ಬೆಳ್ಳಿತೆರೆಯ ಮೇಲೆ ಜೀವನದ ಪ್ರತಿಬಿಂಬ
ನಮ್ಮ ಈ ಜೀವನ ನದಿಯಂತೆ ಸದಾ ಹರಿಯುತ್ತಿರುತ್ತದೆ. ಒಮ್ಮೆ ಶಾಂತ, ಒಮ್ಮೆ ಬಲು ರಭಸವಾಗಿ ಧಾವಿಸುತ್ತದೆ. ಇದೇ ತರಹ ಮಾನವರ ಜೀವನದಲ್ಲೂ ಪ್ರತಿ ಕ್ಷಣ ಅಗಣಿತ ಘಟನೆಗಳು ನಡೆಯುತ್ತಿರುತ್ತವೆ. ಅದುವೇ ಸಿನಿಮಾ ಆಗಿ ಬೆಳ್ಳಿತೆರೆ ಅಲಂಕರಿಸುತ್ತದೆ. ಹೀಗಾಗಿ ಸಿನಿಮಾ ನಮ್ಮ ಜೀವನದ, ಸಮಾಜದ ಕೈಗನ್ನಡಿಯೇ ಸರಿ. ಈ ಕನ್ನಡಿಯಲ್ಲಿ ನಮ್ಮನ್ನು ನಾವು ಕಾಣುತ್ತಾ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ವಾಸ್ತವತೆಯ ಭರದಲ್ಲಿ ಸಾಗೋಣವೇ......?

ಕನ್ನಡ : ಮಾರ್ಕ್
ಕಿಚ್ಚ ಸುದೀಪ್ ಅಭಿನಯದ `ಮಾರ್ಕ್' ಚಿತ್ರ ಭರ್ಜರಿ ಯಶಸ್ಸು ಗಳಿಸಿ, ಉತ್ತಮ ಕಲೆಕ್ಷನ್ ಹೊಂದಿದೆ. ಮಾಸ್, ಫ್ಯಾಮಿಲಿ ಕಂಟೆಂಟ್ ನ ಈ ಚಿತ್ರ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ 500ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಫುಲ್ ಸೌಂಡ್ ಮಾಡಿದೆ. ವರದಿ ಪ್ರಕಾರ ಹೊಸ ವರ್ಷದ ಆಚರಣೆಯಂದೇ ಈ ಚಿತ್ರದ ಗಳಿಕೆ 2 ಕೋಟಿಗೂ ಮೀರಿದೆ! ತನ್ನ ಸಮಕಾಲೀನ ಚಿತ್ರಗಳ ಪೈಪೋಟಿಯ ದೃಷ್ಟಿಯಲ್ಲಿ ಈ ಚಿತ್ರ ಯಶಸ್ವೀ ಎನಿಸಿದೆ.
ಆ್ಯಕ್ಷನ್ ದೃಶ್ಯಗಳು, ಭಾವನಾತ್ಮಕ ಎಳೆ, ಪಕ್ಕಾ ಮನರಂಜನೆ ಹೊಂದಿರುವ ಈ ಚಿತ್ರ, ತನ್ನ ತಮಿಳಿನ ಆವೃತ್ತಿಯಲ್ಲೂ ಸೈ ಎನಿಸಿದೆ. ನವೀನ ಚಂದ್ರ, ವಿಕ್ರಾಂತ್, ಯೋಗಿ ಬಾಬುರಂಥ ತಮಿಳು ಕಲಾವಿದರ ದಂಡುಳ್ಳ ಈ ಚಿತ್ರ ಎಲ್ಲೆಲ್ಲೂ ರಾರಾಜಿಸಿದೆ. `ಮ್ಯಾಕ್ಸ್ ' ಚಿತ್ರದ ಯಶಸ್ವೀ ನಿರ್ದೇಶಕ ವಿಜಯ್ ಕಾರ್ತಿಕೇಯನ್ `ಮಾರ್ಕ್' ಚಿತ್ರಕ್ಕೂ ಕ್ಯಾಪ್ಟನ್. ತಾರಾಗಣದಲ್ಲಿ ಕಿಚ್ಚನ ಜೊತೆ ರೋಶಿನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರತಾಪ್ ನಾರಾಯಣ್, ದೀಕ್ಷಿತಾ, ಗುರು ಸೋಮಸುಂದರಂ ಮುಂತಾದವರಿದ್ದಾರೆ. ಅಜನೀಶ್ ಲೋಕನಾಥ್ ರ ಸಂಗೀತವಿದ್ದು, ಸುದೀಪ್ ರ ಮಗಳು ಸಾನ್ವಿ `ಮಸ್ತ್ ಮಲೈಕಾ' ಹಾಡನ್ನು ನಕಾಶ್ ಅಜೀಜ್ ಜೊತೆ ಹಾಡುವ ಮೂಲಕ ಈ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ಮಕ್ಕಳ ಕಿಡ್ ನ್ಯಾಪ್, ಅವರನ್ನು ರಕ್ಷಿಸಲು ಧಾವಿಸುವ ಹೀರೋ, ಆ ಮೂಲಕ ಉಂಟಾಗುವ ರೋಮಾಂಚನ, ಮಕ್ಕಳು ಏನಾದರು ಎಂಬುದೇ ತರೆಯ ಮೇಲಿನ ಕಥೆ.

ತಮಿಳು : ಪರಾಶಕ್ತಿ
1952ರಲ್ಲಿ ಈ ಮೂಲ ಹೆಸರಿನ ತಮಿಳು ಚಿತ್ರ ಶಿವಾಜಿ ಗಣೇಶನ್ ರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಆಧುನಿಕ ಕಾಲಕ್ಕೆ ತಕ್ಕಂತೆ ಶಿವ ಕಾರ್ತಿಕೇಯನ್ ನಾಯಕನಾಗಿ ನಟಿಸಿರುವ ಈ ಚಿತ್ರ ದಕ್ಷಿಣದಲ್ಲಿ ಹಿಂದಿ ಹೇರುವಿಕೆಯ ವಿರುದ್ಧ ಸಿಡಿದೇಳುವ ಕಥಾಹಂದರ ಹೊಂದಿದೆ. ಈ ನಿಟ್ಟಿನಲ್ಲಿ ತನ್ನ ಆಪ್ತಮಿತ್ರನಾದ ಸರ್ಕಾರಿ ಪರ ಅಧಿಕಾರಿ ರವಿ ವಿರುದ್ಧ ಶಿವ ಸಿಡಿದು ನಿಲ್ಲುತ್ತಾನೆ. ಹಲವು ವರ್ಷಗಳ ನಂತರ ಶಿವನ ತಮ್ಮ ಅಥರ್ವ ಮತ್ತದೇ ಹಗರಣಕ್ಕೆ ಹೋರಾಡುತ್ತಾನೆ. ಕೇಂದ್ರ ಸರ್ಕಾರ ಇಂಥ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ದಂಡನ್ನೇ ನೇಮಿಸುತ್ತದೆ. ಮುಂದೇನಾಯಿತು ಎಂಬುದೇ ಚಿತ್ರ. ಸೆನ್ಸಾರ್ ಕತ್ತರಿಯ ಹಲವು ಪ್ರಯೋಗದ ನಂತರ ಚಿತ್ರ ಜನಮಾನಸವನ್ನು ಗೆದ್ದಿದೆ.





