ಬಡ ಮಧ್ಯಮ ವರ್ಗದ ಕುಟುಂಬದ ರತ್ನಮ್ಮ ಜೀವನದ ಸಂಘರ್ಷದಲ್ಲಿ ಸೈ ಎನಿಸಿ, ಯಶಸ್ವಿಯಾಗಿ ನೇತ್ರ ತಜ್ಞೆ ಎನಿಸಿದರು. ಇವರ ಸಾಧನೆಗಳ ಬಗ್ಗೆ ತಿಳಿಯೋಣವೇ…..?

ಇವರೆಂದೂ ಡಾಕ್ಟರ್‌ ಆಗುತ್ತೇನೆಂದು ಅಂದುಕೊಂಡರಲ್ಲ. ಪಿಯುಸಿ ಮುಗಿದ ತಕ್ಷಣ ಹಿಂದಿನವರಂತೆ ತಾಯಿ ತಂದೆ ಮದುವೆ ಮಾಡಿದ್ದರು. ಆದರೆ ವಿಧಿ ಇವರ ಬದುಕಿನಲ್ಲಿ ಚೆಲ್ಲಾಟವಾಡಿತು. ಮದುವೆಯಾದ ಆರು ತಿಂಗಳಿಗೇ ಪತಿ ಮರಣಿಸಿದಾಗ, ಇವರ ಸ್ಥಿತಿ ಹೇಗಾಗಿರಬೇಡ! ತಾಯಿ ತಂದೆ ಒಳ್ಳೆಯ ಮನಸ್ಸಿನವರು. ಆಗ ರತ್ನಮ್ಮನಿಗೆ ಚಿಕ್ಕ ವಯಸ್ಸು ಜೊತೆಗೆ ಗರ್ಭಿಣಿ ಬೇರೆ. ಬದುಕನ್ನು ಎದುರಿಸಲೇ ಬೇಕಿತ್ತು.

ವೈದ್ಯ ವೃತ್ತಿಯೇ ಗುರಿ

ಹೆಣ್ಣು ಮಗು ಹುಟ್ಟಿದ ಮೇಲೆ ಮತ್ತೆ ಎಂ.ಬಿ.ಬಿ.ಎಸ್‌ ಓದಿದ ರತ್ನಮ್ಮ ಗುರಿ ಮುಟ್ಟಿ ಡಾಕ್ಟರ್‌ ಆದರು. ಇವರ ಮನೆಯಲ್ಲಿ ಎಲ್ಲರೂ ಬುದ್ಧಿವಂತರೆ. ಕೂಡು ಕುಟುಂಬದ ಕಾಲ. ದೇವರು ಒಳ್ಳೆಯವರಿಗೆ ಕಷ್ಟ ಕೊಡುತ್ತಾನೆ. ತಾಯಿ ತಂದೆಯರ ಹೆಮ್ಮೆಯ ಮಗಳು ರತ್ನಮ್ಮ.

ಯಾವ ಕಷ್ಟಗಳಿಗೂ ಎದೆಗುಂದದೆ ಮಗಳಿಗೆ ಬಿ.ಇ ಮಾಡಿಸಿ, ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿ, ಅವಳಿಗೆ ತಾಯಿ ತಂದೆ ಇಬ್ಬರೂ ಆದರು.

ನೇತ್ರ ತಜ್ಞೆಯಾಗಿ ಸೇವೆ

ಕಣ್ಣಿನ ಬಗ್ಗೆ ವಿಶೇಷ ಆಸಕ್ತಿ ತೋರಿಸಿ ಕಣ್ಣಿನ ತಜ್ಞೆಯಾದರು. ಎಲ್ಲಾ ಕಡೆ ಸೇವೆ ಸಲ್ಲಿಸಿ ಶಿವಮೊಗ್ಗ ಮೆಗಾನ್‌ ಆಸ್ಪತ್ರೆಯಲ್ಲಿ ಲಕ್ಷಾಂತರ ಜನರಿಗೆ ಕಣ್ಣಿನ ಆಪರೇಶನ್‌ ಮಾಡಿ, ಕಣ್ಣು ಕಾಣದ ಜನರಿಗೆ ಬೆಳಕಾದರು ರತ್ನಕ್ಕಾ.

ಅವರನ್ನು ಹುಡುಕಿಕೊಂಡು ಎಲ್ಲೆಲ್ಲಿಂದೋ ಜನ ಬರುತ್ತಿದ್ದರು. ಬಂದವರಿಗೆ ಇವರ ಸಾಂತ್ವನ ಬದುಕು ಉತ್ಸಾಹ ಕೊಟ್ಟಿತೆಂದರೆ ತಪ್ಪಾಗದು. ಮೆಡಿಕಲ್ ಓದು ಮಕ್ಕಳಿಗೆ ಇವರು ನೀಡಿದ ಮಾರ್ಗದರ್ಶನವನ್ನು ಇಂದಿಗೂ ಆ ಮಕ್ಕಳು ಹೆಮ್ಮೆಯಿಂದ ಸ್ಮರಿಸುತ್ತಾರೆ. ಸಮಾಜ ಸೇವೆಯ ಆದರ್ಶ ತಮ್ಮ ಸೇವಾ ಕಾಲದಿಂದಲೂ ಬಡ ವಿದ್ಯಾರ್ಥಿಗಳಿಗೆ ಹಣದ ನೆರವು, ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡುತ್ತಿದ್ದರು. ನಿವೃತ್ತಿ ನಂತರ ಸುಬ್ಬಯ್ಯ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಅನಾರೋಗ್ಯದ ನಡುವೆಯೂ ಇಂದಿಗೂ ತಮ್ಮ ಆದರ್ಶ ಸೇವೆ ಮುಂದುವರಿಸುತ್ತಿದ್ದಾರೆ.

ಉನ್ನತ ಹುದ್ದೆಯಲ್ಲಿದ್ದರೆ ಬೇರೆಯವರೊಡನೆ ಮಾತನಾಡುವುದು ಕಡಿಮೆಯೇ…! ಆದರೆ ರತ್ನಕ್ಕಾ ಹಾಗಲ್ಲ….. ಸದಾ ಸಂಘಜೀವಿ.

ಇಂದಿಗೂ ತಮ್ಮ 50 ವರ್ಷ ಹಿಂದಿನ ಎಸ್‌.ಎಸ್‌.ಎಲ್.ಸಿ ಸ್ನೇಹಿತೆಯರ ಒಡನಾಟದಲ್ಲಿದ್ದಾರೆ. ಪ್ರವಾಸವೇನಾದರೂ ಹೊರಟರೆ ಲಲಿತಾ ಮತ್ತು ಅವರ ಕುಟುಂಬದ ಜೊತೆ ಹೋಗುತ್ತಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಇವರ ಸ್ನೇಹ ಕಂಡವರು ಅಚ್ಚರಿಯಿಂದ ಹೆಮ್ಮೆ ಪಡುತ್ತಾರೆ.

ರತ್ನಕ್ಕಾ ಎಂದೂ ಸನ್ಮಾನಕ್ಕಾಗಿ ಹಂಬಲಿಸಿದವರಲ್ಲ. ಆದರೆ ಅವು ತಾವಾಗಿ ಅವರನ್ನು ಹುಡುಕಿ ಬಂದಿವೆ. ಇವರ ಕೆಲಸ ರೋಗಿಗಳ ಅನುಬಂಧ ಇವರನ್ನು ಸಾಧನೆಯ ಶಿಖರಕ್ಕೇರಿಸಿದೆ. ಇವರ ಸಾಧನೆ ಸತತ ಹೀಗೆ ಮುಂದುವರಿಯಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಭಾರತಿ ಹೆಬ್ಬಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ