹಿತ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಗೆ ಮಾತ್ರ ಎಂದು ಬಹುತೇಕರು ಭಾವಿಸುತ್ತಾರೆ. ಹಾಗೆಂದು ಮದುವೆಯಾದ ದಂಪತಿ ಕೆಲವು ವರ್ಷಗಳ ನಂತರ ವೈರಾಗ್ಯ ತಂದುಕೊಳ್ಳಬೇಕೇ? ವಿವಾಹಿತರು ಸದಾ ತಮ್ಮ ಸಂಗಾತಿಯ ಸುಖ ದುಃಖಗಳಲ್ಲಿ ಭಾಗಿಗಳಾಗಿರುತ್ತಾರೆ. ಸಣ್ಣಪುಟ್ಟ ಖುಷಿ, ವಿವಾಹ ವಾರ್ಷಿಕೋತ್ಸವ ಇತ್ಯಾದಿ ಜೊತೆ ಜೊತೆಗೆ ಆಚರಿಸುವ ಇವರಿಗೆ ಜೀವನದ ಪ್ರತಿ ದಿನ ವ್ಯಾಲೆಂಟೈನ್ಸ್ ಡೇ ಎಂದರೆ ಅತಿಶಯೋಕ್ತಿಯಲ್ಲ.
ಪ್ರೀತಿ ಪ್ರೇಮ ಪ್ರಣಯ ಕಲಹ : ಇದು ಕೇವಲ ಬಾಹ್ಯಾಡಂಬರಕ್ಕೆ ಸೀಮಿತವಾಗದೆ, ಪರಸ್ಪರ ಆಂತರಿಕ ಪ್ರೀತಿ ಪ್ರೇಮಕ್ಕೆ ಹೆಚ್ಚು ಒತ್ತು ಕೊಡುವ ಹಾಗಿರಬೇಕು. ಹಾಗೆಂದು ಜೀವನವಿಡೀ ಪ್ರೀತಿ ಪ್ರಣಯವೇ ತುಂಬಿರುವುದಿಲ್ಲ. ನಡುನಡುವೆ ಕಲಹ, ಮುನಿಸು, ಬ್ರೇಕ್ ಅಪ್ ಇತ್ಯಾದಿ ಏನಾದರೂ ಅಡ್ಡಿ ಆತಂಕಗಳು ಇದ್ದೇ ಇರುತ್ತವೆ. ಕೆಲವಂತೂ ಮಿತಿ ಮೀರಿ ಡೈವೋರ್ಸ್ ಗೂ ಹೋಗುತ್ತದೆ. ಏನೇ ಆಗಲಿ, `ಗಂಡಹೆಂಡಿರ ಜಗಳ ಉಂಡು ಮಲಗುವ ತನಕ' ಎಂಬುದನ್ನು ಮರೆಯಬಾರದು. ಇತ್ತೀಚೆಗೆ ಮದುವೆ ಕುರಿತಾಗಿ ಮೀಡಿಯಾದಲ್ಲಿ ಹತ್ತು ಹಲವು ಮಾತುಗಳು ಹರಿದುಬರುತ್ತಿವೆ.
ಇತ್ತೀಚೆಗೆ ಜಯಾ ಬಚ್ಚನ್ ಈ ಕುರಿತು ನೀಡಿದ ಹೇಳಿಕೆ, ಇಂದಿನ ಆಧುನಿಕರಿಗೆ ಮದುವೆಯ ಗೊಡವೆಯೇ ಬೇಡ ಎನಿಸಿದರೂ ಆಶ್ಚರ್ಯವಿಲ್ಲ. ಹಾಗೆಯೇ ಅತುಲ್ ಸುಭಾಷ್ ನ ಆತ್ಮಹತ್ಯೆ ಎಂಥವರನ್ನೂ ಬೆಚ್ಚಿ ಬೀಳಿಸುತ್ತದೆ! ನಿಕಿತಾಳಂಥ ಪತ್ನಿ ಇರಲಿ ಎಂದು ಯಾರು ತಾನೇ ಬಯಸುತ್ತಾರೆ? ಇದಕ್ಕಾಗಿ ಕಾನೂನಿನ ಕಟ್ಟಳೆಗಳನ್ನೂ ದೂಷಿಸಲಾಗುತ್ತಿದೆ. ಮಹಾರಾಷ್ಟ್ರದ ಅಂಜಲಿಬಾಯಿ ಶಿಂಧೆ ಹಾಗೂ ಆಕಾಶ್ ದಂಪತಿಯ ನೈಜ ಕಥೆ `ಲವ್ ಯೂ ಮುದ್ದು' ಕನ್ನಡ ಚಿತ್ರಕ್ಕೆ ಕಾರಣವಾಯಿತು. ಮದುವೆ ನಂತರ ಪ್ರವಾಸಕ್ಕೆ ಹೋದ ಜೋಡಿ, ಅಪಘಾತದಿಂದ ಅಂಗವೈಕಲ್ಯತೆಗೆ ಒಳಗಾದರೂ, ಪರಸ್ಪರ ಜೀವನವಿಡೀ ಪ್ರೀತಿಪ್ರೇಮ ಬಿಟ್ಟು ಕೊಡಲಿಲ್ಲ. ಇದಲ್ಲವೇ ಬಾಳಿನ ನಿಜ ಅರ್ಥದ ಮೌಲ್ಯಗಳು? ವ್ಯಾಲೆಂಟೈನ್ಸ್ ಡೇ ಹೆಸರಲ್ಲಿ, 1 ದಿನದ ಮಟ್ಟಿಗೆ ಕುಡಿದು, ಕುಣಿದು ಕುಪ್ಪಳಿಸುವುದಲ್ಲ. ಜೀವನದುದ್ದಕ್ಕೂ ಪ್ರೀತಿಪ್ರೇಮ ಉಳಿಸಿಕೊಂಡು ಬರುವುದರಲ್ಲಿ ದಾಂಪತ್ಯ ಜೀವನದ ಸಾರ್ಥಕತೆ ಅಡಗಿದೆ.
ನೇಪಾಳದ ವಿವೇಕ್ ಸೃಜನಾರ ಕಥೆ ಎಂಥ ಹೃದಯಸ್ಪರ್ಶಿಯಾಗಿ ಮೀಡಿಯಾ ಮೂಲಕ ಎಲ್ಲರ ಮನ ಮುಟ್ಟಿತು ಎಂದರೆ, ಸಂಗಾತಿಗಳು ಪರಸ್ಪರ ಎಂಥ ತ್ಯಾಗಕ್ಕಾದರೂ ಸಿದ್ಧರಾಗುತ್ತಾರೆ. ವಿವೇಕ್ ಸೃಜನಾ ಕಳೆದ ವರ್ಷ ಡಿಸೆಂಬರ್ ನಲ್ಲಿ ಪರಸ್ಪರರಿಂದ ದೂರವಾದರು. ವಿವೇಕನಿಗೆ ಬ್ರೇನ್ ಕ್ಯಾನ್ಸರ್ ಸ್ಟೇಜ್ ದಾಟಿತ್ತು. ಇಂಥ ಕಷ್ಟಕಾಲದಲ್ಲಿ ಸೃಜನಾ ಹಗಲೂ ರಾತ್ರಿ ಪತಿಯ ಸೇವೆ ಮಾಡಿದಳು. ತನ್ನ ಸಂಪೂರ್ಣ ಗಳಿಕೆಯನ್ನು ಗಂಡನ ಚಿಕಿತ್ಸೆಗೆ ಖರ್ಚು ಮಾಡಿದಳು. ಕಳೆದ ಡಿಸೆಂಬರ್ 19 ರಂದು ವಿವೇಕ್ ತೀರಿಕೊಂಡ. ಇವರ ಕಥೆಯಲ್ಲಿ ಸಸ್ಪೆನ್ಸ್, ಡ್ರಾಮಾ ಏನೂ ಇಲ್ಲದೆ ಎಮೋಶನ್ಸ್, ವಿಶ್ವಾಸ ಮಾತ್ರ ತುಂಬಿತ್ತು. `ನಿನಗಾಗಿ ನಾನು' ಎಂದು ಪ್ರೇಮದ ಆವೇಶದಲ್ಲಿ ಪ್ರಮಾಣ ಮಾಡುವುದಲ್ಲ, ಕೊನೆಯವರೆಗೂ ಜೊತೆಗಿದ್ದು, ಅದನ್ನು ನಿಜವಾಗಿಸಬೇಕಿದೆ. ಇಂಥವರ ದಾಂಪತ್ಯ ಯಾರಿಗೆ ತಾನೇ ಆದರ್ಶವಾಗದು?





