ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ, ತಿಥಿ, ನಕ್ಷತ್ರ, ಪುರಾಣಕಥೆ ಮತ್ತು ಆಚರಣಾ ವೈಶಿಷ್ಟ್ಯವಿದೆ. ಕೆಲವು ಹಬ್ಬಗಳು ನಿರ್ದಿಷ್ಟ ತಿಥಿಯಂದು ಬಂದರೆ, ಕೆಲವು ನಿರ್ದಿಷ್ಟ ನಕ್ಷತ್ರದಂದು ಆಚರಿಸಲ್ಪಡುತ್ತವೆ. ಆದರೆ ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯ ನಂತರ, ಶ್ರಾವಣ ಪೌರ್ಣಮಿಗೂ ಮುನ್ನ ಬರುವ ಶುಕ್ರವಾರದಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಶ್ರಾವಣ ಮಾಸವೆಂದರೆ ಹಬ್ಬಗಳ ಮಾಸ. ನಾಗರ ಪಂಚಮಿ, ಸಿರಿಯಾಳ ಷಷ್ಠಿ, ವರಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಅನೇಕ ಆಚರಣೆಗಳು ಈ ಪವಿತ್ರ ಮಾಸವನ್ನು ಮತ್ತಷ್ಟು ವಿಶೇಷವಾಗಿಸುತ್ತವೆ. “ವರಮಹಾಲಕ್ಷ್ಮಿ” ಎಂದರೆ ವರಗಳನ್ನು ಕರುಣಿಸುವ ಮಹಾಲಕ್ಷ್ಮಿ. ಸುಖ, ಸೌಭಾಗ್ಯ, ಸಂಪತ್ತು, ಆರೋಗ್ಯ, ಸಂತಾನ, ಧಾನ್ಯ, ವಿಜಯ ಮತ್ತು ನೆಮ್ಮದಿಯನ್ನು ಕರುಣಿಸುವ ದೇವತೆಯಾಗಿ ಮಹಾಲಕ್ಷ್ಮಿಯನ್ನು ಭಾರತೀಯ ಸಂಪ್ರದಾಯದಲ್ಲಿ ಆರಾಧಿಸಲಾಗುತ್ತದೆ.

ವಿದ್ಯೆಗೆ ಬ್ರಹ್ಮನ ಪತ್ನಿಯಾದ ಸರಸ್ವತಿ ಅಧಿದೇವತೆಯಾದರೆ, ಸಂಪತ್ತು ಮತ್ತು ಸೌಭಾಗ್ಯಕ್ಕೆ ಮಹಾವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯೇ ಅಧಿದೇವತೆ ಎಂಬ ನಂಬಿಕೆ ಇದೆ. ಆದ್ದರಿಂದಲೇ “ಲಕ್ಷ್ಮಿ ಒಲಿದರೆ ಬದುಕು ಹಸನಾಗುತ್ತದೆ” ಎಂಬ ಮಾತು ಜನಮಾನಸದಲ್ಲಿ ಗಾಢವಾಗಿ ಬೇರೂರಿದೆ. ಆದರೆ ಈ ಹಬ್ಬದ ನಿಜವಾದ ಸಂದೇಶ ಕೇವಲ ಹಣ-ಸಂಪತ್ತಿನ ಬಗ್ಗೆ ಅಲ್ಲ. ಮನೆಯಲ್ಲಿರುವ ಸಂತೋಷ, ಆರೋಗ್ಯ, ಸೌಹಾರ್ದ, ಪರಸ್ಪರ ಪ್ರೀತಿ ಮತ್ತು ಧಾರ್ಮಿಕ ನಂಬಿಕೆಯೂ ಕೂಡ ನಿಜವಾದ ಸಂಪತ್ತೇ ಎಂಬುದನ್ನು ವರಮಹಾಲಕ್ಷ್ಮಿ ಹಬ್ಬ ನೆನಪಿಸುತ್ತದೆ.

ಮಹಾಲಕ್ಷ್ಮಿಯ ಆವಿರ್ಭಾವ — ಸಮುದ್ರ ಮಂಥನದ ರೋಚಕ ಕಥೆ

ಮಹಾಲಕ್ಷ್ಮಿಯ ಆವಿರ್ಭಾವಕ್ಕೆ ಸಂಬಂಧಿಸಿದ ಪ್ರಸಿದ್ಧ ಕಥೆ ಕ್ಷೀರಸಾಗರ ಮಂಥನ. ದುರ್ವಾಸ ಮಹರ್ಷಿಗಳ ಶಾಪದಿಂದ ದೇವೇಂದ್ರನು ತನ್ನ ವೈಭವ ಮತ್ತು ರಾಜ್ಯವನ್ನು ಕಳೆದುಕೊಂಡಾಗ, ಸ್ವರ್ಗಲಕ್ಷ್ಮಿಯೂ ಸ್ವರ್ಗವನ್ನು ತೊರೆದಳು. ಪರಿಣಾಮವಾಗಿ ದೇವಲೋಕದಲ್ಲಿ ದಾರಿದ್ರ್ಯ ಮತ್ತು ಅಶಾಂತಿ ಆವರಿಸಿತು. ದೇವತೆಗಳು ಬ್ರಹ್ಮದೇವನ ನೇತೃತ್ವದಲ್ಲಿ ಮಹಾವಿಷ್ಣುವಿನ ಮೊರೆ ಹೋದರು. ಅಮೃತವನ್ನು ಪಡೆಯಲು ದೇವತೆಗಳು ಮತ್ತು ಅಸುರರು ಸೇರಿ ಕ್ಷೀರಸಾಗರವನ್ನು ಮಂಥನ ಮಾಡಲು ನಿರ್ಧರಿಸಿದರು. ಮಂದಾರ ಪರ್ವತವನ್ನು ಕಡೆಗೋಲಾಗಿ ಮತ್ತು ವಾಸುಕಿಯನ್ನು ಹಗ್ಗವಾಗಿ ಬಳಸಿಕೊಂಡು ನಡೆದ ಈ ಮಹಾ ಮಂಥನದಿಂದ ಅನೇಕ ಅದ್ಭುತ ವಸ್ತುಗಳು ಮತ್ತು ದೈವಿಕ ಶಕ್ತಿಗಳು ಹೊರಹೊಮ್ಮಿದವು. ಅವುಗಳಲ್ಲಿ ಮಹಾಲಕ್ಷ್ಮಿಯ ಆವಿರ್ಭಾವವೂ ಒಂದು. ಶ್ವೇತವರ್ಣದ ದಿವ್ಯ ರೂಪದಲ್ಲಿ, ಕಮಲದ ಮೇಲೆ ಆವಿರ್ಭವಿಸಿದ ಮಹಾಲಕ್ಷ್ಮಿಯನ್ನು ಕಂಡ ದೇವತೆಗಳು ಸ್ತುತಿಸಿದರು. ಅಂತಿಮವಾಗಿ ಮಹಾಲಕ್ಷ್ಮಿ ಮಹಾವಿಷ್ಣುವನ್ನು ವರಿಸಿಕೊಂಡಳು. ಆ ಕಾರಣದಿಂದಲೇ ಲಕ್ಷ್ಮಿಯನ್ನು “ಕ್ಷೀರಸಮುದ್ರಸಂಭವೆ”, “ಸಮುದ್ರರಾಜನ ಪುತ್ರಿ”, “ಕಮಲವಾಸಿನಿ” ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಚಾರುಮತಿಯ ಭಕ್ತಿಗೆ ಒಲಿದ ವರಮಹಾಲಕ್ಷ್ಮಿ

ವರಮಹಾಲಕ್ಷ್ಮಿ ವ್ರತದ ಮಹತ್ವವನ್ನು ವಿವರಿಸುವ ಅತ್ಯಂತ ಜನಪ್ರಿಯ ಕಥೆ ಚಾರುಮತಿಯ ಕಥೆ. ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಸತಿಶೀಲ ಮಹಿಳೆ ವಾಸಿಸುತ್ತಿದ್ದಳು. ಬಡತನವಿದ್ದರೂ ತನ್ನ ವಯೋವೃದ್ಧ ಅತ್ತೆ-ಮಾವಂದಿರನ್ನು ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಸೇವಿಸುತ್ತಿದ್ದಳು. ಅವರ ಅನಾರೋಗ್ಯವನ್ನು ಕಂಡು ಚಾರುಮತಿಯ ಹೃದಯ ಕರಗುತ್ತಿತ್ತು. “ಅಮ್ಮಾ ಮಹಾಲಕ್ಷ್ಮಿ, ನನ್ನ ಅತ್ತೆ-ಮಾವಂದಿರ ನೋವನ್ನು ದೂರಮಾಡು” ಎಂದು ಆಕೆ ಪ್ರತಿದಿನ ಪ್ರಾರ್ಥಿಸುತ್ತಿದ್ದಳು. ಒಂದು ದಿನ ಮಹಾಲಕ್ಷ್ಮಿಯೇ ಚಾರುಮತಿಯ ಕನಸಿನಲ್ಲಿ ಪ್ರತ್ಯಕ್ಷಳಾಗಿ, ಶ್ರಾವಣ ಮಾಸದ ಪೌರ್ಣಮಿಗೂ ಮುನ್ನ ಬರುವ ಶುಕ್ರವಾರ ತನ್ನನ್ನು ಭಕ್ತಿಯಿಂದ ಪೂಜಿಸುವಂತೆ ತಿಳಿಸಿದಳು. ಚಾರುಮತಿ ತನ್ನ ಕನಸಿನ ವಿಷಯವನ್ನು ಬಂಧು-ಬಳಗದವರಿಗೆ ತಿಳಿಸಿದಳು. ಎಲ್ಲರೂ ಸೇರಿ ವರಮಹಾಲಕ್ಷ್ಮಿ ವ್ರತವನ್ನು ಭಕ್ತಿಯಿಂದ ಆಚರಿಸಿದರು. ಕಥೆಯ ಪ್ರಕಾರ, ಆಕೆಯ ಬಡತನ ನಿವಾರಣೆಯಾಯಿತು. ಅತ್ತೆ-ಮಾವಂದಿರ ಆರೋಗ್ಯವೂ ಸುಧಾರಿಸಿತು. ಕುಟುಂಬದಲ್ಲಿ ಸುಖ, ಸೌಭಾಗ್ಯ ಮತ್ತು ಸಮೃದ್ಧಿ ನೆಲೆಸಿತು. ಹೀಗಾಗಿ ಚಾರುಮತಿಯ ಕಥೆಯ ಮುಖ್ಯ ಸಂದೇಶ “ಭಕ್ತಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ; ಸೇವೆ ಮತ್ತು ನಿಸ್ವಾರ್ಥ ಮನಸ್ಸಿಗೆ ದೈವಾನುಗ್ರಹ ದೊರೆಯುತ್ತದೆ” ಎಂಬುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ