ಬೆಳ್ಳಿತೆರೆಯ ಮೇಲೆ ಜೀವನದ ಪ್ರತಿಬಿಂಬ

ನಮ್ಮ ಜೀವನ ನದಿಯಂತೆ ಸದಾ ಹರಿಯುತ್ತಿರುತ್ತದೆ. ಒಮ್ಮೆ ಶಾಂತ, ಒಮ್ಮೆ ಬಲು ರಭಸವಾಗಿ ಧಾವಿಸುತ್ತದೆ. ಇದೇ ತರಹ ಮಾನವರ ಜೀವನದಲ್ಲೂ ಪ್ರತಿ ಕ್ಷಣ ಅಗಣಿತ ಘಟನೆಗಳು ನಡೆಯುತ್ತಿರುತ್ತವೆ. ಅದುವೇ ಸಿನಿಮಾ ಆಗಿ ಬೆಳ್ಳಿತೆರೆ ಅಲಂಕರಿಸುತ್ತದೆ. ಹೀಗಾಗಿ ಸಿನಿಮಾ ನಮ್ಮ ಜೀವನದ, ಸಮಾಜದ ಕೈಗನ್ನಡಿಯೇ ಸರಿ. ಕನ್ನಡಿಯಲ್ಲಿ ನಮ್ಮನ್ನು ನಾವು ಕಾಣುತ್ತಾ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ವಾಸ್ತವತೆಯ ಭರದಲ್ಲಿ ಸಾಗೋಣವೇ……?

02_Kannada-film-'Mark'

ಕನ್ನಡ : ಮಾರ್ಕ್

ಕಿಚ್ಚ ಸುದೀಪ್‌ ಅಭಿನಯದ `ಮಾರ್ಕ್‌’ ಚಿತ್ರ ಭರ್ಜರಿ ಯಶಸ್ಸು ಗಳಿಸಿ, ಉತ್ತಮ ಕಲೆಕ್ಷನ್‌ ಹೊಂದಿದೆ. ಮಾಸ್‌, ಫ್ಯಾಮಿಲಿ ಕಂಟೆಂಟ್‌ ನ ಈ ಚಿತ್ರ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ 500ಕ್ಕೂ ಹೆಚ್ಚು ಥಿಯೇಟರ್‌ ಗಳಲ್ಲಿ ರಿಲೀಸ್‌ ಆದ ಈ ಚಿತ್ರ ಬಾಕ್ಸ್ ಆಫೀಸ್‌ ನಲ್ಲಿ ಫುಲ್ ಸೌಂಡ್‌ ಮಾಡಿದೆ. ವರದಿ ಪ್ರಕಾರ ಹೊಸ ವರ್ಷದ ಆಚರಣೆಯಂದೇ ಈ ಚಿತ್ರದ ಗಳಿಕೆ 2 ಕೋಟಿಗೂ ಮೀರಿದೆ! ತನ್ನ ಸಮಕಾಲೀನ ಚಿತ್ರಗಳ ಪೈಪೋಟಿಯ ದೃಷ್ಟಿಯಲ್ಲಿ ಈ ಚಿತ್ರ ಯಶಸ್ವೀ ಎನಿಸಿದೆ.

ಆ್ಯಕ್ಷನ್‌ ದೃಶ್ಯಗಳು, ಭಾವನಾತ್ಮಕ ಎಳೆ, ಪಕ್ಕಾ ಮನರಂಜನೆ ಹೊಂದಿರುವ ಈ ಚಿತ್ರ, ತನ್ನ ತಮಿಳಿನ ಆವೃತ್ತಿಯಲ್ಲೂ ಸೈ ಎನಿಸಿದೆ. ನವೀನ ಚಂದ್ರ, ವಿಕ್ರಾಂತ್‌, ಯೋಗಿ ಬಾಬುರಂಥ ತಮಿಳು ಕಲಾವಿದರ ದಂಡುಳ್ಳ ಈ ಚಿತ್ರ ಎಲ್ಲೆಲ್ಲೂ ರಾರಾಜಿಸಿದೆ. `ಮ್ಯಾಕ್ಸ್ ‘ ಚಿತ್ರದ ಯಶಸ್ವೀ ನಿರ್ದೇಶಕ ವಿಜಯ್‌ ಕಾರ್ತಿಕೇಯನ್‌ `ಮಾರ್ಕ್‌’ ಚಿತ್ರಕ್ಕೂ ಕ್ಯಾಪ್ಟನ್‌. ತಾರಾಗಣದಲ್ಲಿ ಕಿಚ್ಚನ ಜೊತೆ ರೋಶಿನಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ಪ್ರತಾಪ್‌ ನಾರಾಯಣ್‌, ದೀಕ್ಷಿತಾ, ಗುರು ಸೋಮಸುಂದರಂ ಮುಂತಾದವರಿದ್ದಾರೆ. ಅಜನೀಶ್‌ ಲೋಕನಾಥ್‌ ರ ಸಂಗೀತವಿದ್ದು, ಸುದೀಪ್‌ ರ ಮಗಳು ಸಾನ್ವಿ `ಮಸ್ತ್ ಮಲೈಕಾ’ ಹಾಡನ್ನು ನಕಾಶ್‌ ಅಜೀಜ್‌ ಜೊತೆ ಹಾಡುವ ಮೂಲಕ ಈ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ಮಕ್ಕಳ ಕಿಡ್‌ ನ್ಯಾಪ್‌, ಅವರನ್ನು ರಕ್ಷಿಸಲು ಧಾವಿಸುವ ಹೀರೋ, ಆ ಮೂಲಕ ಉಂಟಾಗುವ ರೋಮಾಂಚನ, ಮಕ್ಕಳು ಏನಾದರು ಎಂಬುದೇ ತರೆಯ ಮೇಲಿನ ಕಥೆ.

05_Tamil-Movie-Para-Sakthi

ತಮಿಳು : ಪರಾಶಕ್ತಿ

1952ರಲ್ಲಿ ಈ ಮೂಲ ಹೆಸರಿನ ತಮಿಳು ಚಿತ್ರ ಶಿವಾಜಿ ಗಣೇಶನ್‌ ರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಆಧುನಿಕ ಕಾಲಕ್ಕೆ ತಕ್ಕಂತೆ ಶಿವ ಕಾರ್ತಿಕೇಯನ್‌ ನಾಯಕನಾಗಿ ನಟಿಸಿರುವ ಈ ಚಿತ್ರ ದಕ್ಷಿಣದಲ್ಲಿ ಹಿಂದಿ ಹೇರುವಿಕೆಯ ವಿರುದ್ಧ ಸಿಡಿದೇಳುವ ಕಥಾಹಂದರ ಹೊಂದಿದೆ. ಈ ನಿಟ್ಟಿನಲ್ಲಿ ತನ್ನ ಆಪ್ತಮಿತ್ರನಾದ ಸರ್ಕಾರಿ ಪರ ಅಧಿಕಾರಿ ರವಿ ವಿರುದ್ಧ ಶಿವ ಸಿಡಿದು ನಿಲ್ಲುತ್ತಾನೆ. ಹಲವು ವರ್ಷಗಳ ನಂತರ ಶಿವನ ತಮ್ಮ ಅಥರ್ವ ಮತ್ತದೇ ಹಗರಣಕ್ಕೆ ಹೋರಾಡುತ್ತಾನೆ. ಕೇಂದ್ರ ಸರ್ಕಾರ ಇಂಥ ಪ್ರತಿಭಟನಾಕಾರರ ವಿರುದ್ಧ ಪೊಲೀಸ್‌ ದಂಡನ್ನೇ ನೇಮಿಸುತ್ತದೆ. ಮುಂದೇನಾಯಿತು ಎಂಬುದೇ ಚಿತ್ರ. ಸೆನ್ಸಾರ್‌ ಕತ್ತರಿಯ ಹಲವು ಪ್ರಯೋಗದ ನಂತರ ಚಿತ್ರ ಜನಮಾನಸವನ್ನು ಗೆದ್ದಿದೆ.

`ಪರಾಶಕ್ತಿ’ ಚಿತ್ರದ ನಿರ್ದೇಶಕರು ಸುಧಾ ಕೊಂಗಾರ. ರವಿ ಮೋಹನ್‌ ಇಲ್ಲಿನ ಖಳನಾಯಕ. ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್‌ ಕುಮಾರ್‌ ರ 100ನೇ ಚಿತ್ರ ಎಂಬುದು ಇದರ ಹೆಗ್ಗಳಿಕೆ. ಈ ಚಿತ್ರದ ನಾಯಕಿ ಶ್ರೀಲೀಲಾ. `ಅಮರನ್‌’ ನಂತರ ನಾಯಕ ಶಿವ ಕಾರ್ತಿಕೇಯನ್‌ ಗೆ ಈ ಚಿತ್ರ ಅತ್ಯುತ್ತಮ ಹೆಸರು ತಂದುಕೊಟ್ಟಿದೆ.

03_Malayalam-movie-_Sarvam-Maya

ಮಲೆಯಾಳಂ : ಸರ್ವಂ ಮಾಯಾ

ಇದೊಂದು ಥ್ರಿಲ್ಲಿಂಗ್‌ ಎನಿಸುವ ಸೂಪರ್‌ ನ್ಯಾಚುರಲ್ ಕಾಮಿಡಿ ಫ್ಯಾಂಟಸಿ ಚಿತ್ರವಾಗಿದೆ. ಇಲ್ಲಿ ನಾಯಕ ಪ್ರಭುವೆಂದು ಒಬ್ಬ ದೇವಾಲಯದ ಅರ್ಚಕನಾಗಿದ್ದು, ಗ್ರಾಮೀಣ ಪರಿಸರದಲ್ಲಿ ಶಾಂತ ಜೀವನ ನಡೆಸುವಾಗ ಇದ್ದಕ್ಕಿದ್ದಂತೆ, ತನ್ನ ಪೂರ್ವಜರ ಹಳೆ ಮನೆಯಲ್ಲಿ ದೆವ್ವದ ಕಾಟಕ್ಕೆ ಸಿಲುಕಿ ಬೀಳುತ್ತಾನೆ. ಡೆಲುಲು ಎಂಬ ಹೆಣ್ಣು ದೆವ್ವ ತಾನೇಕೆ ಹಾಗಾದೆ ಎಂಬ ಅರಿವಿರದೆ ಇವನನ್ನು ಕಾಡುತ್ತಾಳೆ. ಜೊತೆಗೆ ಕಾಮಿಡಿ ಕೂಡಿರುವುದು ಈ ಹಾರರ್‌ ಮೂವಿಗೆ ಪ್ಲಸ್‌ ಪಾಯಿಂಟ್‌. ಇದು ನಂಬಿಕೆ, ಪರಿಹಾರ, ಮಾನವೀಯತೆಗಳ ಸಂಬಂಧ ಹೊಂದಿದೆ. ಚಿತ್ರದ ತಾರಾಗಣದಲ್ಲಿ ನಿವಿನ್‌ ವಾಲಿ, ರಿಯಾ ಶಿಭು, ಅಜು ವರ್ಗೀಸ್‌, ಜನಾರ್ಧನನ್, ಪ್ರೀತಿ ಮುಕುಂದನ್‌, ವಿನೀತ್‌ ಮುಂತಾದವರಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದವರು ಜಸ್ಟಿನ್‌ ಪ್ರಭಾಕರನ್‌. ಈ ಚಿತ್ರಕ್ಕೆ ಕಥೆ ಚಿತ್ರಕಥೆ ನಿರ್ದೇಶನ ಒದಗಿಸಿದವರು ಅಖಿಲ್ ‌ಸತ್ಯನ್‌.

01_Bengali_Poster-of-the-bengali-film-'Projapati-2'

ಬಂಗಾಳಿ : ಪ್ರಜಾಪತಿ 2

ಈ ಚಿತ್ರ  ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಖಂಡ ಯಶಸ್ಸು ಕಂಡಿದ್ದು ಮಾಸ್‌+ಕ್ಲಾಸ್‌, ಎಲ್ಲರ ಮನ ಗೆದ್ದಿದೆ. ತಂದೆಮಗನ ಸೆಂಟಿಮೆಂಟ್ಸ್ ಆಧರಿಸಿದ ಈ ಚಿತ್ರ ಕೌಟುಂಬಿಕ ಬಾಂಧವ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಭಾವನಾತ್ಮಕವಾಗಿ ಮಾತ್ರವಲ್ಲದೆ, ಕಮರ್ಷಿಯಲ್ ಆಗಿಯೂ ಚಿತ್ರ ಗೆದ್ದಿದೆ. ಇತ್ತೀಚೆಗೆ ಅಪರೂಪವಾಗುತ್ತಿರುವ ಕೌಟುಂಬಿಕ ಕಥಾಹಂದರದ ಚಿತ್ರಗಳ ನಡುವೆ ಈ ಚಿತ್ರ ಎದ್ದು ನಿಲ್ಲುತ್ತದೆ.

ಈ ಚಿತ್ರದ ನಿರ್ದೇಶಕರು ಅಭಿಜೀತ್‌ ಸೇನ್‌. ಸಂಗೀತ ಒದಗಿಸಿದವರು ಜೀತ್‌ ಗಂಗೋಪಾಧ್ಯಾಯ್‌. ಪ್ರಮುಖ ತಾರಾಗಣದಲ್ಲಿ ದೇವ್, ಮಿಥುನ್‌ ಚಕ್ರವರ್ತಿ, ಜ್ಯೋತಿರ್ಮಯಿ ಕುಂಡೂ, ಅನುಮೇಘಾ ಕಹಾಲಿ, ಖರಾಜ್‌ ಮುಖರ್ಜಿ, ಅಪರಾಜಿತಾ ಆಧ್ಯಾ, ಶಕುಂತಲಾ ಬರುವಾ ಮುಂತಾದವರಿದ್ದಾರೆ. ಚಿತ್ರಕಥೆ, ಎಡಿಟಿಂಗ್‌ ಸುಜಯ್‌ ದತ್ತ ಹಾಗೂ ಫೋಟೋಗ್ರಫಿ ಶುಭಂಕರ್‌ ಭರ್‌.

04_Telugu-Movie-Dandora

ತೆಲುಗು : ದಂಡೋರಾ

ಈ ಚಿತ್ರದ ಶೀರ್ಷಿಕೆಯೇ ಇದರ ಪ್ರಚಾರಕ್ಕೊಂದು ನವೀನ ಮಾದರಿಯಾಯಿತು. ತೆಲಂಗಾಣ ರಾಜ್ಯದ ತುಳ್ಳೂರು ಎಂಬ ಗ್ರಾಮೀಣ ಪರಿಸರದಲ್ಲಿ ಜಾತಿ ವೈಷಮ್ಯ ಮಿತಿ ಮೀರಿರುತ್ತದೆ. ಇದು ಮೇಲ್ವರ್ಗದ ಜನರನ್ನೂ ಬಿಟ್ಟಿದ್ದಲ್ಲ. ಇದರಿಂದ ಬಾಧಿತ ಮೋಟುದಾರಿ ಶಿವಾಜಿ ಎಂಬಾತ ಈ ಕುರಿತು ತನ್ನ ಮಗ ವಿಷ್ಣು ಜೊತೆ ಚರ್ಚಿಸಿ, ಯುವಜನತೆ ಈ ವೈಷಮ್ಯ ಮುಂದುವರಿಸಬಾರದೆಂದು ಮಾತು ಪಡೆದು ಸಾಯುತ್ತಾನೆ. ಆದರೆ ತಂದೆಮಗನಿಗೆ ಮೊದಲಿನಿಂದಲೂ ಮಾತುಕಥೆ ಇರುವುದಿಲ್ಲ. ಈ ದಳ್ಳುರಿಯಿಂದ ಜನ, ಮಗ ತಂದೆಗೆ ಅಂತಿಮ ಸಂಸ್ಕಾರ ಮಾಡಬಾರದೆಂದು ತಡೆಯೊಡ್ಡುತ್ತಾರೆ.

ಶಿವಾಜಿಗೆ ಮಗನಿಂದ ಅಂತಿಮ ಸಂಸ್ಕಾರ ನಡೆಯಬಾರದೆಂದು ಅವರು ತಡೆದಿದ್ದೇಕೆ? ಆತನಿಗೂ ಶ್ರೀಲತಾಗೂ ಏನು ಸಂಬಂಧ? ಅದೇ ಸಮಯದಲ್ಲಿ ಕಳ್ವರ್ಗದ ರವಿ ಎಂಬಾತ ಕೊಲೆಯಾಗುತ್ತಾನೆ. ನಂತರ ಆ ಗ್ರಾಮದಲ್ಲಿ ನಡೆದ ಘರ್ಷಣೆ ಏನು ಎಂಬುದೇ ಚಿತ್ರದ ಉಳಿದ ಭಾಗ. ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಶಿವಾಜಿ, ನವದೀಪ್‌, ಅನೂಷಾ, ಮೋನಿಕಾ ರೆಡ್ಡಿ, ಬಿಂದು ಮಾಧವಿ, ರವಿಕೃಷ್ಣ ಮುಂತಾದವರಿದ್ದಾರೆ. ನಿರ್ದೇಶನ ಮುರಳಿಕಾಂತ್‌, ಸಂಗೀತ ಮಾರ್ಕ್‌ ಕೆ. ರಾಬಿನ್‌.

06_Marathi-movie-'Krantijyoti-Vidhyalaya---Marathi-Madhyam'

ಮರಾಠಿ : ಕ್ರಾಂತಿ ಜ್ಯೋತಿ ವಿದ್ಯಾಲಯ ಮರಾಠಿ ಮಾಧ್ಯಮ

ಪ್ರತಿ ರಾಜ್ಯದಲ್ಲೂ ಆಯಾ ಪ್ರಾಂತೀಯ ಭಾಷೆಗಳನ್ನು ಉಳಿಸಿಕೊಳ್ಳುವುದೇ ಒಂದು ಭಗೀರಥ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ಅಲೀಬಾಗ್‌ ಜಿಲ್ಲೆಯ ನಾಗಾಂವ್ ‌ಎಂಬ ಗ್ರಾಮೀಣ ಪರಿಸರದಲ್ಲಿ ಹೇಗಾದರೂ ಮರಾಠಿ ಮಾಧ್ಯಮದ `ಕ್ರಾಂತಿ ಜ್ಯೋತಿ ವಿದ್ಯಾಲಯ’ವನ್ನು ಉಳಿಸಿಕೊಳ್ಳುವುದೇ ಚಿತ್ರದ ಗುರಿ. ಇದನ್ನು ಕೆಡವಿ ಆಧುನಿಕ ಆಂಗ್ಲ ಶಾಲೆ ಕಟ್ಟಬೇಕು ಎಂದು ಘೋಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸ್ಕೂಲ್ ಮಾಸ್ಟರ್‌ ದಿನಕರ್‌ ಶಿರ್ಕೆ ತನ್ನ ಮಾಜಿ ಶಿಷ್ಯರನ್ನೆಲ್ಲ ಒಟ್ಟುಗೂಡಿಸಿ, ಹೇಗೆ ಇದರ ವಿರುದ್ಧ ಹೋರಾಡುತ್ತಾರೆ ಎಂಬುದೇ ಚಿತ್ರದ ಹೂರಣ. ಈ ಶಿಷ್ಯರೆಲ್ಲರೂ ಮುಂಬೈನಲ್ಲಿ ಕೆಲಸದಲ್ಲಿದ್ದರು, ಇದಕ್ಕಾಗಿ ತಾವು ಕಲಿತ ಹಳ್ಳಿ ಶಾಲೆಗೆ ವಾಪಸ್ಸಾಗುತ್ತಾರೆ, ಅವರಲ್ಲಿ ಇಬ್ಬರ ನಡುವಿದ್ದ ಹಳೆಯ ಪ್ರೇಮ ಮತ್ತೆ ಚಿಗುರೊಡೆದು ಬೆಳೆಯುತ್ತದೆ. ಈ ಆಧುನಿಕ ಯುಗದಲ್ಲಿ ಆಂಗ್ಲ ಭಾಷೆ ವಿರುದ್ಧ ಇಂದಿನ ಮಕ್ಕಳಿಗೆ ಹೇಗೆ ಪ್ರಾಂತೀಯ ಭಾಷೆಯ ಮಹತ್ವ ಕಲಿಸಿ ಉಳಿಸುವುದೆಂಬುದೇ ಪ್ರಶಂಸನೀಯ ಪ್ರಯತ್ನ.

ಈ ಚಿತ್ರದ ತಾರಾಗಣದಲ್ಲಿ ಸಚಿನ್‌ ಖೇಡೇಕರ್‌, ಆಮೇಲಾಗ್‌, ಸಿದ್ದಾರ್ಥ್‌ ಚಂಡೇಕರ್‌, ಪ್ರಾಜೆಕ್ತಾ ಕೊಹಲಿ, ಕ್ಷೀತೆ ಜೋಗ್‌, ಕಾದಂಬರಿ ಮುಂತಾದವರಿದ್ದಾರೆ. ಚಿತ್ರದ ನಿರ್ದೇಶಕರು ಹೇಮಂತ್‌ ಧೋಮೆ ಹಾಗೂ ಸಂಗೀತ, ಹರೀಶ್‌ ವಿಜಯ್‌ ರದು.

07_Gujarati-movie_Jai-Kanhaiyalal-Ki

ಗುಜರಾತಿ : ಜೈ ಕನ್ಹಯ್ಯಾ ಲಾಲ್ ಕೀ

ಇದೊಂದು ಅಪ್ಪಟ ಸಾಂಸಾರಿಕ ಚಿತ್ರ. ಇದರಲ್ಲಿ ಭಾವಾತಿರೇಕ, ಕಾಮಿಡಿ, ಸಾಂಪ್ರದಾಯಿಕ ಮೌಲ್ಯಗಳು ತುಂಬಿ ತುಳುಕುತ್ತಿವೆ. ಇದು ಇತ್ತೀಚಿನ ಆಧುನಿಕರಲ್ಲಿ ಮರೆಯಾಗುತ್ತಿರುವ ಸಂಪ್ರದಾಯ, ಸಂಸ್ಕೃತಿ, ಕೌಟುಂಬಿಕ ಬಾಂಧವ್ಯ, ನೈತಿಕ ಸಂಘರ್ಷ ಇತ್ಯಾದಿಗಳನ್ನು ಎತ್ತಿಹಿಡಿದಿದೆ. ಹಿಂದಿನ ಸಾಂಪ್ರದಾಯಿಕತೆ, ಮೌಲ್ಯಗಳು ಹಾಗೂ ಇಂದಿನ ಆಧುನಿಕತೆಯ ತಿಕ್ಕಾಟದ ಸ್ಪಷ್ಟ ಚಿತ್ರಣವಿದೆ. ಇಲ್ಲಿ ಯಾವುದೇ ಕಾಂಪ್ಲಿಕೇಶನ್ಸ್ ಇಲ್ಲದೆ ಚಿತ್ರ ಸಲೀಸಾಗಿ ಮುಂದುವರಿಯುತ್ತದೆ. ಪ್ರತಿಯೊಬ್ಬರ ನಟನೆಯೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಂದಿನಂತೆ ಕಾಮಿಡಿ ಕಚಗುಳಿ ಇಡುತ್ತದೆ. ಫೀಮೇಲ್ ಲೀಡ್ಸ್ ಇಡೀ ಚಿತ್ರಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತಾರೆ.

ಈ ಚಿತ್ರದ ನಿರ್ದೇಶಕರು ಧರ್ಮೇಶ್‌ ಎಸ್‌. ಮೆಹ್ತಾ. ತಾರಾಗಣದಲ್ಲಿ ಪ್ರಮುಖವಾಗಿ ಸಿದ್ಧಾರ್ಥ್‌ ರಣದೇರಿಯಾ, ವೈಶಾಲಿ ಠಕ್ಕರ್‌, ಹಿತೂ ಕನೋಡಿಯಾ, ಅನೇರಿ ಜಾನಿ, ಶ್ರೇಯಾ ಮಾರಾದಿಯಾ, ಚಿಲ್ಕಾ ಪ್ರೀತಮ್ ಮುಂತಾದವರಿದ್ದಾರೆ. ಚಿತ್ರಕ್ಕೆ ಸಂಗೀತ ಒದಗಿಸಿದವರು ಕೇದಾರ್‌ ಉಪಾಧ್ಯಾಯ್‌ಭಾರ್ಗವ್ ಪುರೋಹಿತ್‌. ಸಂಕಲನ ನೀವೇಶ್‌ ಗೋವಿಂದ್‌, ಕಥೆ ಚಿತ್ರಕಥೆ : ಅಮಿತ್ ಆರ್ಯನ್‌, ಭಾರ್ಗವ್ ತ್ರಿವೇದಿ, ಧರ್ಮೇಶ್‌ ಮೆಹ್ತಾ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ