ರಿತನ್ಯಾ ವಿಜಯ್

ಕನ್ನಡ ಚಿತ್ರರಂಗಕ್ಕೆ ನವ ನಾಯಕಿಯಾಗಿ ಕಾಲಿಟ್ಟಿರುವ ರಿತನ್ಯಾ ವಿಜಯ್ತಮ್ಮ ಕುರಿತು ಇಲ್ಲಿ ಏನು ಹೇಳಿದ್ದಾರೆ…..?

ನಟ ದುನಿಯಾ ವಿಜಯ್‌ ರ `ಲ್ಯಾಂಡ್‌ ಲಾರ್ಡ್‌’ ಸಿನಿಮಾ ತೆರೆಗೆ ಬಂದು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ದುನಿಯಾ ವಿಜಯ್‌ ರ ಜೋಡಿಯಾಗಿದ್ದರೆ, ವಿಜಯ್‌ ಪುತ್ರಿ ರಿತನ್ಯಾ ವಿಜಯ್‌ ಸಹ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಪ್ಪನ ಜೊತೆಗೆ ಅಭಿನಯಿಸಿರೋ ಈ ಚಿತ್ರದಲ್ಲಿ ಕೂಡ ಅಪ್ಪ ವಿಜಯ್‌ ಗೆ ಮಗಳಾಗಿ ಭಾಗ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದು ಕಡೆಗೆ ಹಳ್ಳಿಯ ಸಾಮಾನ್ಯ ಹೆಣ್ಣುಮಗಳ ರೀತಿ ಕಾಣಿಸುತ್ತಾರೆ. ಮತ್ತೊಂದು ಕಡೆ ಖಾಕಿ ಸಮವಸ್ತ್ರ ಧರಿಸಿ ಥೇಟ್‌ ಖಡಕ್ ಅಧಿಕಾರಿಯ ರೀತಿ ಕಾಣಿಸಿಕೊಂಡಿದ್ದಾರೆ. ಇದರೊಡನೆ ರಿತನ್ಯಾ `ಜವರ’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್‌ ಗೆ ಎಂಟ್ರಿ ಕೊಡ್ತಿದ್ದಾರೆ.

`ಲ್ಯಾಂಡ್‌ ವಾರ್ಡ್‌’ ಚಿತ್ರದಿಂದ ಎಂಟ್ರಿ `ಯಾ ಕುನ್ನಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್‌ ದಳವಾಯ್‌ ಸಾರಥ್ಯದಲ್ಲಿ, ಚಿದಾವೃಷ್‌ ರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ `ಜವರ.’ ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದಲ್ಲಿ `ಆಪರೇಶನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ನಾಯಕ ನಟನಾಗಿ ಅಭಿನಯಿಸುತ್ತಿದ್ದರೆ, ಅವರಿಗೆ ನಾಯಕಿಯಾಗಿ ರಿತನ್ಯಾ ಅಭಿನಯಿಸುತ್ತಿದ್ದಾರೆ.

ಪ್ರತಿಭೆ ಜೊತೆಗೆ ತಂದೆಯ ಬೆಂಬಲ ಸಿಕ್ಕಿರುವ ರಿತನ್ಯಾ ಕನ್ನಡ ಚಿತ್ರರಂಗದ ಭವಿಷ್ಯದ ಪ್ರಮುಖ ನಟಿಯರಲ್ಲಿ ಒಬ್ಬರಾಗುವ ನಿರೀಕ್ಷೆ ಇದೆ, ಇಂತಹ ಅಪರೂಪದ ನಟಿಯ ಕಿರು ಪರಿಚಯ ಇಲ್ಲಿದೆ ರಿತನ್ಯಾಳ ಹಿನ್ನೆಲೆ ರಿತನ್ಯಾ ವಿಜಯ್‌ (ಮೋನಿಕಾ) ಸ್ಯಾಂಡಲ್ ವುಡ್‌ ನಟ ದುನಿಯಾ ವಿಜಯ್‌ ರ ಹಿರಿಯ ಪುತ್ರಿ. ನಟನೆಗೆ ಬೇಕಾದ ತರಬೇತಿಯನ್ನು ಮುಂಬೈನ ಅನುಪಮ್ ಖೇರ್ ನಟನಾ ತರಬೇತಿ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ಆನಂತರ, ಬೆಂಗಳೂರಿನ ರಂಗತರಂಗ ರಂಗಭೂಮಿಯಲ್ಲಿ ಹಲವಾರು ನಾಟಕಗಳನ್ನೂ ಸಹ ಮಾಡಿದ್ದಾರೆ. ಸಿನಿಮಾ ನಟನೆಯನ್ನು ಧನಂಜಯ್‌ ಎನ್ನುವ ನೀನಾಸಂ ಶಿಕ್ಷಕರಿಂದ ಕಲಿತಿರುವ ಇವರು 2024ರಲ್ಲಿ ತಮ್ಮ ಹೆಸರನ್ನು ರಿತನ್ಯಾ ವಿಜಯ್‌ ಎಂದು ಬದಲಿಸಿಕೊಂಡರು.

r08

ಮನೆಯಲ್ಲಿ ಸಿನಿಮಾ ವಾತಾವರಣ

ನಟ ದುನಿಯಾ ವಿಜಯ್‌ ಪುತ್ರಿಯಾಗಿರುವ ಕಾರಣ ಮನೆಯಲ್ಲಿ ಸಿನಿಮಾ ವಾತಾವರಣ ಸಹಜವಾಗಿತ್ತು. ತಂದೆಯ ಸಿನಿಮಾ ಪಯಣವನ್ನು ಕಂಡು ತಾವು ಸಹ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿದ ರಿತನ್ಯಾ ಈ ಕ್ಷೇತ್ರಕ್ಕೆ ಕಾಲಿಟ್ಟರು.

ಸಿನಿಮಾಗೆ ಬರುವುದಕ್ಕೆ ಮುನ್ನ ವಿದ್ಯಾಭ್ಯಾಸ ಮುಗಿಸಿರಬೇಕು ಎನ್ನುವುದು ತಂದೆಯ ನಿರ್ಧಾರವಾಗಿತ್ತು. ಅಲ್ಲದೆ ಸಿನಿಮಾಗೆ ಬರಲು ಹೇಗಿರಬೇಕು, ಹೇಗಿರಬಾರದು, ವರ್ಕ್‌ ಔಟ್‌, ಡಯೆಟ್‌ ಎಲ್ಲಾ ನಿಯಮ ಹೇಗೆ ಪಾಲನೆ ಮಾಡಬೇಕು ಎನ್ನುವುದನ್ನೂ ರಿತನ್ಯಾಗೆ ತಂದೆಯೇ ಕಲಿಸಿದ್ದರು.

r01

ಮೊದಲ ಚಿತ್ರದ ಅವಕಾಶ

ಮೊದಲ ಚಿತ್ರ `ಲ್ಯಾಂಡ್‌ ಲಾರ್ಡ್‌’ ನಲ್ಲಿಯೇ ದೊಡ್ಡ ಸ್ಟಾರ್‌ ಕಾಸ್ಟ್ ಇದ್ದು ಪ್ರತಿಭಾವಂತರು, ಹಿರಿಯ ಕಲಾವಿದರೊಡನೆ ನಟಿಸುವ ಅವಕಾಶ ಸಿಕ್ಕಿದ್ದು ತನ್ನ ದೊಡ್ಡ ಅದೃಷ್ಟ ಎಂದು ರಿತನ್ಯಾ ಭಾವಿಸುತ್ತಾರೆ. ಈ ಸಿನಿಮಾದಲ್ಲಿ ಶಿಶಿರ, ರಾಜ್‌ ಬಿ ಶೆಟ್ಟಿ ಸರ್, ಗೋಪಾಲಕೃಷ್ಣ ದೇಶಪಾಂಡೆ ಸರ್‌, ಬಿ. ಸುರೇಶ್‌ ಸರ್‌, ಅಚ್ಯುತ್‌ ಕುಮಾರ್‌ ಸರ್‌, ಸಂಪತ್‌ ಸರ್‌ ಹೀಗೆ ದೊಡ್ಡ ತಾರಾಬಳಗವೇ ಇದೆ. ನನಗೊಂದು ಆ್ಯಕ್ಟಿಂಗ್‌ ಕ್ಲಾಸ್‌ ಗೆ ಹೋದ ಅನುಭವ. ನನಗೆ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿತು. ರಾಜ್‌ ಬಿ ಶೆಟ್ಟಿ ಜೊತೆ ನಟಿಸಿದ್ದೂ ಕೂಡಾ ನನ್ನ ಅದೃಷ್ಟ. `ಜವರ’ ಸಿನಿಮಾದಲ್ಲಿ ರಂಗಾಯಣ ರಘು ಹಾಗೂ ಶೃತಿ ಅವರಂಥ ಹಿರಿಯ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುತ್ತಿರೋದು ದೇವರ ಆಶೀರ್ವಾದ, ಎಂದು ಹೇಳುತ್ತಾರೆ.

r07

ಪಾತ್ರಗಳ ಆಯ್ಕೆ

ನನ್ನ ಪಾತ್ರಗಳ ಆಯ್ಕೆ ನಾನೇ ಮಾಡಿಕೊಳ್ಳುತ್ತೇನೆ, ತಂದೆ ಏನಿದ್ದರೂ ಸಲಹೆ ಮಾತ್ರ ನೀಡುತ್ತಾರೆ, ಎನ್ನುವ ರಿತನ್ಯಾ ನನ್ನ ಮನಸ್ಸಿಗೆ ಇಷ್ಟವಾಗುವ ಪಾತ್ರಗಳ ಜೊತೆಗೆ ಗಟ್ಟಿತನ ನೋಡಿ ಕಥೆ ಆಯ್ಕೆ ಮಾಡುತ್ತೇನೆ. ಪಾತ್ರಕ್ಕೆ ಹೆಚ್ಚು ಮಹತ್ವ ಇರಬೇಕು. ಜೊತೆಗೆ, ನನಗೆ ಎಲ್ಲಾ ಚಾಲೆಂಜಿಂಗ್‌ ಪಾತ್ರಗಳನ್ನು ಮಾಡಬೇಕೆನ್ನುವ ಆಸೆ ಇದೆ. ಒಂದೇ ರೀತಿಯ ಪಾತ್ರಕ್ಕೆ ಸೀಮಿತ ಆಗಬಾರದು ಎಂದು ಹೇಳುತ್ತಾರೆ.

ರಿತನ್ಯಾ ಬಿಡುವಿನ ಸಮಯದಲ್ಲಿ ಜಿಮ್ ನಲ್ಲಿ ವರ್ಕ್‌ ಔಟ್‌ ಮಾಡುತ್ತಾರೆ, ಪುಸ್ತಕಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳುವ ಬಯಕೆ ಅವರಿಗಿದೆ. ಕನ್ನಡದ ಎಲ್ಲಾ ಸ್ಟಾರ್‌ ನಟರ ಸಿನಿಮಾ ವೀಕ್ಷಿಸುವ ರಿತನ್ಯಾಗೆ ತಂದೆ ವಿಜಯ್‌ ನಿರ್ದೇಶನದಲ್ಲಿ ನಟಿಸಬೇಕೆನ್ನುವ ಆಸೆ ಇದೆ. ಅಲ್ಲದೆ, ಅವರ ಪ್ರೊಡಕ್ಷನ್‌ ನಿಂದ ಒಳ್ಳೊಳ್ಳೆ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಲೋಚನೆ ಇದೆ.

ರಂಗಭೂಮಿಯ ಒಲವು

ರಂಗಭೂಮಿಯ ಕುರಿತಾಗಿ ವಿಶೇಷ ಒಲವು ಇರುವ ರಿತನ್ಯಾ ಅಲ್ಲಿ ಎಲ್ಲರೂ ಎಲ್ಲಾ ಬಗೆಯ ಕೆಲಸ ಮಾಡುತ್ತಾರೆ. ಹಾಗಾಗಿ ಅಲ್ಲಿ ಸಮಾನತೆಯ ಭಾವನೆ ಮೂಡುತ್ತದೆ. ರಂಗಭೂಮಿ ನಮಗೆ ಜೀವನದ ಪಾಠ ಕಲಿಸುತ್ತದೆ. ಸಿನಿಮಾದೊಡನೆ ರಂಗಭೂಮಿಯಲ್ಲಿ ಸಹ ಕೆಲಸ ಮುಂದುವರಿಸುವ ಆಸೆ ಇದೆ ಎಂದು ಅವರು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.

Rithanya-Vijay

ಸ್ಟಾರ್ನಟರ ಮಕ್ಕಳು

ಸ್ಟಾರ್‌ ನಟರ ಮಕ್ಕಳೆಂಬ ಕಾರಣಕ್ಕೆ ಪ್ರಾರಂಭದಲ್ಲಿ ಒಂದೆರಡು ಅವಕಾಶ ಸುಲಭದಲ್ಲಿ ಸಿಕ್ಕಬಹುದು. ಆದರೆ ಸಿನಿಮಾರಂಗದಲ್ಲಿ ಪ್ರತಿಭೆ ಇದ್ದವರಿಗಷ್ಟೇ ಗಟ್ಟಿಯಾಗಿ ನೆಲೆಯೂರುವ ಅವಕಾಶ ಇರಲಿದೆ. ನಮ್ಮ ಪ್ರತಿಭೆ ಹಾಗೂ ಕೆಲಸದಿಂದ ಮಾತ್ರ ನಾವು ಗುರುತಿಸಿಕೊಳ್ಳಬೇಕು. ಕೇವಲ ಸ್ಟಾರ್‌ ನಟರ ಮಕ್ಕಳೆಂದು ಹೇಳಿಕೊಂಡರೆ ಇಲ್ಲಿ ಬೆಳೆಯುವುದಕ್ಕೆ ಸಾಧ್ಯವಿಲ್ಲ, ಎನ್ನುವುದು ರಿತನ್ಯಾರ ಮಾತು.

ಇನ್ನು ರಿತನ್ಯಾರ ಸಹೋದರಿ ಮೋನಿಷಾ ವಿಜಯ್‌ ಕುಮಾರ್‌ ಸಹ ನಟಿಯಾಗಿದ್ದು ಅವರು ದುನಿಯಾ ವಿಜಯ್‌ ನಿರ್ದೇಶನದ ವಿನಯ್‌ ರಾಜ್‌ ಕುಮಾರ್‌ ಅಭಿನಯದ `ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ರಾಘವೇಂದ್ರ ಅಡಿಗ ಎಚ್ಚೆನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ