–  ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದ ಖ್ಯಾತ ಡೈನಾಮಿಕ್ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಕಿರಿಯ ಪುತ್ರ, ನಟ ಪ್ರಣಮ್ ದೇವರಾಜ್ ಅವರು ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕುಟುಂಬದ ಹಿರಿಯರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಪ್ರಣಮ್ ಹಾಗೂ ನಮಿತಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ವೈವಾಹಿಕ ಜೀವನದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ನಿಶ್ಚಿತಾರ್ಥ ಸಮಾರಂಭದ ಸಂಪೂರ್ಣ ಜವಾಬ್ದಾರಿಯನ್ನು ಪ್ರಣಮ್ ಅವರ ಹಿರಿಯ ಸಹೋದರ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ವಹಿಸಿಕೊಂಡಿದ್ದು ವಿಶೇಷವಾಗಿತ್ತು. ಕುಟುಂಬಸ್ಥರು ಹಾಗೂ ಆತ್ಮೀಯರು ನವಜೋಡಿಗೆ ಶುಭ ಹಾರೈಸಿದರು.

ಮೂಲಗಳ ಪ್ರಕಾರ, ಪ್ರಣಮ್-ನಮಿತಾ ವಿವಾಹವು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಮದುವೆ ದಿನಾಂಕವನ್ನು ಶೀಘ್ರದಲ್ಲೇ ಕುಟುಂಬದವರು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಚಿತ್ರರಂಗದ ಹಿನ್ನೆಲೆಯಿಂದ ಬಂದಿರುವ ಪ್ರಣಮ್ ದೇವರಾಜ್, ತೆಲುಗಿನ ಹಿಟ್ ಚಿತ್ರದ ರಿಮೇಕ್ ‘ಕುಮಾರಿ 21 ಎಫ್’ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ನೀಡಿದ್ದರು. ಬಳಿಕ ‘ಸನ್ ಆಫ್ ಮುತ್ತಣ್ಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯ ಸಹೋದರ ಪ್ರಜ್ವಲ್ ದೇವರಾಜ್ ಅವರಂತೆ ದೊಡ್ಡ ಮಟ್ಟದ ಕಮರ್ಷಿಯಲ್ ಗೆಲುವು ಇನ್ನೂ ಪ್ರಣಮ್ ಅವರ ಪಾಲಿಗೆ ಒಲಿಯದಿದ್ದರೂ, ವಿಭಿನ್ನ ಕಥೆಗಳ ಆಯ್ಕೆ ಹಾಗೂ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಇದೀಗ ವೈಯಕ್ತಿಕ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಪ್ರಣಮ್ ದೇವರಾಜ್ ಹಾಗೂ ನಮಿತಾ ಜೋಡಿಗೆ ಸ್ಯಾಂಡಲ್‌ವುಡ್ ತಾರೆಯರು ಮತ್ತು ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ