ತಮಿಳುನಾಡಿನಲ್ಲಿ ದೇವಾಲಯಗಳಿಗೇನೂ ಕೊರತೆ ಇಲ್ಲ. ಅಲ್ಲಿನ ಪ್ರಸಿದ್ಧ ಕುಂಭಕೋಣಂ ದೇವಾಲಯಗಳ ಬಗ್ಗೆ ವಿವರವಾಗಿ ತಿಳಿಯೋಣವೇ.....?
ತಮಿಳುನಾಡಿನಲ್ಲಿ 33,000 ದೇವಾಲಯಗಳಿವೆ. ನಾವೀಗ ದೇವಾಲಯ ನಗರವೆಂದು ಕರೆಯಲ್ಪಡುವ `ಕುಂಭಕೋಣಂ' ಬಗ್ಗೆ ತಿಳಿದುಕೊಳ್ಳೋಣ.
ಮಹಾಪ್ರಳಯ ಕಾಲದಲ್ಲಿ ಬ್ರಹ್ಮ ದೇವರು ಅಮೃತವನ್ನು ಮುಂದಿನ ಸೃಷ್ಟಿ ಕಾರ್ಯಕ್ಕಾಗಿ ಕುಂಭದಲ್ಲಿ ಹಿಮಾಲಯ ಪರ್ವತದ ಮೇಲೆ ಇಟ್ಟಿರುತ್ತಾನೆ. ಪ್ರಳಯ ಕಾಲದಲ್ಲಿ ಕುಂಭ ಸಮುದ್ರದಲ್ಲಿ ತೇಲುತ್ತಾ ಬಂದು ಕುಂಭಕೋಣಂ ಪಟ್ಟಣಕ್ಕೆ ಬರುತ್ತದೆ. ಶಿವ ಪರಮಾತ್ಮನು ಬೇಟೆಗಾರನ ವೇಷದಲ್ಲಿ ಬಂದು ಕುಂಭವನ್ನು ಒಡೆಯುತ್ತಾನೆ. ಅಮೃತ ಹರಿದು ಅಲ್ಲಿದ್ದ ಮಹಮಹಮ್ ಕೆರೆ ಸೇರುತ್ತದೆ.
ಕಾವೇರಿ ಮತ್ತು ಅರಸಲ ನದಿಯ ಸಂಗಮ ಪುಣ್ಯ ಸ್ಥಳವಾಗಿದೆ. ಶಿವನಿಂದ ನಿರ್ಮಿತವಾದ ಮರಳು ಮತ್ತು ಅಮೃತಗಳ ಮಿಶ್ರಣ ಶಿವಲಿಂಗ ಮಡಕೆಯಾಕಾರದಲ್ಲಿದ್ದು ಮೇಲೆ ವಾಲಿದೆ. ಆದ್ದರಿಂದ ಇದಕ್ಕೆ ಕುಂಭಕೋಣಂ ಎಂಬ ಹೆಸರು ಬಂದಿದೆ. ಇದಕ್ಕೆ ಎರಡು ಪ್ರವೇಶ ದ್ವಾರವಿದ್ದು, ರಾಜಗೋಪುರ 128 ಅಡಿ ಎತ್ತರವಿದೆ. ಶಿವ ಮತ್ತು ಮಂಗಾಂಬಿಕೆ ಪ್ರಮುಖ ದೇವರು. 9ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯ 30,181 ಚದರ ಅಡಿ ಇದೆ. ನವರಾತ್ರಿ ಮಂಟಪವಿದೆ. 27 ನಕ್ಷತ್ರ ಮತ್ತು 12 ರಾಶಿ ಚಕ್ರವಿದೆ. ಚೋಳರು, ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ದೇವಾಲಯದಲ್ಲಿ ಅನೇಕ ಸಭಾಂಗಣಗಳಿವೆ. ಬೆಳಗ್ಗೆ 5.30 ರಿಂದ ಮಧ್ಯಾಹ್ನ 12.00 ಗಂಟೆವರೆಗೂ ನಂತರ ಸಾಯಂಕಾಲ 4.00 ರಿಂದ ರಾತ್ರಿ 9.00ರವರೆಗೆ ದರ್ಶನ ಪಡೆಯಬಹುದು.
ಸಾರಂಗಪಾಣಿ ಇಲ್ಲಿಯ ಇನ್ನೊಂದು ಪ್ರಮುಖ ದೇವಾಲಯ. ಭೃಗು ಮುನಿಯು ವಿಷ್ಣು ಎದೆಗೆ ಒದ್ದಿದ್ದರಿಂದ ಮಹಾಲಕ್ಷ್ಮಿ ಮುನಿದು ವೈಕುಂಠ ಬಿಟ್ಟು ಭೂಲೋಕಕ್ಕೆ ಬರುತ್ತಾಳೆ. ಅವಳನ್ನು ಹುಡುಕುತ್ತಾ ಕುದುರೆ ಮತ್ತು ಆನೆಗಳ ರಥದಲ್ಲಿ ಇಲ್ಲಿಗೆ ಬಂದು ಕುಮುದಲ್ಲಿಯಾದ ಲಕ್ಷ್ಮಿಯನ್ನು ವರಿಸುತ್ತಾನೆಂದು ಪ್ರತೀತಿ. ಹಾಗಾಗಿ ಸಾರಂಗ ಪಾಣಿ ದೇವಾಲಯ ಆನೆ ಮತ್ತು ಕುದುರೆಗಳ ರಥ ಎಳೆಯುತ್ತಿರುವ ಹಾಗೆ ದೇವಾಲಯವಿದೆ.

ಸುಂದರವಾದ 173 ಅಡಿ ಎತ್ತರದ ರಾಜಗೋಪುರಗಳು, ಸುಂದರೆ ಕೆತ್ತನೆಗಳಿಂದ ಮನಸೂರೆಗೊಳ್ಳುತ್ತವೆ. ಇದು ಅತಿ ಎತ್ತರವಾದ ದೇವಾಲಯವಾಗಿದೆ. ಮಲಗಿರುವ ಸಾರಂಗಪಾಣಿಯನ್ನು ನೋಡಲು ಎರಡು ಕಣ್ಣು ಸಾಲದು. ಮೊದಲು ಲಕ್ಷ್ಮಿ ನೋಡಿ, ನಂತರ ಸಾರಂಗಪಾಣಿ ದರ್ಶನ ಪಡೆಯಬೇಕು.
ಚಕ್ರಪಾಣಿ ಇನ್ನೊಂದು ವಿಷ್ಣು ದೇವಾಲಯ ವಿಷ್ಣುವಿನ ಆಯುಧ ಚಕ್ರ. ವಿಷ್ಣು ಚಕ್ರವನ್ನು ಇಲ್ಲಿಗೆ ಕಳಿಸುತ್ತಾನೆ. ಸೂರ್ಯನು ಚಕ್ರದ ಪ್ರಖರತೆಗೆ ತನ್ನ ಶಕ್ತಿ ಕಳೆದುಕೊಳ್ಳುತ್ತಾನೆ ಪುನಃ ಚಕ್ರ ಅವನ ಶಕ್ತಿಯನ್ನು ಹಿಂದಿರುಗಿಸುತ್ತದೆ ಎಂದು ಶಿವನಿಗೆ ಮೂರು ಕಣ್ಣು ಇದ್ದಂತೆ, ಇಲ್ಲಿ ವಿಷ್ಣುವಿಗೂ ಹಣೆಯಲ್ಲಿ ಮೂರು ಕಣ್ಣು ಇವೆ.
ದೊಡ್ಡದಾದ ರಾಜಗೋಪುರ ಅದರಲ್ಲಿ ಕೆತ್ತಿರುವ ಕೆತ್ತನೆ ಆಹಾ... ಅನಿಸುವಂತಿದೆ. ಚೋಳರ ಆಳ್ವಿಕೆಯ ಎಲ್ಲ ದೇವಾಲಯಗಳು ಅವುಗಳ ಗಾತ್ರ ವಿಸ್ತಾರ ಸೊಬಗಿಗೆ ಮೆಚ್ಚುಗೆ ಗಳಿಸುತ್ತವೆ.
ಕಾಶಿ ವಿಶ್ವನಾಥ ದೇವಾಲಯ ಪುರಾತನ ದೇವಾಲಯವಾದರೂ ವಿಶ್ವನಾಥ ಮತ್ತು ವಿಶಾಲಾಕ್ಷಿ ಪ್ರಮುಖ ಆಕರ್ಷಣೆ. ಇಲ್ಲಿ 9 ನದಿ ದೇವತೆಗಳ ಗುಡಿಯೂ ಇದೆ. ಸರಯು ಮತ್ತು ಸರಸ್ವತಿ ನದಿಗಳಿಗೂ ಇಲ್ಲಿ ಪೂಜೆ ಇದೆ. ರಾಮಸ್ವಾಮಿ ದೇವಾಲಯ, ವಿಜಯೇಂದ್ರ ತೀರ್ಥರ ಬೃಂದಾವನ, ಲಕ್ಷ್ಮಿ ನರಸಿಂಹ, ಕಲ್ಯಾಣ ಭೂ ವರಹ ಸ್ವಾಮಿ, ಐರಾವತ ದೇಗುಲ, ಶ್ರೀನಿವಾಸ ಪದ್ಮಾವತಿ, ಬಲರಾಮ ಕೃಷ್ಣ ಸಮೇತವಿರುವ ಉಪ್ಪಿಲಪ್ಪನ್ ದೇಗುಲ, ಪುಷ್ಕರಣಿ ಎಲ್ಲ ನಮ್ಮ ಹಿಂದೂ ದೇವಾಲಯಗಳಾಗಿ ಪ್ರಸಿದ್ಧಿ ಪಡೆದಿವೆ.





